ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಡಿಯೂರಪ್ಪಗೆ ಕನಿಷ್ಠ ಜ್ಞಾನವೂ ಇಲ್ಲ’

ಮೈಸೂರು ಮಿನರಲ್ಸ್‌ ಏನು ವಿದೇಶಿ ಕಂಪೆನಿಯೇ: ಸಿದ್ದರಾಮಯ್ಯ
Last Updated 15 ಅಕ್ಟೋಬರ್ 2017, 19:34 IST
ಅಕ್ಷರ ಗಾತ್ರ

ಮೈಸೂರು: ‘ಆರ್ಥಿಕ ವ್ಯವಸ್ಥೆ ಬಗ್ಗೆ ಯಡಿಯೂರಪ್ಪಗೆ ಕನಿಷ್ಠ ಜ್ಞಾನವೂ ಇಲ್ಲ. ಹಣಕಾಸಿನ ವ್ಯವಸ್ಥೆ ಬಗ್ಗೆ ಅವರೇನು ಮಾತನಾಡುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಭಾನುವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ರೈತರ ಸಾಲಮನ್ನಾ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರಲಿಲ್ಲ. ಹೀಗಾಗಿ, ಮೈಸೂರು ಮಿನರಲ್ಸ್‌ ಲಿಮಿಟೆಡ್‌ನಲ್ಲಿನ (ಎಂಎಂಎಲ್‌) ಸುಮಾರು ಸಾವಿರ ಕೋಟಿ ಹಣವನ್ನು ರಾಜ್ಯ ಅಪೆಕ್ಸ್‌ ಬ್ಯಾಂಕಿನಲ್ಲಿ ಠೇವಣಿ ಇಡಲು ನಿರ್ದೇಶನ ನೀಡಲಾಗಿದೆ. ಅದರಲ್ಲೇನು ತಪ್ಪಿದೆ? ಠೇವಣಿ ಇಟ್ಟ ಹಣಕ್ಕೆ ಇಲ್ಲಿ ಬಡ್ಡಿ ಕೊಡುವುದಿಲ್ಲವೇ? ಎಂಎಂಎಲ್‌ ಏನು ವಿದೇಶಿ ಕಂಪೆನಿಯೇ? ಅಲ್ಲಿರುವುದೂ ಸರ್ಕಾರದ ಹಣ’ ಎಂದು ಸಮಜಾಯಿಷಿ ನೀಡಿದರು.

‘ಎಂಎಂಎಲ್‌ನಲ್ಲಿ ಇರುವುದು ಹೂಡಿಕೆದಾರರ ಹಣವಲ್ಲ. ಸರ್ಕಾರ ಹಾಕಿರುವ ಬಂಡವಾಳವದು. ಮುಂದಿನ ಬಜೆಟ್‌ನಲ್ಲಿ ಹಣ ಹಿಂದಿರುಗಿಸುತ್ತೇವೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ಯಡಿಯೂರಪ್ಪ ಹಣಕಾಸು ಸಚಿವರಾಗಿದ್ದವರು. ಆದರೆ, ಈ ಬಗ್ಗೆ ಅವರಿಗೆ ಯಾವುದೇ ವಿಚಾರ ಗೊತ್ತಿಲ್ಲ’ ಎಂದು ಹೇಳಿದರು.

‘ರಾಜ್ಯದ ಹಣಕಾಸು ಪರಿಸ್ಥಿತಿ ಬಗ್ಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. 10 ವರ್ಷ ದೇಶದ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ನುಡಿದರು.

ಬಿಜೆಪಿ ಪರಿವರ್ತನಾ ರ‍್ಯಾಲಿ ಕುರಿತು ವ್ಯಂಗ್ಯವಾಡಿದ ಅವರು, ‘ಬಿಜೆಪಿ ಪಾಲಿಗೆ ಸಮಾಜ ಒಡೆಯುವುದೇ ಪರಿವರ್ತನೆ. ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಧರ್ಮ ಧರ್ಮಗಳ ನಡುವೆ ದ್ವೇಷ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ತಳಸಮುದಾಯ, ರೈತರು, ಮಹಿಳೆಯರ ಬಗ್ಗೆ ಕಾಳಜಿ ಇಲ್ಲ’ ಎಂದರು.

***

‘ತಂತ್ರ, ಮಂತ್ರಗಳಿಗೆ ಹೆದರಲ್ಲ’

ಮೈಸೂರು: ‘ವಿರೋಧಿಗಳ ತಂತ್ರ, ಮಂತ್ರಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಾಯಕರಿಗಿಂತ ನನಗೆ ಮತದಾರರ ಮೇಲೆ ಹೆಚ್ಚು ನಂಬಿಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘2006ರಲ್ಲಿ ನಡೆದ ಉಪಚುನಾವಣೆಯಲ್ಲಿ ವಿರೋಧಿಗಳೆಲ್ಲ ಜೊತೆಗೂಡಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಆಗ ಅಧಿಕಾರದಲ್ಲಿ ಇಲ್ಲದಿದ್ದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದೆ. ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ. ಜೆಡಿಎಸ್‌, ಬಿಜೆಪಿ ಈ ಹಿಂದೆಯೂ ಒಂದುಗೂಡಿ ರೂಪಿಸಿದ ತಂತ್ರಗಳು ವಿಫಲವಾಗಿವೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀನಿವಾಸಪ್ರಸಾದ್‌ ಹತಾಶ ಮನೋಭಾವದಿಂದ ಮಾತನಾಡುತ್ತಿದ್ದಾರೆ. ವೈರಿಯ ವೈರಿ ಮಿತ್ರ ಎಂಬ ಮನೋಭಾವ ಅವರದ್ದು’ ಎಂದರು.

******

‘ದಲಿತ ಅರ್ಚಕರ ನೇಮಕ ಮಾಡುತ್ತೇವೆ’
ಮೈಸೂರು: ಕೇರಳ ಮಾದರಿಯಲ್ಲಿ ಮುಜುರಾಯಿ ದೇಗುಲಗಳಲ್ಲಿ ದಲಿತ ಅರ್ಚಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಕೂಡ ಮುಕ್ತ ಮನಸ್ಸು ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

‘ದಲಿತ ಅರ್ಚಕರನ್ನು ನೇಮಕ ಮಾಡಲು ನಮ್ಮ ವಿರೋಧ ಇಲ್ಲ‌’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT