ಹೊಸ ಅಂಗಣದಲ್ಲಿ ಜಯದ ತವಕ

ಸೋಮವಾರ, ಜೂನ್ 24, 2019
30 °C
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ‘ಪದಾರ್ಪಣೆ’ ಸಂಭ್ರಮದಲ್ಲಿ ಬರ್ಸಾಪಾರ

ಹೊಸ ಅಂಗಣದಲ್ಲಿ ಜಯದ ತವಕ

Published:
Updated:
ಹೊಸ ಅಂಗಣದಲ್ಲಿ ಜಯದ ತವಕ

ಗುವಾಹಟಿ: ಮಳೆ ಕಾಡಿದರೂ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದು ಬೀಗಿದ ಭಾರತ ತಂಡ ಆಸ್ಟ್ರೇಲಿಯಾ ಎದುರಿನ ಟಿ–20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಗೆಲ್ಲುವ ಭರವಸೆ ಹೊಂದಿದೆ. ಇಲ್ಲಿನ ಬರ್ಸಪಾರ ಕ್ರೀಡಾಂಗಣದಲ್ಲಿ ಮಂಗಳವಾರ ಪಂದ್ಯ ನಡೆಯಲಿದೆ.

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪೂರ್ಣ ಆಧಿಪತ್ಯ ಸ್ಥಾಪಿಸಿದ್ದ ವಿರಾಟ್ ಕೊಹ್ಲಿ ಬಳಗ 4–1ರ ಗೆಲುವು ದಾಖಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು. ಹೀಗಾಗಿ ತಂಡ ಮೂರು ಪಂದ್ಯಗಳ ಟಿ–20 ಸರಣಿಯನ್ನು ಕೂಡ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಎರಡನೇ ಪಂದ್ಯದಲ್ಲೇ ಈ ಸಾಧನೆ ಮಾಡುವುದು ತಂಡದ ಇರಾದೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಆ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತ್ತು.

ಆಸ್ಟ್ರೇಲಿಯಾ ವಿರುದ್ಧದ ಒಟ್ಟು 14 ಟಿ–20 ಪಂದ್ಯಗಳ ಪೈಕಿ ಹತ್ತರಲ್ಲಿ ಜಯ ಸಾಧಿಸಿರುವ ಭಾರತ ಕಳೆದ ಏಳು ಪಂದ್ಯಗಳಲ್ಲಿ ನಿರಂತರವಾಗಿ ಗೆದ್ದ ಸಾಧನೆ ಮಾಡಿದೆ. 2012ರ ಸೆಪ್ಟೆಂಬರ್‌ 28ರಿಂದ ಈ ತನಕ ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ ಒಂದು ಪಂದ್ಯವನ್ನು ಕೂಡ ಗೆಲ್ಲಲು ಸಾಧ್ಯವಾಗಲಿಲ್ಲ. ಮಂಗಳವಾರದ ಪಂದ್ಯದಲ್ಲಿ ಜಯ ಸಾಧಿಸಿ ಸೋಲಿನ ಸರಪಳಿಯನ್ನು ಕಳಚಿಕೊಳ್ಳಲು ಸ್ಟೀವ್ ಸ್ಮಿತ್ ಪಡೆ ಶ್ರಮಿಸಲಿದೆ. ಸರಣಿಯಲ್ಲಿ ಸಮಬಲ ಸಾಧಿಸಬೇಕಾದರೆ ತಂಡಕ್ಕೆ ಈ ಪಂದ್ಯದಲ್ಲಿ ಜಯ ಅನಿವಾರ್ಯ. ಹೀಗಾಗಿ ಇಲ್ಲಿ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ.

ಯಾದವ್‌–ಚಾಹಲ್‌ ಭಯದಲ್ಲಿ ಪ್ರವಾಸಿಗರು: ಎಂಥ ಪರಿಸ್ಥಿತಿಯಲ್ಲೂ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿರುವ ಆಸ್ಟ್ರೇಲಿಯಾ ಈ ಬಾರಿ ಭಾರತ ಪ್ರವಾಸದಲ್ಲಿ ಎಡಗೈ ಸ್ಪಿನ್ನರ್‌ ಕುಲದೀಪ್ ಯಾದವ್ ಮತ್ತು ಲೆಗ್ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಅವರ ದಾಳಿಗೆ ಕಂಗೆಟ್ಟಿದೆ. ಇವರಿಬ್ಬರನ್ನು ಎದುರಿಸುವ ತಂತ್ರವನ್ನು ಕರಗತ ಮಾಡಿಕೊಳ್ಳಲು ಆ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಇನ್ನೂ ಸಾಧ್ಯವಾಗಲಿಲ್ಲ.

ನಾಲ್ಕು ಏಕದಿನ ಮತ್ತು ಒಂದು ಟಿ–20ಯಲ್ಲಿ ಈ ಸ್ಪಿನ್‌ ಜೋಡಿ ಒಟ್ಟು 16 ವಿಕೆಟ್‌ಗಳನ್ನು ಹಂಚಿಕೊಂಡಿರುವುದು ಕಾಂಗರೂಗಳ ನಾಡಿನವರ ಮೇಲೆ ಅವರು ಸ್ಥಾಪಿಸಿರುವ ಆಧಿಪತ್ಯವನ್ನು ಸಾಬೀತು ಮಾಡಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್‌, ಆ್ಯರನ್ ಫಿಂಚ್‌ ಮತ್ತು ಸ್ಟೀವ್ ಸ್ಮಿತ್ ಅವರ ಮೇಲೆ ಅವಲಂಬಿತವಾಗಿದೆ ಆಸ್ಟ್ರೇಲಿಯಾ ಬ್ಯಾಟಿಂಗ್‌ ಬಳಗ.

ಆದರೆ ಭಜದ ಗಾಯದಿಂದಾಗಿ ಟಿ–20 ಸರಣಿಯಿಂದ ಸ್ಮಿತ್‌ ಹೊರಗುಳಿದಿರುವುದು ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.

ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್‌ ಏಕದಿನ ಸರಣಿಯಲ್ಲಿ ವೈಫಲ್ಯ ಕಂಡಿದ್ದರು. ಮೂರು ಪಂದ್ಯಗಳಲ್ಲಿ ಅವರಿಗೆ ಒಮ್ಮೆಯೂ 40ರ ಮೊತ್ತ ದಾಟಲು ಸಾಧ್ಯವಾಗಲಿಲ್ಲ. ಮೊದಲ ಟಿ–20ಯಲ್ಲಿ ಕೇವಲ 17 ರನ್ ಗಳಿಸಿದ್ದರು. ಆದರೂ ತಂಡ ಇನ್ನೂ ಅವರ ಮೇಲೆ ವಿಶ್ವಾಸವಿರಿಸಿದೆ. ಮುಂದಿನ ಪಂದ್ಯದಲ್ಲಿ ಸಹಜ ಶೈಲಿಯಲ್ಲಿ ಆಡುವ ಭರವಸೆ ಇರಿಸಿದೆ.

‘ಮ್ಯಾಕ್ಸ್‌ವೆಲ್ ಒಬ್ಬ ಉತ್ತಮ ಹೊಡೆತಗಾರ. ಭಾರತದಲ್ಲಿ ಅವರು ಇಷ್ಟು ಕಳಪೆಯಾಗಿ ಆಡಿದ್ದು ಈ ಹಿಂದೆ ಕಂಡಿರಲಿಲ್ಲ. ಅವರು ಸಾಮರ್ಥ್ಯ ಕಳೆದುಕೊಳ್ಳಲಿಲ್ಲ. ನೆಟ್ಸ್‌ನಲ್ಲಿ ಎಲ್ಲ ಎಸೆತಗಳನ್ನು ಚೆನ್ನಾಗಿ ಎದುರಿಸುತ್ತಿದ್ದಾರೆ. ಆದ್ದರಿಂದ ಮುಂದಿನ ಪಂದ್ಯದಲ್ಲಿ ತಂಡಕ್ಕೆ ಉತ್ತಮ ಕಾಣಿಕೆ ನೀಡಲಿದ್ದಾರೆ’ ಎಂದು ಆ್ಯರನ್ ಫಿಂಚ್ ಹೇಳಿದರು.

ಕಾಲ್ಟರ್‌ನೈಲ್ ಪ್ರಬಲ ದಾಳಿ: ಬೌಲಿಂಗ್ ವಿಭಾಗದಲ್ಲಿ ವೇಗಿ ನೇಥನ್ ಕಾಲ್ಟರ್ ನೈಲ್‌ ಅವರು ಆಸ್ಟ್ರೇಲಿಯಾಗೆ ಬಲ ತುಂಬಿದ್ದಾರೆ. ಏಕದಿನ ಸರಣಿಯಲ್ಲಿ ಒಟ್ಟು ಹತ್ತು ವಿಕೆಟ್ ಕಬಳಿಸಿ ತಂಡದ ಪರ ಅತಿ ಹೆಚ್ಚು ವಿಕೆಟ್‌ ಗಳಿಸಿದ ಸಾಧನೆ ಮಾಡಿದ್ದಾರೆ. ರಾಂಚಿಯಲ್ಲಿ ಚೊಚ್ಚಲ ಪಂದ್ಯ ಆಡಿದ ಎಡಗೈ ವೇಗಿ ಜೇಸನ್ ಬೆಹ್ರಂಡೋರ್ಫ್‌ ಮಿಂಚು ಹರಿಸಿರುವುದು ತಂಡಕ್ಕೆ ಸಮಾಧಾನ ತಂದಿದೆ.

ಇನ್ನೊಂದು ಕಡೆ ಭರವಸೆಯಲ್ಲಿರುವ ಭಾರತ ತಂಡದವರು ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಪ್ರಾಬಲ್ಯ ಮೆರೆದಿದ್ದಾರೆ. ಪತ್ನಿಯ ಅನಾರೋಗ್ಯದ ಕಾರಣ ಏಕದಿನ ಸರಣಿಯಲ್ಲಿ ಆಡದೇ ಇದ್ದ ಶಿಖರ್‌ ಧವನ್‌ ಟಿ–20 ತಂಡಕ್ಕೆ ಮರಳಿದ್ದಾರೆ. ಇದು ತಂಡದ ಬ್ಯಾಟಿಂಗ್‌ಗೆ ಬಲ ತುಂಬಿದೆ. ಅವರೊಂದಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮುಂತಾದ ಅಗ್ರ ಕ್ರಮಾಂಕದವರು ಮಿಂಚಿದರೆ ತಂಡ ಮತ್ತೊಂದು ಸುಲಭ ಜಯ ಸಾಧಿಸುವುದು ಖಚಿತವಾಗಲಿದೆ.

ಬರ್ಸಾಪಾರ ಕ್ರೀಡಾಂಗಣ ಪದಾರ್ಪಣೆ: ಪಂದ್ಯಕ್ಕೆ ಆತಿಥ್ಯ ವಹಿಸುವುದರೊಂದಿಗೆ ಬರ್ಸಾಪಾರ ಕ್ರೀಡಾಂ ಗಣ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ‘ಪದಾರ್ಪಣೆ’ ಮಾಡಲಿದೆ. 60 ಸಾವಿರ ಪ್ರೇಕ್ಷಕರಿಗೆ ಕುಳಿತುಕೊಳ್ಳುವ ಸೌಲಭ್ಯ ವಿರುವ ಕ್ರೀಡಾಂಗಣವನ್ನು ಪಂದ್ಯಕ್ಕೂ ಮುನ್ನ ಅಸ್ಸಾಂ ಮುಖ್ಯಮಂತ್ರಿ ಉದ್ಘಾಟಿಸುವರು.

ಅಶ್ವಿನ್ ಜಡೇಜಾ ಸ್ಥಾನಕ್ಕೆ ಕುತ್ತು ಇಲ್ಲ

ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರ ಸ್ಥಾನಕ್ಕೆ ನನ್ನಿಂದಾಗಿ ಕುತ್ತು ಉಂಟಾಗದು ಎಂದು ಭಾರತದ ಚೈನಾಮನ್ ಶೈಲಿಯ ಬೌಲರ್‌ ಕುಲದೀಪ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

‘ಅಶ್ವಿನ್ ಮತ್ತು ಜಡೇಜ ಅವರ ಸ್ಥಾನದಲ್ಲಿ ನಾನು ಶಾಶ್ವತವಾಗಿ ಉಳಿಯುತ್ತೇನೆ ಎಂದು ಹೇಳಲಾಗದು. ಅವರಿಬ್ಬರು ಉತ್ತಮ ಬೌಲರ್‌ಗಳು. ತಂಡದ ಆಸ್ತಿ. ಆದ್ದರಿಂದ ನನ್ನಿಂದಾಗಿ ಅವರ ಸ್ಥಾನಕ್ಕೆ ಯಾವುದೇ ಕುಂದು ಉಂಟಾಗದು’ ಎಂದು ಅವರು ಪತ್ರಕರ್ತರಿಗೆ ಹೇಳಿದರು.

*ಏಕದಿನ ಸರಣಿಯಲ್ಲಿ ಸೋತಿದ್ದರೂ ತಂಡ ಸ್ಥೈರ್ಯ ಕಳೆದುಕೊಳ್ಳಲಿಲ್ಲ. ಹೀಗಾಗಿ ಎರಡನೇ ಟಿ–20 ಪಂದ್ಯದಲ್ಲಿ ಶೇಕಡಾ ನೂರರಷ್ಟು ಶ್ರಮ ಹಾಕಿ ಗೆಲ್ಲುತ್ತೇವೆ.

–ಡೇವಿಡ್ ವಾರ್ನರ್‌,

ಆಸ್ಟ್ರೇಲಿಯಾ ತಂಡದ ನಾಯಕ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry