ಶುಕ್ರವಾರ, ಸೆಪ್ಟೆಂಬರ್ 20, 2019
29 °C

574 ಮಾಲೀಕರಿಗೆ ನೋಟಿಸ್

Published:
Updated:
574 ಮಾಲೀಕರಿಗೆ ನೋಟಿಸ್

ಬೆಂಗಳೂರು: ಮದ್ಯದ ಅಂಗಡಿಗಳ ಪರವಾನಗಿ ನವೀಕರಣ ಪ್ರಕ್ರಿಯೆ ಆರಂಭವಾಗಿ ಮೂರು ತಿಂಗಳು ಕಳೆದರೂ ನವೀಕರಣ ಕೋರಿ ಅರ್ಜಿ ಸಲ್ಲಿಸದ 574 ಮಾಲೀಕರಿಗೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದೆ.

‘ಕಳೆದ ವರ್ಷದ ಪರವಾನಗಿ ಅವಧಿ ಜೂನ್ 30ಕ್ಕೆ ಮುಕ್ತಾಯಗೊಂಡಿದೆ. ರಾಜ್ಯದಲ್ಲಿರುವ 10,276 ಮದ್ಯದ ಅಂಗಡಿಗಳಲ್ಲಿ 693 ಪರವಾನಗಿ ಈವರೆಗೆ ನವೀಕರಣ ಆಗಿಲ್ಲ. ಈ ಪೈಕಿ 574 ಮಾಲೀಕರು ನವೀಕರಣಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ’ ಎಂದು ಅಬಕಾರಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನವೀಕರಣ ಮಾಡಿಕೊಳ್ಳದಿರುವ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಉತ್ತರಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದರು.

ಹೆದ್ದಾರಿ ಬದಿಯ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಆದೇಶವು ನಗರ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ ಬಳಿಕ ನವೀಕರಣ ಪ್ರಕ್ರಿಯೆ ಬಿರುಸಿನಿಂದ ನಡೆದಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಹೆದ್ದಾರಿ ಬದಿಯ 220 ಮೀಟರ್‌ ವ್ಯಾಪ್ತಿಯ ಮದ್ಯದ ಅಂಗಡಿಗಳನ್ನು ಮುಚ್ಚುವುದು ಅನಿವಾರ್ಯ ಎಂದೂ ಅವರು ತಿಳಿಸಿದರು.

‘ಈ ಅಂಗಡಿಗಳನ್ನು ಬೇರೆಡೆ ತೆರೆಯಲು ವಿಧಿಸುವ ಸ್ಥಳಾಂತರ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಿ ಜುಲೈ 1ರಿಂದ ತಿಂಗಳ ಕಾಲಾವಕಾಶ ನೀಡಲಾಗಿತ್ತು. ಸೆಪ್ಟೆಂಬರ್ 30ಕ್ಕೆ ಈ ಅವಧಿಯೂ ಮುಕ್ತಾಯವಾಗಿದೆ. ಈ ಅವಧಿಯನ್ನು ಡಿಸೆಂಬರ್ ತನಕ ವಿಸ್ತರಿಸಲು ಮದ್ಯ ಮಾರಾಟಗಾರರು ಕೋರಿದ್ದು, ಪ್ರಸ್ತಾವನೆ ಸರ್ಕಾರದ ಮುಂದಿದೆ’ ಎಂದೂ ಅವರು ಹೇಳಿದರು.

‘ಅರ್ಜಿ ಸಲ್ಲಿಸದವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದವರು. ಹೆದ್ದಾರಿ ಬದಿಯ ಮದ್ಯದ ಅಂಗಡಿಗಳನ್ನು ಮುಚ್ಚಿ ಬೇರೆಡೆ ತೆರೆಯಲು ಸೂಕ್ತ ಸ್ಥಳ ಸಿಗದ ಕಾರಣಕ್ಕೆ ಅವರು ಅರ್ಜಿ ಸಲ್ಲಿಸಿಲ್ಲ. ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ಗ್ರಾಮೀಣ ಭಾಗದ ಹೆದ್ದಾರಿ ಬದಿ ಅಂಗಡಿಗಳನ್ನು ಉಳಿಸುವಂತೆ ಸರ್ಕಾರವನ್ನು ಕೋರಿದ್ದೇವೆ. ನೆರವಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಮಾಲೀಕರು ಕಾಯುತ್ತಿದ್ದಾರೆ’ ಎಂದು ಕರ್ನಾಟಕ ಮದ್ಯ ಮಾರಾಟಗಾರರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಬಿ.ಗೋವಿಂದ ರಾಜ ಹೆಗ್ಡೆ ತಿಳಿಸಿದರು.

₹ 8,827 ಕೋಟಿ ಸಂಪನ್ಮೂಲ ಸಂಗ್ರಹ

ಅಬಕಾರಿ ಮೂಲದಿಂದ ಈ ವರ್ಷ ₹ 18,050 ಕೋಟಿ ಸಂಪನ್ಮೂಲ ಸಂಗ್ರಹ ಗುರಿಯನ್ನು ಸರ್ಕಾರ ಹೊಂದಿದ್ದು, ಆರು ತಿಂಗಳಲ್ಲಿ ₹ 8,827 ಕೋಟಿ ಸಂಗ್ರಹವಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದರು

ಕಳೆದ ವರ್ಷ ಇದೇ ಅವಧಿಯಲ್ಲಿ ₹ 8,525 ಕೋಟಿ ಸಂಗ್ರಹವಾಗಿತ್ತು. ಸುಪ್ರೀಂ ಕೋರ್ಟ್ ಆದೇಶದಿಂದ ಜುಲೈ ಮತ್ತು ಆಗಸ್ಟ್ ನಲ್ಲಿ 2,800 ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ಆದಾಯದಲ್ಲಿ ₹ 300 ಕೋಟಿ ಕೊರತೆ ಆಗಿದೆ. ಆದರೆ, ಅಬಕಾರಿ ಸುಂಕ ಹೆಚ್ಚಳ ಆಗಿರುವ ಕಾರಣ ಸಂಪನ್ಮೂಲ ಸಂಗ್ರಹ ಕಳೆದ ವರ್ಷಕ್ಕಿಂತ ₹ 300 ಕೋಟಿ ಹೆಚ್ಚಾಗಿದೆ ಎಂದೂ ಅವರು ಹೇಳಿದರು.

Post Comments (+)