ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ

Last Updated 9 ಅಕ್ಟೋಬರ್ 2017, 5:43 IST
ಅಕ್ಷರ ಗಾತ್ರ

ಚಾಮರಾಜನಗರ: ಎಲ್ಲೆಂದರಲ್ಲಿ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಬಾಟಲಿಗಳು, ಕಾಲಿಟ್ಟರೆ ಜಾರಿ ಬೀಳುತ್ತೇವೇನೋ ಎಂಬ ಭಯ ಹುಟ್ಟಿಸುವಂತಹ ಕೆಸರು, ಮೂಗು ಮುಚ್ಚಿಕೊಂಡೇ ಓಡಾಡುವಂತಹ ದುರ್ನಾತ... ಇವು ನಗರದ ಖಾಸಗಿ ಬಸ್‌ ನಿಲ್ದಾಣದ ದುರವಸ್ಥೆಯ ಕೆಲವು ಉದಾಹರಣೆಗಳಷ್ಟೆ.

ಡಾ. ಬಿ.ಆರ್‌. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಮಗ್ಗುಲಲ್ಲಿಯೇ ಇರುವ ಬಸ್‌ ನಿಲ್ದಾಣದ ಪರಿಸ್ಥಿತಿಗೂ, ಕ್ರೀಡಾಂಗಣದ ಪರಿಸ್ಥಿತಿಗೂ ಅಂತಹ ವ್ಯತ್ಯಾಸಗಳಿಲ್ಲ. ನೀರಿಲ್ಲದೆ ಒಣಗಿ ಹೋದ ಕೆರೆಯ ಜಾಗದಲ್ಲಿ ನಿರ್ಮಿಸಿರುವ ನಿಲ್ದಾಣ, ಮಳೆ ಬಂದಾಗ ತುಂಬಿಕೊಂಡು ತನ್ನ ಹಿಂದಿನ ರೂಪವನ್ನು ನೆನಪಿಸುತ್ತಿರುತ್ತದೆ.

ತಪ್ಪದ ಬವಣೆ: ಖಾಸಗಿ ಬಸ್‌ನಿಲ್ದಾಣ ಈ ಹಿಂದೆ ನಗರದ ಮಾರಿಗುಡಿ ಆವರಣದಲ್ಲಿತ್ತು. ಜನ ದಟ್ಟಣೆ ಮತ್ತು ವಾಹನ ಸಂಚಾರ ಹೆಚ್ಚಾದ ಕಾರಣ 2007ರಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತಾ, ಈಗಿರುವ ಜಾಗಕ್ಕೆ ಸ್ಥಳಾಂತರ ಮಾಡಿದರು. 10 ವರ್ಷ ಕಳೆದರೂ ಈ ನಿಲ್ದಾಣ ಅಭಿವೃದ್ಧಿಯ ಮುಖ ಕಂಡಿಲ್ಲ. ಆಗ ಹಾಕಲಾಗಿದ್ದ ಟಾರ್‌ ಕಿತ್ತು ಬೃಹತ್‌ ಗುಂಡಿಗಳು ನಿರ್ಮಾಣವಾಗಿವೆ.

ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯೇ ಇಲ್ಲ. ನೀರು ಹೊರಹೋಗಲು ನಿರ್ಮಿಸಿರುವ ಚರಂಡಿ ಕೊಳವೆ ಕಸಗಳಿಂದ ಕಟ್ಟಿಕೊಂಡಿದೆ. ಈ ಜಾಗ ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟಿದೆ. ಇದರಿಂದ ಹರಡುತ್ತಿರುವ ದುರ್ವಾಸನೆಯಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಇನ್ನು ಸಾರ್ವಜನಿಕರಿಗಾಗಿಯೇ ನಿರ್ಮಲ ನಗರ ಯೋಜನೆಯಡಿ ನಿರ್ಮಿಸಲಾಗಿದ್ದ ಶೌಚಾಲಯ ಮುಚ್ಚಿ ಹಲವು ವರ್ಷಗಳೇ ಕಳೆದಿವೆ. ಈ ಭಾಗಗಳಲ್ಲಿ ಕೊಳಚೆ ನೀರು ನಿಂತಿದ್ದು, ಹಂದಿಗಳ ಆವಾಸವಾಗಿ ಮಾರ್ಪಟ್ಟಿವೆ.

ಸಾವಿರಾರು ಜನರ ಓಡಾಟ: ತಮಿಳುನಾಡು ಮತ್ತು ಕೇರಳ ಗಡಿಭಾಗ ದಲ್ಲಿರುವುದರಿಂದ ನಿತ್ಯ ಸಾವಿರಾರು ಮಂದಿ ಇಲ್ಲಿಗೆ ಬರುತ್ತಾರೆ. ನೂರಾರು ಬಸ್‌ಗಳು ಓಡಾಟ ನಡೆಸುತ್ತವೆ. ವ್ಯಾಪಾರಿಗಳೇ ಇವುಗಳ ಪ್ರಮುಖ ಪ್ರಯಾಣಿಕರು. ನಗರದ ಗಿಜಿಗುಡುವ ತಾಣವಾಗಿದ್ದರೂ ಇಲ್ಲಿ ಸ್ವಚ್ಛತೆ ಮತ್ತು ಸೌಕರ್ಯ ಎರಡೂ ಮರೀಚಿಕೆಯಾಗಿವೆ.
ನಿಲ್ದಾಣದ ಗಡಿ ಆವರಣದಲ್ಲಿ ಗಿಂಡಗಂಟಿಗಳು ದಟ್ಟವಾಗಿ ಬೆಳೆದು ಕೊಂಡಿವೆ.

ಮನಬಂದಂತೆ ಎಸೆದಿರುವ ಕಸಗಳು, ಮದ್ಯದ ಬಾಟಲಿಗಳು ರಾರಾಜಿಸುತ್ತಿವೆ. ಚಾಲಕರು ಮತ್ತು ನಿರ್ವಾಹಕರಿಗೆಂದು ಅರೆಬರೆ ನಿರ್ಮಿಸಿ ಬಿಟ್ಟಿರುವ ವಿಶ್ರಾಂತಿ ಕೊಠಡಿಗಳಂತೂ ಅನೈತಿಕ ಚಟುವಟಿಕೆಗಳ ಕೂಪವಾಗಿವೆ.

ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗ ಮತ್ತು ಸೂರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಜನದಟ್ಟಣೆ ಜಾಸ್ತಿ ಇದ್ದಾಗ ಸ್ಥಳಾವಕಾಶದ ಕೊರತೆ ಉದ್ಭವಿಸುತ್ತದೆ. ಶುದ್ಧ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ ಎಂದು ಪ್ರಯಾಣಿಕರು ದೂರುತ್ತಾರೆ.

ಮಳೆ ಬಂದರೆ ಗೋಳು: ನಿಲ್ದಾ ಣದ ಒಂದು ಭಾಗದಲ್ಲಿ ಅಂಗಡಿ, ಹೋಟೆಲ್‌ಗಳನ್ನು ನಡೆಸುತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳ ಗೋಳು ಹೇಳತೀರದು. ‘ಸಂಜೆಯಾದರೆ ಸಾಕು ಸೊಳ್ಳೆಕಾಟ ಹೈರಾಣಾಗಿಸುತ್ತದೆ. ಹಿಂದೆ ನಿರ್ಮಿಸಿದ್ದ ಚರಂಡಿ ಮುಚ್ಚಿಹೋಗಿವೆ. ನಿಲ್ದಾಣದ ಒಳಭಾಗದಲ್ಲಿಯೇ ನೀರು ನಿಂತುಕೊಳ್ಳುತ್ತದೆ. ಮಳೆ ಬಂದರೆ ಸಂಕಟ ದುಪ್ಪಟ್ಟಾಗುತ್ತದೆ. ಅಂಗಡಿ ಒಳಗೆಲ್ಲಾ ನೀರು ನುಗ್ಗುತ್ತದೆ’ ಎಂದು ಅಲ್ಲಿನ ವ್ಯಾಪಾರಿಗಳು ತಿಳಿಸಿದರು.

‘ಟೆಂಡರ್ ಕರೆಯಲಾಗಿದೆ, ಕೆಲಸ ಶುರು ಮಾಡುತ್ತೇವೆ. ಚರಂಡಿ ನಿರ್ಮಿಸಿ ಮಳೆ ನೀರು ಹೊರಹೋಗಲು ವ್ಯವಸ್ಥೆ ಮಾಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ, ಯಾವ ಕೆಲಸವೂ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT