ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಜನರ ಕೈಸೇರಿಲ್ಲ ಪರಿಷ್ಕೃತ ’ನಗರ ಮಹಾಯೋಜನೆ’ ಕರಡು

Last Updated 10 ಅಕ್ಟೋಬರ್ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ‘ಪರಿಷ್ಕೃತ ಮಹಾಯೋಜನೆ 2031’ಕ್ಕೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇದರ ಕರಡು ರೂಪಿಸುವ ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿದೆ.

ಬಿಡಿಎ ಅಧಿಕಾರಿಗಳು 2016ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರ ಮಹಾಯೋಜನೆ (ಸಿಡಿಪಿ) ಪರಿಷ್ಕರಣೆಯ ಪೂರ್ವತಯಾರಿಯ ಪ್ರಾತ್ಯಕ್ಷಿಕೆ ನೀಡಿದ್ದರು. ಇದರ ಕರಡು ಸಿದ್ಧಪಡಿಸುವ ಪ್ರಕ್ರಿಯೆಯನ್ನು 2017ರ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದರು.

ಇದನ್ನು ಸಿದ್ಧಪಡಿಸುವ ಸಲುವಾಗಿ ಪ್ರಾಧಿಕಾರ, ನಗರದ ಚಿತ್ರಣ 2031ರ ವೇಳೆಗೆ ಹೇಗಿರುತ್ತದೆ, ಅದಕ್ಕೆ ಪೂರಕವಾಗಿ ನಗರದ ಅಭಿವೃದ್ಧಿ ಯಾವ ದಿಕ್ಕಿನಲ್ಲಿ ಸಾಗಬೇಕಾಗುತ್ತದೆ, ಇದಕ್ಕೆ ಏನೆಲ್ಲ ಸಿದ್ಧತೆ ಅಗತ್ಯ ಇದೆ ಎಂಬುದನ್ನು ಪಟ್ಟಿ ಮಾಡಿ ಜನರ ಮುಂದಿಟ್ಟಿತ್ತು. ಈ ವರ್ಷದ ಜನವರಿಯಲ್ಲಿ ನಗರದ ಎಂಟು ವಲಯಗಳಲ್ಲಿ ಸಭೆಗಳನ್ನು ನಡೆಸಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಅಲ್ಲದೇ ಜನರಿಂದ ನೇರವಾಗಿಯೂ ಸಲಹೆಗಳನ್ನು ಆಹ್ವಾನಿಸಿತ್ತು. ಒಟ್ಟು 480 ಸಲಹೆಗಳನ್ನು ಪಟ್ಟಿ ಮಾಡಿಕೊಂಡು ಕರಡು ಸಿದ್ಧಪಡಿಸಲು ಮುಂದಾಗಿತ್ತು. ಇದಾಗಿ ಒಂಬತ್ತು ತಿಂಗಳುಗಳು ಕಳೆದಿವೆ. ಆದರೆ, ಕರಡನ್ನು ಬಿಡಿಎ ಇನ್ನೂ ಬಹಿರಂಗಪಡಿಸಿಲ್ಲ.

ಈ ಬಗ್ಗೆ ಬಿಡಿಎ ನಗರ ಯೋಜನಾ ವಿಭಾಗದ ಅಧಿಕಾರಿಗಳನ್ನು ವಿಚಾರಿಸಿದಾಗ, ‘ಕರಡು ಸಿದ್ಧಗೊಂಡಿದೆ. ಇದರಲ್ಲಿರುವ ಅಂಶಗಳ ಬಗ್ಗೆ ಪಾಲಿಕೆಯಲ್ಲಿ ಚರ್ಚಿಸಬೇಕಿದೆ. ಈ ಸಲುವಾಗಿ ಅದನ್ನು ಪಾಲಿಕೆಗೆ ಕಳುಹಿಸಿಕೊಟ್ಟಿದ್ದೇವೆ. ಅವರು ಸೂಚಿಸುವ ಮಾರ್ಪಾಡುಗಳನ್ನು ಅಳವಡಿಸಿಕೊಂಡ ಬಳಿಕ ಕರಡನ್ನು ಬಿಎಂಆರ್‌ಡಿಎಯಿಂದ ತಾಂತ್ರಿಕ ಪರಿಶೀಲನೆಗೆ ಒಳಪಡಿಸಬೇಕು. ಇದಾದ ಬಳಿಕ ಬಿಡಿಎ ಆಡಳಿತ ಮಂಡಳಿಯಿಂದ ಮಂಜೂರಾತಿ ಪಡೆದು, ನಂತರ ಸಾರ್ವಜನಿಕರ ಮುಂದಿಡುತ್ತೇವೆ. ಆಕ್ಷೇಪ ಸಲ್ಲಿಸುವುದಕ್ಕೆ ಹಾಗೂ ಸಲಹೆಗಳನ್ನು ನೀಡಲು 60 ದಿನಗಳ ಕಾಲಾವಕಾಶ ನೀಡುತ್ತೇವೆ’ ಎಂದರು.

‘ಕರಡು ತಲುಪಿದೆ. ಕಳೆದ ತಿಂಗಳು ಪಾಲಿಕೆ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಿದ್ದೆವು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಪಾಲಿಕೆ ಸದಸ್ಯರ ಸಭೆ ಕರೆಯುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2015ರ ಪರಿಷ್ಕೃತ ಮಹಾ ಯೋಜನೆಯ ಅವಧಿ ಪೂರ್ಣಗೊಳ್ಳುವುದಕ್ಕೆ ಮುನ್ನವೇ 2031ರ ಯೊಜನೆಯ ಕರಡು ಸಿದ್ಧವಾಗಿರಬೇಕಿತ್ತು. ಈ ಬಗ್ಗೆ ಸಲಹಾ ಸಂಸ್ಥೆಯನ್ನು ಆಯ್ಕೆ ಮಾಡಲು ಟೆಂಡರ್‌ ಕರೆಯುವಾಗಲೇ ವಿಳಂಬ ಮಾಡಲಾಗಿತ್ತು. ನಂತರವಾದರೂ ಗಡುವಿನ ಒಳಗೆ ಕರಡು ರಚಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕಿತ್ತು’ ಎಂದು ಅಭಿಪ್ರಾಯಪಡುತ್ತಾರೆ ಸಿಟಿಜನ್ಸ್‌ ಆ್ಯಕ್ಷನ್‌ ಫೋರಮ್‌ನ ಎನ್.ಎಸ್‌.ಮುಕುಂದ್‌.

‘ಡಿಸೆಂಬರ್‌ ಅಂತ್ಯದೊಳಗೆ ಸಿಡಿಪಿ ಸಿದ್ಧಪಡಿಸುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. 2031ರ ವೇಳೆಗೆ ನಗರದ ಜನಸಂಖ್ಯೆ 2 ಕೋಟಿಗೆ ತಲುಪುವ ನಿರೀಕ್ಷೆಯನ್ನು ಇಟ್ಟುಕೊಂಡು ಕರಡು ಸಿದ್ಧಪಡಿಸಿದ್ದೇವೆ. ಇಷ್ಟೊಂದು ಜನಸಂಖ್ಯೆಗೆ ಎಷ್ಟು ಕುಡಿಯುವ ನೀರು ಬೇಕಾಗುತ್ತದೆ, ರಸ್ತೆ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ತರಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕರಡು ರಚಿಸಲಾಗಿದೆ. ಭೂಬಳಕೆ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಹೊಸ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗೆ ಉತ್ತೇಜನ’
ಸಿಡಿಪಿ ಕರಡು ಸಿದ್ಧಪಡಿಸಲು ಬಿಡಿಎ ಮೂರು ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು ಈ ಕುರಿತ ಚಿತ್ರಣವನ್ನು ಜನರ ಮುಂದಿಟ್ಟಿತ್ತು.

ಕೃಷಿ ವಲಯವನ್ನು ಹಾಗೆಯೇ ಕಾಯ್ದುಕೊಂಡು ಸಾರಿಗೆ ಸಂಪರ್ಕದ ಮೇಲೆ ಒತ್ತಡ ಕಡಿಮೆ ಮಾಡುವ ಧಾರಕ ಸನ್ನಿವೇಶ, ಪ್ರಮುಖ ಮಾರ್ಗಗಳ ಆಸುಪಾಸಿನಲ್ಲಿ ಜನಸಾಂದ್ರತೆ ಹೆಚ್ಚಳಕ್ಕೆ ಅವಕಾಶ ಮಾಡಿಕೊಡುವ ಸನ್ನಿವೇಶ ಹಾಗೂ ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯ ಹೊಸ ವಲಯಗಳಲ್ಲಿ ದೀರ್ಘಕಾಲ ಆರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸುವ ಭೇದಾತ್ಮಕ ಕಾರ್ಯತಂತ್ರ ಸನ್ನಿವೇಶಗಳ ಪೈಕಿ ಒಂದನ್ನು ಜನ ಆಯ್ಕೆ ಮಾಡಬಹುದಿತ್ತು. ಈ ಮೂರು ಸನ್ನಿವೇಶಗಳಲ್ಲಿ ಭೇದಾತ್ಮಕ ಕಾರ್ಯತಂತ್ರದ ಸನ್ನಿವೇಶವನ್ನು ಆಧರಿಸಿ ಕರಡು ರಚಿಸಲಾಗಿದೆ.

‘ಈ ಕರಡಿನ ಪ್ರಕಾರ ಹೊಸ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗೆ ಸಿಗುವುದರಿಂದ ಮಹಾನಗರ ಪ್ರದೇಶದಲ್ಲಿ ಸಮತೋಲಿತ ಅಭಿವೃದ್ಧಿ ಆಗಲಿದೆ. ಮೂಲಸೌಕರ್ಯಗಳ ಹೆಚ್ಚಳಕ್ಕೆ ಇದು ಸೂಕ್ತವಾಗಿದೆ. ಸಾರಿಗೆ ದಟ್ಟಣೆ ಕಡಿಮೆಗೊಳಿಸುವುದಕ್ಕೂ ಇದು ನೆರವಾಗಲಿದೆ’ ಎಂಬುದು ಬಿಡಿಎ ವಾದ.

2031ರ ಸಂದರ್ಭದ ಅಭಿವೃದ್ಧಿಗೆ ಅನುಗುಣವಾಗಿ ಹೆಚ್ಚುವರಿ ನಗರೀಕರಣದ ಎಲ್ಲೆಗಳನ್ನು ಹಾಗೂ ಹೊಸ ಆರ್ಥಿಕ ತಾಣ ಗುರುತಿಸುವಾಗ ರಸ್ತೆ ವ್ಯವಸ್ಥೆ ಹಾಗೂ ಮೀಸಲು ಪ್ರದೇಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಲಿದ್ದೇವೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ತೀರ್ಪಿನ ಅನುಸಾರ ಕೆರೆ ಹಾಗೂ ರಾಜಕಾಲುವೆಗಳ ಮೀಸಲು ಪ್ರದೇಶ ನಿಗದಿಪಡಿಸಲಾಗಿದೆ. ಆರ್ಥಿಕವಾಗಿ ದುರ್ಬಲವಾಗಿರುವವರಿಗೂ ಕೈಗೆಟಕುವ ದರದಲ್ಲಿ ವಸತಿ ಒದಗಿಸುವ ಅಂಶಗಳು ಇದರಲ್ಲಿ ಸೇರಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT