ಕಸದ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಮಂಗಳವಾರ, ಜೂನ್ 18, 2019
25 °C

ಕಸದ ಸಮಸ್ಯೆ ಪರಿಹಾರಕ್ಕೆ ಒತ್ತಾಯ

Published:
Updated:

ಕೋಲಾರ: ಕಸದ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದಲ್ಲಿ ಶುಕ್ರವಾರ ವಿನೂತನ ರೀತಿಯಲ್ಲಿ ಧರಣಿ ನಡೆಸಿದರು. ನಗರಸಭೆ ಹಿಂಭಾಗದ ಹಳೆ ಬಸ್‌ ನಿಲ್ದಾಣದ ಬಳಿ ವಿಲೇವಾರಿ ಮಾಡಲಾಗಿರುವ ಕಸವನ್ನು ಚೀಲಗಳಲ್ಲಿ ತುಂಬಿಸಿಕೊಂಡು ಜಿಲ್ಲಾ ಪಂಚಾಯಿತಿವರೆಗೆ ಮೆರವಣಿಗೆ ಹೋದ ಧರಣಿನಿರತರು, ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಕ್ಲೀನ್ ಸಿಟಿ ಎಂದು ಹೆಸರಾಗಿದ್ದ ಕೋಲಾರ ನಗರದಲ್ಲಿ ಕೆಲ ತಿಂಗಳುಗಳಿಂದ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಹಳಿ ತಪ್ಪಿದೆ. ರಸ್ತೆಗಳ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿಯಾಗಿ ಬಿದ್ದಿದ್ದು, ಅದರ ವಿಲೇವಾರಿಗೆ ಸ್ಥಳಾವಕಾಶ ಇಲ್ಲವಾಗಿದೆ. ಮಳೆಯಿಂದಾಗಿ ಕಸದ ರಾಶಿಯು ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ಇಡೀ ನಗರ ಗಬ್ಬೆದ್ದು ನಾರುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲೇ ಹೆಸರಾಗಿತ್ತು: ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ನಗರವು ಈ ಹಿಂದೆ ತ್ಯಾಜ್ಯ ನಿರ್ವಹಣೆಗೆ ರಾಜ್ಯದಲ್ಲೇ ಹೆಸರಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಸ ರಾಶಿ ರಾಶಿಯಾಗಿ ಬಿದ್ದಿದೆ. ತ್ಯಾಜ್ಯ ನಿರ್ವಹಣೆಗಾಗಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿದ್ದರೂ ಸಮಸ್ಯೆ ಗಂಭೀರವಾಗಿದೆ ಎಂದು ಹೇಳಿದರು.

ನಗರವಾಸಿಗಳು ಮೂಗಿಗೆ ಬಟ್ಟೆ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೌರ ಕಾರ್ಮಿಕರಿಗೆ 3 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಹೀಗಾಗಿ ಅವರು ಬಡ್ಡಿ ಸಾಲ ಪಡೆದು ಜೀವನ ನಿರ್ವಹಣೆ ಮಾಡುವಂತಾಗಿದೆ. ಕಸ ವಿಲೇವಾರಿಗೆ ಸ್ಥಳವಿಲ್ಲದೆ ನಗರದ ಸುತ್ತಮುತ್ತಲಿನ ಕೆರೆಗಳು, ಕೃಷಿ ಜಮೀನುಗಳು ಹಾಗೂ ಖಾಲಿ ನಿವೇಶನಗಳಲ್ಲಿ ಸುರಿಯಲಾಗುತ್ತಿದೆ. ಇದರಿಂದ ಕೆರೆಗಳ ಚಿತ್ರಣವೇ ಬದಲಾಗಿದೆ ಎಂದರು.

ಅನುದಾನ ದುರ್ಬಳಕೆ: ರಾಜಕಾಲುವೆಗಳಲ್ಲಿ ಕಸ ತುಂಬಿಕೊಂಡಿದ್ದು, ಕೆರೆಗಳಿಗೆ ನೀರು ಹರಿದು ಹೋಗುತ್ತಿಲ್ಲ. ನಗರದಲ್ಲಿ ಧಾರಾಕಾರ ಮಳೆಯಾದರೂ ಕೆರೆಗಳಿಗೆ ಸ್ವಲ್ಪವೂ ನೀರು ಬಂದಿಲ್ಲ. ನಗರಸಭೆ ಅಧಿಕಾರಿಗಳು ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಕೋಟಿಗಟ್ಟಲೆ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಜನಪ್ರತಿನಿಧಿಗಳು ಘನ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಜಾಗ ಮಂಜೂರು ಮಾಡುವುದಾಗಿ ಹೇಳುತ್ತಲೇ ಕಾಲ ದೂಡುತ್ತಿದ್ದಾರೆ ಎಂದು ಧರಣಿನಿರತರು ದೂರಿದರು.

ಕಸದ ಸಮಸ್ಯೆಯಿಂದಾಗಿ ಹಂದಿ, ಬೀದಿ ನಾಯಿ ಹಾಗೂ ಸೊಳ್ಳೆ ಕಾಟ ಹೆಚ್ಚಿದೆ. ಇದರಿಂದ ನಗರವಾಸಿಗಳಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಈಗಾಗಲೇ ಸಾಕಷ್ಟು ಮಂದಿ ಡೆಂಗಿ, ಚಿಕೂನ್‌ ಗುನ್ಯಾ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಆದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮನವಿ ಸಲ್ಲಿಕೆ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಮತ್ತು ಸಂಸದ ಕೆ.ಎಚ್‌.ಮುನಿಯಪ್ಪ ಅವರನ್ನು ಭೇಟಿಯಾದ ಧರಣಿನಿರತರು ಕಸದ ಸಮಸ್ಯೆ ವಿವರಿಸಿ ಘನ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಜಾಗ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್, ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಚಂದ್ರಪ್ಪ, ಸದಸ್ಯರಾದ ಉಮಾಗೌಡ, ವೆಂಕಟೇಶಪ್ಪ, ಚಂದ್ರಪ್ಪ ಧರಣಿಯಲ್ಲಿ ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry