ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದಿಂದ ಕೊಚ್ಚಿ ಹೋದ ರಸ್ತೆ

Last Updated 8 ಅಕ್ಟೋಬರ್ 2017, 9:51 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ರಂಗರಾಯರದೊಡ್ಡಿ ಕೆರೆಯ ಕೋಡಿಯಲ್ಲಿ ಪ್ರವಾಹ ಉಂಟಾಗಿ ಕೆಳಹಂತದ ರಸ್ತೆಯು ನೀರಿನಲ್ಲಿ ಕೊಚ್ಚಿಹೋಗಿದೆ. ಶುಕ್ರವಾರ ಸಂಜೆ ಸುರಿದ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಕೆರೆಗೆ ನೀರು ಹರಿದಿದ್ದು, ಕೋಡಿ ಪ್ರದೇಶದಿಂದ ಆಚೆಗೆ ಹಾಕಲಾಗಿದ್ದ ಪೈಪುಗಳು ಕೊಚ್ಚಿಹೋಗಿವೆ. ಪರಿಣಾಮ ರಸ್ತೆಯ ಮೇಲೆ ನೀರು ಹರಿಯಲು ಆರಂಭಿಸಿ ಕೊರಕಲು ಉಂಟಾಗಿದ್ದು, ಕ್ರಮೇಣ ಇಡೀ ರಸ್ತೆಯೇ ನೀರಿನಲ್ಲಿ ಕೊಚ್ಚಿ ಹೋಗಿದೆ.

ಅರ್ಚಕರಹಳ್ಳಿ ಸುತ್ತಲಿನ ಜನರು ಓಡಾಟಕ್ಕೆ ಹೆಚ್ಚಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದು, ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಪರದಾಡಿದರು. ಕೆಲವರು ಹರಿಯುತ್ತಿರುವ ನೀರನ್ನು ದಾಟಿ ಆಚೆ ದಡ ಸೇರುವ ಸಾಹಸ ಮಾಡಿದ್ದು, ಜಾರಿ ಬಿದ್ದ ಘಟನೆಗಳೂ ನಡೆದವು.

‘ಶುಕ್ರವಾರ ರಾತ್ರಿಯಿಂದ ಕೋಡಿಯಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ನೀರು ಭೋರ್ಗರೆಯುತ್ತಾ ನುಗ್ಗುತಿತ್ತು. ಈ ಪ್ರವಾಹದ ನಡುವೆಯೂ ಒಂದಿಬ್ಬರು ರಸ್ತೆ ದಾಟಲು ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದರು’ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದರು.

‘ನಗರದ ಒಳಗೆ ಹೋಗಲು ಇದು ಹತ್ತಿರದ ರಸ್ತೆಯಾಗಿದೆ. ಶಾಲಾ ಮಕ್ಕಳು ಇದೇ ಹಾದಿಯಲ್ಲೇ ಸಂಚರಿಸುತ್ತಾರೆ. ಆದರೆ ಇದೀಗ ಇಡೀ ರಸ್ತೆ ಹಾಳಾಗಿದ್ದು, ಹೆದ್ದಾರಿಯನ್ನು ಬಳಸಿ ಬರುವುದು ಅನಿವಾರ್ಯವಾಗಿದೆ’ ಎಂದು ಸ್ಥಳೀಯರು ತಿಳಿಸಿದರು.

ಮಿರ್ಜಾ ಇಸ್ಮಾಯಿಲ್‌ ಕಟ್ಟಿಸಿದ ಕೆರೆ: ‘ಮೈಸೂರು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಅವರು ರಾಮನಗರಕ್ಕೆ ಬಂದ ಸಂದರ್ಭ ಸ್ಥಳೀಯರು ಇಲ್ಲೊಂದು ಕೆರೆ ಕಟ್ಟಿಸುವಂತೆ ಮನವಿ ಮಾಡಿದರು. ಕೂಡಲೇ ಅವರು ಆ ಕಾರ್ಯ ಕೈಗೆತ್ತಿಕೊಂಡು ಕೆರೆ ನಿರ್ಮಿಸಿಕೊಟ್ಟರು. ಸುತ್ತಲಿನ ನಾಲ್ಕಾರು ಗ್ರಾಮಗಳಿಗೆ ಇಲ್ಲಿನ ನೀರು ಬಳಕೆಯಾಗುತ್ತಾ ಬಂದಿದೆ’ ಎಂದು ಅರ್ಚಕರಹಳ್ಳಿ ನಿವಾಸಿ ಶಂಕರಪ್ಪ ವಿವರಿಸಿದರು.

ಕಳಪೆ ಕಾಮಗಾರಿ: ‘ಕೆರೆಯ ಕೋಡಿಗೆ ಹೊಂದಿಕೊಂಡಂತೆ ಸಿರಿಗೌರಿ ಕಲ್ಯಾಣಿ ಕಟ್ಟಿಸಿದ್ದು ಒಳ್ಳೆಯ ಸಂಗತಿ. ಆದರೆ ಕೋಡಿ ನೀರು ಹೊರಹೋಗಲು ಹಾಕಲಾಗಿದ್ದ ಭಾರಿ ಗಾತ್ರದ ಪೈಪುಗಳಲ್ಲಿನ ಅವ್ಯವಸ್ಥೆಯೇ ಈ ಅವಘಡಕ್ಕೆ ಕಾರಣ’ ಎಂದು ಬಿಜೆಪಿ ಮುಖಂಡ ರುದ್ರದೇವರು ಆರೋಪಿಸಿದರು.

‘ಕೆರೆಯ ನಿರ್ವಹಣೆಯ ಹೊಣೆ ಹೊತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರವು ಇದನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ. ಕೆಲವೇ ಲಕ್ಷ ರೂಪಾಯಿ ಖರ್ಚು ಮಾಡಿ ನೀರು ಸರಿಯಾಗಿ ಹರಿಯಲು ಹದ್ದುಬಸ್ತು ಮಾಡಿದರೂ ಸಾಕು. ಕೆರೆಯ ಸಾಕಷ್ಟು ಪ್ರದೇಶ ಒತ್ತುವರಿಯಾಗಿದೆ. ಅದನ್ನೂ ತೆರವುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT