ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಅಲಂಕಾರಿಕ ವಸ್ತುಗಳ ವ್ಯಾಪಾರ ಭರ್ಜರಿ

Last Updated 15 ಅಕ್ಟೋಬರ್ 2017, 7:24 IST
ಅಕ್ಷರ ಗಾತ್ರ

ಹಾವೇರಿ: ದೀಪಾವಳಿಯಲ್ಲಿ ತಮ್ಮ ಜಾನುವಾರುಗಳಿಗೆ ಹೊಸ ಹಗ್ಗ, ಕೊಳಂಗಡ, ಮಕಾಡ, ಮೂಗುದಾರವನ್ನು ಹಾಕಿ ವಿಶೇಷವಾಗಿ ಸಿಂಗರಿಸಿ ಅವುಗಳನ್ನು ಓಟದ ಸ್ಪರ್ಧೆಯಲ್ಲಿ ಬಿಡುವುದು ಈ ಭಾಗದ ಸಂಸ್ಕೃತಿ. ಹೀಗಾಗಿ ಜಾನುವಾರುಗಳ ಅಲಂಕಾರಿಕ ವಸ್ತುಗಳ ವ್ಯಾಪಾರ ನಗರದಲ್ಲಿ ಗರಿಗೆದರಿದೆ.

ಹೊಸಮನಿ ಸಿದ್ದಪ್ಪ ವೃತ್ತ, ಹಳೆ ಕೋರ್ಟ್‌ ಎದುರು, ಗಾಂಧಿ ವೃತ್ತ, ಪುರಸಿದ್ದೇಶ್ವರ ದೇವಸ್ಥಾನದ ಎದುರು, ಎಂ.ಜಿ.ರಸ್ತೆ, ಪಿ.ಬಿ.ರಸ್ತೆ ಹಾಗೂ ಕಾಗಿನೆಲೆ ಕ್ರಾಸ್‌ ಸೇರಿದಂತೆ ನಗರದ ಕೆಲವು ರಸ್ತೆಗಳ ಬದಿಯಲ್ಲಿ ಅಲಂಕಾರಿಕ ವಸ್ತುಗಳನ್ನು ಮಾರಾಟ ಶನಿವಾರ ಜೋರಾಗಿತ್ತು.

ದೀಪಾವಳಿಯಲ್ಲಿ ನಡೆಯುವ ಎತ್ತುಗಳ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಎತ್ತುಗಳಿಗಂತೂ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ, ವಿಶೇಷ ಸಿಂಗಾರದ ವಸ್ತುಗಳನ್ನು ಕೊಳ್ಳುತ್ತಾರೆ.

ಎತ್ತುಗಳಿಗೆ ಹಣೆಕಟ್ಟು, ಗೊಂಡೆ, ಕೊಳಂಗಡ, ಮೂಗುದಾರ, ಮಕಾಡ, ಹಗ್ಗ, ಜೂಲಾ, ಕಾಲು ಗೆಜ್ಜೆ, ಬಣ್ಣ ಬಣ್ಣದ ರಿಬ್ಬನ್‌, ಕೊಂಬಣಸು, ಕೊಂಬಿಗೆ ಬಣ್ಣ, ಕೊಬ್ಬರಿ ಸರ, ಕಣ್ಣು ಕಾಡಿಗೆ, ಬಲೂನ್‌ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಎತ್ತುಗಳಿಗೆ ಶೃಂಗಾರ ಮಾಡಲಾಗುತ್ತದೆ.

‘ದೀಪಾವಳಿ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆಯುವ ಎತ್ತುಗಳ ಓಟದ ಸ್ಪರ್ಧೆಯಲ್ಲಿ ಅವುಗಳ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ತಯಾರಿಸಿ ಇಲ್ಲಿಗೆ ವ್ಯಾಪಾರಕ್ಕಾಗಿ ಬರುತ್ತೇವೆ. ವಿವಿಧ ಬಗೆಯ ಗೊಂಡೆ ಸೇರಿದಂತೆ ಕೆಲವು ವಸ್ತುಗಳನ್ನು ಇಲ್ಲಿಯೇ ಬಂದು ತಯಾರಿಸುತ್ತೇವೆ’ ಎಂದು ರಾಜಸ್ತಾನಿ ಮೂಲದ ವ್ಯಾಪಾರಿ ಮೆಹಬೂಬ್‌ ತಿಳಿಸಿದರು.

ಒಂದು ರಿಬ್ಬನ್‌ ರೀಲಿಗೆ ₹30, ಒಂದು ಜೊತೆ ಸಣ್ಣ ಗೊಂಡೆಗೆ ₹100ರಿಂದ ₹130ರ ವರೆಗೆ, ನೂಲಿನ ಗೊಂಡೆಗೆ ₹130ರಿಂದ ₹160ರ ವರೆಗೆ, ಒಂದು ಜೊತೆ ಮಿಂಚಿನ ಗೊಂಡೆಗೆ ₹160ರಿಂದ ₹200ರ ವರೆಗೆ, ಸಣ್ಣ ಬಲೂನ್‌ ಪ್ಯಾಕೆಟ್‌ಗೆ ₹ 80ರಿಂದ ₹90ರ ವರೆಗೆ, ದೊಡ್ಡ ಬಲೂನ್‌ ಪ್ಯಾಕೆಟ್‌ಗೆ ₹250ರಿಂದ ₹300ರ ವರೆಗೆ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ದೀಪಾವಳಿಯಂದು ಮನೆಯ ಎಲ್ಲ ಜಾನುವಾರುಗಳನ್ನು ಮೈತೊಳೆದು, ಬಗೆಬಗೆಯಲ್ಲಿ ಸಿಂಗರಿಸಿ ವಿಶೇಷ ಪೂಜೆ ಮಾಡಲಾಗುತ್ತದೆ. ‘ಹಬ್ಬದಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ತಮ್ಮ ಎತ್ತುಗಳಿಗೆ ಸಿಂಗರಿಸುವಲ್ಲಿಯೇ ಎಲ್ಲ ರೈತರು ಮಗ್ನರಾಗಿರುತ್ತಾರೆ. ಬಳಿಕ, ಅವುಗಳನ್ನು ಗ್ರಾಮದ ದೇವಸ್ಥಾನಗಳಿಗೆ ಹಲಗೆ ಬಾರಿಸುತ್ತಾ ಮೆರವಣಿಗೆ ಮಾಡಿಕೊಂಡು ಹೋಗಿ ಬಳಿಕ ಸ್ಪರ್ಧೆಯಲ್ಲಿ ಬಿಡಲಾಗುತ್ತದೆ’ ಎಂದು ಹಾನಗಲ್‌ ತಾಲ್ಲೂಕಿನ ರೈತ ಬಸವರಾಜ ಬಣಕಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT