ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿಕೆ ಮಳೆಯಾದರೂ ತುಂಬದ ಕೆರೆಗಳು

Last Updated 13 ಅಕ್ಟೋಬರ್ 2017, 6:32 IST
ಅಕ್ಷರ ಗಾತ್ರ

ಸಂತೇಬೆನ್ನೂರು: ತಿಂಗಳಿನಿಂದ ನಿತ್ಯ ಮಳೆಯಾಗುತ್ತಿದೆ. ಇದರಿಂದಾಗಿ ಬೆಳೆಗಳು ಬದುಕಿಕೊಂಡವು. ಆದರೆ, ಕೆರೆ–ಕಟ್ಟೆಗಳು ತುಂಬಲಿಲ್ಲ. ಒಂದೆರಡು ಬಿರು ಮಳೆ ಬಿದ್ದರೆ ಮಾತ್ರ ಕೆರೆಗಳು ತುಂಬಲಿವೆ.

ಹೋಬಳಿಯ ಬಹುತೇಕ ಕೆರೆಗಳಿಗೆ ನಿರೀಕ್ಷೆಯಂತೆ ನೀರು ಹರಿದು ಬಂದಿಲ್ಲ. ನಿತ್ಯ ಗುಡುಗು ಸಹಿತ ಮಳೆ ಬಿದ್ದರೂ ಕೇವಲ ಒಂದು ಅಡಿಯಷ್ಟು ನೀರು ತಳಭಾಗದಲ್ಲಿ ನಿಂತಿದೆ. ಮೂರು ವರ್ಷಗಳಿಂದ ಹಿಂಗಾರು ಮಳೆ ಇಲ್ಲದೇ ಕೆರೆಗಳು ಭಣಗುಡುತ್ತಿದ್ದವು. ನೀರಿನ ಸೆಲೆಯೂ ಇಲ್ಲದೇ ದನಕರುಗಳಿಗೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು.

‘ಕಳೆದ ತಿಂಗಳಿನಿಂದ ಚುರುಕುಗೊಂಡ ಹಿಂಗಾರು ಮಳೆ ಭರವಸೆ ಮೂಡಿಸಿದೆ. ಹವಾಮಾನ ಮುನ್ಸೂಚನೆಯಂತೆ ದೊಡ್ಡ ಮಳೆಯಾದರೆ ಕೆರೆಗಳು ತುಂಬುವ ಸಾಧ್ಯತೆಗಳಿವೆ. ಕೆರೆ ಕೋಡಿ ಬಿದ್ದು ಹಲವು ವರ್ಷಗಳಾಗಿವೆ. ಕೆರೆ ತುಂಬಿದರೆ ಅಂತರ್ಜಲ ವೃದ್ಧಿಯಾಗಲಿದೆ. ತೋಟದಲ್ಲಿರುವ ಕೊಳವೆಬಾವಿಗಳು ನೀರಿಲ್ಲದೇ ಬತ್ತಿವೆ. ಹರಸಾಹಸ ಮಾಡಿ ತೋಟ ಉಳಿಸಿಕೊಂಡಿದ್ದೇವೆ’ ಎಂದು ರೈತ ರಾಜಪ್ಪ, ಶಿವಕುಮಾರ್‌ ತಿಳಿಸಿದರು.

ಸಂತೇಬೆನ್ನೂರಿನ ಐತಿಹಾಸಿಕ ಕೆರೆ, ಬೆಳ್ಳಿಗನೂಡು, ಚಿಕ್ಕಬೆನ್ನೂರು, ಗೊಲ್ಲರಹಳ್ಳಿ, ಕುಳೇನೂರು, ಕಾಕನೂರು, ದೊಡ್ಡಬ್ಬಿಗೆರೆ, ಸಿದ್ದನಮಠ, ಮೆದಿಕೆರೆ, ತೋಪೇನಹಳ್ಳಿ ಗ್ರಾಮಗಳ ಕೆರೆಗಳು ಭಣಗುಡುತ್ತಿವೆ. ಆ.25ರಂದು 10ಸೆಂ.ಮೀ, ಸೆ.5ರಂದು 4 ಸೆಂ.ಮೀ ಗರಿಷ್ಠ ಮಳೆಯಾಗಿದೆ. ನಿತ್ಯ ಮಳೆಯಾಗುತ್ತಿದ್ದರೂ ಕೆರೆಗಳಿಗೆ ನೀರಿನ ಹರಿವು ಕಡಿಮೆಯಿದೆ. ರಾಜ ಕಾಲುವೆಗಳ ದುರಸ್ತಿಗೊಳಿಸಬೇಕು. ಅಲ್ಲಲ್ಲಿ ನಿರ್ಮಿಸಿದ ಚೆಕ್‌ ಡ್ಯಾಂಗಳಿಂದಲೂ ನೀರು ಹರಿಯವುದು ತಡವಾಗುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥರು.

ಚಿಕ್ಕಬೆನ್ನೂರು, ಗೊಲ್ಲರಹಳ್ಳಿ ಕೆರೆಗಳಲ್ಲಿ ಈಚೆಗೆ ಹೂಳೆತ್ತಲಾಗಿದೆ. ರಾಜಕಾಲುವೆ ಸರಿ ಪಡಿಸಲಾಗಿದೆ ಇದರಿಂದಾಗಿ ಇಲ್ಲಿ ಒಂದೆರಡು ಅಡಿ ನೀರು ನಿಂತಿದೆ. ಈಚೆಗೆ ತುಂಬಿ ಹರಿದ ಹಿರೇಹಳ್ಳ ಸೂಳೆಕೆರೆಗೆ ಹಚ್ಚು ನೀರು ಹರಿಸಿದೆ.

ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲು ಕ್ಷಣಗಣನೆ ಶುರುವಾಗಿದೆ. ಈ ಎಲ್ಲಾ ಕೆರೆಗಳು ಏತ ನೀರಾವರಿ ಯೋಜನೆಯಿಂದ ತುಂಬಲಿವೆ. ಕೆರೆ
ತುಂಬಿಸುವ ಯೋಜನೆಯ ಆರಂಭಕ್ಕೆ ತೋಟದ ಬೆಳೆಗಾರರು ಕಾಯುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT