ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಟ್ಟಣದ ಅಭಿವೃದ್ಧಿಗೆ ₹ 5 ಕೋಟಿ ವಿಶೇಷ ಅನುದಾನ’

Last Updated 13 ಅಕ್ಟೋಬರ್ 2017, 5:03 IST
ಅಕ್ಷರ ಗಾತ್ರ

ರಾಮದುರ್ಗ: ರಾಜ್ಯ ಹಣಕಾಸು ನಿಗಮದಿಂದ ಪಟ್ಟಣಕ್ಕೆ ದೊರೆತಿರುವ ₹ 5 ಕೋಟಿ ವಿಶೇಷ ಅನುದಾನದಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ರಾಜು ಮಾನೆ ತಿಳಿಸಿದರು. ಗುರುವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿ, ‘ಅಗತ್ಯವಿರುವ ವಾರ್ಡ್‌ಗಳಿಗೆ ಆದ್ಯತೆ ಮೇರೆಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು’ ಎಂದರು.

‘ಸ್ಮಶಾನ ಅಭಿವೃದ್ಧಿ, ನಗರೋತ್ಥಾನ ಯೋಜನೆಯಲ್ಲಿ ನಿರ್ಮಿಸಿದ ರಸ್ತೆಗಳ ಪಕ್ಕದಲ್ಲಿ ಟೈಲ್ಸ್ ಅಳವಡಿಸುವುದು, 24X7 ನೀರು ಪೂರೈಕೆಯ ಪೈಪ್‌ಲೈನ್ ಅಳವಡಿಕೆಗೆ ಹಣ ಕಾಯ್ದಿರಿಸಲಾಗುವುದು. ಉಳಿದ ಹಣವನ್ನು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಹಂಚಲಾಗುವುದು’ ಎಂದು ಮಾಹಿತಿ ನೀಡಿದರು.

‘ತಗ್ಗು ಪ್ರದೇಶವಾದ ಅಂಬೇಡ್ಕರ್‌ ನಗರ ಮತ್ತು ಉಳಿದ ಕಡೆಗಳಲ್ಲಿ ಭಾರಿ ಮಳೆಯಾದರೆ ಮನೆಗಳಿಗೆ ನೀರು ನುಗ್ಗುತ್ತದೆ. ಆಂಜನೇಯ ನಗರ, ಸಾಯಿನಗರದಿಂದ ಮಳೆ ನೀರು ಹರಿದು ಅಂಬೇಡ್ಕರ್‌ ನಗರದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲಿ ತಡೆಗೋಡೆ ನಿರ್ಮಿಸಬೇಕು’ ಎಂದು ಸದಸ್ಯ ಬಸವರಾಜ ಮಾದರ ಆಗ್ರಹಿಸಿದರು.

‘ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿಯೂ ಮಹಿಳೆಯರ ಶೌಚಾಲಯಗಳನ್ನು ನಿರ್ಮಿಸಬೇಕು. ವಾರ್ಡ್ ನಂ. 20ರಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಚುನಾಯಿತ ಸದಸ್ಯರು ಅವರ ವಾರ್ಡುಗಳಲ್ಲಿ ಓಡಾಡುವ ಸ್ಥಿತಿ ಇಲ್ಲ. ಅಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ವಿರೋಧ ಪಕ್ಷದ ಸದಸ್ಯ ತುಕಾರಾಮ ಬಲಕುಂದಿ ಒತ್ತಾಯಿಸಿದರು.

‘ವಾರ್ಡ್ ನಂ. 7ರಲ್ಲಿ ನೂರೊಂದು ಪತ್ರಿ ಗಿಡದ ಪಕ್ಕದಲ್ಲಿದ್ದ ಮಹಿಳಾ ಶೌಚಾಲಯ ನೆಲಸಮಗೊಳಿಸಿ ನೂತನವಾಗಿ ನಿರ್ಮಿಸಲು ಅಲ್ಲಿನ ಕೆಲವರು ಅಡೆತಡೆ ಮಾಡುತ್ತಿದ್ದಾರೆ. ಅಲ್ಲಿ ಶೌಚಾಲಯ ಮರು ನಿರ್ಮಾಣ ಮಾಡಬೇಕು’ ಎಂದು ಸದಸ್ಯ ಮಹೇಶ ಬಡಿಗೇರ ಹೇಳಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಮತ್ತು ಬಸವೇಶ್ವರರ ಮೂರ್ತಿಗಳನ್ನು ಸಾರ್ವಜನಿಕರ ಸಲಹೆಯಂತೆ ಪುರಸಭೆಯ ಜಾಗ ಗುರುತಿಸಿ ಪ್ರತಿಷ್ಠಾಪಿಸಲು ನಿರ್ಣಯಿಸಲಾಯಿತು.
ಉಪಾಧ್ಯಕ್ಷೆ ಹಜರಾಬಿ ಬೆಣ್ಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗಂಗಮ್ಮ ಬಾಳಿಕಾಯಿ, ಮುಖ್ಯಾಧಿಕಾರಿ ವಿಶ್ವನಾಥ ಸೊಗಲದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT