ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹20 ಕೋಟಿ ವೆಚ್ಚದಲ್ಲಿ ಟಿನ್ ಶೆಡ್ ನಿರ್ಮಾಣ

Last Updated 8 ಅಕ್ಟೋಬರ್ 2017, 8:38 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ₹20 ಕೋಟಿ ವೆಚ್ಚದಲ್ಲಿ ಟಿನ್ ಶೆಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿನ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಟಿನ್ ಶೆಡ್ ಮೇಲ್ಭಾಗದಲ್ಲಿ ಸೌರ ವಿದ್ಯುತ್‌ ಉತ್ಪಾದನಾ ಪ್ಯಾನೆಲ್‌ಗಳನ್ನು ಅಳವಡಿಸಲಾಗುತ್ತಿದೆ. ಎಪಿಎಂಸಿ ಆವರಣದ ಸುತ್ತ ಕಾಂಪೌಂಡ್‌ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಎಪಿಎಂಸಿ ಆವರಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಪ್ರತ್ಯೇಕ ಪೈಪ್‌ಲೈನ್ ಅಳವಡಿಸಬೇಕು. ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಳಿ ತೂಕದ ಯಂತ್ರಗಳನ್ನು ಅಳವಡಿಸಬೇಕು. ರೈತರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘2014ರಲ್ಲಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಗುತ್ತಿಗೆದಾರರಿಗೆ ಜೆಸ್ಕಾಂ ಶೇ 95ರಷ್ಟು ಹಣ ಬಿಡುಗಡೆ ಮಾಡಿದೆ. ಆದರೆ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಇದರಲ್ಲಿ ಜೆಸ್ಕಾಂ ಅಧಿಕಾರಿಗಳ ಲೋಪವಿದೆ. ಆದ್ದರಿಂದ ಈ ಬಗ್ಗೆ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಗುತ್ತಿಗೆದಾರರು ಕೈಗೊಂಡಿರುವ ಕಾಮಗಾರಿಯನ್ನು ಥರ್ಡ್ ಪಾರ್ಟಿ ಮೂಲಕ ಪರಿಶೀಲನೆಗೆ ಒಳಪಡಿಸಬೇಕು. ಶೇ 5ರಷ್ಟು ಹಣವನ್ನು ಬಿಡುಗಡೆ ಮಾಡದಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಎಪಿಎಂಸಿ ಕಾರ್ಯದರ್ಶಿ ಎಂ.ಎಸ್.ರಾಜಶ್ರೀ ಅವರಿಗೆ ಸೂಚಿಸಿದರು.

ಎಪಿಎಂಸಿ ಅಧ್ಯಕ್ಷ ಶಾಂತಕುಮಾರ್ ಬಿರಾದಾರ, ಉಪಾಧ್ಯಕ್ಷ ಶರಣಬಸಪ್ಪ ಕಮಗೊಂಡ, ಸದಸ್ಯರಾದ ಚನ್ನಮ್ಮ ಸಾಹು, ಶರಣು ಗೋಧಿ, ಬಾಬು ಮರಮಂಚಿ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಪ್ರಕಾಶ್ ಹಯ್ಯಾಳಕರ್ ಇದ್ದರು.

‘ತಾಜ್ ಸುಲ್ತಾನಪುರ ಮಾರುಕಟ್ಟೆಗೆ ಸೌಕರ್ಯ’: ‘ಇಲ್ಲಿನ ತಾಜ್ ಸುಲ್ತಾನಪುರ ರಸ್ತೆಯಲ್ಲಿ ನಿರ್ಮಿಸಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣಕ್ಕೆ ರಸ್ತೆ, ವಿದ್ಯುತ್ ಹಾಗೂ ಭದ್ರತೆಯನ್ನು ಒದಗಿಸಲಾಗುವುದು’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ವರ್ತುಲ ರಸ್ತೆಯಿಂದ ಸೈಯದ್ ಚಿಂಚೋಳಿವರೆಗೆ ಹಾಗೂ ಸುಲ್ತಾನಪುರ ರಸ್ತೆಯಿಂದ ಮಾರುಕಟ್ಟೆ ಪ್ರಾಂಗಣದ ವರೆಗೆ ರಸ್ತೆ ಸಂಪರ್ಕ ಕಲ್ಪಿಸಲಾಗುವುದು. ಇಲ್ಲಿನ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳ ಮುಂದಿನ ಚರಂಡಿ ಸ್ವಚ್ಛವಾಗಿಡಲು ಕಾಳಜಿ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಮಾರುಕಟ್ಟೆಯ ಪ್ರಾಂಗಣದಲ್ಲಿ ಸ್ವಚ್ಛತೆಯ ಕೊರತೆ ಇದೆ. ವ್ಯಾಪಾರಕ್ಕಾಗಿ ರಾತ್ರಿ ಬರುವ ರೈತರನ್ನು ದಾರಿಯಲ್ಲಿ ತಡೆದು ಲೂಟಿ ಮಾಡುವ ಪ್ರಸಂಗಗಳು ಜರುಗಿವೆ. ಹೀಗಾಗಿ ರಸ್ತೆಯುದ್ದಕ್ಕೂ ಮತ್ತು ಒಳಆವರಣದಲ್ಲಿ ಬೀದಿದೀಪಗಳನ್ನು ಅಳವಡಿಸಲಾಗುವುದು. ರಾತ್ರಿ ಕಾವಲುಗಾರರನ್ನು ನಿಯೋಜಿಸಲಾಗುವುದು. ಪ್ರಸ್ತುತ ಕೊಳವೆಬಾವಿ ಮೂಲಕ ಕುಡಿಯುವ ನೀರು ಸರಬರಾಜು ಆಗುತ್ತಿದೆ. ನಗರ ನೀರು ಸರಬರಾಜು ಮಂಡಳಿಯಿಂದ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್ ಮಾತನಾಡಿ, ‘ಜಿಲ್ಲೆಯ ವಿವಿಧೆಡೆಯಿಂದ ಹಣ್ಣು ಮತ್ತು ತರಕಾರಿ ವ್ಯಾಪಾರಕ್ಕೆ ಬರುವ ರೈತರು ವಿವಿಧೆಡೆ ರಾತ್ರಿಯೇ ವ್ಯಾಪಾರ ಮಾಡುತ್ತಿದ್ದಾರೆ. ಎಂ.ಎಸ್.ಕೆ. ಮಿಲ್ ಹತ್ತಿರದ ಕಣ್ಣಿ ಮಾರುಕಟ್ಟೆಯಲ್ಲಿ ರಾತ್ರಿ ಸಗಟು ವ್ಯಾಪಾರ ನಡೆಯಬಾರದು. ಆಗ ತಾಜ್‍ಸುಲ್ತಾನಪುರ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ವ್ಯಾಪಾರಕ್ಕೆ ಬರಲಿದ್ದಾರೆ. ಈ ಸ್ಥಳವೂ ಸದ್ಬಳಕೆ ಆಗಲಿದೆ’ ಎಂದು ತಿಳಿಸಿದರು.

‘ತಾಜ್ ಸುಲ್ತಾನಪುರ ಮಾರುಕಟ್ಟೆ ಪ್ರಾಂಗಣದ ಪ್ರವೇಶದ್ವಾರ ಕಿರಿದಾಗಿದೆ. ಅದನ್ನು ಅಭಿವೃದ್ಧಿಪಡಿಸಬೇಕು. ಆವರಣದಲ್ಲಿ  ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT