ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಬೆಳಕಲ್ಲೂ ಕಾಂಗ್ರೆಸ್ ಹುಡುಕುವ ಸ್ಥಿತಿ

Last Updated 8 ಅಕ್ಟೋಬರ್ 2017, 9:56 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸೂರ್ಯನ ಬೆಳಕಿನಲ್ಲೂ ಕಾಂಗ್ರೆಸ್ ಎಲ್ಲಿದೆ ಎಂಬುದನನ್ನು ಹುಡುಕುವ ಪರಿಸ್ಥಿತಿ ದೇಶದ ಎಲ್ಲೆಡೆ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ವ್ಯಂಗ್ಯವಾಡಿದರು. ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಬಿಜೆಪಿ ಶನಿವಾರ ಹಮ್ಮಿಕೊಂಡಿದ್ದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಮತ್ತು ಬೂತ್ ಕಾರ್ಯಸಿದ್ಧತಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಜೆಪಿ ವೈಚಾರಿಕತೆಯ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದಿದೆ. ಬಿಜೆಪಿ ಹುಟ್ಟಿದ ಸಂದರ್ಭದಲ್ಲಿ ದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿತ್ತು. ಅಂದಿನಿಂದಲೂ ಬಿಜೆಪಿ ನಾಯಕರು ದೇಶದಿಂದ ಕಾಂಗ್ರೆಸ್ ಮುಕ್ತಗೊಳಿಸಲು ಯೋಜನೆ ಹಮ್ಮಿಕೊಂಡಿದ್ದರು. ಅಂದು ಮಾಡಿದ ಸಂಕಲ್ಪ ಇದೀಗ ನೆರವೇರುತ್ತಿದೆ. ಇಂದು ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಸದ್ಯ ಪ್ರಾಣ ಹಿಡಿದುಕೊಂಡಿರುವುದು ಕರ್ನಾಟಕದಲ್ಲಿ ಮಾತ್ರ. ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡುವುದು ಬೇಡ. ಕೇವಲ ಸೋಲಿಸಿದರೆ ಸಾಕು. ತಾನಾಗೇ ನಿರ್ನಾಮವಾಗುತ್ತದೆ. ಮುಂಬರುವ ವಿಧಾನಸಭಾ ಚುನಾವಣೆ ಮಹತ್ವದ ಹಂತ. ಹಾಗಾಗಿ ಮತದಾರರು ಜಾಗೃತರಾಗಬೇಕು. ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿ ಹಿಂದೂಗಳನ್ನು ಕಡೆಗಣಿಸುವ ರಾಜ್ಯ ಸರ್ಕಾರದ ವಿರುದ್ಧ ಎಚ್ಚರ ವಹಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಗಾಂಧೀಜಿ ಅವರನ್ನು ಬಳಸಿಕೊಂಡರು. ಆದರೆ, ಅವರ ಸಿದ್ಧಾಂತ ಅಳವಡಿಸಿಕೊಳ್ಳಲಿಲ್ಲ. ಈ ದೇಶವನ್ನು ಹಲವರ ತ್ಯಾಗ, ಬಲಿದಾನ, ದೇಶಭಕ್ತಿಯ ಮೇಲೆ ಸುಭದ್ರವಾಗಿ ಕಟ್ಟಲಾಗಿದೆ. ಸೈನಿಕರು ಯುದ್ಧಮಾಡಿ ಉಳಿಸಿಕೊಂಡ ಈ ದೇಶದ ಕೆಲವು ಭೂಭಾಗವನ್ನು ಕಾಂಗ್ರೆಸ್ ನಾಯಕರು ನೆರೆಯ ದೇಶಗಳಿಗೆ ಹಂಚಿದ್ದಾರೆ.

ಇದೀಗ ದೇಶ ಮತ್ತೆ ಗತವೈಭವಕ್ಕೆ ಮರಳುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಪ್ರಪಂಚದ ಹಲವು ದೇಶಗಳ ಸ್ನೇಹ ಗಳಿಸಲಾಗಿದೆ ಎಂದು ವಿಶ್ಲೇಷಿಸಿದರು. ‘ಬಿಜೆಪಿ 1988ರಿಂದ ಇಲ್ಲಿಯವರೆಗೆ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರವನ್ನು ಉಳಿಸಿಕೊಂಡಿದೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಅದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು. ಎಷ್ಟು ಸದಸ್ಯತ್ವ ನೋಂದಣಿ ಆಗಿದೆ ಎನ್ನುವುದಕ್ಕಿಂತ ಅವುಗಳನ್ನು ಎಷ್ಟು ಸದಸ್ಯತ್ವವನ್ನು ಮತಗಳಾಗಿ ಪರಿವರ್ತಿಸಿದ್ದೇವೆ ಎನ್ನುವುದರ ಮೇಲೆ ಗೆಲುವು ನಿಂತಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರುದ್ರೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬಿಜೆಪಿ ಇಂದಿಗೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಪಕ್ಷ ಈ ಬಾರಿ ನೈರುತ್ಯ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆದರೆ, ಈ ಎರಡೂ ಕ್ಷೇತ್ರಗಳ ಗೆಲುವಿಗೆ ಪಕ್ಷ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎರಡೂ ಕ್ಷೇತ್ರಗಳು ಬಿಜೆಪಿ ಭದ್ರಕೋಟೆ ಎನ್ನುವುದನ್ನು ಮತ್ತೆ ನಿರೂಪಿಸುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಕಾರ್ಯಕರ್ತರಿಗೆ ಸಾಕಷ್ಟು ಜವಬ್ದಾರಿಯಿದೆ. ಸಂಘಟನೆಯ ತಳಮಟ್ಟಕ್ಕೆ ತಲುಪಿ ಬೂತ್‌ಮಟ್ಟದ ಚಟುವಟಿಕೆ ಹಮ್ಮಿಕೊಳ್ಳಬೇಕು. ಕಾಂಗ್ರೆಸ್ ಮುಕ್ತ ಮಾಡುವುದರ ಜತೆಗೆ, ನಿಶ್ಚಲ ಬಹುಮತ ಗಳಿಸಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು ಎಂದು ಕೋರಿದರು.

ನ.7ರ ಒಳಗೆ ಪದವೀಧರರ ಕ್ಷೇತ್ರದಲ್ಲಿ 1 ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ನೋಂದಣಿ ವಿಷಯದಲ್ಲಿ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸಬೇಕು ಎಂದರು. ಕ್ಷೇತ್ರದ ಉಸ್ತುವಾರಿ ಕೆ.ಜಿ.ಕುಮಾರಸ್ವಾಮಿ, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಮಾಜಿ ಶಾಸಕರಾದ ಬಿ.ವೈ.ರಾಘವೇಂದ್ರ, ಶಾಂತವೀರನಗೌಡ, ಬೇಳೂರು ಗೋಪಾಲಕೃಷ್ಣ, ಆರ್.ಕೆ.ಸಿದ್ದರಾಮಣ್ಣ, ಆರಗ ಜ್ಞಾನೇಂದ್ರ, ವಿಧಾನ ಪರಿಷತ್‌ ಸದಸ್ಯ ಗಣೇಶ್ ಕಾರ್ಣಿಕ್, ಮುಖಂಡರಾದ ಗಿರೀಶ್ ಪಟೇಲ್, ದತ್ತಾತ್ರಿ, ಡಿ.ಎಸ್.ಅರುಣ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT