ವಿಶ್ವದೆಲ್ಲೆಡೆ ಈಗ 5ಜಿ ಧ್ಯಾನ

ಮಂಗಳವಾರ, ಜೂನ್ 18, 2019
26 °C

ವಿಶ್ವದೆಲ್ಲೆಡೆ ಈಗ 5ಜಿ ಧ್ಯಾನ

Published:
Updated:
ವಿಶ್ವದೆಲ್ಲೆಡೆ ಈಗ 5ಜಿ ಧ್ಯಾನ

ಕಣ್ಣು ಮಿಟುಕಿಸುವುದರೊಳಗೆ ಡೌನ್‌ಲೋಡ್‌ ಆಗುವ ಫೈಲ್‌ಗಳು, ಕ್ಷಣಾರ್ಥದಲ್ಲಿ ಲೋಡಿಂಗ್‌ ಆಗುವ ವೆಬ್‌ಪೇಜ್‌ಗಳು, ಯಾವುದೇ ತಾಂತ್ರಿಕ ಅಡಚಣೆ ಎದುರಾಗದೆ, ಮಧ್ಯದಲ್ಲಿ ಸ್ಥಗಿತಗೊಳ್ಳದೆ ಚಾಲನೆಗೊಳ್ಳುವ ಲೈವ್‌ ವಿಡಿಯೊಗಳು, ಬ್ರೌಸರ್‌ನಲ್ಲಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಟ್ಯಾಬ್‌ಗಳನ್ನು ತೆರೆದಿಟ್ಟು ಕೆಲಸ ಮಾಡುತ್ತಿದ್ದರೂ, ಯಾವ ಪುಟವೂ ಸ್ಥಗಿತಗೊಳ್ಳದೆ ಸರಾಗವಾಗಿ ಕೆಲಸ ಮಾಡಬಹುದಾದ ತಂತ್ರಜ್ಞಾನ. ಒಂದು ಆಕ್ಸೆಸ್‌ ಪಾಯಿಂಟ್‌ನಿಂದ (ಎಪಿ) ಗರಿಷ್ಠ ಸಂಖ್ಯೆಯಲ್ಲಿ ವೈ–ಫೈ ಇಂಟರ್‌ನೆಟ್ ಸಂಪರ್ಕ ಪಡೆದುಕೊಳ್ಳಬಹುದಾದ ಸೌಲಭ್ಯ.

ಹೌದು. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನು 3 ವರ್ಷಗಳಲ್ಲಿ ಅಂದರೆ 2020ರ ವೇಳೆಗೆ, ಐದನೆಯ ತಲೆಮಾರಿನ ನಿಸ್ತಂತು ಸೇವೆ 5ಜಿ ದೇಶವ್ಯಾಪಿಯಾಗಿ ಬಳಕೆಗೆ ಬರಲಿದೆ.

ದೇಶದಲ್ಲಿ 10 ವರ್ಷಗಳಿಗೊಮ್ಮೆ ಹೊಸ ತಲೆಮಾರಿನ ತರಂಗಾಂತರ ಸೇವೆ ಜಾರಿಗೆ ಬರುತ್ತಿದೆ. ಒಂದನೆಯ ತಲೆಮಾರಿನ ತರಂಗಾಂತರ ಅಂದರೆ 1ಜಿ ಬಂದಿದ್ದು 1982ರಲ್ಲಿ. ನಂತರ 1992ರಲ್ಲಿ 2ಜಿ ಬಂತು. ಬಹುನಿರೀಕ್ಷಿತ 3ಜಿ ತಂತ್ರಜ್ಞಾನ ಬಳಕೆಗೆ ಬಂದಿದ್ದು 2001ರಲ್ಲಿ. ಸದ್ಯ ನಾವು ಬಳಸುತ್ತಿರುವ 4ಜಿ ಇಂಟರ್‌ನೆಟ್‌ ತಂತ್ರಾಂಶ ಸಂಪೂರ್ಣವಾಗಿ ಜಾರಿಗೆ ಬಂದಿದ್ದು 2012ರಲ್ಲಿ. ಇದಾಗಿ 5 ವರ್ಷ ಕಳೆಯುವುದರೊಳಗೆ 5ಜಿ ಸುದ್ದಿ ಕೇಳಿಸುತ್ತಿದೆ. ಈಗಿನ್ನೂ ಕಣ್ಣು ಬಿಡುತ್ತಿರುವ ಈ ತಂತ್ರಜ್ಞಾನ ಸಂಪೂರ್ಣವಾಗಿ ಅಭಿವೃದ್ಧಿಗೊಂಡು ಜಾರಿಗೆ ಬರಲು ಇನ್ನೂ 3 ವರ್ಷ ಬೇಕಾಗಬಹುದು. ಅಂದರೆ 2020ರ ವೇಳೆಗೆ 5ಜಿ ಬಳಕೆಗೆ ಮುಕ್ತವಾಗಬಹುದು ಎನ್ನುತ್ತಾರೆ ಮೊಬೈಲ್‌ ಮಾರುಕಟ್ಟೆ ತಜ್ಞರು.

4ಜಿಯ ಉದ್ದೇಶಿತ ವೇಗ ಪ್ರತಿ ಸೆಕೆಂಡ್‌ಗೆ 1 ಜಿಬಿ. ಆದರೆ, ವಾಸ್ತವದಲ್ಲಿ ಸದ್ಯ ಮಹಾನಗರಗಳಲ್ಲೂ ಈ ವೇಗ ಲಭಿಸುತ್ತಿಲ್ಲ. ಅಲ್ಲದೆ, 4ಜಿ ಹಾಟ್‌ಸ್ಟಾಟ್‌ ಡಿವೈಸ್‌ ಬಳಸಿದರೂ ಒಂದಕ್ಕಿಂತ ಹೆಚ್ಚು ಡಿವೈಸ್‌ಗಳಿಗೆ ಏಕಕಾಲದಲ್ಲಿ ಇಂಟರ್‌ನೆಟ್‌ ಸಂಪರ್ಕ ಪಡೆದುಕೊಂಡಾಗ ಇಂಟರ್‌ನೆಟ್‌ ವೇಗ ಗಣನೀಯವಾಗಿ ತಗ್ಗುತ್ತದೆ. ಎರಡು ಮತ್ತು ಮೂರನೆಯ ಹಂತದ ನಗರಗಳಲ್ಲಿ 4ಜಿ ನೆಟ್‌ವರ್ಕ್‌ನಲ್ಲಿ ಸರಾಸರಿ 5 ಎಂಬಿಪಿಎಸ್‌ ಡೌನ್‌ಲೋಡ್‌ ಮತ್ತು 2ಎಂಬಿಪಿಎಸ್‌ನಷ್ಟು ಅಪ್‌ಲೋಡ್‌ ವೇಗವಷ್ಟೇ ಲಭಿಸುತ್ತಿದೆ.

4ಜಿ ತಂತ್ರಜ್ಞಾನದಲ್ಲೂ ಇಂಟರ್‌ನೆಟ್‌ ವೇಗ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎನ್ನುವುದು ಗ್ರಾಹಕರ ಪ್ರಮುಖ ದೂರು. ಹೀಗಾಗಿ 5ಜಿ ತಂತ್ರಜ್ಞಾನದಲ್ಲಿ ಮುಖ್ಯವಾಗಿ ವೇಗವರ್ಧನೆಗೆ ಆದ್ಯತೆ ನೀಡಲಾಗಿದೆ. ಜತೆಗೆ ಏಕಕಾಲದಲ್ಲಿ, ಒಂದೇ ಆಕ್ಸೆಸ್‌ ಪಾಯಿಂಟ್‌ನಿಂದ ಬೇರೆ ಬೇರೆ ಡಿವೈಸ್‌ಗಳಿಗೆ ಇಂಟರ್‌ನೆಟ್‌ ಸಂಪರ್ಕ ಪಡೆದುಕೊಂಡ ಸಂದರ್ಭದಲ್ಲೂ ವೇಗದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಗಮನ ಹರಿಸಲಾಗಿದೆ. ಮತ್ತು ಕಡಿಮೆ ಬ್ಯಾಟರಿ ಬಳಕೆ ತಂತ್ರಜ್ಞಾನ ಅಳವಡಿಸಲಾಗಿದೆ. ಮೊಬೈಲ್‌ ಸೇವಾ ಸಂಸ್ಥೆಗಳಿಗೆ ಹೊಸ ತಂತ್ರಜ್ಞಾನಕ್ಕೆ ಬದಲಾಗಲು ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯೇನೂ ಬೇಕಾಗುವುದಿಲ್ಲ. ಹೀಗಾಗಿ ಇಂಟರ್‌ನೆಟ್‌ ದತ್ತಾಂಶ ಶುಲ್ಕದಲ್ಲೂ ಗಣನೀಯ ಏರಿಕೆಯೇನೂ ಆಗುವುದಿಲ್ಲ. ಈಗಿನ 4ಜಿ ದರದಲ್ಲೇ 5ಜಿ ಸೇವೆಗಳನ್ನೂ ಪಡೆಯಬಹುದು ಎನ್ನುವುದು ಮಾರುಕಟ್ಟೆ ತಜ್ಞರ ವಿಶ್ಲೇಷಣೆ.

ಸೂಪರ್‌ಫಾಸ್ಟ್‌ ಮೊಬೈಲ್‌ ನೆಟ್‌ವರ್ಕ್‌

ಸೂಪರ್‌ಫಾಸ್ಟ್‌ ಮೊಬೈಲ್‌ ನೆಟ್‌ವರ್ಕ್‌ ಎಂಬ ಘೋಷಣೆಯೊಂದಿಗೆ 5ಜಿ ಮಾರುಕಟ್ಟೆಗೆ ಬರುತ್ತಿದೆ. ಇದರಲ್ಲಿ ಅತ್ಯಾಧುನಿಕ ನಿಸ್ತಂತು ತಂತ್ರಜ್ಞಾನ ಅಂದರೆ ಮಿಲಿಮೀಟರ್‌ ವೇವ್‌ ಬ್ಯಾಂಡ್‌ ತಂತ್ರಜ್ಞಾನ ಬಳಸಲಾಗಿದೆ. ಅಂದರೆ ವೈ–ಫೈ ಸಂಪರ್ಕದಲ್ಲಿ ಪ್ರತಿ ಸೆಕೆಂಡ್‌ಗೆ ಗರಿಷ್ಠ 10 ಜಿಬಿವರೆಗೆ ಇಂಟರ್‌ನೆಟ್‌ ವೇಗ ಲಭಿಸುವ ಸಾಧ್ಯತೆ ಇದೆ. ಈ ತಂತ್ರಜ್ಞಾನ ಅಳವಡಿಕೆಯಿಂದ ನಗರ ಪ್ರದೇಶಗಳಲ್ಲಿ ಪ್ರತಿ ಸೆಕೆಂಡ್‌ಗೆ 10 ಸಾವಿರ ಎಂಬಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಸೆಕೆಂಡ್‌ಗೆ ಕನಿಷ್ಠ 1 ಸಾವಿರ ಎಂಬಿ ವೇಗದ ಅಂತರ್ಜಾಲ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. 5ಜಿ ಬಳಕೆಗೆ ಬಂದರೆ ವಾಹನ ಉದ್ಯಮ, ಆರೋಗ್ಯ, ಶಿಕ್ಷಣ, ಸಾರಿಗೆ, ಇಂಧನ, ತಯಾರಿಕಾ ವಲಯ, ಮಾಧ್ಯಮ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆ ನಿರೀಕ್ಷಿಸಲಾಗಿದೆ.

ಇತ್ತೀಚೆಗೆ ಬಾರ್ಸಿಲೋನಾದಲ್ಲಿ ನೆಡೆದ ಮೊಬೈಲ್ ಸೇವಾ ಸಂಸ್ಥೆಗಳ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ 5ಜಿ ಪ್ರಾತ್ಯಕ್ಷಿಕೆ ನಡೆದಿದೆ. 5ಜಿ ತಂತ್ರಜ್ಞಾನದಲ್ಲಿ ಮನುಷ್ಯನ ನಡುವಿನ ಸಂವಹನ ಮಾತ್ರವಲ್ಲ, ಯಂತ್ರಗಳ ನಡುವಿನ ಸಂವಹನವೂ ಸುಲಭ, ಸಾಧ್ಯವಾಗಲಿದೆ. ಅಂದರೆ ಸದ್ಯ ಬಳಕೆಯಲ್ಲಿರುವ 4ಜಿ ಇಂಟರ್‌ನೆಟ್‌ ವೇಗಕ್ಕಿಂತಲೂ ಸಾವಿರಪಟ್ಟು ವೇಗ ಇದರಲ್ಲಿ ಲಭಿಸಲಿದೆ. ಜತೆಗೆ ಅತ್ಯಂತ ಕಡಿಮೆ ಬ್ಯಾಟರಿ ಬಳಸಿಕೊಳ್ಳುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

ದಕ್ಷಿಣ ಕೊರಿಯಾ ಈಗಾಗಲೇ 5ಜಿ ತಂತ್ರಜ್ಞಾನ ಜಾರಿಗೆ ತರಲು ಸಿದ್ಧತೆ ನಡೆಸಿದೆ. 2018ರಲ್ಲಿ ದೇಶದಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ ಕೂಟಗಳಲ್ಲಿ ಈ ತಂತ್ರಜ್ಞಾನ ಪರಿಚಯಿಸಲು ಕೊರಿಯಾದ ದೂರಸಂಪರ್ಕ ತಂತ್ರಜ್ಞರು ಪ್ರಯತ್ನಿಸುತ್ತಿದ್ದಾರೆ. ಚಾಲಕ ರಹಿತ ಕಾರುಗಳ ಅಭಿವೃದ್ಧಿ ಮತ್ತು ಸಂಚಾರ ದಟ್ಟಣೆ ನಿಯಂತ್ರಣ ವ್ಯವಸ್ಥೆಯಲ್ಲೂ 5ಜಿ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನುತ್ತಾರೆ ಕೊರಿಯಾ ಟೆಲಿಕಾಂ ಕಂಪೆನಿಯ ಸಿಇಒ ಚಾಂಗ್‌ ಗುವಾಂಗ್‌.

‘5ಜಿ ತಂತ್ರಜ್ಞಾನದಲ್ಲಿ, ಒಂದು ಮಿಲಿ ಸೆಕೆಂಡ್‌ನಲ್ಲಿ ಇಂಟರ್‌ನೆಟ್‌ ಸಂಪರ್ಕ ಪಡೆದುಕೊಳ್ಳಲು ಸಾಧ್ಯ. ಇದರ ವೇಗವನ್ನು ಊಹಿಸಲೂ ಸಾಧ್ಯವಿಲ್ಲ ಎನ್ನುತ್ತಾರೆ ಚೀನಾದ ಮೊಬೈಲ್‌ ತಯಾರಿಕಾ ಕಂಪೆನಿಯ ಹುವಾವೆಯ ಉಪಾಧ್ಯಕ್ಷ ಕೆನ್‌ ಹು. ಇನ್ನೂ ಸರಳವಾಗಿ ಹೇಳಬೇಕಾದರೆ ಎರಡೂವರೆ ಗಂಟೆ ಅವಧಿಯ ಒಂದು ಚಲನಚಿತ್ರವನ್ನು 5 ಸೆಕೆಂಡ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು’ ಎನ್ನುತ್ತಾರೆ ಅವರು.

5ಜಿ ತಂತ್ರಜ್ಞಾನದ ಬೆನ್ನಲ್ಲೇ ಹೊಸ ತಲೆಮಾರಿನ ಅತ್ಯಾಧುನಿಕ ಡಿವೈಸ್‌ಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. 2020ರ ಚಳಿಗಾಲದ ಒಲಿಂಪಿಕ್ಸ್‌ ವೇಳೆಗೆ ಜಪಾನ್‌ನಲ್ಲಿ ಸಂಪೂರ್ಣ 5ಜಿ ತಂತ್ರಜ್ಞಾನ ಜಾರಿಗೆ ತರಲು ಅಲ್ಲಿಯೂ ಪ್ರಯತ್ನಗಳು ನಡೆದಿವೆ. ಸ್ಯಾಮ್ಸಂಗ್‌, ಎಲ್‌ಜಿ, ಹುವಾವೆಯಂತಹ ಕಂಪೆನಿಗಳು ಈ ತಂತ್ರಜ್ಞಾನ ಲಾಭ ಪಡೆದುಕೊಳ್ಳಲು ಮುಂಚೂಣಿಯಲ್ಲಿ ನಿಂತಿವೆ.

ಶೀಘ್ರದಲ್ಲೇ ಭಾರತಕ್ಕೆ

ಇಡೀ ವಿಶ್ವಕ್ಕೆ 2ಜಿ ಪರಿಚಯಗೊಂಡು ಎರಡು ದಶಕಗಳು ಕಳೆದ ನಂತರ ಭಾರತದಲ್ಲಿ ಇದು ಬಳಕೆಗೆ ಬಂತು. ಅಮೆರಿಕ, ಯೂರೋಪ್‌ನಲ್ಲಿ 3ಜಿ ಬಳಕೆಗೆ ಬಂದು ಒಂದು ದಶಕ ಕಳೆದ ನಂತರ ಭಾರತದಲ್ಲಿ ಈ ತಂತ್ರಜ್ಞಾನ ಬಳಕೆಗೆ ಮುಕ್ತವಾಯಿತು. ಆದರೆ, 4ಜಿ ಸೇವೆ ಕೇವಲ 5 ವರ್ಷಗಳಲ್ಲೇ ಭಾರತಕ್ಕೆ ಬಂತು. 5ಜಿ ಸೇವೆ ಕೂಡ ಇದಕ್ಕಿಂತ ವೇಗವಾಗಿ ಅಂದರೆ ಅಮೆರಿಕ, ಯೂರೋಪ್‌, ಜಪಾನ್‌ನಲ್ಲಿ ಬಳಕೆಗೆ ಬರುವ ಸಂದರ್ಭದಲ್ಲೇ ದೇಶದಲ್ಲೂ ಬಳಕೆಗೆ ಬರಲಿದೆ. ಏಕೆಂದರೆ ಭಾರತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊಬೈಲ್‌ ಮಾರುಕಟ್ಟೆ. ಹೀಗಾಗಿ 5ಜಿ ತಂತ್ರಜ್ಞಾನ ಭಾರತಕ್ಕೆ ಬರುವ ಕಾಲ ದೂರವಿಲ್ಲ ಎನ್ನುತ್ತಾರೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌.

ಬಿಎಸ್‌ಎನ್‌ಎಲ್‌, 2018ರ ಅಂತ್ಯದ ವೇಳಗೆ 5ಜಿ ಪ್ರಾಯೋಗಿಕ ಸೇವೆ ಪ್ರಾರಂಭಿಸುವ ಯೋಜನೆ ಹೊಂದಿದೆ. ಸದ್ಯ ದೇಶದಲ್ಲೇ ಅತಿದೊಡ್ಡ ಆಪ್ಟಿಕಲ್‌ ಪೈಬರ್‌ ನೆಟ್‌ವರ್ಕ್‌ ಜಾಲವನ್ನು ಬಿಎಸ್‌ಎನ್‌ಎಲ್‌ ಹೊಂದಿದೆ. ದೇಶದ ಅತಿದೊಡ್ಡ ಮೊಬೈಲ್‌ ಸೇವಾ ಸಂಸ್ಥೆಯಾಗಿರುವ ಏರ್‌ಟೆಲ್‌ ಮೊಬೈಲ್ ತರಂಗಾಂತರ ದಕ್ಷತೆ ಹೆಚ್ಚಿಸುವ ‘ಮ್ಯಾಸಿವ್‌ ಎಂಐಎಂಒ’ ತಂತ್ರಜ್ಞಾನ ಬಳಸಿಕೊಂಡು 5ಜಿ ಸೇವೆ ಜಾರಿಗೆ ತರಲು ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿದೆ. ದೇಶದಲ್ಲಿ 2020ರ ವೇಳೆಗೆ 5ಜಿ ತಂತ್ರಜ್ಞಾನದ ಅನಾವರಣಕ್ಕೆ ಅಗತ್ಯವಿರುವ ರೂಪುರೇಷೆ ಸಿದ್ಧಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನೂ ರಚಿಸಿದೆ. ಇದಕ್ಕಾಗಿ ₹500 ಕೋಟಿ ಮೂಲನಿಧಿ ಮೀಸಲಿಡಲಾಗುವುದು ಎಂದು ಸರ್ಕಾರ ಹೇಳಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry