ತುಂಬಿದ ಕೆರೆ: ಕಾಲೇಜು ಕಟ್ಟಡಕ್ಕೆ ಅಪಾಯ

ಬುಧವಾರ, ಜೂನ್ 19, 2019
23 °C

ತುಂಬಿದ ಕೆರೆ: ಕಾಲೇಜು ಕಟ್ಟಡಕ್ಕೆ ಅಪಾಯ

Published:
Updated:
ತುಂಬಿದ ಕೆರೆ: ಕಾಲೇಜು ಕಟ್ಟಡಕ್ಕೆ ಅಪಾಯ

ರಾಮನಗರ: ಇಲ್ಲಿನ ರಾಯರ ದೊಡ್ಡಿಯಲ್ಲಿರುವ ಮಹಿಳೆಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಂದಿಕೊಂಡಂತಹ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದ್ದು, ಹೊರ ಹೋಗಲು ದಾರಿ ಇಲ್ಲದಾಗಿದೆ. ಇದರಿಂದ ಕಟ್ಟಡಕ್ಕೆ ಹಾನಿಯಾಗುವ ಅಪಾಯವೂ ಎದುರಾಗಿದೆ.

ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಚಿಕ್ಕ ಕೆರೆಯು ಭರ್ತಿಯಾಗುತ್ತಿದೆ. ಹೀಗೆ ಸಂಗ್ರಹಗೊಂಡ ನೀರು ಕೋಡಿ ಬಿದ್ದು ಹೊರಹೋಗಲು ಈ ಹಿಂದೆ ಕಾಲುವೆ ಇತ್ತು. ಆದರೆ ಸದ್ಯ ಅದನ್ನು ಮುಚ್ಚಲಾಗಿದ್ದು, ನೀರು ಹೊರ ಹರಿಯಲು ಜಾಗವೇ ಇಲ್ಲದಂತೆ ಆಗಿದೆ.

ಕಟ್ಟಡಕ್ಕೆ ಅಪಾಯ: ಒಂದು ವೇಳೆ ಕೆರೆಯ ನೀರಿನ ಮಟ್ಟ ಹೆಚ್ಚಾದಲ್ಲಿ ಅದು ಕಾಲೇಜಿನ ಕಟ್ಟಡದ ತಳಪಾಯದವರೆಗೂ ವ್ಯಾಪಿಸುವ ಸಾಧ್ಯತೆ ಇದೆ. ಹೀಗಾದಲ್ಲಿ ಇಡೀ ಕಟ್ಟಡವೇ ಶಿಥಿಲಗೊಂಡು ಕುಸಿದುಬೀಳುವ ಆತಂಕವೂ ಎದುರಾಗಿದೆ.

ಕಳಪೆ ಕಾಮಗಾರಿ: ಕಾಲೇಜಿನ ಕಟ್ಟಡವನ್ನು 2006–07ನೇ ಸಾಲಿನಲ್ಲಿ ನಿರ್ಮಿಸಲಾಗಿದೆ. ಹೀಗೆ ನಿರ್ಮಿಸಿದ ಕೆಲವು ವರ್ಷಗಳಲ್ಲಿಯೇ ಕಟ್ಟಡವು ಕೆಳಮಟ್ಟದವರೆಗೂ ಬಿರುಕು ಬಿಟ್ಟು ಆತಂಕ ಮೂಡಿಸಿತ್ತು. ಕಡೆಗೆ ಗುತ್ತಿಗೆದಾರರನ್ನು ಎಚ್ಚರಿಸಿದ್ದು, ಅವರು ಹೊಸ ಕಟ್ಟಡದ ದುರಸ್ತಿ ಕಾರ್ಯವನ್ನೂ ಕೈಗೊಂಡಿದ್ದರು, ಇದೀಗ ಮತ್ತೆ ಈ ಕಟ್ಟಡಕ್ಕೆ ಆತಂಕ ಎದುರಾಗಿದೆ.

ಸುಮಾರು 5 ಎಕರೆ 2 ಗುಂಟೆಯಲ್ಲಿ ಕಾಲೇಜಿನ ಕ್ಯಾಂಪಸ್ ನಿರ್ಮಾಣವಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಬೇಕಾದ ಮೂಲ ಸೌಕರ್ಯಗಳು ಇಲ್ಲ. ಪದವಿ ಕಾಲೇಜಿನಲ್ಲಿ ವಿವಿಧ ವಿಭಾಗಗಳಲ್ಲಿ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರೊಟ್ಟಿಗೆ 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ.

ತ್ಯಾಜ್ಯ ಸುರಿದು ಒತ್ತುವರಿ: ರಾಜಕಾಲುವೆ ಜಾಗಕ್ಕೆ ನಿರಂತರವಾಗಿ ಕಟ್ಟಡದ ಅವಶೇಷಗಳು, ಘನ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಕ್ರಮೇಣ ಜಾಗವನ್ನು ಒತ್ತುವರಿ ಮಾಡಿಕೊಂಡು ಮುಚ್ಚಲಾಗಿದೆ. ಈಗಲೂ ತ್ಯಾಜ್ಯವನ್ನು ತಂದು ಸುರಿಯುತ್ತಲೇ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ನೀರು ಹರಿದು ಹೋಗಬೇಕಾದ ಜಾಗದಲ್ಲಿ ಸದ್ಯ ಗಿಡಗಂಟಿಗಳು ಬೆಳೆದು ನಿಂತಿವೆ. ಕಾಲೇಜಿನ ಸುತ್ತ ಇರಬೇಕಾದ ಆರೋಗ್ಯಕರ ಪರಿಸರ ಇಲ್ಲಿಲ್ಲ. ಕೊಳಕು ವಾತಾವರಣವೇ ಹೆಚ್ಚಿದೆ. ‘ಉತ್ತಮ ಮಳೆಯಿಂದಾಗಿ ಇಲ್ಲಿ ಸದ್ಯ ನೀರು ಸಂಗ್ರಹಗೊಂಡಿದೆ. ಆದರೆ ಹೊರಹೋಗುವ ವ್ಯವಸ್ಥೆಯೇ ಇಲ್ಲ. ಹೀಗಾಗಿ ಮೇಲಿನ ಗುಡ್ಡದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದರೆ ಕಾಲೇಜಿಗೆ ನುಗ್ಗುವುದು ಖಚಿತ’ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಸದ್ಯ ನಿಂತಿರುವ ನೀರು ಸ್ವಚ್ಛವಾಗಿದೆ. ಇದೇ ನೀರಿಗೆ ಕಸ ತಂದು ಸುರಿಯಲಾಗುತ್ತಿದೆ. ಮಳೆ ನೀರು ಹರಿದುಬರುವುದು ನಿಂತರೆ ಇಲ್ಲಿನ ನೀರು ಕಲುಷಿತಗೊಳ್ಳುತ್ತದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಿ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ ಹರಡಲೂ ಬಹುದು’ ಎಂದು ಅವರು ವಿವರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry