ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗೋಟೆ–ಹಾಡೋನಹಳ್ಳಿ ಲಾಂಚ್‌ನಲ್ಲಿ ಬೆರಳೆಣಿಕೆ ಪ್ರಯಾಣಿಕರು

Last Updated 10 ಅಕ್ಟೋಬರ್ 2017, 9:24 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಸಮೀಪದ ಮಂಗೋಟೆ ಹಾಗೂ ಹಾಡೋನಹಳ್ಳಿ ಗ್ರಾಮದ ಮಧ್ಯೆ ತುಂಗಭದ್ರಾ ನದಿಗೆ ಸರ್ಕಾರ ಕಲ್ಪಿಸಿರುವ ಲಾಂಚ್‌ನಲ್ಲಿ ಪ್ರಯಾಣ ಮಾಡುವವರು ಅತಿ ವಿರಳವಾಗಿದ್ದಾರೆ. ಕಳೆದ ವರ್ಷ ಹಾಡೋನಹಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ 9 ಯುವಕರು ಮೃತಪಟ್ಟರು.

ಆಗ ಹಾಡೋನಹಳ್ಳಿ ಹಾಗೂ ಮಂಗೋಟೆ ಗ್ರಾಮಸ್ಥರ ಒತ್ತಾಯದ ಮೇರೆ ಸರ್ಕಾರವು ಈ ಭಾಗದ ಜನರ ಸಂಪರ್ಕಕ್ಕೆ ಅನುಕೂಲವಾಗಲಿ ಎಂದು ಲಾಂಚ್ ವ್ಯವಸ್ಥೆ ಕಲ್ಪಿಸಿತು. ಆದರೆ, ಸನ್ಯಾಸಿಕೊಡಮಗ್ಗಿ ಹಾಗೂ ಹೊಳಲೂರು ನಡುವೆ ಸೇತುವೆ ನಿರ್ಮಾಣದ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಪ್ರಯಾಣಿಕರು ಅದರ ಮೇಲೆ ಓಡಾಡಲಾರಂಭಿಸಿದ್ದಾರೆ. ಹೀಗಾಗಿ ಲಾಂಚ್‌ಗೆ ಹೋಗುವ ಪ್ರಯಾಣಿಕರೇ ಕಡಿಮೆ.

ಲಾಂಚ್ ಈಗ ಪ್ರಯಾಣಿಕರಿಗಾಗಿ ಗಂಟೆಗಟ್ಟಲೆ ಕಾಯಬೇಕಾಗಿದೆ. ಹಿಂದೆ 15ರಿಂದ 20 ಟ್ರಿಪ್ ಮಾಡುತ್ತಿದ್ದೆವು. ಊಟಕ್ಕೂ ಹೋಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಈಗ 3ರಿಂದ 5 ಟ್ರಿಪ್‌ ಹೋಗವಷ್ಟೇ ಜನರು ಬರುತ್ತಿದ್ದಾರೆ. ಮಂಗೋಟೆ ಹಾಗೂ ಹಾಡೋನಹಳ್ಳಿಗೆ ಮಾತ್ರ ಲಾಂಚ್ ಸೇವೆ ಈಗ ಸೀಮಿತವಾಗಿದೆ. ಮಹಿಳೆಯರು, ಮಕ್ಕಳಿಗಷ್ಟೆ ಈ ಯೋಜನೆಯಿಂದ ಪ್ರಯೋಜನವಾಗುತ್ತಿದೆ. ಕ್ರಮೇಣ ಅವರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಲಾಂಚ್ ಚಾಲಕ ಕುಮಾರ್ ತಿಳಿಸಿದರು.

‘ಒಂದು ಬೈಕ್ ಹಾಗೂ ಇಬ್ಬರು ಪ್ರಯಾಣಿಕರಿಗೆ 2 ಕಡೆಯ ಪ್ರಯಾಣ ವೆಚ್ಚ ₹ 50. ನಾವು ಸೇತುವೆ ಮೇಲೆ ಹೋದರೆ ಇಷ್ಟೇ ಬೆಲೆಯ ಪ್ರೆಟ್ರೋಲ್ ಹಾಕಿಸಿದರೆ ಪ್ರಯಾಣಕ್ಕೆ ತೊಂದರೆಯೇನೂ ಇಲ್ಲ. ಲಾಂಚ್‌ನಲ್ಲಿ ಏಕಕಾಲದಲ್ಲಿ 6 ಬೈಕ್‌ಗಳಿಗೆ ಮಾತ್ರ ಪ್ರವೇಶ. ಕೆಲವೊಮ್ಮೆ 8ರಿಂದ 10 ಬೈಕ್‌ಗಳಿದ್ದರೆ, ಅದು ಹೋಗಿ ವಾಪಸ್ ಬರುವವರೆಗೆ ಕಾಯಬೇಕಾಗುತ್ತದೆ. ಅದಕ್ಕೇ ಸೇತುವೆ ಮೇಲೆ ಸಂಚಾರಿಸುವುದೇ ಸುಲಭವಾಗಿದೆ’ ಎಂದು ಪ್ರಯಾಣಿಕ ಆದ್ರಿಹಳ್ಳಿ ಹರೀಶ್ ಪ್ರತಿಕ್ರಿಯಿಸಿದರು.

‘ಕಳೆದ ವರ್ಷ ಹಾಡೋನಹಳ್ಳಿ ಹಾಗೂ ಮಂಗೋಟೆ ನಡುವೆ ಸರ್ಕಾರದಿಂದ ಲಾಂಚ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂಬ ಸುದ್ದಿ ಕೇಳಿ ನಮಗೆ ಅತ್ಯಂತ ಸಂತಸವಾಗಿದ್ದು ನಿಜ. ಹಾಡೋನಹಳ್ಳಿ, ಚೀಲೂರು, ಗೋಪನಹಳ್ಳಿ ಹಾಗೂ ದೊಡ್ಡೇರಿ ಗ್ರಾಮಗಳಿಗೆ ಹೋಗುವ ಪ್ರಯಾಣಿಕರಿಗಷ್ಟೆ ಇದರಿಂದ ಅನುಕೂಲವಾಗುತ್ತಿದೆ. ಹೊಳಲೂರು, ಹರಮಘಟ್ಟ, ಸೂಗೂರು, ಬುಳ್ಳಾಪುರ, ಬೇಡರಹೊಸಹಳ್ಳಿ ಮಾರ್ಗಕ್ಕೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಿಲ್ಲ. ಲಾಂಚ್‌ ಅತ್ಯಂತ ಅವಶ್ಯಕ ಅನಿಸದೇ ಇರಲು ಇದೂ ಕಾರಣ’ ಎನ್ನುವುದು ಆನವೇರಿ ಅರುಣ್ ಅವರ ವಾದ.

ಪ್ರಾರಂಭವಾದ ದಿನಗಳಲ್ಲಿ ಲಾಂಚ್ ತುಂಬಿದ ಮೇಲೂ ಪ್ರಯಾಣಿಕರು ನದಿ ದಡದಲ್ಲಿ ಕಾಯುವಷ್ಟು ಸಂಖ್ಯೆಯಲ್ಲಿ ನಿಲ್ಲುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ನಾಲ್ಕೈದು ಜನ ಪ್ರಯಾಣಿಕರು ಮಾತ್ರ ಲಾಂಚ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೊಳಲೂರು ಹಾಗೂ ಸನ್ಯಾಸಿಕೊಡಮಗ್ಗಿ ರಸ್ತೆ ಸಂಪರ್ಕ ಕಾಮಗಾರಿಯೂ ಪ್ರಗತಿಯಲ್ಲಿದೆ. ಅದು ಪೂರ್ಣಗೊಂಡ ನಂತರ ಲಾಂಚ್‌ನಲ್ಲಿ ಯಾರೊಬ್ಬರೂ ಪ್ರಯಾಣಿಸದೇ ಇರುವ ಸಾಧ್ಯತೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT