ಸೋಮವಾರ, ಸೆಪ್ಟೆಂಬರ್ 16, 2019
21 °C

ಜಿಲ್ಲಾಸ್ಪತ್ರೆ ‘ಐಸಿಯು’ನಲ್ಲಿ ನಾಯಿ ಹಾವಳಿ!

Published:
Updated:
ಜಿಲ್ಲಾಸ್ಪತ್ರೆ ‘ಐಸಿಯು’ನಲ್ಲಿ ನಾಯಿ ಹಾವಳಿ!

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯ ನೂತನ ಕಟ್ಟಡದ ಎರಡನೇ ಮಹಡಿಯಲ್ಲಿರುವ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಪದೇ ಪದೇ ನಾಯಿಗಳು ಕಾಣಿಸಿಕೊಳ್ಳುತ್ತಿವೆ. ಶಿಶುಗಳು ಮತ್ತು ಮಕ್ಕಳ ರಕ್ಷಣೆ ಬಗ್ಗೆ ಬಾಣಂತಿಯರು, ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಐಸಿಯು ಕೊಠಡಿ ಸಂಖ್ಯೆ ‘208ಎ’ ನಲ್ಲಿ ಸೋಮವಾರ ಮಧ್ಯ ರಾತ್ರಿ ಮೂರು ನಾಯಿಗಳು ನುಗ್ಗಿ, ಕಸದ ಬುಟ್ಟಿಯನ್ನು ಚೆಲ್ಲಾಪಿಲ್ಲಿ ಮಾಡಿವೆ. ಆಹಾರಕ್ಕಾಗಿ ಹುಡುಕಾಟ ನಡೆಸಿವೆ. ಸದ್ದು ಕೇಳಿ ಎದ್ದ ಮಹಿಳೆಯರು ಜೋರಾಗಿ ಕಿರುಚಿ ನಾಯಿಗಳನ್ನು ಓಡಿಸಿದ್ದಾರೆ.

‘ರಾತ್ರಿ ಮಲಗಿದ್ದ ವೇಳೆ ಏನೋ ಬಿದ್ದ ಸದ್ದು ಕೇಳಿ ಗಾಬರಿಯಿಂದ ಎದ್ದು ಕುಳಿತೆ. ನೋಡಿದರೆ ಮೂರು ನಾಯಿಗಳು ಡಸ್ಟ್‌ಬಿನ್‌ನನ್ನು ಚೆಲ್ಲಾಪಿಲ್ಲಿ ಮಾಡಿ ಆಹಾರಕ್ಕಾಗಿ ಹುಡುಕಾಟ ನಡೆಸಿದ್ದವು. ಜೋರಾಗಿ ಕಿರುಚಿದಾಗ ಅಕ್ಕಪಕ್ಕದಲ್ಲಿವರು ಕೂಡ ಎದ್ದು ನಾಯಿಗಳನ್ನು ಓಡಿಸಿದರು. ಡಸ್ಟ್‌ಬಿನ್‌ನಲ್ಲಿದ್ದ ನೀರು ನೆಲದ ಮೇಲೆ ಚೆಲ್ಲಿತ್ತು. ಶೌಚಾಲಯಕ್ಕೆ ಹೊರಟವಳು ಅದರ ಮೇಲೆ ಕಾಲಿಟ್ಟೆ, ಜಾರಿ ಬೀಳಬೇಕಿತ್ತು. ಸ್ವಲ್ಪದರಲ್ಲಿಯೇ ಬಚಾವಾದೆ’ ಎಂದು ಕಳವಾರ ನಿವಾಸಿ ಆಶಾ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ₹ 23.35 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ನೂತನ ಕಟ್ಟಡ ಉದ್ಘಾಟನೆಗೊಂಡು ಒಂದು ವರ್ಷದ ನಂತರ ಇಲ್ಲಿಗೆ ಆಸ್ಪತ್ರೆ ಸ್ಥಳಾಂತರಗೊಂಡಿತ್ತು. ಹೊಸ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಿ ಆರು ತಿಂಗಳು ಕಳೆಯುವುದರೊಳಗೆ ‘ಐಸಿಯು’ವರೆಗೆ ನಾಯಿಗಳು ‘ರಾಜಾರೋಷ’ವಾಗಿ ಓಡಾಡಿಕೊಂಡಿರುವುದು ಆಸ್ಪತ್ರೆ ಅಧಿಕಾರಿಗಳ ಬೇಜವಾಬ್ದಾರಿ, ಭದ್ರತಾ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಮಗಳಿಗೆ ಹುಷಾರು ಇಲ್ಲದ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದ್ದೇವೆ. ಇಲ್ಲಿ ನೋಡಿದರೆ ಎರಡನೇ ಮಹಡಿಗೆ ಕೂಡ ನಾಯಿಗಳು ಭಯವಿಲ್ಲದೆ ನುಗ್ಗುತ್ತವೆ. ಇದೇನು ಆಸ್ಪತ್ರೆನಾ? ಇಲ್ಲಾ ಮಾಂಸದ ಮಾರುಕಟ್ಟೆಯಾ? ಎಂಬ ಸಂಶಯ ಬರುತ್ತಿದೆ. ರಾತ್ರಿ ನಾಯಿಗಳು ಶಿಶುಗಳನ್ನು ಕಚ್ಚಿಕೊಂಡು ಹೋದರೆ ಯಾರು ಹೊಣೆ? ಇಷ್ಟೊಂದು ಬೇಜವಾಬ್ದಾರಿ ಅಧಿಕಾರಿಗಳನ್ನು ನಾನು ಎಲ್ಲೂ ನೋಡಿಲ್ಲ’ ಎಂದು ಮುಸ್ಟೂರು ನಿವಾಸಿ ಹರೀಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಹೆಸರಿಗೆ ‘ಐಸಿಯು’, ಒಳಗಡೆ ಅಧ್ವಾನ ಕೊಠಡಿ ಸಂಖ್ಯೆ ‘208ಎ’ಗೆ ಐಸಿಯು ನಾಮಫಲಕ ಹಾಕಲಾಗಿದೆ. ಆದರೆ ಸೌಲಭ್ಯ ಮಾತ್ರ ಸಾಮಾನ್ಯ ವಾರ್ಡ್‌ಗಿಂತ ಕಡೆಯಾಗಿದೆ. ಮುಖ್ಯವಾಗಿ ಆಮ್ಲಜನಕ ಪೂರೈಕೆ ವ್ಯವಸ್ಥೆ, ಹವಾ ನಿಯಂತ್ರಣ ವ್ಯವಸ್ಥೆಯಾಗಲಿ ಇಲ್ಲ. ಹೀಗಾಗಿ ‘ಇಲ್ಲಿ ಚಿಕಿತ್ಸೆಗೆ ದಾಖಲಾದ ಮಕ್ಕಳು ಸೆಕೆ ತಾಳಲಾರದೆ ಚಡಪಡಿಸುತ್ತವೆ. ವಾರ್ಡ್‌ ಒಳಗಿನ ಡಸ್ಟ್‌ಬಿನ್‌ ಭರ್ತಿಯಾಗಿ ಮಧ್ಯಾಹ್ನ ತಿರುಗಿದರೂ ಅದರಲ್ಲಿನ ಕಸ ಆಚೆಗೆ ತೆಗೆದು ಹಾಕುವುದಿಲ್ಲ’ ಎಂದು ಚಿಕಿತ್ಸೆಗೆ ಬಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಗಾಯಗೊಂಡು  ಐಸಿಯು ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಳವಾರದ ಬಾಲಕ ಕುಶಾಲ್‌ಕುಮಾರ್‌ನಿಗೆ ಮಂಗಳವಾರ ಆತನ ಅಜ್ಜಿ ಎಡೆಬಿಡದೆ ಗಾಳಿ ಬೀಸುತ್ತಿದ್ದರು. ವಿಚಾರಿಸಿದಾಗ ಕುಶಾಲ್‌ಕುಮಾರ್‌ ತಾಯಿ ಆಶಾ, ‘ಇಲ್ಲಿ ಒಂದು ಫ್ಯಾನ್‌ ಕೂಡ ಇಲ್ಲಾ. ಇಲ್ಲಿ ಮಲಗಿದರೆ ಸೆಕೆಗೆ ನಿದ್ದೆ ಬರುವುದಿಲ್ಲ. ರಾತ್ರಿಯಿಡಿ ಮಗುವಿಗೆ ಗಾಳಿ ಬೀಸಿ ಬೀಸಿ ಕೈ ನೋಯುತ್ತದೆ. ಹೀಗಾಗಿ ರಾತ್ರಿ ವೇಳೆ ಹೊರಗಡೆ ಫ್ಯಾನ್‌ ಕೆಳಗೆ ಮಲಗಿಸುತ್ತೇವೆ. ಅಲ್ಲೋ ವಿಪರೀತ ಸೊಳ್ಳೆಗಳ ಕಾಟ. ಮಗುವನ್ನು ಬೆಳಿಗ್ಗೆ ಪುನಾ ಒಳಗೆ ತಂದು ಮಲಗಿಸುತ್ತೇವೆ’ ಎಂದು ತಿಳಿಸಿದರು.

‘ಇಲ್ಲಿ ಕುಡಿಯೋದಕ್ಕೂ ನೀರಿಲ್ಲ. ಹೋಟೆಲ್‌ನಿಂದ ತರಬೇಕು. ಊಟ ಪೂರೈಸುವುದಕ್ಕೆ ಒಂದು ಸಮಯವಿಲ್ಲ.  ರೋಗಿಗಳನ್ನು ಪರೀಕ್ಷೆಗೆ ಕರೆದುಕೊಂಡು ಹೋಗಿದ್ದರೆ ಅವರಿಗೆ ಹೋಟೆಲ್‌ ಊಟವೇ ಗತಿ. ನಾವು ಬಡವರು ಸರ್ಕಾರಿ ಆಸ್ಪತ್ರೆ ಚೆನ್ನಾಗಿರುತ್ತದೆ ಎಂದು ಬಂದರೆ ಇಲ್ಲಿ ನೋಡಿದರೆ ಇಷ್ಟೊಂದು ಅಧ್ವಾನವಾಗಿದೆ. ಯಾರನ್ನು ನಾವು ಕೇಳೋದು’ ಎಂದು ಹರೀಶ್ ಪ್ರಶ್ನಿಸಿದರು.

Post Comments (+)