ಸ್ಮಾರ್ಟ್‌ಫೋನ್‌ ಫೋಟೊಗ್ರಫಿಯ ಹೊಸ ಸಾಧ್ಯತೆಗಳು

ಮಂಗಳವಾರ, ಜೂನ್ 25, 2019
30 °C

ಸ್ಮಾರ್ಟ್‌ಫೋನ್‌ ಫೋಟೊಗ್ರಫಿಯ ಹೊಸ ಸಾಧ್ಯತೆಗಳು

Published:
Updated:
ಸ್ಮಾರ್ಟ್‌ಫೋನ್‌ ಫೋಟೊಗ್ರಫಿಯ ಹೊಸ ಸಾಧ್ಯತೆಗಳು

ತಂತ್ರಜ್ಞಾನ ಇಂದು ನಮ್ಮ ಕಲ್ಪನೆಗೂ ಮೀರಿ ಬೆಳೆಯುತ್ತಿದೆ. ನಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಸರಳೀಕರಿಸಲು ತರಹೇವಾರಿ ಉಪಕರಣಗಳು ದಿನೇ ದಿನೇ ಆವಿಷ್ಕಾರವಾಗುತ್ತಿವೆ. ದೃಶ್ಯದ ಮೂಲಕ ಕತೆ ಹೇಳುವ ಫೋಟೊಗ್ರಫಿಯಂತಹ ಕಲೆಯೂ ತಂತ್ರಜ್ಞಾನದ ಇಂತಹ ಅನೇಕ ಸಾಧ್ಯತೆಗಳನ್ನು ಪೋಷಿಸುತ್ತಲೇ ಬಂದಿದೆ.

ದೃಶ್ಯವನ್ನು ಇನ್ನಷ್ಟು ಸಮರ್ಪಕವಾಗಿ, ಹೆಚ್ಚು ಖರ್ಚಿಲ್ಲದೆ, ಸಮಯದ ಮಿತಿಯೊಳಗೆ ಕಟ್ಟಿಕೊಡಲು ಬಳಕೆಯಾಗುವ ಫೋಟೊಗ್ರಫಿ ಉಪಕರಣಗಳಲ್ಲಿ ಕೂಡ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ. ಕ್ಯಾಮೆರಾ ಅಷ್ಟೇ ಅಲ್ಲದೆ, ಸ್ಮಾರ್ಟ್‌ಫೋನ್‌ ತಂತ್ರಜ್ಞಾನವು ಇಂತಹ ನೂತನ ಹೆಜ್ಜೆಗಳಿಗೆ ದಾರಿಯಾಗುತ್ತಿದೆ.

ಇಂತಹ ನವೀನ ಸಾಧ್ಯತೆಗಳ ಮೂಲಕ ಅಚ್ಚರಿ ಹುಟ್ಟಿಸುತ್ತಿರುವ ಕಂಪೆನಿ ‘ಶೋಲ್ಡರ್‌ ಪಾಡ್’. ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ ಈ ಕಂಪೆನಿ, ಮೊಬೈಲ್ ಮೂಲಕ ಫೋಟೊಗ್ರಫಿ ಮಾಡುವವರಿಗೆ ಅನುಕೂಲವಾಗಲೆಂದು ಉಪಕರಣಗಳನ್ನು ವಿನ್ಯಾಸ ಮಾಡುತ್ತದೆ. ಮೊಬೈಲ್ ಫೋಟೊಗ್ರಫಿ ಮಾಡುವವರೂ ವೃತ್ತಿಪರ ಕ್ಯಾಮೆರಾಗಳಲ್ಲಿರುವ ಗುಣಮಟ್ಟ ಪಡೆಯಬೇಕೆಂಬ ಉದ್ದೇಶ ಹೊಂದಿರುವ ಈ ಸಂಸ್ಥೆ ಇತ್ತಿಚೀನ ವರ್ಷಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದೆ.

ಈ ಪ್ರಯೋಗದ ಹೊಸ ಕೊಡುಗೆಯೇ ‘ಮಾಡ್ಯುಲರ್ ಸ್ಮಾರ್ಟ್‌ಫೋನ್ ಗ್ರಿಪ್ ಎಚ್ 1’ ಎಂಬ ಉಪಕರಣ. ಫೋಟೊಗ್ರಫಿ ಮಾಡುವಾಗ ಮೊಬೈಲ್ ಮೇಲಿನ ಹಿಡಿತ ತಪ್ಪದಿರಲು ಈ ಮಾಡ್ಯುಲರ್ ಗ್ರಿಪ್ ಅನ್ನು ಬಳಸಲಾಗುತ್ತದೆ. ಏನನ್ನಾದರೂ ಚಿತ್ರೀಕರಿಸುವಾಗ ಸೆರೆಹಿಡಿಯುವ ದೃಶ್ಯದ ಗುಣಮಟ್ಟ ಕೈ ಚಲನೆಯಿಂದ ಹಾಳಾಗದಂತೆ ರಕ್ಷಿಸುವ ಕೆಲಸವನ್ನು ಈ ಉಪಕರಣ ಮಾಡುತ್ತದೆ.

ಮಾಡ್ಯುಲರ್ ಸ್ಮಾರ್ಟ್‌ಫೋನ್ ಗ್ರಿಪ್ ಉಪಕರಣಗಳಲ್ಲಿ ಅನೇಕ ಸರಣಿಗಳನ್ನು ಬಿಡುಗಡೆ ಮಾಡಿರುವ ಈ ಕಂಪೆನಿ ಇದೀಗ ಎಚ್ 1 ಸರಣಿಯ ಗ್ರಿಪ್ ಅನ್ನು ಮಾರುಕಟ್ಟೆಗೆ ತಂದಿದೆ. ಮೊಬೈಲ್ ಮೂಲಕ ಫೋಟೊಗ್ರಫಿ ಮಾಡುವಾಗ ಅಥವಾ ಚಲನಚಿತ್ರ, ಸಾಕ್ಷ್ಯಚಿತ್ರಗಳನ್ನು ಚಿತ್ರೀಕರಿಸುವಾಗ ಅನೇಕ ಉಪಕರಣಗಳ ಅವಶ್ಯಕತೆಯಿರುತ್ತದೆ. ಅಂತಹ ಭಿನ್ನ ಉಪಕರಣಗಳನ್ನು ಒಂದೆಡೆ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಈ ಮಾಡ್ಯುಲರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಏನಿದರ ವಿಶೇಷತೆ?: ಸಪೇಲಿ ಮರದಿಂದ ತಯಾರಿಸಲಾಗಿರುವ ಈ ಮಾಡ್ಯುಲರ್‌ ‘ಕಿಟ್’ನಲ್ಲಿನ ಉಪಕರಣಗಳನ್ನು ನಮ್ಮ ಅನುಕೂಲತೆಗೆ ತಕ್ಕಂತೆ ಹೊಂದಿಸಿಕೊಳ್ಳಬಹುದು.

ಚಿತ್ರೀಕರಿಸುವಾಗ ಶಬ್ದವನ್ನು ಸೆರೆಹಿಡಿಯಲು ಬಳಕೆಯಾಗುವ ಮೈಕ್ರೊಫೋನ್ ಹಾಗೂ ಬೆಳಕನ್ನು ತೀವ್ರಗೊಳಿಸುವ ಫ್ಲ್ಯಾಶ್ ಲೈಟ್‌ಗಳನ್ನು ಹ್ಯಾಂಡಲ್‌ಗಳ ಮೂಲಕ ಹೊಂದಿಸಿಕೊಳ್ಳುವಂತೆ ಈ ಮಾಡ್ಯುಲರ್‌ ಅನ್ನು ವಿನ್ಯಾಸ ಮಾಡಲಾಗಿದೆ. ಸ್ಮಾರ್ಟ್‌ಫೋನ್‌ಗಳನ್ನು ಸುರಕ್ಷಿತವಾಗಿ ಹ್ಯಾಂಡಲ್‌ಗಳಿಗೆ ಅಳವಡಿಸಿ ಹಿಡಿತ ಸಾಧಿಸಲು ‘ಡಬ್ಲ್ಯು 1 ರಿಸ್ಟ್ ಸ್ಟ್ರ್ಯಾಪ್’ ಎಂಬ ಚಿಕ್ಕ ಬೆಲ್ಟ್ ಅನ್ನು ಈ ಕಿಟ್‌ನಲ್ಲಿ ನೀಡಲಾಗಿದೆ. ಇವುಗಳೆಲ್ಲವನ್ನೂ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ‘ಜೆಡ್ 1 ಕೊಲ್ಡ್ ಶೂ’ ಎಂಬ ಅಳವಡಿಕೆಯು ಇದರಲ್ಲಿದೆ.

ದೀರ್ಘಾವಧಿಯವರೆಗೆ ಚಿತ್ರೀಕರಣ ಮಾಡಲು ಅನುವು ಮಾಡಿಕೊಳ್ಳುವ ಹಾಗೆ ಈ ಹ್ಯಾಂಡಲ್‌ಗಳನ್ನು ವಿನ್ಯಾಸ ಮಾಡಲಾಗಿದೆ. ಬಳಕೆದಾರರು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಉಪಕರಣಗಳೊಂದಿಗೆ ಕೆಲಸವನ್ನು ಸರಾಗವಾಗಿ ಮಾಡಲು ಹಿಂದಿನ ಸರಣಿಯಲ್ಲಿ ಬಂದ ಉಪಕರಣಗಳಿಗಿಂತ ಇದು ಹೆಚ್ಚು ವಿಸ್ತರಿತ ಮಾಡ್ಯುಲರ್.

ಈಗಾಗಲೇ ಬಿಬಿಸಿ ಹಾಗೂ ಸಿಬಿಎಸ್‌ನಂತಹ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ಮೊಬೈಲ್ ಪತ್ರಿಕೋದ್ಯಮಕ್ಕಾಗಿ ಈ ಮಾಡ್ಯುಲರ್ ಅನ್ನು ಬಳಸಲು ಆರಂಭಿಸಿವೆ.

ಹೆಚ್ಚು ಉಪಕರಣಗಳನ್ನು ಸ್ಮಾರ್ಟ್‌ಫೋನ್‌ ಜೊತೆಗೆ ಅಳವಡಿಸಿ ಚಿತ್ರೀಕರಣವನ್ನು ಇನ್ನಷ್ಟು ಸಮರ್ಪಕವಾಗಿ ಹಾಗೂ ಅದ್ಭುತ ಗುಣಮಟ್ಟದೊಂದಿಗೆ ಸೆರೆಹಿಡಿಯುವ ಸಾಧ್ಯತೆಗೆ ಈ ಹೊಸ ಉಪಕರಣ ಒಂದು ಅತ್ಯುತ್ತಮ ಮಾದರಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry