ಮಂಗಳವಾರ, ಸೆಪ್ಟೆಂಬರ್ 17, 2019
25 °C

ಹದಗೆಟ್ಟ ಬೆಳಗುಲಿ ಗ್ರಾಮದ ರಸ್ತೆ ಸಂಚಾರ ದುಸ್ಥರ

Published:
Updated:
ಹದಗೆಟ್ಟ ಬೆಳಗುಲಿ ಗ್ರಾಮದ ರಸ್ತೆ ಸಂಚಾರ ದುಸ್ಥರ

ಚಿಕ್ಕನಾಯಕನಹಳ್ಳಿ: ಊರು ಒಂದು ಮೂರು ದಾರಿ.ಊರಿಗೆ ಹೋಗಲು ಯಾವದಾರಿಯೂ ಸರಿಯಿಲ್ಲ. ಇದು ತಾಲ್ಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಗ್ರಾಮದ ಸ್ಥಿತಿ!

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಇರುವ ಮೂರು ದಾರಿಗಳೂ ಕೆಸರುಗದ್ದೆಯಂತಾಗಿದ್ದು ಗ್ರಾಮಸ್ಥರು ಹೊರಗೆ ಹೋಗಲು ಹಾಗೂ ಹೊರಗಿನವರು ಊರಿಗೆ ಬರಲು ಪರದಾಡುವಂತಾಗಿದೆ.

ಈ ಊರಿನಲ್ಲಿ ಗ್ರಾಮ ಪಂಚಾಯಿತಿ ಕಚೇರಿ, ಅಂಚೆ ಕಚೇರಿ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಹಾಸ್ಟೆಲ್, ಬಿಎಸ್ಎನ್ಎಲ್ ಉಪಕಚೇರಿ ಹಾಗೂ ನ್ಯಾಯಬೆಲೆ ಅಂಗಡಿ. ಹೀಗೆ ಹತ್ತು ಹಲವು ಸವಲತ್ತುಗಳು ಇವೆ. ಆದರೆ ಬಹು ಮುಖ್ಯವಾಗಿ ಬೇಕಿರುವ ರಸ್ತೆ ಮಾತ್ರ ಈ ಊರಿಗೆ ಕನಸಾಗಿ ಉಳಿದಿದೆ.

ಗ್ರಾಮದಿಂದ ಹೋಬಳಿ, ತಾಲ್ಲೂಕು ಜಿಲ್ಲಾ ಕೇಂದ್ರಗಳಿಗೆ ಬೆಸೆಯಲು 3 ಮಾರ್ಗಗಳಿವೆ. ಇರುವ ಎಲ್ಲಾ ಮಾರ್ಗಗಳೂ ಹಾಳಾಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.

ಮಾರ್ಗ 1: ಮೊದಲನೆಯದಾಗಿ 4ಕಿ.ಮೀ ದೂರದ ಅವಳಗೆರೆಗೆ ಹೋಗಿ ಬಸ್ ಹಿಡಿಯಬೇಕು. ಆದರೆ ಅವಳಗೆರೆ-ಬೆಳುಗುಲಿ ರಸ್ತೆ ಮಧ್ಯೆ ಕೆರೆ ಪಕ್ಕದ ಸೇತುವೆ ಕುಸಿದು ಬಿದ್ದಿದೆ. ಸೇತುವೆ ದುರಸ್ತಿಗೊಳಿಸದೆ ಸಂಚಾರ ದುಸ್ತರವಾಗಿದೆ. ಅರ್ಧದಷ್ಟಕ್ಕೆ ಮಾತ್ರ ಡಾಂಬರ್ ಹಾಕಿದ್ದು, ಉಳಿದರ್ಧ ಮಣ್ಣಿನ ರಸ್ತೆ. ರಸ್ತೆ ತುಂಬ ಗುಂಡಿಗಳು ಬಿದ್ದಿದ್ದು, ಸಂಚಾರ ದುಸ್ತರವಾಗಿದೆ.

ಮಾರ್ಗ 2: ಪಾಪನಕೋಣ ಮತ್ತು ಹೊಸಕೆರೆ ಮೂಲಕ 7ಕಿ.ಮೀ ಕ್ರಮಿಸಿ ಬೆಂಗಳೂರು-ಹೊಸದುರ್ಗ ಹೆದ್ದಾರಿಗೆ ತಲುಪಬಹುದು. ಬೆಳಗುಲಿಯಿಂದ ಪಾಪನಕೋಣದ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರ ಅಸಾಧ್ಯ ಎನ್ನುವಂತಾಗಿದೆ. ಪಾಪನಕೋಣದ ಬಳಿ ಸೇತುವೆಯೂ ಕುಸಿದಿದ್ದು, ಬಲಿಗಾಗಿ ಕಾಯುತ್ತಿದೆ. ಮಳೆ ಬಿದ್ದು, ರಸ್ತೆ ತುಂಬ ಹೊಂಡ ನಿರ್ಮಾಣವಾಗಿವೆ. ತಾತ್ಕಾಲಿಕವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಗುಂಡಿಗಳಿಗೆ ಜಲ್ಲಿಕಲ್ಲು ಸುರಿಯಲಾಗಿದೆ. ಸರಿಯಾಗಿ ಮಣ್ಣು ಹಾಕದ ಕಾರಣ ಕಲ್ಲುಗಳು ರಸ್ತೆತುಂಬೆಲ್ಲ ಹರಡಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

ಮಾರ್ಗ 3: ಬೆಳಗುಲಿ-ಯರೇಕಟ್ಟೆ ಮಾರ್ಗ ಗ್ರಾಮಸ್ಥರನ್ನು ಹೊರಜಗತ್ತಿಗೆ ಸಂಪರ್ಕಿಸಲು ಇರುವ 3ನೇ ಮಾರ್ಗ ಇದು ದುರಸ್ತಿಯನ್ನೇ ಕಂಡಿಲ್ಲ. ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಬೇಕು. ರಸ್ತೆ ಹದಗೆಟ್ಟಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು ನಿಂತು ಹೋಗಿವೆ.

ಬೆಳಗುಲಿ ನಿತ್ಯ ಏಳೆಂಟು ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲಾ– ಕಾಲೇಜಿಗೆ ಸೈಕಲ್‌ನಲ್ಲಿ ಬರುತ್ತಾರೆ. ಪಂಚಾಯಿತಿ ಮತ್ತು ಅಂಚೆ ಕಚೇರಿಗೆ ಹಾಗೂ ನ್ಯಾಯಬೆಲೆ ಅಂಗಡಿಗೆ ಜನ ಭೇಟಿ ನೀಡುತ್ತಾರೆ. ನಿತ್ಯ ಬಂದು ಹೋಗುವ ನೂರಾರು ಜನ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಸಂಚಾರ ನರಕಯಾತನೆಯಾಗಿದೆ.

ಬೆಳಗುಲಿ, ಹೊಸಹಟ್ಟಿ, ಯರೇಕಟ್ಟೆ, ಹಳೆಹಟ್ಟಿ, ರಂಗಾಪುರ, ಹೊಸಹಟ್ಟಿ, ನಿರುವಗಲ್, ನಂದಿಹಳ್ಳಿ, ತೊರೆಮನೆ, ಗದ್ದಿಗೇರಹಟ್ಟಿ, ಬರಗೂರು, ಪಾಪನಕೋಣ, ಅಂಕಸಂದ್ರ, ಓಟೀಕೆರೆ, ರಂಗೇನಹಳ್ಳಿ, ಯಳ್ಳೇನಹಳ್ಳಿ, ಮತ್ತಿಘಟ್ಟ, ಸೋರಲಮಾವು, ಹರೇನಹಳ್ಳಿ, ಹಂದನಕೆರೆ, ಬಂಗಾರಗೆರೆ, ಎಳ್ಳೇನಹಳ್ಳಿ, ಹೊಸೂರು, ಕಾಮಲಾಪುರ, ದವನದ ಹೊಸಹಳ್ಳಿ ಮುಂತಾದ ಕಡೆಯಿಂದ ರಮಗನಾಥಸ್ವಾಮಿ ಬೆಟ್ಟಕ್ಕೆ ಬರುವ ಭಕ್ತರು ತೊಂದರೆ ಪಡುವಂತಾಗಿದೆ.

ಅಪಾಯ ಕಾದಿದೆ: ಕೆರೆಗೆ ನೀರು ಬಂದಿದ್ದು, ಚೆನ್ನಾಗಿ ಮಳೆಯಾದರೆ ಕೆರೆ ಕೋಡಿ ಬೀಳುವ ಸಂಭವವಿದೆ. ಕೆರೆ ಏರಿಯ ಒತ್ತಡ ಕಡಿಮೆ ಮಾಡಲು ಈ ಸೇತುವೆಯನ್ನು ಅಳವಡಿಸಲಾಗಿತ್ತು. ಈಗ ಸೇತುವೆ ಕುಸಿತ ಕಂಡು ಮುಚ್ಚಿಹೋಗಿದೆ.

ಕೆರೆ ನೀರಿನ ಸಾಂದ್ರತೆ ಅಧಿಕವಾದರೆ ಏರಿ ಹೊಡೆಯುವ ಅಪಾಯವಿದೆ. ಹಾಗೇನಾದರೂ ಆದರೆ ಅಪಾರ ಗದ್ದೆ ಬಯಲು ಹಾಗೂ ಹಿಂಬದಿಯ ರಂಗಾಪುರ ಗ್ರಾಮ ಜಲಾವೃತವಾಗುವ ಸಾಧ್ಯತೆ ಇದೆ. ದೊಡ್ಡಮಟ್ಟದ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟವರು ಹೆಚ್ಚೆತ್ತುಕೊಂಡರೆ ಒಳಿತು ಎಂದು ಬೆಳಗುಲಿ ಶಶೀಭೂಷಣ್ ಹೇಳುತ್ತಾರೆ.

ಗ್ರಾಮಾಂತರದಲ್ಲಿ ಅಕ್ಷರದ ಹಣತೆ ಬೆಳಗಿದ ಊರು: ಬೆಳಗುಲಿ ಸೇರಿದಂತೆ ಸುತ್ತಮುತ್ತಲ 10ಹಳ್ಳಿಗಳ ಮುಖಂಡರು ಸೇರಿ 1974ರಲ್ಲಿ ಶ್ರೀರಂಗನಾಥ ಗ್ರಾಮಾಂತರ ವಿದ್ಯಾಸಂಸ್ಥೆ ತೆರೆದರು. ತಾಲ್ಲೂಕಿನಲ್ಲಿ ಪ್ರಾರಂಭವಾದ ಮೊದಲ ಮೂರು ಶಿಕ್ಷಣ ಸಂಸ್ಥೆಗಳಲ್ಲಿ ಇದೂ ಒಂದು.

43ವರ್ಷದ ಶೈಕ್ಷಣಿಕ ಸೇವೆಯಲ್ಲಿ ಸುತ್ತಮುತ್ತಲ 30ಹಳ್ಳಿಗಳೂ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಬುಕ್ಕಸಾಗರ, ತೇಕಲವಟ್ಟಿ, ಬ್ಯಾಲದಕೆರೆ, ದುಗ್ಗಾವರ, ಹೊಳಲ್ಕೆರೆ, ಸಾಂತನಹಳ್ಳಿ ಭಾಗದಿಂದಲೂ ಮಕ್ಕಳು ಬಂದು ಹಾಸ್ಟಲ್‌ನಲ್ಲಿ ತಂಗಿ ವಿದ್ಯಾಭ್ಯಾಸ ಪೂರೈಸಿದ್ದಾರೆ. 4ಸಾವಿರಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ಕಲಿತು ಭವಿಷ್ಯ ರೋಪಿಸಿಕೊಂಡಿದ್ದಾರೆ. ಹೀಗೆ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿದ ಊರಿಗೆ ಇನ್ನೂ ಸರಿಯಾದ ದಾರಿ ಇಲ್ಲ ಎಂಬುದು ವಿಪರ್ಯಾಸ.

Post Comments (+)