ವಿದೇಶಿ ಮನಸ್ಸಿನಲ್ಲಿ ಭಾರತೀಯ ಬಿಂಬ

ಶುಕ್ರವಾರ, ಮೇ 24, 2019
22 °C

ವಿದೇಶಿ ಮನಸ್ಸಿನಲ್ಲಿ ಭಾರತೀಯ ಬಿಂಬ

Published:
Updated:
ವಿದೇಶಿ ಮನಸ್ಸಿನಲ್ಲಿ ಭಾರತೀಯ ಬಿಂಬ

ಹಸಿರು ಭಿತ್ತಿಯ ಅಲ್ಲಲ್ಲಿ ಇಣುಕುವ ಸುಂದರ ಕೆತ್ತನೆಯ ಕಂಬಗಳು, ಆಕರ್ಷಕ ಮೆಟ್ಟಿಲು. ಅರಮನೆಯಂತೆ ಗೋಚರಿಸುವ ಆ ಮನೆಯಲ್ಲಿ ನಿಂತ ತರುಣಿಯದ್ದು ಅತರ್ಮುಖಿ ಭಾವ. ಹಸಿರು ಸೀರೆ ತೊಟ್ಟು ಕನ್ನಡಿಯತ್ತ ಬೆನ್ನು ಹಾಕಿ ಕುಳಿತ ಮಹಿಳೆಯನ್ನು ಅದಾವ ಭಾವ ಕಾಡುತ್ತಿರಬಹುದು ಕಾಲ ಬುಡದಲ್ಲಿ ಸರ್ಪ ಹೆಡೆ ಎತ್ತಿ ಬುಸುಗುಡುತ್ತಿದ್ದರೂ ಆಕೆಗೆ ಅತ್ತ ಅರಿವಿಲ್ಲ.

ಫ್ರಾನ್ಸ್‌ನ ಒಲಿಂಪೆ ಅವರ ಕಲಾಕುಂಚದಲ್ಲಿ ಮೂಡಿದ ಚಿತ್ರಗಳು ಅಭಿವ್ಯಕ್ತಿಸುವ ಭಾವಗಳಿವು. ಫ್ರಾನ್ಸ್‌ನಲ್ಲಿಯೇ ಹುಟ್ಟಿ ಬೆಳೆದ ಒಲಿಂಪೆ ಭಾರತೀಯ ಉದ್ಯಮಿಯನ್ನು ವರಿಸಿ ಭಾರತೀಯಳೇ ಆಗಿದ್ದಾರೆ. ಮೂರು ವರ್ಷಗಳಿಂದ ಅವರು ಇಲ್ಲಿಯೇ ನೆಲೆಸಿ ಬೆಂಗಳೂರಿಗರಾಗಿದ್ದಾರೆ.

ಫ್ರಾನ್ಸ್‌ನ ದಕ್ಷಿಣ ಭಾಗದ ನೊರ್ಮಾಂಡಿ ಎಂಬ ಊರು ಒಲಿಂಪೆ ಅವರದ್ದು. ಕಲಾ ಕುಟುಂಬದಲ್ಲಿಯೇ ಅವರು ಜನಿಸಿದ್ದು. ಅವರ ತಾಯಿ ಶಿಲ್ಪಿಯಾದರೆ, ತಂದೆ ವಸ್ತ್ರ ವಿನ್ಯಾಸಕರು. ಹೀಗಾಗಿ ಮನೆಯಲ್ಲಿದ್ದ ಕಲಾ ವಾತಾವರಣಕ್ಕೆ ಒಗ್ಗಿಕೊಳ್ಳುತ್ತ ಅವರೂ ಕಲಾದಾರಿಗೆ ತೆರೆದುಕೊಂಡರು.

‘ಚಿಕ್ಕಂದಿನಿಂದಲೂ ನಾನು ಚಿತ್ರಗಳ ಒಡನಾಟದಲ್ಲಿಯೇ ಬೆಳೆದೆ. ಕಣ್ಬಿಟ್ಟರೆ ಮನೆ ತುಂಬ ಚಿತ್ರಗಳೇ ಕಾಣುತ್ತಿದ್ದವು. ನಮ್ಮ ಮನೆಯೇ ನನಗೆ ಕಲಾ ಸಂಗ್ರಹಾಲಯದಂತೆ ಭಾಸವಾಗುತ್ತಿತ್ತು. ಅಮ್ಮ ಶಿಲ್ಪಿ. ಹೀಗಾಗಿ ಅವರು ಮಾಡುವ ಕೆಲಸಗಳಲ್ಲಿ ನನ್ನ ಹಸ್ತಕ್ಷೇಪವೂ ಇರುತ್ತಿತ್ತು. ಬಣ್ಣಗಳ ಸಾಂಗತ್ಯ ನನಗೆ ಖುಷಿ ನೀಡುತ್ತಿತ್ತು’ ಎನ್ನುತ್ತಾರೆ ಒಲಿಂಪೆ.

ಬಣ್ಣದ ಬಗೆಗೆ ವಿಶೇಷ ಅಭಿಮಾನವಿದ್ದ ಅವರ ಈ ಪಯಣಕ್ಕೆ ಸ್ಫೂರ್ತಿ ಹಾಗೂ ಗುರು ಎರಡೂ ಅಪ್ಪ ಅಮ್ಮನೇ. ವಿಶೇಷವಾಗಿ ಕಲಾ ಅಧ್ಯಯನವನ್ನು ಅವರು ಮಾಡಿಲ್ಲ. ಆದರೆ ತಾನು ಇಷ್ಟ ಪಡುವ ಕಲೆಯಲ್ಲಿ ಪರಿಣಿತಿ ಗಳಿಸಲು ಪ್ಯಾರಿಸ್‌ ಹಾಗೂ ಇಂಗ್ಲೆಂಡ್‌ನಲ್ಲಿ ಕೆಲ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.

(ಒಲಿಂಪೆ)

ಒಲಿಂಪೆ ಕಾನೂನು ಪದವೀಧರೆ. ಇಂಗ್ಲೆಂಡ್‌ ಹಾಗೂ ಫ್ರಾನ್ಸ್‌ನಲ್ಲಿ ಕೆಲ ವರ್ಷ ವಕೀಲೆಯಾಗಿಯೂ ಕೆಲಸ ಮಾಡಿದ್ದಾರೆ. ‘ಓದಿದ ಕ್ಷೇತ್ರದಲ್ಲಿ ಕೆಲಸವೂ ಸಿಕ್ಕಿತು. ಆದರೆ ನನ್ನ ಮನಸ್ಸಿಗೆ ಸಮಾಧಾನ ಇರಲಿಲ್ಲ. ನನ್ನಿಷ್ಟದ ದಾರಿ ಇದಲ್ಲ ಎಂದು ಮನಸ್ಸಿಗೆ ಕಿರಿಕಿರಿ ಪ್ರಾರಂಭವಾಯಿತು. ಬೇಸರವಾದಾಗಲೆಲ್ಲಾ ಕುಂಚ ಹಿಡಿದು ಚಿತ್ರ ಮೂಡಿಸುತ್ತಿದ್ದೆ. ಅದು ನನಗೆ ಎಷ್ಟೋ ಸಮಾಧಾನ ನೀಡುತ್ತಿತ್ತು. ಹೀಗಾಗಿ ವಕೀಲಿಕೆ ಬಿಟ್ಟು ಇದೇ ಕ್ಷೇತ್ರದಲ್ಲಿ ತೊಡಗಿಕೊಂಡೆ’ ಎನ್ನುವ ಒಲಿಂಪೆ ತಾಯಿಯೊಂದಿಗೆ ಕೆಲ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಇದೀಗ ನಗರದಲ್ಲಿಯೂ ತಮ್ಮ ಚಿತ್ರಕಲಾ ಸಿರಿಯನ್ನು ಪ್ರದರ್ಶಿ ಸಲು ಹೊರಟಿದ್ದಾರೆ ಒಲಿಂಪೆ. ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಚಿತ್ರಗಳ ಮೂಲಕ ಭಾರತದ ವರ್ಣವೈವಿಧ್ಯ, ಸಂಸ್ಕೃತಿ, ಪರಂಪ‍ರೆ, ವಸ್ತ್ರ ಶ್ರೀಮಂತಿಕೆ, ವಾಸ್ತುಶಿಲ್ಪ ಸೌಂದರ್ಯಗಳನ್ನು ಹೇಳಲಿದ್ದಾರೆ. ತಾನು ವಾಸಿಸುವ ಪರಿಸರ, ತನಗಾದ ಅನುಭವ, ವಿದೇಶದಿಂದ ಇಲ್ಲಿಗೆ ಬಂದಿರುವುದರಿಂದ ಕಾಡುವ ಏಕಾಂಗಿತನ, ನೋಡಿದ ಸ್ಥಳ, ಬದಲಾಗುವ ತನ್ನ ಭಾವನೆಗಳು... ಹೀಗೆ ಎಲ್ಲವನ್ನೂ ತಮ್ಮ ಚಿತ್ರಕ್ಕೆ ಸ್ಫೂರ್ತಿಯಾಗಿಸಿಕೊಳ್ಳುತ್ತಾರೆ ಅವರು.

‘ಒಂದೊಂದು ಚಿತ್ರಕ್ಕೂ ನಾನು ಒಂದು ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತೇನೆ. ಕೆಲವೊಮ್ಮೆ ಮನಸ್ಥಿತಿ ಬದಲಾದಂತೆ ಸಂಪೂರ್ಣ ಚಿತ್ರವನ್ನೂ ಬದಲಾಯಿಸಿದ್ದಿದೆ. ಭಾರತಕ್ಕೆ ಬಂದಮೇಲೆ ನನ್ನ ಏಕಾಂತವನ್ನು ಹೋಗಲಾಡಿಸುವ ಉತ್ತಮ ಸ್ನೇಹಿತ ಚಿತ್ರಕಲೆಯೇ ಆಗಿದೆ. ಈ ಪ್ರದರ್ಶನದಲ್ಲಿ ವಿವಿಧ ಭಾವಲಹರಿಯ 16 ಚಿತ್ರಗಳು ಪ್ರದರ್ಶನದಲ್ಲಿರಲಿವೆ’ ಎನ್ನುತ್ತಾರೆ ಒಲಿಂಪೆ.

ಫಿಗರೇಟಿವ್‌ ಚಿತ್ರಗಳನ್ನೇ ಹೆಚ್ಚಾಗಿ ಮೂಡಿಸುವ ಅವರು ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಾರೆ. ಚಿತ್ರಗಳೂ ಮಹಿಳಾ ಪ್ರಧಾನವಾಗಿಯೇ ಇರುತ್ತವೆ. ನೀಲಿ ಬಣ್ಣವನ್ನು ಹೆಚ್ಚು ಇಷ್ಟ ಪಡುವ ಅವರು ‘ಚಿತ್ರ ಮೂಡಿಸುವುದಷ್ಟೇ ಕಲಾವಿದನ ಕೆಲಸ. ಕಲಾಸಕ್ತರು ಅವರ ಮನೋಭಾವಕ್ಕೆ ತಕ್ಕಂತೆ ವಿಧವಿಧವಾಗಿ ಅರ್ಥೈಸಿಕೊಂಡಾಗಲೇ ಸಾರ್ಥಕತೆ ಸಿಗುತ್ತದೆ’ ಎನ್ನುವ ಭಾವಕ್ಕೆ ಬದ್ಧರಾದವರು.

**

ಒಲಿಂಪೆ ಥಾಮಸ್‌ ಲೊಮೊಟೆ ಕಲ್ಪನಾ ಲಹರಿಯಲ್ಲಿ ಮೂಡಿದ ಚಿತ್ರಗಳ ‘ಇಂಡಿಯನ್‌ ಸಮ್ಮರ್‌’ ಕಲಾ ಪ್ರದರ್ಶನ ಅಕ್ಟೋಬರ್‌ 14ರಿಂದ ಅಕ್ಟೋಬರ್‌ 30ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ವೀಕ್ಷಣೆಗೆ ಅವಕಾಶವಿದೆ. ಅಕ್ಟೋಬರ್‌ 13ರ ಸಂಜೆ 7ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಫ್ರಾನ್ಸ್‌ನ ಕಾನ್ಸುಲ್‌ ಜನರಲ್‌ ಫ್ರಾಕೈಸ್‌ ಗಾಯ್ಟಿಯರ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಥಳ– ನವರತನ್‌ ಆಂಟಿಕ್‌ ಆರ್ಟ್‌, ಗ್ಯಾಲರಿ 9, ನಂ 39, ಒಂದನೇ ಮಹಡಿ, ಯುನೈಟೆಡ್‌ ಮ್ಯಾನ್ಶನ್‌, ಎಂ.ಜಿ.ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry