ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿ ಬೆಂಗಳೂರಿನ ರಸ್ತೆಗುಂಡಿಗೆ ಮಹಿಳೆ ಬಲಿ

Last Updated 14 ಅಕ್ಟೋಬರ್ 2017, 11:37 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ರಸ್ತೆ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ರಸ್ತೆ ಗುಂಡಿ‌ಗೆ ಹಿರಿಯ ದಂಪತಿ ಬಲಿಯಾಗಿದ್ದರ ನೆನಪು ಮಾಸುವ ಮುನ್ನವೇ, ನಾಯಂಡಹಳ್ಳಿ ಬಳಿಯ ಪಂತರಪಾಳ್ಯದ ಗುಂಡಿಯು ಭಾನುವಾರ ಮತ್ತೊಬ್ಬ ಮಹಿಳೆಯ ಜೀವ ತೆಗೆದಿದೆ.

ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದು ರಾಧಾ (47) ಎಂಬುವರು ಮೃತಪಟ್ಟಿದ್ದು, ಅವರ ಅಣ್ಣನ ಮಗ ರವಿಕುಮಾರ್ (24) ಗಾಯಗೊಂಡಿದ್ದಾರೆ. ಲಾರಿ ಚಾಲಕ ತೋಟಿಯನ್ ರಮೇಶ್ ಎಂಬಾತನನ್ನು ಬ್ಯಾಟರಾಯನಪುರ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ಮೃತ್ಯುಕೂಪ: ರಾಮನಗರದ ರಾಧಾ, ಪತಿ ಆಂಜನಪ್ಪ ಹಾಗೂ ಮೂವರು ಮಕ್ಕಳ ಜತೆ ಶ್ಯಾಂಪುರದ ಅರೆಬಿಕ್‌ ಕಾಲೇಜು ಸಮೀಪ ನೆಲೆಸಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಸಂಬಂಧಿಯೊಬ್ಬರ ಯೋಗಕ್ಷೇಮ ವಿಚಾರಿಸಲು ರಾಧಾ ಅವರು ಭಾನುವಾರ ಬೆಳಿಗ್ಗೆ 10.30ರ ಸುಮಾರಿಗೆ ರವಿ ಜತೆ ಸ್ಕೂಟರ್‌ನಲ್ಲಿ ರಾಮನಗರಕ್ಕೆ ತೆರಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪಂತರಪಾಳ್ಯದ ಅಶ್ವಿನಿ ಬಾರ್ ಎದುರಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರ ಪೊಲೀಸರು ಮಣ್ಣು ಹಾಗೂ ಜಲ್ಲಿ ಸುರಿದು ಗುಂಡಿಗಳನ್ನು ಮುಚ್ಚಿದ್ದರು. ಆದರೆ, ಮಳೆಯಿಂದಾಗಿ ಅಲ್ಲಿ ಮತ್ತೆ ಗುಂಡಿಗಳು ಬಿದ್ದಿದ್ದವು. ಮೇಲ್ಸೇತುವೆಯ ಇಳಿಜಾರಿನಲ್ಲಿ ವೇಗವಾಗಿ ಸ್ಕೂಟರ್ ಓಡಿಸಿಕೊಂಡು ಬಂದಿರುವ ರವಿಕುಮಾರ್, ಆ ಗುಂಡಿಗಳು ಎದುರಾಗಿದ್ದರಿಂದ ಒಮ್ಮೆಲೇ ಬಲಕ್ಕೆ ಬಂದಿದ್ದಾರೆ.

ಇದೇ ವೇಳೆ ರಾಜರಾಜೇಶ್ವರಿನಗರ ಕಡೆಗೆ ಹೋಗುತ್ತಿದ್ದ ಇಟ್ಟಿಗೆ ತುಂಬಿದ್ದ ಲಾರಿಯು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆ ಮಧ್ಯಕ್ಕೆ ಬಿದ್ದ ರಾಧಾ ಕುತ್ತಿಗೆ ಮೇಲೆ ಚಕ್ರ ಹರಿದು ಹೋಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆ ಪಕ್ಕಕ್ಕೆ ಉರುಳಿದ ರವಿಕುಮಾರ್ ಅವರಿಗೆ ತರಚಿದ ಗಾಯಗಳಾಗಿವೆ.

ಅಪಘಾತದ ನಂತರ ಲಾರಿ ಬಿಟ್ಟು ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಬೆನ್ನಟ್ಟಿ ಹಿಡಿದ ಸ್ಥಳೀಯರು, ಹಿಗ್ಗಾಮುಗ್ಗಾ ಥಳಿಸಿ ಆತನನ್ನು ಪೊಲೀಸರ ವಶಕ್ಕೆ ಕೊಟ್ಟರು. ಆರೋಪಿ ವಿರುದ್ಧ ನಿರ್ಲಕ್ಷ್ಯದಿಂದ ಸಾವು (ಐಪಿಸಿ 304ಎ) ಹಾಗೂ ಅಜಾಗರೂಕ ಚಾಲನೆ (ಐಪಿಸಿ 337, 279) ಆರೋಪಗಳಡಿ ಪ್ರಕರಣ ದಾಖಲಾಗಿದೆ.

‘ರಸ್ತೆ ದುರಸ್ತಿಗೆ ನಾಲ್ಕು ಪತ್ರ’

‘ಬಿಜಿಎಸ್‌ ಮೇಲ್ಸೇತುವೆ ಇಳಿಜಾರಿನಿಂದ ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದವರೆಗೆ ರಸ್ತೆ ದುರಸ್ತಿ ಮಾಡುವಂತೆ ಬಿಬಿಎಂಪಿಗೆ ನಾಲ್ಕು ಸಲ ಪತ್ರ ಬರೆದಿದ್ದೇವೆ. ಕೆಲ ದಿನಗಳ ಹಿಂದೆ ಜಲ್ಲಿ ಸುರಿದು ಗುಂಡಿಗಳನ್ನು ಮುಚ್ಚಿದ್ದರು. ಆದರೆ, ಡಾಂಬರು ಹಾಕಿ ಸಂಪೂರ್ಣವಾಗಿ ಮುಚ್ಚುವ ಕೆಲಸ ಮಾಡಲಿಲ್ಲ. ಈಗ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯುದ್ದಕ್ಕೂ ಮತ್ತಷ್ಟು ಗುಂಡಿಗಳು ನಿರ್ಮಾಣವಾಗಿವೆ. ನಾವೇ ಪ್ರತಿದಿನ ಮಣ್ಣು ಹಾಕಿ ಮುಚ್ಚುತ್ತಿದ್ದೇವೆ’ ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ಬಡ ಚಾಲಕ ಮಾತ್ರ ಕಾರಣನಲ್ಲ’

‘ನಾನು ಕೆಲಸದ ನಿಮಿತ್ತ ಬೆಳಿಗ್ಗೆಯೇ ಮನೆ ಬಿಟ್ಟಿದ್ದೆ. 10.45ರ ಸುಮಾರಿಗೆ ರವಿ ಕರೆ ಮಾಡಿ ವಿಷಯ ತಿಳಿಸಿದ. ತಕ್ಷಣ ನಾನು ಸ್ಥಳಕ್ಕೆ ಹೋದೆ. ಅಷ್ಟೊಂದು ಕಿರಿದಾದ ರಸ್ತೆಯಲ್ಲಿ ಲಾರಿ ಚಾಲಕ ವೇಗವಾಗಿ ವಾಹನ ಚಲಾಯಿಸುವ ಅಗತ್ಯವೇನಿತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ಆತನ ಅವಸರ ನನ್ನ ಹೆಂಡತಿಯ ಜೀವ ತೆಗೆದುಬಿಟ್ಟಿತು’‍ ಎಂದು ರಾಧಾ ಪತಿ ಆಂಜನಪ್ಪ ದುಃಖತಪ್ತರಾದರು.

‘ಪಂತರಪಾಳ್ಯ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳಿವೆ. ಅಲ್ಲೇ ಮೆಟ್ರೊ ಕಾಮಗಾರಿ ಸಹ ನಡೆಯುತ್ತಿರುವುದರಿಂದ ರಸ್ತೆಗಳು ಕಿರಿದಾಗಿ ವಾಹನಗಳ ಓಡಾಟಕ್ಕೇ ಜಾಗ ಇಲ್ಲದಂತಾಗಿದೆ. ಮೇಲ್ಸೇತುವೆಯ ಇಳಿಜಾರಿನಲ್ಲಿ ವೇಗವಾಗಿ ಬರುವ ವಾಹನಗಳಿಗೆ, ಒಮ್ಮೆಲೆ ಗುಂಡಿಗಳು ಎದುರಾಗುತ್ತವೆ. ಈ ರೀತಿ ಅಪಘಾತ ಸಂಭವಿಸಿ ನಿತ್ಯ ಜನ ಸಾಯುತ್ತಲೇ ಇದ್ದಾರೆ. ಪತ್ನಿಯ ಸಾವಿಗೆ ಆ ಬಡ ಚಾಲಕ ಮಾತ್ರ ಕಾರಣನಲ್ಲ. ರಸ್ತೆ ದುರಸ್ತಿ ಮಾಡದ ಬಿಬಿಎಂಪಿ ಅಧಿಕಾರಿಗಳೇ ನೇರ ಹೊಣೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT