ಜಿಲ್ಲೆಯಾದ್ಯಂತ ಗುಡುಗು ಸಮೇತ ಭಾರಿ ಮಳೆ

ಶುಕ್ರವಾರ, ಮೇ 24, 2019
22 °C

ಜಿಲ್ಲೆಯಾದ್ಯಂತ ಗುಡುಗು ಸಮೇತ ಭಾರಿ ಮಳೆ

Published:
Updated:

ಸೇಡಂ: ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಗುಡುಗು ಸಮೇತ ಭಾರಿ ಮಳೆ ಸುರಿದಿದೆ. ಇದರಿಂದ ಕೆಲ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ರಾತ್ರಿ 11.45ಕ್ಕೆ ಆರಂಭಗೊಂಡ ಮಳೆ ಬೆಳಗಿನ ಜಾವ 3.30ವರೆಗೆ ನಿರಂತರವಾಗಿ ಸುರಿದಿದೆ. ಇದರಿಂದ ಪಟ್ಟಣದಲ್ಲಿನ ವಿವಿಧ ರಸ್ತೆಗಳು ಜಲಾವೃತ್ತಗೊಂಡಿವೆ. ಪಟ್ಟಣದಲ್ಲಿನ ಪೊಲೀಸ್ ಠಾಣೆ, ಹನುಮಾನ ದೇವಾಲಯ, ವಿವಿಧ ಅಂಗಡಿಗಳಿಗೆ, ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ಪಟ್ಟಣದ ಕೋಡ್ಲಾ ಕ್ರಾಸ್ ಬಳಿ ಇರುವ ಸುಮಾರು 10ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಬೆಳಗಿನ 8 ಗಂಟೆ ಹೊತ್ತಿಗೆ ವಾತಾವರಣ ತಿಳಿಗೊಂಡಿದ್ದು, ಜನರು ಕೆಲಸ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಸಿಡಿಲಿನ ಅಬ್ಬರಕ್ಕೆ ಹಾಗೂ ರಾತ್ರಿ ಕೈಕೊಟ್ಟ ವಿದ್ಯುತ್‌ನಿಂದ ತಾಲ್ಲೂಕಿನ ಜನತೆ ನಿದ್ದೆಗೆಟ್ಟಿದ್ದಾರೆ. ಪಟ್ಟಣದಲ್ಲಿನ ವಿವಿಧ ನಾಲೆಗಳು, ರಸ್ತೆಗಳು ತುಂಬಿ ಹರಿದು ಕಮಲಾವತಿ ನದಿಗೆ ಸೇರಿದೆ. ಇದರಿಂದ ಕಮಲಾವತಿ ನದಿ ನೀರಿನ ಹರಿವಿನಮಟ್ಟ ಹೆಚ್ಚಳಗೊಂಡಿದೆ.

ಪೊಲೀಸ್ ಠಾಣೆಗೆ ನುಗ್ಗಿದ ನೀರಿನಿಂದ ಠಾಣೆಯ ಸಿಬ್ಬಂದಿ ರಾತ್ರಿಯಿಡಿ ದಾಖಲೆಪತ್ರಗಳನ್ನು ರಕ್ಷಿಸುವಲ್ಲಿ ಹರಸಾಹಸಪಟ್ಟರು. ಠಾಣೆಯ ಪಿಎಸ್ಐ ಕೋಣೆಗೆ, ದಾಖಲೆಗಳ ಕೋಣೆ ಸೇರಿದಂತೆ ಕಂಪ್ಯೂಟರ್ ಇರುವ ರೂಮಿಗೆ ನೀರು ನುಗ್ಗಿದೆ. ಬೆಳಿಗ್ಗೆ ಠಾಣೆಯ ಸಿಬ್ಬಂದಿ ಮಳೆ ನೀರು ಎತ್ತು ಹಾಕಿ, ಠಾಣೆ ಸ್ವಚ್ಛಗೊಳಿಸಿದರು.

ಕೋಡ್ಲಾ ಕ್ರಾಸ್ ಬಳಿಯ ನಿವಾಸಿಗಳು ಸಾಮಗ್ರಿಗಳನ್ನು ರಾತ್ರಿಯಿಡಿ ರಕ್ಷಿಸುವುದರಲ್ಲಿಯೇ ಕಾಲ ಕಳೆದಿದ್ದಾರೆ. ಮನೆಯ ಎಲ್ಲಾ ಸಾಮಗ್ರಿಗಳನ್ನು ರಸ್ತೆಯ ಮೇಲೆ ತಂದು ಹಾಕಿ ಪ್ಲಾಸ್ಟಿಕ್ ಕವಚ ಹಾಕಿ ಅದರಲ್ಲಿಯೇ ಕುಳಿತಿದ್ದರು. ಕೋಡ್ಲಾ ಕ್ರಾಸ್ ಬಳಿಯ ಮೋತಿರಾಮ್ ಜಾಧವ ಅವರಿಗೆ ಸೇರಿದ್ದ ಸುಮಾರು 20ಕ್ಕೂ ಅಧಿಕ ಕೋಳಿಗಳು ಹಾಗೂ ಇಲ್ಲಿನ ನಿವಾಸಿಗಳ ದವಸ ಧಾನ್ಯಗಳು ಮಳೆಯಲ್ಲಿ ಕೊಚ್ಚಿ ಹೋಗಿವೆ.

‘ಪ್ರತಿ ಸಾರಿ ಮಳೆಯಾದಾಗಲೂ ಸಹ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ನಾವು ಪ್ರಾಣಭಯದಲ್ಲೇ ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸುರಿದ ಮಳೆಯಿಂದ ಹಾನಿಯಾಗಿದ್ದು, ಸರ್ಕಾರ ಪರಿಹಾರ ಕಲ್ಪಿಸಬೇಕು’ ಎಂದು ನಿವಾಸಿಗಳಾದ ಮಹಾದೇವಿ ಹಾಗೂ ಪದ್ಮಾವತಿ ಆಗ್ರಹಿಸಿದರು.

ಅಖಿಲ ಭಾರತ ಬಂಜಾರ ಸೇವಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ರಾಠೋಡ, ಕಾರ್ಯದರ್ಶಿ ಧರ್ಮರಾಜ ಚವಾಣ್, ಆನಂದ ಜಾಧವ, ಮೋತಿರಾಮ್ ಜಾಧವ, ಶ್ರೀನಿವಾಸ ರಾಠೋಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry