ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್ಇಎಸ್ ಸರ್ಕಾರಿ ಶಾಲೆಯಲ್ಲಿ ಉಕ್ಕಿದ ಜೀವಜಲ !

Last Updated 11 ಅಕ್ಟೋಬರ್ 2017, 6:37 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಎನ್ಇಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೇಂದ್ರ ಅಂತರ್ಜಲ ಮಂಡಳಿಯಿಂದ ಕೊರೆದ ಎರಡು ಕೊಳವೆಬಾವಿಗಳಲ್ಲೂ ಐದು ಇಂಚು ನೀರು ಸಿಕ್ಕಿದೆ ! ಪಟ್ಟಣ ವ್ಯಾಪ್ತಿಯಲ್ಲಿ ಅಂತರ್ಜಲ ಕಡಿಮೆಯಾಗಿದ್ದು, ಹೆಚ್ಚು ಕೊಳವೆಬಾವಿಗಳು ವಿಫಲವಾಗಿವೆ. ಆದರೂ ಒಂದೇ ಜಾಗದಲ್ಲಿ ಕೊರೆದ ಎರಡು ಕೊಳವೆಬಾವಿಗಳಲ್ಲೂ ತಲಾ 5 ಇಂಚು ನೀರು ದೊರೆತಿದೆ.

ಮಂಡಳಿಯಿಂದ ಅಂತರ್ಜಲ ಪರೀಕ್ಷೆಗಾಗಿ 50 ಅಡಿ ಅಂತರದಲ್ಲಿ ಎರಡು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಎರಡೂ ಕೊಳವೆಬಾವಿಗಳಲ್ಲೂ ಕೇವಲ 20 ಅಡಿ ಆಳದಲ್ಲೇ ನೀರು ದೊರಕಿದೆ. ಸರಾಸರಿ 150 ಅಡಿ ಆಳದಲ್ಲಿ ಹೆಚ್ಚು ನೀರು ದೊರೆತರೂ ಮಂಡಳಿಯ ನಿಯಮದಂತೆ 200 ಮೀಟರ್ (666 ಅಡಿ) ಅಳಕ್ಕೆ ಕೊಳವೆಬಾವಿ ಕೊರೆಯಲಾಗಿದೆ. ಕೊಳವೆಬಾವಿ ನೀರು ಹೊರಹಾಕಲು ಹರಸಾಹಸ ಪಟ್ಟ ಸಿಬ್ಬಂದಿ ಸತತ 6 ದಿನಗಳವರೆಗೆ ಬೋರ್‌ವೆಲ್ ಕೊರೆದರು.

ನೀರು ಬರುತ್ತಿರುವುದನ್ನು ನೋಡಲು ಬರುತ್ತಿದ್ದ ಪಟ್ಟಣದ ನಾಗರಿಕರು, ಸುತ್ತಲಿನ ರೈತರು ಜಲಧಾರೆ ಕಂಡು ಆಶ್ಚರ್ಯ ವ್ಯಕ್ತಪಡಿಸಿದರು. ‘ಈ ವರ್ಷ ಮಳೆ ಬರದೆ ಕೊಳವೆಬಾವಿಗಳು ಬತ್ತಿ ಹೋಗಿದ್ದರಿಂದ ತೋಟಗಳು ಒಣಗಿದ್ದವು. ನಮ್ಮ ತೋಟಗಳಲ್ಲಿ ಹೊಸದಾಗಿ ನಾಲ್ಕೈದು ಕೊಳವೆಬಾವಿ ಕೊರೆಸಿದರೂ ಒಂದು ಹನಿ ನೀರು ಬರಲಿಲ್ಲ. ಆದರೆ ಇಲ್ಲಿ ಇಷ್ಟೊಂದು ನೀರು ಬಂದಿರುವುದು ಸೋಜಿಗ’ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಅಂತರ್ಜಲ ಪರೀಕ್ಷೆ: ‘ಕೇಂದ್ರ ಅಂತರ್ಜಲ ಮಂಡಳಿಯು ಅಂತರ್ಜಲ ಮಟ್ಟ, ನೀರಿನ ಲಭ್ಯತೆ, ನೀರಿನಲ್ಲಿರುವ ಲವಣಾಂಶಗಳನ್ನು ಪರೀಕ್ಷಿಸುತ್ತದೆ. ಪ್ರತಿ ವರ್ಷ ಕರಾವಳಿ, ಬಯಲು ಸೀಮೆ, ಘಟ್ಟ ಪ್ರದೇಶಗಳ ಮಳೆ ಪ್ರಮಾಣ, ಅಂತರ್ಜಲ ಪ್ರಮಾಣಗಳನ್ನು ಪರೀಕ್ಷಿಸುತ್ತದೆ.

ಕರ್ನಾಟಕದ 30 ಜಿಲ್ಲೆಗಳು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಅಂತರ್ಜಲ ಪರೀಕ್ಷೆಗಾಗಿ ಕೊಳವೆಬಾವಿಗಳನ್ನು ಕೊರೆಸುತ್ತದೆ. ಸಮುದ್ರ ಮಟ್ಟದಿಂದ ವಿವಿಧ ಎತ್ತರಗಳಲ್ಲಿ ಕೊಳವೆಬಾವಿ ಕೊರೆದು ನೀರಿನ ಲಭ್ಯತೆ ಬಗ್ಗೆ ಸಂಶೋಧನೆ ನಡೆಸುತ್ತದೆ. ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಲ್ಲೂ ಕೊಳವೆಬಾವಿ ಕೊರೆಸಲಾಗುತ್ತಿದೆ’ ಎನ್ನುತ್ತಾರೆ ಭೂಗರ್ಭ ಶಾಸ್ತ್ರಜ್ಞರು.

‘ಎರಡು ಕೊಳವೆಬಾವಿಗಳಲ್ಲಿ ಒಂದನ್ನು ಸಂಶೋಧನೆಗೆ, ಮತ್ತೊಂದನ್ನು ವೀಕ್ಷಣೆಗೆ ಬಳಸುತ್ತೇವೆ. ಕೊಳವೆಬಾವಿ ಬಾಕ್ಸ್ ಅಳವಡಿಸಿ ಯಾರೂ ಮುಟ್ಟದಂತೆ ಬೀಗ ಹಾಕುತ್ತೇವೆ. ಕೊಳವೆಬಾವಿ ಪಕ್ಕದಲ್ಲಿ ಮಾಹಿತಿ ಫಲಕ ಅಳವಡಿಸಲಾಗುವುದು. ಅನ್ವೇಷಣೆಗೆ ಮೀಸಲಿಟ್ಟ ಕೊಳವೆಬಾವಿ ನೀರಿನ ಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡುತ್ತೇವೆ. ಪರೀಕ್ಷೆಗಳು ಮುಗಿದ ನಂತರ ಸಾರ್ವಜನಿಕರ ಬಳಕೆಗೆ ನೀಡುತ್ತೇವೆ’ ಎಂದು ಹೇಳಿದರು.

‘ಉದ್ದೇಶ ಅಂತರ್ಜಲ ಸಂಶೋಧನೆಯಾದರೂ, ಸಾರ್ವಜನಿಕರ ಬಳಕೆಗೆ ಅನುಕೂಲ ಆಗಲಿ ಎಂದು ಸರ್ಕಾರಿ ಶಾಲೆಗಳು, ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕೊಳವೆಬಾವಿ ಕೊರೆಸುತ್ತೇವೆ. ವರ್ಷಾಂತ್ಯದ ವೇಳೆಗೆ ರಾಜ್ಯದ ಎಲ್ಲಾ ಕೊಳವೆಬಾವಿಗಳ ಮಾಹಿತಿಯನ್ನು ಮಂಡಳಿಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ’ ಎನ್ನುತ್ತಾರೆ ಅಧಿಕಾರಿಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT