ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ನೋಟು ಮತ್ತು ‘ರಾಮ್‌ಜೀ ಗ್ಯಾಂಗ್’

₹4 ಲಕ್ಷ ನಗದಿನೊಂದಿಗೆ ಪರಾರಿಯಾಗಿದ್ದ ಕಳ್ಳ ಸೆಲ್ವಂ ಪೊಲೀಸರ ಬಲೆಗೆ
Last Updated 10 ಅಕ್ಟೋಬರ್ 2017, 20:26 IST
ಅಕ್ಷರ ಗಾತ್ರ

ಬೆಂಗಳೂರು: ಆಟೊ ಚಾಲಕ ಹಾಗೂ ಪ್ರಯಾಣಿಕನ ಗಮನ ಬೇರೆಡೆ ಸೆಳೆದು ₹ 4 ಲಕ್ಷ ಹಣವಿದ್ದ ಬ್ಯಾಗ್‌ ತೆಗೆದುಕೊಂಡು ಪರಾರಿಯಾಗಿದ್ದ ತಮಿಳುನಾಡಿನ ‘ರಾಮ್‌ಜೀ ಗ್ಯಾಂಗ್‌’ ಸದಸ್ಯ ಸೆಲ್ವಂ (24) ಜಯನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಬನಶಂಕರಿಯ ಪೂರ್ಣಪ್ರಜ್ಞಾ ಲೇಔಟ್ ನಿವಾಸಿ ಡಾ. ಜಗದೀಶ್ ಎಂಬುವರು, ಸೆ.6ರ ಬೆಳಿಗ್ಗೆ 12 ಗಂಟೆ ಸುಮಾರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಜಯನಗರ 4ನೇ ಬ್ಲಾಕ್‌ ಶಾಖೆಯಲ್ಲಿ ₹ 4 ಲಕ್ಷ ಡ್ರಾ ಮಾಡಿದ್ದರು. ನಂತರ ಹಣ ತೆಗೆದುಕೊಂಡು ಆಟೊದಲ್ಲಿ ಮನೆಗೆ ಮರಳುತ್ತಿದ್ದಾಗ ಸೆಲ್ವಂ ತನ್ನ ಸಹಚರನೊಂದಿಗೆ ಆಟೊ ಹಿಂಬಾಲಿಸಿಕೊಂಡು ಬಂದಿದ್ದ.

ನ್ಯಾಷನಲ್ ಕಾಲೇಜು ಬಳಿ ಆಟೊ ಚಾಲಕನನ್ನು ಮಾತನಾಡಿಸಿದ್ದ ಆರೋಪಿಗಳು, ‘ಆಯಿಲ್ ಸೋರುತ್ತಿದೆ ಸ್ವಾಮಿ’ ಎಂದಿದ್ದರು. ಆ ಮಾತನ್ನು ನಂಬಿದ ಚಾಲಕ, ಆಟೊ ನಿಲ್ಲಿಸಿ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದ. ಈ ವೇಳೆ ಪ್ರಯಾಣಿಕ ಜಗದೀಶ್ ಜತೆ ಮಾತಿಗಿಳಿದ ಆರೋಪಿಗಳು, ಅವರ ಗಮನ ಬೇರೆಡೆ ಸೆಳೆದು ಬ್ಯಾಗ್ ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಬ್ಯಾಗ್ ಪತ್ತೆ, ಹಣ ನಾಪತ್ತೆ: ಕೃತ್ಯ ನಡೆದ ಅರ್ಧ ಗಂಟೆಯಲ್ಲೇ ಜಗದೀಶ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬರು, ‘ಬನಶಂಕರಿ 2ನೇ ಹಂತದ ‘ಕಾಮಾಕ್ಷಿ ಸಿಲ್ಕ್ಸ್‌’ ಮಳಿಗೆ ಬಳಿ ಒಂದು ಬ್ಯಾಗ್ ಸಿಕ್ಕಿದೆ. ಅದರ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಇದ್ದುದರಿಂದ ಕರೆ ಮಾಡಿದೆ’ ಎಂದು ಹೇಳಿದ್ದರು. ಕೂಡಲೇ ಜಗದೀಶ್ ಅವರು ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದ್ದರು. ₹ 42 ಲಕ್ಷದ ಡಿ.ಡಿಗಳು ಹಾಗೂ ಚೆಕ್‌ಬುಕ್‌ಗಳ ಸಮೇತ ಬ್ಯಾಗ್ ಸಿಕ್ಕಿತಾದರೂ, ಅದರಲ್ಲಿ ಹಣ ಇರಲಿಲ್ಲ.

‘ಜಗದೀಶ್ ಅವರನ್ನು ಆರೋಪಿಗಳು ಬ್ಯಾಂಕ್‌ನಿಂದಲೇ ಹಿಂಬಾಲಿಸಿ ಹೋಗಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆ ಸಂಗತಿ ಗೊತ್ತಾಯಿತು. ಅಲ್ಲದೆ, ‘ರಾಮ್‌ಜೀ ಗ್ಯಾಂಗ್‌’ ಸದಸ್ಯ ಸೆಲ್ವಂನನ್ನು ನಮ್ಮ ಕ್ರೈಂ ಸಿಬ್ಬಂದಿ ಗುರುತಿಸಿದರು. ಆರೋಪಿಗಳ ಬಂಧನಕ್ಕಾಗಿ ಜಯನಗರ ವ್ಯಾಪ್ತಿಯ ಎಲ್ಲ ಬ್ಯಾಂಕ್‌ಗಳ ಬಳಿ ಸಿಬ್ಬಂದಿ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಸೋಮವಾರ ಜಯನಗರ 7ನೇ ಬ್ಲಾಕ್‌ನ ಬ್ಯಾಂಕ್‌ವೊಂದರ ಬಳಿ ಬಂದಿದ್ದ ಸೆಲ್ವಂನನ್ನು ಸಿಬ್ಬಂದಿ ವಶಕ್ಕೆ ಪಡೆದರು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ಯಾಂಗ್‌ನ ಅದೃಷ್ಟ ಸಂಖ್ಯೆ 13

‘ಅಂಗಿ ಮೇಲೆ ಗಲೀಜು ಬಿದ್ದಿದೆ, ವಾಹನದ ಆಯಿಲ್ ಸೋರುತ್ತಿದೆ, ಸರಗಳ್ಳರಿದ್ದಾರೆ ಒಡವೆ ಬಿಚ್ಚಿಟ್ಟುಕೊಳ್ಳಿ... ಹೀಗೆ ನಾನಾ ತಂತ್ರಗಳ ಮೂಲಕ ಸಾರ್ವಜನಿಕರ ಗಮನ ಬೇರೆಡೆ ಸೆಳೆಯುವ ಈ ಗ್ಯಾಂಗ್, ₹ 10ರ ಹದಿಮೂರು ನೋಟುಗಳನ್ನು ರಸ್ತೆ ಮೇಲೆ ಎಸೆದು ಕ್ಷಣಾರ್ಧದಲ್ಲೇ ಲಕ್ಷಾಂತರ ರೂಪಾಯಿ ದೋಚುತ್ತದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಈ ವಂಚಕರ ಅದೃಷ್ಟ ಸಂಖ್ಯೆ ಹದಿಮೂರು. ಹೀಗಾಗಿಯೇ ಪ್ರತಿ ಬಾರಿ ಕೃತ್ಯಕ್ಕೆ ಇಳಿಯುವ ಮೊದಲು ರಾಮ್‌ಜೀ ನಗರದ ಮಿಲ್ಕ್‌ ಕಾಲನಿಯಲ್ಲಿರುವ ದೇವಸ್ಥಾನಕ್ಕೆ ಕಾಣಿಕೆ ಕೊಟ್ಟು, 13 ನೋಟುಗಳಿಗೆ ಪೂಜೆ ಮಾಡಿಸಿಯೇ ಕಾರ್ಯಾಚರಣೆಗೆ ಧುಮುಕುತ್ತಾರೆ!

‘ಸರಣಿ ಸರಗಳ್ಳತನ ಮೂಲಕ ಕುಖ್ಯಾತಿ ಹೊಂದಿರುವ ‘ಇರಾನಿ’, ‘ಬವಾರಿಯಾ’ ಗ್ಯಾಂಗ್‌ಗಳಂತೆಯೇ ಈ ‘ರಾಮ್‌ ಜೀ’ ಗ್ಯಾಂಗ್ ಕೂಡ 2004ರಿಂದ ರಾಜಧಾನಿ ಪೊಲೀಸರಿಗೆ ಸವಾಲಾಗಿದೆ. ಕರ್ನಾಟಕ ಮಾತ್ರವಲ್ಲದೆ ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲೂ ಇವರ ವಿರುದ್ಧ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಬಸ್‌ ಅಥವಾ ಲಾರಿಗಳಲ್ಲಿ ಬರುವ ಇವರು, ನಗರದ ಹೊರವಲಯದಲ್ಲಿ ಒಂದೆಡೆ ಸೇರಿ ಸಂಚು ರೂಪಿಸುತ್ತಾರೆ. ನಂತರ ಹಲವು ತಂಡಗಳಾಗಿ ವಂಚನೆಗೆ ಇಳಿಯುತ್ತಾರೆ. ಇವರ ಸಂಚು ಆರಂಭವಾಗುವುದು ಗ್ರಾಹಕರ ದಟ್ಟಣೆ ಹೆಚ್ಚಿರುವ ಬ್ಯಾಂಕ್‌ಗಳ ಸಮೀಪದಿಂದಲೇ.’

‘ಬ್ಯಾಂಕ್‌ನಲ್ಲಿ ಯಾವ ಗ್ರಾಹಕ ಹೆಚ್ಚು ಹಣ ಡ್ರಾ ಮಾಡುತ್ತಿದ್ದಾನೆ ಎಂಬುದನ್ನು ಗಮನಿಸುವ ಇವರು, ಆ ವ್ಯಕ್ತಿಯನ್ನೇ ಗುರಿ ಮಾಡಿಕೊಳ್ಳುತ್ತಾರೆ. ₹ 10ರ ನೋಟುಗಳನ್ನು ಕೆಳಗೆ ಹಾಕಿ, ತಮ್ಮ ಹಣ ಬಿದ್ದಿದೆ ಎಂದು ಆ ವ್ಯಕ್ತಿಗೆ ಹೇಳುತ್ತಾರೆ. ಆ ಮಾತು ನಂಬಿ, ನೋಟು ತೆಗೆದುಕೊಳ್ಳಲು ಆತ ಬಗ್ಗಿದಾಗ ಲಕ್ಷಾಂತರ ರೂಪಾಯಿ ಹಣವಿರುವ ಬ್ಯಾಗ್ ತೆಗೆದುಕೊಂಡು ಹೋಗುತ್ತಾರೆ’ ಎಂದು ಮಾಹಿತಿ ನೀಡಿದರು.

ಕಳ್ಳರ ಕಾಲನಿ

‘ರಾಮ್‌ಜೀ ಗ್ಯಾಂಗ್‌ನ ಎಲ್ಲ ಸದಸ್ಯರು ನೆಲೆಸಿರುವುದು ಮಿಲ್ಕ್‌ ಕಾಲನಿಯಲ್ಲಿ. ಅವರಿಗೆ ಸ್ಥಳೀಯ ಪೊಲೀಸರದ್ದೇ ರಕ್ಷಣೆ. ಕೆಲ ಜನಪ್ರತಿನಿಧಿಗಳೂ ಇವರಿಗೆ ಬೆದರುತ್ತಾರೆ. ಹೀಗಾಗಿ ಅಲ್ಲಿಗೆ ಹೋಗಿ ಆರೋಪಿಗಳನ್ನು ಬಂಧಿಸಿ ತರುವುದು ಈವರೆಗೂ ಸಾಧ್ಯವಾಗಿಲ್ಲ’ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ಬಸ್ ಇಳಿಯುವಾಗ ಹಣ ಕಳವು

ಬಿಎಂಟಿಸಿ ಬಸ್‌ನಲ್ಲಿ ಗೀತಾ ಸದಾಶಿವರೆಡ್ಡಿ ಎಂಬುವರ ಬ್ಯಾಗ್‌ನಿಂದ ಸೆ.7ರಂದು ದುಷ್ಕರ್ಮಿಗಳು 1.25 ಲಕ್ಷ ನಗದು ದೋಚಿದ್ದಾರೆ.

‘ಮಾಗಡಿ ರಸ್ತೆ ನಿವಾಸಿಯಾದ ನಾನು, ಜಯನಗರದಲ್ಲಿರುವ ಸಂಬಂಧಿಗೆ ಹಣ ಕೊಡಲು ಮೆಜೆಸ್ಟಿಕ್‌ನಿಂದ ಮಧ್ಯಾಹ್ನ 1.30ರ ಸುಮಾರಿಗೆ ಬಸ್‌ನಲ್ಲಿ ಜಯನಗರದ ಕೂಲ್ ಜಾಯಿಂಟ್ ನಿಲ್ದಾಣಕ್ಕೆ ಬಂದೆ. ಕೆಳಗಿಳಿದು ಬ್ಯಾಗ್ ನೋಡಿಕೊಂಡಾಗ ಹಣ ಇರಲಿಲ್ಲ. ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದು, ಯಾರೋ ಹಣ ಕಳವು ಮಾಡಿದ್ದಾರೆ’ ಎಂದು ಗೀತಾ ದೂರು ಕೊಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT