ಗ್ಯಾಸ್ ಗೀಸರ್; ಇರಲಿ ಎಚ್ಚರ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಗ್ಯಾಸ್ ಗೀಸರ್; ಇರಲಿ ಎಚ್ಚರ

Published:
Updated:
ಗ್ಯಾಸ್ ಗೀಸರ್; ಇರಲಿ ಎಚ್ಚರ

ಗ್ಯಾಸ್ ಗೀಸರ್ ಈಗ ನೀರು ಕಾಯಿಸುವ ಕೈಗೆಟುಕುವ ಸಾಧನವಾಗಿದೆ. ಮಿತ ವ್ಯಯ, ಸುಲಭವಾಗಿ ಕಾರ್ಯನಿರ್ವಹಿಸುವ ವಿಧಾನದಿಂದ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ವಿದ್ಯುತ್ ಗೀಸರ್ ಆದರೆ ವಿದ್ಯುತ್ ಬಿಲ್ ದುಬಾರಿಯಾಗುತ್ತದೆ. ವಿದ್ಯುತ್ ಇಲ್ಲದೇ ಇದ್ದರೆ ಬಿಸಿ ನೀರು ಸಿಗುವುದಿಲ್ಲ. ಜತೆಗೆ, ಒಂದಿಷ್ಟು ಹೊತ್ತು ನೀರು ಬಿಸಿಯಾಗುವವರೆಗೂ ಕಾಯಬೇಕು. ಕಟ್ಟಿಗೆ ಒಲೆಯಂತೂ ನಗರದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಮರೆಯಾಗಿದೆ. ಇಂತಹ ಹೊತ್ತಿನಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ದಕ್ಕುವುದು ಗ್ಯಾಸ್ ಗೀಸರ್.

ಇದರ ಬೆಲೆಯೂ ಅಷ್ಟೇನೂ ದುಬಾರಿಯಲ್ಲ. ಗ್ಯಾಸ್ ಸಿಲಿಂಡರ್ ಇದ್ದರೆ ಆಯಿತು. ಬೇಕು ಎಂದಾಕ್ಷಣ ಬಿಸಿ ನೀರು ಲಭ್ಯ. ಅಡುಗೆ ಅನಿಲವಾದರಂತೂ ತೀರಾ ಅಗ್ಗ. ನೀರು ಕಾಯಿಸುವ ಉಳಿದೆಲ್ಲವುಗಳಿಗಿಂತ ಇದು ಸುಲಲಿತ. ಇದರಿಂದಾಗಿಯೇ ಜನರು ಇದರತ್ತ ವಾಲತೊಡಗಿದ್ದಾರೆ.

ಇದರಿಂದ ಬಿಸಿ ನೀರು ಬೇಗ ಲಭ್ಯವಾಗುತ್ತದೆ ಹಾಗೂ ಅಗ್ಗ ಎಂಬುದೇನೋ ನಿಜ. ಆದರೆ, ಸಮರ್ಪಕವಾಗಿ ಬಳಸದೇ ಸ್ವಲ್ಪವೇ ಯಾಮಾರಿದರೂ ಸಾವು ಕಟ್ಟಿಟ್ಟ ಬುತ್ತಿ. ಬದುಕಿ ಉಳಿಯುವ ಸಾಧ್ಯತೆಯಂತೂ ತೀರಾ ಕ್ಷೀಣ. ಮೊನ್ನೆಯಷ್ಟೇ ಇದರಿಂದ ಹೊರ ಹೊಮ್ಮುವ ಕಾರ್ಬಾನ್ ಮಾನಾಕ್ಸೈಡ್‌ ಸೇವಿಸಿ ಯುವತಿಯೊಬ್ಬರು ನಗರದ ಖಾಸಗಿ ಪಿ.ಜಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಗ್ಯಾಸ್ ಗೀಸರ್ ಬಳಸುವವರಿಗೆ ಎಚ್ಚರಿಕೆ ಘಂಟೆಯಾಗಿದೆ.

ಏನಿದು ಅಪಾಯ: ಗ್ಯಾಸ್ ಗೀಸರ್‌ ಗೆ ಇಂಧನವಾಗಿ ಬಳಕೆಯಾಗುವುದು ಎಲ್‌.ಪಿ.ಜಿ. ಇದು ಆಮ್ಲಜನಕ ಹೆಚ್ಚಾಗಿರುವ ಕಡೆ ಉರಿದು ಕಾರ್ಬನ್ ಡೈ ಆಕ್ಸೈಡ್ ಆಗುತ್ತದೆ. ಆದರೆ, ಆಮ್ಲಜನಕದ ಕೊರತೆಯಾದರೆ ಮಾತ್ರ ಇದು ಪೂರ್ಣವಾಗಿ ಉರಿಯದೇ ಕಾರ್ಬನ್ ಮಾನಾಕ್ಸೈಡ್ ಆಗಿ ವಿಷಕಾರಿಯಾಗುತ್ತದೆ. ಇದನ್ನು ಸೇವಿಸಿದರೆ ಸಾವು ಖಚಿತ. ಉತ್ತಮವಾಗಿ ಗಾಳಿ ಆಡುವ ವ್ಯವಸ್ಥೆ ಇಲ್ಲದಿದ್ದರಂತೂ ಈ ಸಾಧ್ಯತೆ ಹೆಚ್ಚು. ವಿಚಿತ್ರ ಎಂದರೆ ಈ ವಿಷಾನಿಲಕ್ಕೆ ಯಾವುದೇ ವಾಸನೆಯಾಗಲಿ, ಬಣ್ಣವಾಗಲಿ ಇಲ್ಲ. ಇದರಿಂದ ಇದು ಹೊರಹೊಮ್ಮುತ್ತಿದೆ ಎಂದು ತಿಳಿಯುವುದೇ ಇಲ್ಲ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಸಾಕು ಅಪಾಯ ಕಟ್ಟಿಟ್ಟ ಬುತ್ತಿ.

ಅಪಾಯಗಳೇನು?: ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಆಯಾಸ, ತಲೆನೋವು, ತಲೆಸುತ್ತು, ಗಲಿಬಿಲಿ, ಫಿಟ್ಸ್, ಮರೆಗುಳಿತನ ಬರುತ್ತದೆ. ಗರ್ಭಿಣಿಯರ ಭ್ರೂಣದ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಕಿಟಿಕಿ ಮುಚ್ಚಿ ದೀರ್ಘಕಾಲ ಸ್ನಾನ ಮಾಡಿದ ತರುವಾಯ ಸುಮಾರು 30 ನಿಮಿಷಗಳವರೆಗೆ ಅಸಂಬದ್ದ ಮಾತುಗಳನ್ನು ಆಡುತ್ತಾರೆ. ದಿನವೂ ಸ್ವಲ್ಪ ಸ್ವಲ್ಪವೇ ವಿಷಕಾರಿ ಅನಿಲವನ್ನು ಸೇವಿಸುತ್ತಿದ್ದಂತೆ ದೀರ್ಘಕಾಲೀಕವಾದ ನರರೋಗಗಳೂ ಬರುತ್ತವೆ. ಮತಿಭ್ರಮಣೆಯುಂಟಾಗುತ್ತದೆ. ಒಂದು ವೇಳೆ ಹೆಚ್ಚಾಗಿ ಸೇವಿಸಿದರೆ ಸಾವು ಸಂಭವಿಸುತ್ತದೆ.

ಮುನ್ನೆಚ್ಚರಿಕೆ ಏನು?: ಗ್ಯಾಸ್ ಗೀಸರ್ ಬಳಸುವ ಕೋಣೆಯಲ್ಲಿ ಆಮ್ಲಜನಕ ಆಡುವಷ್ಟು ವಿಶಾಲವಾದ ಕಿಟಕಿಗಳು ಇರಬೇಕು. ಗೀಜರ್ ಆನ್ ಮಾಡಿದಾಕ್ಷಣ ಕಿಟಕಿಗಳನ್ನು ತೆರೆಯಬೇಕು. ಯಾವುದೇ ಕಾರಣಕ್ಕೂ ಕಿಟಿಕಿ ಮುಚ್ಚಿ ಗ್ಯಾಸ್ ಗೀಸರ್‌ನ್ನು ಆನ್ ಮಾಡಬಾರದು. ಒಂದು ವೇಳೆ ಕಿಟಕಿ ಮುಚ್ಚಲೇ ಬೇಕು ಎನಿಸಿದರೆ ಸ್ನಾನಕ್ಕೂ ಮುಂಚೆಯೇ ಗ್ಯಾಸ್ ಗೀಸರ್ ನಿಂದ ಸಾಕಷ್ಟು ಪ್ರಮಾಣದಲ್ಲಿ ಬಿಸಿ ನೀರು ಸಂಗ್ರಹಿಸಬೇಕು. ಈ ವೇಳೆ ಕಿಟಕಿ ತೆರೆದಿರಬೇಕು.

ಪಿ.ಜಿ.ಗಳಲ್ಲೇ ಅಪಾಯ ಹೆಚ್ಚು: ಸ್ತ್ರೀಯರು ಇರುವ ಪಿ.ಜಿಗಳಲ್ಲೇ ಸಮಸ್ಯೆ ಹೆಚ್ಚಾಗಿ ಸೃಷ್ಟಿಯಾಗುತ್ತಿದೆ. ಸಾಮಾನ್ಯವಾಗಿ ಎಲ್ಲರೂ ಬೆಳಿಗ್ಗೆ ಹೊತ್ತು ಒಬ್ಬರ ಹಿಂದೆ ಒಬ್ಬರಂತೆ ಸ್ನಾನಕ್ಕೆ ತೆರಳುತ್ತಾರೆ. ಎಲ್ಲರೂ ಕಿಟಕಿ ಮುಚ್ಚಿಯೇ ಸ್ನಾನ ಮಾಡುವುದು ವಾಡಿಕೆ. ಇಂತಹ ಸಮಯದಲ್ಲಿ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಕಿಟಕಿ ಇಲ್ಲದಿರುವ ಮನೆಗಳಲ್ಲಿ ಗ್ಯಾಸ್ ಗೀಸರ್ ಬಳಸುವುದು ಅಪಾಯವನ್ನೂ ಮೈಮೇಲೆ ಎಳೆದುಕೊಂಡಂತೆಯೇ ಸರಿ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry