ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷದಿಂದ ಸಮಗ್ರ ಆರೋಗ್ಯ ನೀತಿ

ಕೇಂದ್ರ ಪ್ರವಾಸೋದ್ಯಮ ಇಲಾಖೆ ಪ್ರಧಾನ ನಿರ್ದೇಶಕ ಸತ್ಯಜಿತ್‌ ರಾಜನ್‌ ಹೇಳಿಕೆ
Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರದ ಸಮಗ್ರ ಆರೋಗ್ಯ ನೀತಿ ಅತ್ಯುತ್ತಮವಾಗಿದೆ. ಇದೇ ಮಾದರಿಯಲ್ಲಿ ವೈದ್ಯಕೀಯ ಪ್ರವಾಸೋದ್ಯಮ ಉತ್ತೇಜಿಸುವ ಆರೋಗ್ಯ ನೀತಿಯನ್ನು ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ದೇಶದಾದ್ಯಂತ ಜಾರಿಗೊಳಿಸಲಿದೆ’ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಸತ್ಯಜಿತ್‌ ರಾಜನ್‌ ತಿಳಿಸಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಎಫ್‌ಐಸಿಸಿಐ, ಸರ್ವಿಸ್‌ ಎಕ್ಸ್‌ಪೋರ್ಟ್‌ ಪ್ರಮೋಷನ್‌ ಕೌನ್ಸಿಲ್‌ (ಸಿಇಪಿಸಿ) ವತಿಯಿಂದ ನಗರದಲ್ಲಿ ಗುರುವಾರ ಆರಂಭವಾದ ‘ಅಡ್ವಾಂಟೇಜ್‌ ಹೆಲ್ತ್‌ಕೇರ್‌ ಇಂಡಿಯಾ’ 3ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಇ–ವೈದ್ಯಕೀಯ ವೀಸಾ ಕೂಡ ಸರಳಗೊಳಿಸಿದ್ದು, 60 ದಿನಗಳಿಂದ 6 ತಿಂಗಳವರೆಗೂ ವೀಸಾ ಅವಧಿ ವಿಸ್ತರಿಸುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಜನವರಿಯೊಳಗೆ ಬೆಂಗಳೂರು, ಚೆನ್ನೈ, ಕೋಲ್ಕತ್ತ, ದೆಹಲಿ, ಗೋವಾ, ಹೈದರಾಬಾದ್‌ನಲ್ಲಿ ಇ–ವೈದ್ಯಕೀಯ ವೀಸಾ ಪಡೆಯುವ ಸೌಲಭ್ಯ ದೊರೆಯಲಿದೆ’ ಎಂದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ರೀಟಾ ಟಿಯೋಟಿಯಾ ಮಾತನಾಡಿ, ‘ಎಲ್ಲ ನಾಗರಿಕರಿಗೂ ಆರೋಗ್ಯ ಸೇವೆ ಒದಗಿಸುವುದು ಅತ್ಯಂತ ದೊಡ್ಡ ಸವಾಲಿನ ಕೆಲಸ. ನಮ್ಮಲ್ಲಿ ಅತ್ಯುತ್ತಮ ವೈದ್ಯರು, ನರ್ಸ್‌ಗಳು, ಆರೋಗ್ಯ ಸೌಲಭ್ಯಗಳು ಇದ್ದರೂ ಅದು ಗ್ರಾಮೀಣ ಜನರಿಗೆ ಸರಿಯಾಗಿ ದೊರಕುತ್ತಿಲ್ಲ. ರಾಜ್ಯ ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮಾತನಾಡಿ, ‘ಆಯುರ್ವೇದ, ಯುನಾನಿ, ಸಿದ್ಧ, ಯೋಗ, ಹೋಮಿಯೋಪಥಿ ಚಿಕಿತ್ಸಾ ಪದ್ಧತಿ ಅತ್ಯಂತ ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ. ಅಲೋಪಥಿ ಜತೆಗೆ ಆಯುಷ್‌ ಸಂಯೋಜಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.

ಸೇವಾ ರಫ್ತು ಉತ್ತೇಜನಾ ಮಂಡಳಿಯ (ಸರ್ವೀಸ್ ಎಕ್ಸ್‌ಪೋರ್ಟ್ ಪ್ರಮೋಶನ್ ಕೌನ್ಸಿಲ್) ಪ್ರಧಾನ ನಿರ್ದೇಶಕಿ ಸಂಗೀತ ಗೋಡಬೊಲೆ ಮಾತನಾಡಿ, ‘ಆರೋಗ್ಯ ಸೌಲಭ್ಯಗಳ ಮಾಹಿತಿಯನ್ನು ಪ್ರಮುಖ ದೇಶಗಳಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲೇ ಒದಗಿಸಲು ‘ಹೆಲ್ತ್‌ ಕೇರ್‌ ಪೋರ್ಟಲ್‌’ ಆರಂಭಿಸಲಾಗಿದೆ. ಅರೇಬಿಕ್‌, ರಷ್ಯನ್‌ ಮತ್ತು ಫ್ರೆಂಚ್‌ ಭಾಷೆಯಲ್ಲಿ ಹೊರತಂದಿರುವ ಪೋರ್ಟಲ್‌ಗೂ ಉತ್ತಮ ಸ್ಪಂದನೆ ಸಿಕ್ಕಿದೆ’ ಎಂದರು.

*
ಆರೋಗ್ಯ ಕ್ಷೇತ್ರದಲ್ಲಿ ನಮ್ಮ ದೇಶ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ. ಜಗತ್ತಿನಲ್ಲೇ ಅತ್ಯುತ್ತಮ ದರ್ಜೆಯ ವೈದ್ಯರು ನಮ್ಮಲ್ಲಿ ಇದ್ದು, ಆರೋಗ್ಯ ಸೇವೆ ಸಂಪರ್ಕಜಾಲವೂ ವೃದ್ಧಿಸುತ್ತಿದೆ.
–ಗೌರವ್‌ ಗುಪ್ತ , ಐ.ಟಿ ಬಿ.ಟಿ ಇಲಾಖೆ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT