ಭೂತಾರಾಧನೆಯ ಕ್ಷಣ ಕ್ಲಿಕ್ಕಿಸುತ್ತ...

ಮಂಗಳವಾರ, ಜೂನ್ 25, 2019
26 °C

ಭೂತಾರಾಧನೆಯ ಕ್ಷಣ ಕ್ಲಿಕ್ಕಿಸುತ್ತ...

Published:
Updated:
ಭೂತಾರಾಧನೆಯ ಕ್ಷಣ ಕ್ಲಿಕ್ಕಿಸುತ್ತ...

ತುಳುನಾಡಿನ ಪ್ರಮುಖ ಆಚರಣೆಗಳಲ್ಲಿ ದೈವರಾಧನೆ ಪ್ರಮುಖವಾದುದು. ಕರಾವಳಿ ಭಾಗದ ಜನರು ದೈವ ಮತ್ತು ದೇವರು ಎರಡನ್ನೂ ನಂಬಿ ಆರಾಧಿಸುತ್ತಾರೆ. ಈ ಸಾಂಪ್ರದಾಯಿಕ ಕಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕ ಎನ್‌. ರವೀಂದ್ರನ್‌.

ರವೀಂದ್ರನ್‌ ಅವರು ಬೆಂಗಳೂರಿನವರು. ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ವಿಷುವಲ್‌ ಕಮ್ಯೂನಿಕೇಶನ್‌ನಲ್ಲಿ ಡಿಗ್ರಿ ಮುಗಿಸಿರುವ ಅವರು ಸ್ಟುಡಿಯೊ 33 ಪ್ರೊಡಕ್ಷನ್‌ ಹೌಸ್‌ನಲ್ಲಿ ಸಿನಿಮಾಟೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ರವೀಂದ್ರನ್‌ ಕ್ಲಿಕ್ಕಿಸಿರುವ ತುಳುನಾಡಿನ ಭೂತರಾಧನೆ ಕುರಿತಾದ ಸರಣಿ ಚಿತ್ರಗಳ ಪ್ರದರ್ಶನ ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿನ ಕ್ರೆಸೆಂಟ್‌ ಗ್ಯಾಲರಿಯಲ್ಲಿ ನಡೆಯುತ್ತಿದೆ.

 

ಪ್ರದರ್ಶನದಲ್ಲಿರುವ ಎಲ್ಲಾ ಚಿತ್ರಗಳನ್ನು ದಕ್ಷಿಣ ಕನ್ನಡದ ಮಂಜೇಶ್ವರ, ಪುತ್ತೂರು, ಮಂಗಳೂರಿನಲ್ಲಿ ನಡೆದ ದೈವದ ಕೋಲಗಳಲ್ಲಿ ತೆಗೆಯಲಾಗಿದೆ. ಶತಮಾನಗಳಿಂದ ಈ ಭಾಗಗಲ್ಲಿ ಈ ಆಚರಣೆ ನಡೆಯುತ್ತಿದ್ದು, ಪ್ರದೇಶ ಬದಲಾದಂತೆ ಭೂತಾರಾಧನೆಯ ರೀತಿಯಲ್ಲಿಯೂ ಬದಲಾವಣೆ ಆಗುತ್ತದೆ. ಸ್ಥಳದ ಇತಿಹಾಸಕ್ಕೆ ತಕ್ಕಂತೆ ಅಲ್ಲಿ ಆಚರಣೆಯನ್ನು ಮಾಡುತ್ತಾರೆ. ಆಯಾ ಭಾಗದ ಭೂತರಾಧನೆಯ ವಿಶೇಷಗಳನ್ನು ರವೀಂದ್ರನ್‌ ಅವರ ಚಿತ್ರಗಳಲ್ಲಿ ಗುರುತಿಸಬಹುದು.

‘ಬೆಂಗಳೂರಿನವರಾದ ನಿಮಗೆ ಭೂತರಾಧನೆ ಬಗ್ಗೆ ಹೇಗೆ ಗೊತ್ತು?’ ಎಂದು ಪ್ರಶ್ನಿಸಿದಾಗ, ‘ಎರಡು ವರ್ಷಗಳ ಹಿಂದೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಯಕ್ಷಗಾನ ಕುರಿತಾದ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಹೋಗಿದ್ದೆ. ಆಗ ಭೂತಕೋಲದ ಬಗ್ಗೆ ತಿಳಿದುಕೊಂಡಿದ್ದೆ. ಆದರೆ ಭೂತಕೋಲ ಎಂಬುದು ಮನೆ, ಊರುಗಳಲ್ಲಿ ನಡೆಸುವ ಕಾರ್ಯಕ್ರಮ. ಅಪರಿಚಿತರಿಗೆ ಅಲ್ಲಿ ಅವಕಾಶ ಕಡಿಮೆ. ಹೀಗಾಗಿ ಧರ್ಮದೈವ ಯೂಟ್ಯೂಬ್‌ ಚಾನೆಲ್‌ನ ನಾಗರಾಜ್‌ ಅವರ ಮೂಲಕ ದೈವಕ್ಕೆ ವೇಷ ಹಾಕುವವರನ್ನು ಸಂಪರ್ಕಿಸಿದೆ. ಅವರ ಜೊತೆಯೇ ಎರಡು ತಿಂಗಳು ಓಡಾಡಿ ಈ ಚಿತ್ರಗಳನ್ನು ತೆಗೆದಿದ್ದೇನೆ‘ ಎನ್ನುತ್ತಾರೆ ಅವರು.

ಫೋಟೊ ತೆಗೆಯಲು ಕ್ಯಾನನ್‌ 80 ಡಿ ಕ್ಯಾಮೆರಾ ಬಳಸಿದ್ದಾರೆ. ‘ಭೂತಕೋಲ ಎಂಬುದು ರಾತ್ರಿಯೇ ನಡೆಯುವುದು. ಹೆಚ್ಚು ಕತ್ತಲು ಇದ್ದಷ್ಟು ದೈವದ ಆರ್ಭಟ ಹಚ್ಚಾಗಿರುತ್ತದೆ ಎಂಬುದು ಹಳ್ಳಿಯವರ ನಂಬಿಕೆ. ಈ ಕತ್ತಲಲ್ಲಿ ಸ್ಪಷ್ಟವಾಗಿ ಫೋಟೊ ಸೆರೆ ಹಿಡಿಯುವುದು ಕಷ್ಟ. ನೈಟ್‌ಮೋಡ್‌ನಲ್ಲಿ ಮುಖದ ಭಾವಗಳನ್ನು ಸೆರೆ ಹಿಡಿಯಲು ಕ್ಯಾಮೆರಾ ಕೈಚಳಕ ಚೆನ್ನಾಗಿ ಬಲ್ಲವರಾಗಿರಬೇಕು. ಇಲ್ಲಿ ದೈವದ ವೇಷ ಹಾಕಿರುವವರ ಹಾವಭಾವ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಹೀಗಾಗಿ ಸಮಯಪ್ರಜ್ಞೆಯೂ ಮುಖ್ಯವಾಗಿರುತ್ತದೆ’ ಎನ್ನುತ್ತಾರೆ ಅವರು.

ಪ್ರದರ್ಶನದಲ್ಲಿ 20 ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ರವೀಂದ್ರನ್‌ ಅವರು ದೈವ, ವೇಷಧಾರಿಯ ಮೈಮೇಲೆ ಬಂದು ತನ್ನ ಇರುವಿಕೆ ತೋರಿಸುವುದನ್ನು ಚಿತ್ರದಲ್ಲಿ ಸೆರೆ ಹಿಡಿದಿರುವುದು ವಿಶೇಷವಾಗಿದೆ. ವೇಷಧಾರಿಯು ಭೂತಾರಾಧನೆಗೆ ಮುನ್ನ ಸ್ನಾನ ಮಾಡಿ ವೇಷ ಹಾಕಲು ಸಿದ್ಧತೆ ನಡೆಸುವಾಗ, ಮುಖವಾಡ ಮತ್ತು ಆಯುಧಗಳನ್ನು ಧರಿಸುವಾಗ, ದೈವವು ಜನರಿಗೆ ನೀಡುವ ಅಭಯ, ಜನರ ಭಯಮಿಶ್ರಿತ ಮುಖ ಈ ಕ್ಷಣಗಳ ಚಿತ್ರಗಳು ಪ್ರದರ್ಶನದಲ್ಲಿವೆ. ಎಲ್ಲ ಚಿತ್ರಗಳು ಭೂತರಾಧನೆಯ ಕತೆಯನ್ನು ವಿವರಿಸುವಂತಿವೆ. ರವೀಂದ್ರನ್‌ ಅವರು ಇಂಗ್ಲಿಷ್‌ನಲ್ಲಿ ಶೀರ್ಷಿಕೆಯನ್ನೂ ಚಿತ್ರಗಳಿಗೆ ನೀಡಿದ್ದಾರೆ.

ಪ್ರದರ್ಶನದ ವಿವರ:

ಕಲಾವಿದ: ರವೀಂದ್ರನ್‌

ವಿಷಯ: ತುಳುನಾಡಿನ ಭೂತರಾಧನೆ

ವಿಳಾಸ: ಕ್ರೆಸೆಂಟ್‌ ಗ್ಯಾಲರಿ, ರೇಸ್‌ಕೋರ್ಸ್‌ ರಸ್ತೆ.

ಪ್ರವೇಶ: ಉಚಿತ

ಸಂಪರ್ಕಕ್ಕೆ: 97399 61756

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry