ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಛೇ ದಿನ್‌ಗೆ ಕಾಯುತ್ತಿದೆ ತುಮಕೂರು

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರಿಯಲ್‌ಎಸ್ಟೇಟ್‌ ಉದ್ಯಮದವರ ಕನಸಿನ ನೆಲ ಎಂದೇ ಕರೆಯಿಸಿಕೊಂಡಿದ್ದ ತುಮಕೂರು ನಗರಿಯ ಮೇಲೆ ನೋಟು ರದ್ಧತಿ, ಜಿಎಸ್‌ಟಿ (ಸರಕು, ಸೇವಾ ತೆರಿಗೆ) ಗೊಂದಲ ಪರಿಣಾಮ ಬೀರಿದೆ. ನಗರದಲ್ಲಿ ಊದಿಕೊಂಡಿದ್ದ ರಿಯಲ್‌ ಎಸ್ಟೇಟ್‌ ಗುಳ್ಳೆ ಛಿದ್ರವಾಗಿದೆ. ಶೇ 75ರಷ್ಟು ವಹಿವಾಟು ಕಡಿಮೆಯಾಗಿದೆ ಎಂದು ರಿಯಲ್‌ ಎಸ್ಟೇಟ್ ಉದ್ಯಮಿಗಳು ಹೇಳುತ್ತಿದ್ದಾರೆ.

ಬೆಂಗಳೂರಿಗೆ ಹೋಲಿಸಿದರೆ ತುಮಕೂರಿನ ರಿಯಲ್‌ ಎಸ್ಟೇಟ್‌ ಪ್ರಪಂಚ ಸಣ್ಣದು. ಸ್ಮಾರ್ಟ್ ಸಿಟಿ ಘೋಷಣೆ, ತುಮಕೂರು ಹೊರವಲಯದ  ವಸಂತನರಸಾಪುರದಲ್ಲಿ ಹದಿಮೂರು ಸಾವಿರ ಎಕರೆಯಲ್ಲಿ ತಲೆ ಎತ್ತುತ್ತಿರುವ ರಾಷ್ಟ್ರೀಯ ಉತ್ಪಾದನಾ ಮತ್ತು ಹೂಡಿಕೆ ವಲಯ (ಎನ್ಐಎಂಝಡ್‌), ಫುಡ್‌ ಪಾರ್ಕ್‌, ಮೆಷಿನ್‌ ಟೂಲ್‌, ಜಪಾನ್ ಟೌನ್‌ಶಿಪ್‌, ಎಂಎಸ್‌ಎಂಇ ಕೇಂದ್ರ, ಗುಬ್ಬಿ ಸಮೀಪ ನಿರ್ಮಾಣವಾಗುತ್ತಿರುವ ಎಚ್ಎಎಲ್‌ನ ಲಘು ಯುದ್ಧ ವಿಮಾನ ಕಾರ್ಖಾನೆ, ಹಳೆಯ ಎಚ್‌ಎಂಟಿ ಜಾಗದಲ್ಲಿ ತಲೆ ಎತ್ತುತ್ತಿರುವ ಇಸ್ರೋ ಬಾಹ್ಯಾಕಾಶ ಕೇಂದ್ರ ಮುಂತಾದ ಯೋಜನೆಗಳ ಕಾರಣದಿಂದಾಗಿ ತುಮಕೂರಿನಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಹುಲುಸಾಗಿ ಬೆಳೆಯಲಿದೆ ಎಂದು ಎಲ್ಲರೂ ಕನಸು ಕಂಡಿದ್ದರು.

ಷೇರು ಮಾರುಕಟ್ಟೆಯ ಅಸ್ಥಿರತೆ ಮತ್ತು ಚಿನ್ನವು ಮೌಲ್ಯ ಕಳೆದುಕೊಂಡ ಕಾರಣ ಅನೇಕರು ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಆರಂಭಿಸಲು ಕಾರಣವಾಗಿತ್ತು. ಇದೇ ಕಾರಣದಿಂದ ತುಮಕೂರು ನಗರದ ಸುತ್ತಮುತ್ತ ರಿಯಲ್‌ ಎಸ್ಟೇಟ್‌ ಚಟುವಟಿಕೆ ಹೆಚ್ಚಾಗಿದ್ದವು. ಭೂಮಿಗೂ ಉತ್ತಮ ಮೌಲ್ಯ ಬಂದಿತ್ತು. ಆದರೆ ನೋಟು ರದ್ಧತಿಯ ನಂತರ ವಾತಾವರಣ ಬದಲಾಯಿತು. ವಹಿವಾಟು ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಯಿತು.

ವಹಿವಾಟು ಕಡಿಮೆಯಾದರೂ ನಿವೇಶನ ಮತ್ತು ಮನೆಗಳ ಬೆಲೆಗಳು ಕುಸಿದಿಲ್ಲ. ಬೆಲೆ ಕುಸಿತದ ಕಾರಣ ನಿವೇಶನ ಮತ್ತು ಮನೆಗಳನ್ನು ಮಾರಲು ಮಾಲೀಕರು ಮುಂದಾಗುತ್ತಿಲ್ಲ. 'ಕೊಳ್ಳಲು ಜನರಿದ್ದಾರೆ. ಆದರೆ ಮಾರಲು ಯಾರೂ ಸಿದ್ಧರಿಲ್ಲ' ಎನ್ನುವುದು ಅನೇಕ ರಿಯಲ್‌ ಎಸ್ಟೇಟ್ ಏಜೆಂಟರ ಮಾತು.

'ಹೂಡಿಕೆಗೆ ನಿವೇಶನ ಖರೀದಿಸುತ್ತಿದ್ದವರು ಒಬ್ಬೊಬ್ಬರೇ 10-15 ನಿವೇಶನಗಳನ್ನು ಖರೀದಿಸಿದ್ದೂ ಇದೆ. ಆದರೆ ನೋಟು ಅಮಾನ್ಯವಾದ ನಂತರ ಹೂಡಿಕೆಗಾಗಿ ಕೊಳ್ಳುವವರು ಹಿಂಜರಿಯುತ್ತಿದ್ದಾರೆ. ಎಲ್ಲವೂ ಚೆಕ್‌ ಮೂಲಕ ಹಣ ಪಾವತಿಯಾಗಬೇಕು ಎಂಬ ನಿಯಮವೂ ಉದ್ಯಮ ಕಳಾಹೀನವಾಗಲು ಮತ್ತೊಂದು ಕಾರಣವಾಗಿದೆ. ತೀರಾ ಅನಿವಾರ್ಯತೆಗೆ ಸಿಲುಕಿದವರೂ ತುಸು ಬೆಲೆ ಇಳಿಕೆ ಮಾಡಿ ಸೈಟುಗಳನ್ನು ಮಾರಾಟ ಮಾಡುತ್ತಿದ್ದಾರೆ. ಉಳಿದಂತೆ ಯಾರೂ ಸಹ ಮಾರುತ್ತಿಲ್ಲ, ಅದೇ ರೀತಿ ಕೊಳ್ಳುವವರೂ ಇಲ್ಲ. ಒಂದು ರೀತಿಯ ಸ್ಥಗಿತತೆಯ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ನಿವೇಶನಗಳ ಬೆಲೆ ಏರಿಕೆಗೆ ಕಡಿವಾಣ ಬಿದ್ದಿದೆ. ಕೆಲ ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯೂ ಆಗಿದೆ' ಎನ್ನುವುದು ಸಾರಾ ಬಿಲ್ಡರ್ಸ್‌ನ ಚಂದ್ರಶೇಖರ್‌ ಅವರ ಮಾತು.

'ತುಮಕೂರಿನಲ್ಲಿ ಲ್ಯಾಂಡ್ ಬ್ಯಾಂಕ್ ಇಲ್ಲ. ಹೀಗಾಗಿ ದೊಡ್ಡ ರಿಯಲ್‌ ಎಸ್ಟೇಟ್‌ ಕಂಪೆನಿಯವರು ಹೂಡಿಕೆ ಆರಂಭಿಸಿಲ್ಲ. ಇಲ್ಲಿ ಇನ್ನೂ ಅಪಾರ್ಟ್‌ಮೆಂಟ್ ಸಂಸ್ಕೃತಿ ಬೆಳೆದಿಲ್ಲ. ನಗರ ಸುತ್ತಮುತ್ತ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವವರ ಪೈಕಿ ಶೇ 30ರಷ್ಟು ಜನರು ಬೆಂಗಳೂರಿಗರು, ಶೇ 30ರಷ್ಟು ಮಂದಿ ತುಮಕೂರು ಜಿಲ್ಲೆಯ ಇತರ ತಾಲ್ಲೂಕುಗಳವರು, ಶೇ 40ರಷ್ಟು ಮಂದಿ ಇತರ ಜಿಲ್ಲೆಗಳವರು' ಎನ್ನುವುದು ರಿಯಲ್‌ ಎಸ್ಟೇಟ್‌ ಉದ್ಯಮಿ ಚಿದಾನಂದ್‌ ಅವರು ಕೊಟ್ಟ ಮಾಹಿತಿ.

'ಈ ಹಿಂದೆ ತುಮಕೂರು ಕೈಗಾರಿಕಾ ನಗರಿ ಆಗುವ ನಿರೀಕ್ಷೆ ಹುಟ್ಟುಹಾಕಿತ್ತು. ಹೀಗಾಗಿಯೇ ಜನರು ಇಲ್ಲಿ ನಿವೇಶನ ಖರೀದಿಸಲು ಹಾತೊರೆಯುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಿವೇಶನ ಖರೀದಿಸಲು ಎಲ್ಲರೂ ಹಿಂಜರಿಯುತ್ತಿದ್ದಾರೆ' ಎನ್ನುವುದು ಅವರ ಅನುಭವದ ಮಾತು.

‘ಬೆಂಗಳೂರಿಗೆ ಹೋಲಿಸಿಕೊಂಡರೆ ತುಮಕೂರಿನ ವಹಿವಾಟು ಚೆನ್ನಾಗಿಯೇ ಇದೆ. ಬೆಂಗಳೂರಿನಷ್ಟು ಸಂಕೀರ್ಣತೆ- ಅಪನಂಬಿಕೆ ಇಲ್ಲಿ ಇಲ್ಲ. ಹೀಗಾಗಿಯೇ ವಹಿವಾಟಿನ ಪ್ರಮಾಣ ಬೆಂಗಳೂರಿಗೆ ಹೋಲಿಸಿದರೆ ಹೆಚ್ಚು. ಆದರೆ ವಹಿವಾಟಿನ ಗಾತ್ರ ಮೊದಲಿಗಿಂತ ಕಡಿಮೆಯಾಗಿದೆ' ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಉದ್ಯಮಿ ಅಶೋಕ್‌.

ಮತ್ತೋರ್ವ ರಿಯಲ್‌ ಎಸ್ಟೇಟ್ ಉದ್ಯಮಿ ಲೋಕೇಶ್ ಸಹ ಇದೇ ಅಭಿಪ್ರಾಯವನ್ನು ಪುಷ್ಟೀಕರಿಸಿದರು. ‘ಬೆಂಗಳೂರು–ಮುಂಬೈ ಕೈಗಾರಿಕಾ ಹಾಗೂ ಆರ್ಥಿಕ ಕಾರಿಡಾರ್‌ಗಳು ಹಾದು ಹೋಗುವ ತುಮಕೂರಿಗೆ ಮುಂದೊಂದು ದಿನ ಬೆಂಗಳೂರಿನಿಂದ ಮೆಟ್ರೊ ಸಂಪರ್ಕ ಸಿಗಬಹುದು ಎಂಬ ಭರವಸೆ ಮತ್ತು ಹೇಮಾವತಿ ನೀರು ಇರುವುದರಿಂದ ಕುಡಿಯುವ ನೀರಿಗೆ ಎಂದಿಗೂ ಸಮಸ್ಯೆಯಾಗದು ಭರವಸೆ ತುಮಕೂರಿನಲ್ಲಿ ರಿಯಲ್‌ ಎಸ್ಟೇಟ್‌ ಹೂಡಿಕೆಗೆ ಮಹತ್ವದ ಕಾರಣಗಳಾಗಿದ್ದವು. ಆದರೆ ಈಗ ಈ ಅಂಶಗಳು ಕೆಲಸಕ್ಕೆ ಬರುತ್ತಿಲ್ಲ. ಹೂಡಿಕೆಗಾಗಿ ನಿವೇಶನ ಕೊಳ್ಳುವವರ  ಸಂಖ್ಯೆ ಕಡಿಮೆಯಾಗಿದೆ’ ಎನ್ನುವುದು ಅವರ ವಿಶ್ಲೇಷಣೆ.

ಸದ್ಯ, ವಹಿವಾಟು ಕುಸಿತ ಕಂಡರೂ ನಿರಾಶದಾಯಕ ಸ್ಥಿತಿ ಕಾಣುತ್ತಿಲ್ಲ. ಕೆಲವೇ ವರ್ಷಗಳಲ್ಲಿ ಉದ್ಯಮ ಪುಟಿದೇಳಲಿದೆ ಎಂಬ ಆಶಾಭಾವನೆ ಹಲವರಲ್ಲಿ ವ್ಯಕ್ತವಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ತುಮಕೂರು ಹೊರವಲಯದ ವಸಂತನರಾಪುರದಲ್ಲಿ ನಿಮ್ಜ್‌ ಪೂರ್ಣ ಪ್ರಮಾಣದಲ್ಲಿ ತಲೆ ಎತ್ತಲಿದೆ. ಇದರಿಂದ ಕಡಿಮೆ ಎಂದರೂ ಸುಮಾರು 4 ಲಕ್ಷ ಜನರು ನಗರಕ್ಕೆ ವಲಸೆ ಬರುವ ಸಾಧ್ಯತೆ ಇದೆ. ಇವರ ಪೈಕಿ ಶೇ 20ರಷ್ಟು ಮಂದಿ ನಿವೇಶನಕೊಂಡರೂ ಉದ್ಯಮ ಚೇತರಿಸಿಕೊಳ್ಳುತ್ತದೆ ಎಂಬ ಸಮಾಧಾನದ ಮಾತುಗಳೂ ರಿಯಲ್‌ ಎಸ್ಟೇಟ್ ವಲಯದಲ್ಲಿ ಕೇಳಿ ಬರುತ್ತಿವೆ.

*


ಬೆಂಗಳೂರಿಗೆ ಹೋಲಿಸಿಕೊಂಡರೆ ತುಮಕೂರಿನ ಸ್ಥಿತಿ ಚೆನ್ನಾಗಿದೆ. ಬ್ಯಾಂಕ್ ಬಡ್ಡಿ ದರ ಕಡಿಮೆ ಇರುವುದರಿಂದ ಮಧ್ಯಮ ಬೆಲೆಯ ನಿವೇಶನಗಳ ಮಾರಾಟ ಸಮಸ್ಯೆಯಾಗಿಲ್ಲ. ಆದರೆ ₹ 40ರಿಂದ₹ 50 ಲಕ್ಷ ಬೆಲೆಯ ನಿವೇಶನಗಳ ಮಾರಾಟ ತೀರಾ ಕಡಿಮೆಯಾಗಿದೆ.
–ಆಶೋಕ್‌, ರಿಯಲ್ ಎಸ್ಟೇಟ್ ಉದ್ಯಮಿ

*


ನಮ್ಮ ರಿಯಲ್‌ ಎಸ್ಟೇಟ್‌ ಉದ್ಯಮದಿಂದ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಬೆಂಗಳೂರಿಗೆ ಹೋಲಿಸಿದರೆ ಭೂಮಿ ಕಡಿಮೆ ಬೆಲೆಗೆ ಸಿಗುತ್ತಿದೆ. ಬೆಲೆಯಲ್ಲಿ ಗಮನಾರ್ಹ ಪ್ರಮಾಣದ ಹೆಚ್ಚಳ ಕಾಣಿಸಿಲ್ಲ. ಹಾಗೆಂದು ವಹಿವಾಟಿನಲ್ಲಿ ಭಾರೀ ಇಳಿಕೆಯೂ ಕಂಡು ಬಂದಿಲ್ಲ. ಕೆಲವೇ ವರ್ಷಗಳಲ್ಲಿ ಉದ್ಯಮ ಚೇತರಿಸಿಕೊಳ್ಳಲಿದೆ.
–ಚಿದಾನಂದ, ರಿಯಲ್ ಎಸ್ಟೇಟ್ ಹೂಡಿಕೆದಾರರು

*
ತುಮಕೂರಿನಲ್ಲಿ ರಿಯಲ್‌ ಎಸ್ಟೇಟ್ ವಹಿವಾಟು ಪೂರಾ ಕಡಿಮೆಯಾಗಿದೆ. ಗಗನಕ್ಕೇರಿದ್ದ ಬೆಲೆ ನೆಲ ಮುಟ್ಟಿದೆ. ನಿವೇಶನಗಳನ್ನು ಕೊಳ್ಳಲು ಜನರು ಹೆದರುತ್ತಿದ್ದಾರೆ. ಹೀಗಾಗಿ ವಹಿವಾಟ ನಿಂತಿದೆ.
–ಚಂದ್ರಶೇಖರ್‌, ರಿಯಲ್‌ ಎಸ್ಟೇಟ್ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT