ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬ ದರ್ಶನೋತ್ಸವಕ್ಕೆ ಸಿದ್ಧತೆ

Last Updated 10 ಅಕ್ಟೋಬರ್ 2017, 6:17 IST
ಅಕ್ಷರ ಗಾತ್ರ

ಹಾಸನ: ನಗರದ ಅಧಿದೇವಿ ಹಾಸನಾಂಬ ಜಾತ್ರ ಮಹೋತ್ಸವ ಅ. 12ರಿಂದ ಪ್ರಾರಂಭವಾಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಳ್ಳುತ್ತಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎಚ್.ಎಲ್.ನಾಗರಾಜ್ ತಿಳಿಸಿದರು.

ದೇವಾಲಯದ ಬಳಿ ಸೋಮವಾರ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ರಿಂದ 21ರವರೆಗೆ ಹಾಸನಾಂಬ ದೇವಿ ಬಾಗಿಲು ತೆರೆದಿರುತ್ತದೆ. ಆದರೆ ಬಾಗಿಲು ತೆರೆಯುವ ದಿನ (ಅ.12) ಹಾಗೂ ಮುಚ್ಚುವ ದಿನ (ಅ.21ರಂದು) ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು.

ಈ ಬಾರಿ ಹೆಚ್ಚಿನ ಪಾಸ್‌ಗಳ ವಿತರಣೆ ಇರುವುದಿಲ್ಲ. ಪೂಜಾ ಅವಧಿಯನ್ನು ಕಡಿಮೆಗೊಳಿಸಲಾಗಿದ್ದು, ನೈವೇದ್ಯ, ಅಲಂಕಾರ ಮತ್ತು ಶುಚಿತ್ವಕ್ಕಾಗಿ ಎರಡು ತಾಸು ನೀಡಲಾಗಿದೆ. ಗಣ್ಯರು ದರ್ಶನದ ವೇಳೆ ಹೆಚ್ಚು ಕಾಲ ವ್ಯಯವಾಗದಂತೆ ವ್ಯವಸ್ಥೆ ಮಾಡಲಾಗಿದೆ. ಅತಿ ಗಣ್ಯರು, ಜನಪ್ರತಿನಿಧಿಗಳು, ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಬಾರಿ ಭಕ್ತರಿಗೆ ಪ್ರಸಾದವನ್ನು ಹಾಸನಾಂಬ ದೇವಾಲಯದಿಂದ 200 ಮೀಟರ್ ದೂರದಲ್ಲಿರುವ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿತರಿಸಲಾಗುವುದು. ತುರ್ತು ದರ್ಶನ ಬಯಸುವವರು ವಿಶೇಷ ದರ್ಶನದ ಟಿಕೆಟ್‌ ₹ 300 ಪಡೆದುಕೊಳ್ಳಬಹುದು.

ಸಾರ್ವಜನಿಕರಿಗೆ ಎರಡು ತಾಸಿನಲ್ಲಿ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಅತಿ ಗಣ್ಯರಿಗೆ ₹ 1, 000 ಟಿಕೆಟ್‌ ಪಡೆದು ದರ್ಶನ ಪಡೆಯುವ ಚಿಂತನೆ ನಡೆದಿದೆ. ಪ್ರವಾಸಿ ಮಂದಿರದಲ್ಲಿ ಬಂದು ಗಣ್ಯರು ಮೊದಲು ಹೆಸರು ನೋಂದಾಯಿಸಿ, ಅಲ್ಲಿಯೇ ವಿಶೇಷ ದರ್ಶನದ ಟಿಕೆಟ್‌ ಪಡೆಯಬಹುದು ಎಂದು ವಿವರಿಸಿದರು.

ಅರ್ಚಕರ ನೇಮಕ ಸಂಬಂಧ ಇದ್ದ ವಿವಾದ ಬಗೆಹರಿದಿದ್ದು, ಪ್ರಧಾನ ಅರ್ಚಕರಾಗಿ ನಾಗರಾಜು ಅವರನ್ನು ಹಾಗೂ 24 ಸಹಾಯಕ ಅರ್ಚಕರನ್ನು ನೇಮಿಸಲಾಗಿದೆ. ಭಕ್ತರಿಗೆ ಕುಡಿಯುವ ನೀರು, ಅಗತ್ಯ ಸೌಲಭ್ಯ ಒದಗಿಸಲಾಗುವುದು. ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದ್ದು, ಸ್ವಯಂ ಸೇವಕರಾಗಿ ಸ್ಕೌಟ್ಸ್‌, ಗೈಡ್ಸ್‌, ವಿವಿಧ ಸಂಘಟನೆಗಳನ್ನು ಬಳಸಿಕೊಳ್ಳಲಾಗುವುದು.

12 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಶಾಶ್ವತವಾಗಿ ಕ್ಯಾಮೆರಾ ಖರೀದಿಸಲು ಟೆಂಡರ್‌ ಕರೆಯಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತಹಶೀಲ್ದಾರ್ ಶಿವಶಂಕರ್, ಮುಜರಾಯಿ ತಹಶೀಲ್ದಾರ್ ವಿದ್ಯುಲತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಕಂಠಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT