ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿಅಣೆಕಟ್ಟೆ ಬೇಡ; ಕೆರೆಗಳಿಗೆ ನೀರು ತುಂಬಿಸಿ

ಬೇಲೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಎತ್ತಿನಹೊಳೆ ನೀರು ಮೀಸಲಿಡಲು ಆಗ್ರಹ
Last Updated 12 ಅಕ್ಟೋಬರ್ 2017, 9:43 IST
ಅಕ್ಷರ ಗಾತ್ರ

ಹಳೇಬೀಡು: ‘ಕಡೂರು ಬಹುಗ್ರಾಮ ಯೋಜನೆಗೆ ಎತ್ತಿಹೊಳೆ ಯೋಜನೆಯಿಂದ ನೀರು ಪೂರೈಕೆ ಮಾಡಲು ದಾಸಗೊಡ್ನಹಳ್ಳಿ ಬಳಿ ಅಣೆಕಟ್ಟೆ ನಿರ್ಮಿಸುವುದಕ್ಕಿಂತ ಹಳೇಬೀಡು ಹಾಗೂ ಅಡಗೂರು ಕೆರೆಗಳ ಹೂಳು ತೆಗೆದು ನೀರು ಸಂಗ್ರಹಿಸುವುದು ಸೂಕ್ತ’ ಎಂದು ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಕೆ.ಎಸ್‌.ಲಿಂಗೇಶ್‌ ಹೇಳಿದರು.

ಬುಧವಾರ ನಡೆದ ಜೆಡಿಎಸ್‌ ಸಭೆಯಲ್ಲಿ ಅವರು ಮಾತನಾಡಿದರು.

‘ದಾಸಗೊಡ್ನಹಳ್ಳಿ ಬಳಿ ಸುಮಾರು 400 ಎಕರೆ ಕೃಷಿ ಭೂಮಿ ಎತ್ತಿನ ಹೊಳೆ ಯೋಜನೆಯ ಮಿನಿ ಕಟ್ಟೆ ನಿರ್ಮಾಣಕ್ಕೆ ಸ್ವಾಧೀನ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಭಾಗದಲ್ಲಿ ಆಗಾಗ್ಗೆ ಎಂಜಿನಿಯರ್‌ಗಳಿಂದ ಸ್ಥಳ ಪರಿಶೀಲನೆ ನಡೆಯುತ್ತಿದೆ. ಇಲ್ಲಿಯ ಜಮೀನುಗಳನ್ನು ಭೂಸ್ವಾಧೀನ ಮಾಡುವುದರಿಂದ ಫಲವತ್ತಾದ ಕೃಷಿಭೂಮಿ ಕಳೆದುಕೊಂಡಂತಾಗುತ್ತದೆ. ಈಗಾಗಲೇ ಕೃಷಿ ಭೂಮಿ ಕಡಿಮೆಯಾಗುತ್ತಿರುವುದರಿಂದ ಬದಲಿ ವ್ಯವಸ್ಥೆ ಮಾಡುವುದು ಉತ್ತಮ’ ಎಂದು ವಿವರಿಸಿದರು.

‘ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಸುವ ಮೊದಲು; ಹಳೇಬೀಡು, ಮಾದಿಹಳ್ಳಿ ಹಾಗೂ ಜಾವಗಲ್‌ ಹೋಬಳಿಗೆ ನೀರು ಹರಿಸುವ ಯೋಜನೆಗೆ ಹಣ ಮಂಜೂರು ಮಾಡಬೇಕು. ಮೂರು ಹೋಬಳಿಯ 66 ಕೆರೆಗಳಿಗೆ ನೀರು ತುಂಬಿಸಬೇಕು. ಇಲ್ಲದಿದ್ದರೆ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಎತ್ತಿನಹೊಳೆ ಪೈಪ್‌ಲೈನ್‌, ಚಾನೆಲ್‌ ಹಾಗೂ ಮಿನಿಅಣೆಕಟ್ಟೆ ಕೆಲಸಗಳಿಗೆ ಅಡ್ಡಿಪಡಿಸುತ್ತೇವೆ’ ಎಂದು ಅವರು ಹೇಳಿದರು.

‘ಇಲ್ಲಿಯ ಕೆರೆ ತುಂಬಿಸಲು 0.22 ಟಿಎಂಸಿ ನೀರು ಅಗತ್ಯವಿದೆಎಂದು ತಜ್ಞರು ಹೇಳುತ್ತಾರೆ. ಎತ್ತಿನಹೊಳೆ ಯೋಜನೆಯಲ್ಲಿ ಮೂರು ಹೋಬಳಿಗಾಗಿ ಅಗತ್ಯವಿರುವ ನೀರನ್ನು ಕಾದಿರಿಸುವ ವ್ಯವಸ್ಥೆ ಆಗಬೇಕು. ಮಿನಿಕಟ್ಟೆ ಇಲ್ಲದೆ ಯೋಜನೆ ಸಾಧ್ಯವಿಲ್ಲ ಎಂದರೆ ಜಮೀನು ಕಳೆದುಕೊಳ್ಳುವ ರೈತರಿಗೆ ಬೇರೆ ಸ್ಥಳದಲ್ಲಿ ಜಮೀನು ಕೊಡಬೇಕು. 1 ಎಕರೆಗೆ ₹ 1 ಕೋಟಿ ಪರಿಹಾರ ಕೊಡಬೇಕು. ಪರಿಹಾರ ಹಾಗೂ ಬದಲಿ ಜಮೀನಿನನ ವ್ಯವಸ್ಥೆ ಆಗುವವರೆಗೂ ಕಾಮಗಾರಿ ಕೈಗೊಳ್ಳಲು ಬಿಡುವುದಿಲ್ಲ’ ಎಂದು ತಿಳಿಸಿದರು.

ಮುಖಂಡರಾದ ರವಿಕುಮಾರ್‌, ಬಸ್ತಿಹಳ್ಳಿ ಮಲ್ಲಿಕಾರ್ಜುನ ಮಾತನಾಡಿದರು. ಎಚ್‌.ಪರಮೇಶ್‌, ಸೊಪ್ನಳ್ಳಿ ಶಿವಲಿಂಗೇಗೌಡ, ದಲಿತ ಮುಖಂಡ ಹುಲಿಕೆರೆ ಕುಮಾರ್‌
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT