ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ ತಡೆ: ಆರೋಪ

Last Updated 10 ಅಕ್ಟೋಬರ್ 2017, 8:54 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ತಾವೇ ಸಿಎಂ ಎಂದು ಹೇಳುವ ಮೂಲಕ ದುರಾಸೆ ವ್ಯಕ್ತಪಡಿಸಿದ್ದು, ದಲಿತರು ಮುಖ್ಯಮಂತ್ರಿ ಆಗುವುದನ್ನು ತಡೆಯುತ್ತಿದ್ದಾರೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ ಟೀಕಿಸಿದರು.

ಪಟ್ಟಣದ ಮಿನಿ ವಿಧಾನಸೌಧದ ಎದುರು ಸೋಮವಾರ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಆಗ್ರಹಿಸಿ ಕರಾದಸಂಸ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರಿಗೆ ಅಧಿಕಾರ ಲಾಲಸೆ ಹೆಚ್ಚಾಗಿದೆ. 60 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಿದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್‌ ಅವರಂತಹ ದಲಿತ ನಾಯಕರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಹೆಸರಿಗೆ ಅಹಿಂದ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ದಲಿತರ ರಾಜಕೀಯ ಅಧಿಕಾರ ಕಿತ್ತುಕೊಳ್ಳುತ್ತಿದ್ದಾರೆ. ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಭೂ ರಹಿತ ದಲಿತರಿಗೆ ಪ್ರತಿ ಕುಟುಂಬಕ್ಕೆ ತಲಾ 2 ಎಕರೆ ಕೃಷಿ ಭೂಮಿ ನೀಡಬೇಕು.

ತಾವು ಘೋಷಿಸಿದಂತೆ ದಲಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಿಸಬೇಕು. ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದಲಿತರ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಕರಾದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್‌ ಮಾತನಾಡಿ, ‘ನಮೂನೆ 50 ಮತ್ತು 53ರಲ್ಲಿ ಅರ್ಜಿ ಹಾಕಿರುವ ದಲಿತರಿಗೆ ಅಕ್ರಮ ಅನುಭವದ ಭೂಮಿಯನ್ನು ಸಕ್ರಮ ಮಾಡಬೇಕು. ವಾರದೊಳಗೆ ಜಾತಿ ದೃಢೀಕರಣ ಪತ್ರ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಬಡ್ತಿ ಮೀಸಲಾತಿಯಲ್ಲಿ ಎಸ್‌.ಸಿ/ಎಸ್‌.ಟಿ ನೌಕರರಿಗೆ ನ್ಯಾಯ ಕೊಡಿಸಬೇಕು. ಪ್ರತಿ ಗ್ರಾಮದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಮತ್ತು ಸ್ಮಶಾನಕ್ಕೆ ಅಗತ್ಯ ಜಾಗ ನೀಡಬೇಕು. ಗೌರಿ ಲಂಕೇಶ್‌ ಹಾಗೂ ಎಂ.ಎಂ. ಕಲಬುರ್ಗಿ ಅವರ ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡ, ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ದಲಿತರ ಬಗ್ಗೆ ಹುಸಿ ಕಾಳಜಿ ತೋರಿಸುತ್ತಿದೆ. ಉಚಿತವಾಗಿ ಅಕ್ಕಿ ಕೊಟ್ಟದ್ದೇ ದೊಡ್ಡ ಸಾಧನೆ ಎಂದು ಬೀಗುತ್ತಿದೆ.

ಹಿಂದುಳಿದ ವರ್ಗದ ಜನ ಸ್ವಾವಲಂಬಿಗಳಾಗಲು ಪೂರಕ ಯೋಜನೆಗಳನ್ನು ಜಾರಿಗೊಳಿಸಬೇಕು’ ಎಂದರು. ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕರಾದಸಂಸ ತಾಲ್ಲೂಕು ಸಂಚಾಲಕ ವೈರಮುಡಿ, ಜಿಲ್ಲಾ ಸಂಘಟನಾ ಸಂಚಾಲಕ ಸಂತೋಷ್‌ಕುಮಾರ್‌, ರಾಮದಾಸ್‌, ಕೃಷ್ಣಪ್ಪ, ಪರಮೇಶ್‌, ಚುಂಚಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT