ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಕಚೇರಿಯಲ್ಲಿ ತುಂಬಿ ತುಳುಕಿದ ಟಿಕೆಟ್‌ ಆಕಾಂಕ್ಷಿಗಳು

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಮಹಾಪೂರ ಜೆಡಿಎಸ್‌ ಕಚೇರಿಗೆ ಬುಧವಾರ ಹರಿದು ಬಂದಿತ್ತು.

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷವನ್ನು ಚುನಾವಣೆಗೆ ಈಗಿನಿಂದಲೇ ಸಜ್ಜುಗೊಳಿಸುವ ಉದ್ದೇಶದಿಂದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಬುಧವಾರ ಟಿಕೆಟ್‌ ಆಕಾಂಕ್ಷಿಗಳ ಸಭೆ ಕರೆದಿದ್ದರು. ರಾಜ್ಯದ ವಿವಿಧೆಡೆಯಿಂದ ಸುಮಾರು 3,000 ಆಕಾಂಕ್ಷಿಗಳು ಜೆಡಿಎಸ್‌ ಕಚೇರಿ ಜೆ.ಪಿ.ಭವನಕ್ಕೆ ದೌಡಾಯಿಸಿದ್ದರು.

ಮಧ್ಯಾಹ್ನದಿಂದ ರಾತ್ರಿಯವರೆಗೆ ಎಲ್ಲ ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳನ್ನು ದೇವೇಗೌಡರೇ ಖುದ್ದು ಭೇಟಿ ಮಾಡಿದರು. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಆಕಾಂಕ್ಷಿಗಳು ಏನು ಮಾಡಬೇಕು ಎಂಬ ನಿರ್ದೇಶನವನ್ನೂ ನೀಡಿದರು.

ಟಿಕೆಟ್‌ ಕೊಡಿ ಎಂದು ಕಚೇರಿ ಮತ್ತು ನಾಯಕರ ಹಿಂದೆ–ಮುಂದೆ ಸುತ್ತುವವರಿಗೆ ಅವಕಾಶ ಇಲ್ಲ. ಹಳ್ಳಿ, ವಾರ್ಡ್‌ಗಳ ಪ್ರತಿಯೊಬ್ಬರ ಮನೆಗೆ ಹೋಗಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮತ್ತು ನನ್ನ ಅಧಿಕಾರ ಅವಧಿಯಲ್ಲಿ ಏನೇನು ಕೆಲಸ ಆಗಿದೆ, ಪಕ್ಷ ಅಧಿಕಾರಕ್ಕೆ ಬಂದರೆ ಏನೇನು ಮಾಡುತ್ತದೆ. ಈ ಬಾರಿ ಕುಮಾರಸ್ವಾಮಿಗೆ ಅವಕಾಶ ನೀಡಿ ಎಂದು ಮನವಿ ಮಾಡಬೇಕು ಎಂದು ತಾಕೀತು ಮಾಡಿದ ಅವರು, ಕಷ್ಟ ಪಟ್ಟವರಿಗಷ್ಟೇ ಟಿಕೆಟ್‌, ಕೆಲಸ ಮಾಡದವರಿಗೆ ಟಿಕೆಟ್‌ ಇಲ್ಲ ಎಂದು  ಸ್ಪಷ್ಟಪಡಿಸಿದರು.

‘ಆಕಾಂಕ್ಷಿಗಳು ಕರಪತ್ರದಲ್ಲಿ ತಮ್ಮ ಭಾವಚಿತ್ರವನ್ನು ಹಾಕಿಕೊಂಡು ಮತದಾರರ ಮನೆಗಳಿಗೆ ಭೇಟಿ ನೀಡಬೇಕು. ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರಿಗಿಂತ ಹೆಚ್ಚು ಜನ ಆಕಾಂಕ್ಷಿಗಳು ಇದ್ದರೆ, ಒಟ್ಟಿಗೆ ಹೋಗಬೇಕು. ಅಂತಿಮವಾಗಿ ಯಾರಿಗೆ ಟಿಕೆಟ್‌ ಕೊಡಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ’ ಎಂದು ದೇವೇಗೌಡ ತಿಳಿಸಿದರು.

ಗದರಿದ ಗೌಡರು: ‘ನಾನು ಮತ್ತು ಕುಮಾರಸ್ವಾಮಿ ಭಾಷಣ ಮಾಡುವಾಗ ಟಿ.ವಿಗಳಲ್ಲಿ ಮುಖ ತೋರಿಸಲು ಹಿಂದೆ ಬಂದು ನಿಲ್ಲಬೇಡಿ. ಜನರ ಮಧ್ಯೆ ಹೋಗಿ ಕೆಲಸ ಮಾಡಿ. ಪಕ್ಷವನ್ನು ಸಂಘಟಿಸಿ’ ಎಂದು ತಮ್ಮ ಹಿಂದೆ ನಿಂತಿದ್ದ ಪದಾಧಿಕಾರಿಯೊಬ್ಬರಿಗೆ ದೇವೇಗೌಡ ಗದರಿದರು.

‘ಅಂದು ಸೂಟ್‌ಕೇಸ್‌– ಇಂದು ಬಕೆಟ್‌ ’
ಬೆಂಗಳೂರು:‘ಹುಣಸೂರು ಕ್ಷೇತ್ರದಲ್ಲಿ ರಾಜಕೀಯ ಪ್ರವೇಶಿಸಬೇಕು ಎಂಬ ನನ್ನ ಬಯಕೆಗೆ ಕೆಲವು ‘ಬಕೆಟ್‌ ರಾಜಕಾರಣಿ’ಗಳಿಂದ ಕಲ್ಲು ಬಿತ್ತು’ ಎಂದು ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ತಮ್ಮ ಪಕ್ಷದ ಕೆಲವರ ವಿರುದ್ಧ ಕಿಡಿಕಾರಿದ್ದಾರೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಡನೆ ಮಂಗಳವಾರ ನಡೆಸಿದ ಮಾತುಕತೆ ಸಂದರ್ಭದಲ್ಲಿ ಹುಣಸೂರಿನಲ್ಲಿ ರಾಜಕೀಯ ಪ್ರವೇಶಕ್ಕೆ ಅಡ್ಡಿ ಉಂಟಾದ ಬಗ್ಗೆ ಪ್ರಸ್ತಾಪಿಸಿ, ‘ಅಂದು ಸೂಟ್‌ಕೇಸ್‌, ಇಂದು ಬಕೆಟ್‌’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೇ ಹರಿಹಾಯ್ದರು.

ಪ್ರಜ್ವಲ್‌ ರೇವಣ್ಣ

‘ನನ್ನ ಮಟ್ಟಿಗೆ ದೇವೇಗೌಡ, ಕುಮಾರಣ್ಣ ಎರಡು ಸ್ತಂಭಗಳಿದ್ದಂತೆ. ಅವರ ನೆರಳಿನಲ್ಲೇ ಬದುಕುತ್ತಿದ್ದೇನೆ. ಅವರ ವಿರುದ್ಧ ಮಾತನಾಡಿ, ಕಟ್ಟಡವನ್ನು ಮೈಮೇಲೆ ಬೀಳಿಸಿಕೊಳ್ಳುವ ಮೂರ್ಖ ನಾನಲ್ಲ. ಹುಣಸೂರು ಘಟನೆಯಿಂದ ನೊಂದಿದ್ದೇನೆ. ಅಲ್ಲಿನ ಕೆಲವು ‘ಬಕೆಟ್‌’ಗಳು ಮತ್ತು ಕಳ್ಳರಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಯಿತು. ನನ್ನ ಹೇಳಿಕೆ ತಿರುಚಿ ರಾಜಕೀಯ ಬೆಳವಣಿಗೆಗೆ ಅಡ್ಡಿಪಡಿಸಿದರು. ನಾನು ಬೆಳೆದರೆ ಅವರ ಬಕೆಟ್‌ ರಾಜಕಾರಣ ಮತ್ತು ಕಳ್ಳಾಟ ತಡೆಯುತ್ತೇನೆ ಎಂಬುದೇ ಅವರ ಭಯಕ್ಕೆ ಕಾರಣ’ ಎಂದು ಹೇಳಿದರು.

‘ರಾಜರಾಜೇಶ್ವರಿನಗರ ಕ್ಷೇತ್ರ ನನಗೆ ಪುನರ್‌ಜನ್ಮ ನೀಡುತ್ತದೆ ಎಂಬ ನಂಬಿಕೆ ಇದೆ. ರಾಜರಾಜೇಶ್ವರಿಯನ್ನು ನನ್ನ ಅಜ್ಜಿ, ತಾಯಿ, ಅಣ್ಣ ಎಲ್ಲರೂ ನಂಬಿಕೊಂಡಿದ್ದೇವೆ’ ಎಂದು ಹೇಳಿದರು.

ಹುಣಸೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಜ್ವಲ್‌, ಅಲ್ಲಿ ಎಚ್. ವಿಶ್ವನಾಥ್‌ಗೆ ಟಿಕೆಟ್ ಕೊಡುವುದು ಖಚಿತವಾಗುತ್ತಿದ್ದಂತೆ ಬೇರೆ ಕ್ಷೇತ್ರದ ಒಲವು ತೋರಿದ್ದರು. ಹಾಸನ ಜಿಲ್ಲೆಯ ಬೇಲೂರು ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕೆ ಇಳಿಯಲು ಅವರು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT