ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರ ಘಟ್ಟಕ್ಕೆ ಇಂಗ್ಲೆಂಡ್‌

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಗೆಲುವಿನ ಓಟ ಮುಂದುವರಿಸಿರುವ ಇಂಗ್ಲೆಂಡ್‌ ತಂಡದವರು ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ನಲ್ಲಿ 16ರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.

ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ‘ಎಫ್‌’ ಗುಂಪಿನ ಪಂದ್ಯದಲ್ಲಿ ಆಂಗ್ಲರ ನಾಡಿನ ತಂಡ 3–2 ಗೋಲುಗಳಿಂದ ಮೆಕ್ಸಿಕೊ ಸವಾಲು ಮೀರಿ ನಿಂತಿತು.

ಕೂಟದ ಆರಂಭಿಕ ಪಂದ್ಯದಲ್ಲಿ 4–0 ಗೋಲುಗಳಿಂದ ಚಿಲಿ ಎದುರು ಗೆದ್ದು ವಿಶ್ವಾಸದಿಂದ ಬೀಗುತ್ತಿದ್ದ ಇಂಗ್ಲೆಂಡ್‌ ತಂಡದವರು ಎರಡು ಬಾರಿಯ ವಿಶ್ವ ಚಾಂಪಿಯನ್‌ ಮೆಕ್ಸಿಕೊ ವಿರುದ್ಧವೂ ಪ್ರಾಬಲ್ಯ ಮೆರೆದರು.

ಆರಂಭಿಕ ನಿಮಿಷದಲ್ಲೇ ಇಂಗ್ಲೆಂಡ್‌ ತಂಡಕ್ಕೆ ಖಾತೆ ತೆರೆಯುವ ಉತ್ತಮ ಅವಕಾಶ ಲಭ್ಯವಾಗಿತ್ತು. ಆದರೆ ರಿಯಾನ್‌ ಬ್ರೆವೆಸ್ಟರ್‌ ಈ ಅವಕಾಶ ಕೈಚೆಲ್ಲಿದರು. ಪ್ರತಿಷ್ಠಿತ ಲಿವರ್‌ಪೂಲ್‌ ಕ್ಲಬ್‌ ಪರ ಆಡಿದ ಅನುಭವ ಹೊಂದಿರುವ ರಿಯಾನ್‌ ಬಾರಿಸಿದ ಚೆಂಡು ಎದುರಾಳಿ ಗೋಲುಪೆಟ್ಟಿಗೆ ಸನಿಹದಿಂದ ಸಾಗಿ ಅಂಗಳದ ಆಚೆ ಬಿತ್ತು. ಇದರಿಂದ ವಿಶ್ವಾಸ ಕಳೆದುಕೊಳ್ಳದ ಇಂಗ್ಲೆಂಡ್‌ ದಿಟ್ಟ ಹೋರಾಟ ಮುಂದುವರಿಸಿತು.

35ನೇ ನಿಮಿಷದವರೆಗೂ ಉಭಯ ತಂಡಗಳು ರಕ್ಷಣಾ ವಿಭಾಗದಲ್ಲಿ ಶ್ರೇಷ್ಠ ಆಟ ಆಡಿದ್ದರಿಂದ ಯಾವ ತಂಡಕ್ಕೂ ಖಾತೆ ತೆರೆಯಲು ಆಗಲಿಲ್ಲ. 39ನೇ ನಿಮಿಷದಲ್ಲಿ ರಿಯಾನ್‌ ಕಾಲ್ಚಳಕ ತೋರಿದರು.

25 ಗಜ ದೂರದಿಂದ ಚೆಂಡನ್ನು ಸೊಗಸಾದ ರೀತಿಯಲ್ಲಿ ‘ಫ್ರೀ ಕಿಕ್‌’ ಮಾಡಿ ಗುರಿ ಸೇರಿಸಿದ ಅವರು ಮೈದಾನದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು. ಹೀಗಾಗಿ ಇಂಗ್ಲೆಂಡ್‌ ತಂಡ 1–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ಮೊದಲರ್ಧದ ಹೆಚ್ಚುವರಿ ಅವಧಿಯಲ್ಲಿ ಮೆಕ್ಸಿಕೊ ತಂಡಕ್ಕೆ ಸಮಬಲದ ಗೋಲು ಗಳಿಸುವ ಉತ್ತಮ ಅವಕಾಶ ಸಿಕ್ಕಿತ್ತು. ಈ ತಂಡದ ಇಯಾನ್‌ ಟೊರೆಸ್‌ ಅವರ ‘ಫ್ರೀ ಕಿಕ್‌’ ಅವಕಾಶವನ್ನು ಇಂಗ್ಲೆಂಡ್‌ ಗೋಲ್‌ಕೀಪರ್‌ ಕರ್ಟಿಸ್‌ ಆ್ಯಂಡರ್‌ಸನ್‌ ವಿಫಲಗೊಳಿಸಿದರು.

ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್‌ ತಂಡದ ಆಟ ಇನ್ನಷ್ಟು ರಂಗು ಪಡೆದುಕೊಂಡಿತು. 48ನೇ ನಿಮಿಷದಲ್ಲಿ ಫಿಲಿಪ್‌ ಫೋಡೆನ್‌ ಮೋಡಿ ಮಾಡಿದರು. ಮನಮೋಹಕ ರೀತಿಯಲ್ಲಿ  ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ರಕ್ಷಣಾವ್ಯೂಹ ಭೇದಿಸಿದ ಅವರು ಲೀಲಾಜಾಲವಾಗಿ ಅದನ್ನು ಗುರಿ ತಲುಪಿಸಿದರು.

ಆ ನಂತರ ಮೆಕ್ಸಿಕೊ ತಂಡ ಹಿನ್ನಡೆ ತಗ್ಗಿಸಲು ಹೋರಾಟ ಮುಂದುವರಿಸಿತು. ಹೀಗಿದ್ದರೂ ಈ ತಂಡಕ್ಕೆ ಎದುರಾಳಿಗಳ ರಕ್ಷಣಾಕೋಟೆ ಭೇದಿಸಲು ಆಗಲಿಲ್ಲ. ಇನ್ನೊಂದೆಡೆ ಇಂಗ್ಲೆಂಡ್‌ ತಂಡದ ಗೋಲು ಗಳಿಕೆ ಮುಂದುವರಿದಿತ್ತು.

57ನೇ ನಿಮಿಷದಲ್ಲಿ ಜೇಡನ್‌ ಸ್ಯಾಂಚೊ ಆಂಗ್ಲರ ನಾಡಿನ ಮುನ್ನಡೆ ಹೆಚ್ಚಿಸಿದರು. ಯಂಗ್‌ ಲಯನ್ಸ್‌ ಕ್ಲಬ್‌ನ ಪ್ರಮುಖ ಆಟಗಾರ ಜೇಡನ್‌, ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಹೀಗಾಗಿ ಇಂಗ್ಲೆಂಡ್‌ ತಂಡ ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿತು.

64ನೇ ನಿಮಿಷದವರೆಗೂ ಮುನ್ನಡೆ ಕಾಪಾಡಿಕೊಂಡಿದ್ದ ಇಂಗ್ಲೆಂಡ್‌ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆ ನಂತರ ಮೆಕ್ಸಿಕೊ ತಂಡದ ಆಟ ಅರಳಿತು. ಡಿಯಾಗೊ ಲಿಯಾನೆಜ್‌ 65 ಮತ್ತು 72ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದ್ದರಿಂದ ಆಟದ ರೋಚಕತೆ ಹೆಚ್ಚಿತ್ತು.

ಆ ನಂತರದ ಅವಧಿಯಲ್ಲಿ ರಕ್ಷಣಾ ವಿಭಾಗದಲ್ಲಿ ಶ್ರೇಷ್ಠ ಆಟ ಆಡಿದ ಇಂಗ್ಲೆಂಡ್‌ ತಂಡ ಗೆಲುವಿನ ತೋರಣ ಕಟ್ಟಿತು. ಮೆಕ್ಸಿಕೊ ತಂಡಕ್ಕೆ ಈ ಬಾರಿಯ ಕೂಟದಲ್ಲಿ ಮೊದಲ ಸೋಲು ಎದುರಾಯಿತು. ಈ ತಂಡ ಆರಂಭಿಕ ಪಂದ್ಯದಲ್ಲಿ 1–1 ಗೋಲುಗಳಿಂದ  ಇರಾಕ್‌ ವಿರುದ್ಧ ಡ್ರಾ ಮಾಡಿಕೊಂಡಿತ್ತು.

ಫ್ರಾನ್ಸ್‌ ಜಯಭೇರಿ: ಗುವಾಹಟಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್‌ ತಂಡ 2–1 ಗೋಲುಗಳಿಂದ ಜಪಾನ್‌ ವಿರುದ್ಧ ಜಯಭೇರಿ ಮೊಳಗಿಸಿತು.

ಫ್ರಾನ್ಸ್‌ ತಂಡದ ಗೌಯಿರಿ 13 ಮತ್ತು 71ನೇ ನಿಮಿಷಗಳಲ್ಲಿ  ಗೋಲು ದಾಖಲಿಸಿ ಮಿಂಚಿದರು. ಜಪಾನ್‌ ತಂಡದ ಮಿಯಾಶಿರೊ 73ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಆದರೆ ಇತರ ಆಟ ಗಾರರಿಂದ ಅವರಿಗೆ ಬೆಂಬಲ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT