ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೆಳೆಯುವ ರಾಜಸ್ಥಾನಿ ಮಣ್ಣಿನ ಹಣತೆ

Last Updated 16 ಅಕ್ಟೋಬರ್ 2017, 9:01 IST
ಅಕ್ಷರ ಗಾತ್ರ

ರಾಯಚೂರು: ದೀಪಾವಳಿ ಹಬ್ಬದ ನಿಮಿತ್ತ ನಗರದಲ್ಲಿ ರಾಜಸ್ಥಾನದಿಂದ ಬಂದಿರುವ ವೈವಿಧ್ಯಮಯ ಕಲಾತ್ಮಕ ಮಣ್ಣಿನ ಹಣತೆಗಳು ಜನರನ್ನು ಸೆಳೆಯುತ್ತಿವೆ.
ಕೆಂಪುಮಣ್ಣಿನಿಂದ ತಯಾರಿಸಿದ ಈ ಹಣತೆಗಳ ವಿನ್ಯಾಸವು ಮೇಲ್ನೋಟಕ್ಕೆ ಗಮನ ಸೆಳೆಯುವಂತಿದೆ.

ನಕ್ಷತ್ರ, ಎಲೆ, ಆಮೆ, ಪುರಿ, ಹೃದಯ, ನವಿಲು ಆಕಾರದ ದೀಪಗಳು ಒಂದಕ್ಕಿಂತ ಒಂದು ಅಂದವಾಗಿವೆ. ಒಂದು ಹಣತೆಯಲ್ಲಿ ಒಂದು ದೀಪ ಹಚ್ಚುವ ಆಯ್ಕೆಯಿಂದ ಹಿಡಿದು ಹತ್ತಾರು ದೀಪಗಳನ್ನು ಒಂದರಲ್ಲೆ ಬೆಳಗಿಸುವಂತೆ ವಿನ್ಯಾಸ ಮಾಡಲಾಗಿದೆ. ಇನ್ನೊಂದು ವಿಶೇಷ ದೀಪಗಳನ್ನು ಹೆಚ್ಚಿಟ್ಟು ತೂಗು ಹಾಕಿಡಬಹುದು. ಮಣ್ಣಿನ ತೂಗುದೀಪಗಳಲ್ಲೂ ಹಲವು ವಿನ್ಯಾಸಗಳು ಮಾರಾಟಕ್ಕಿವೆ.

ಹಣತೆಗಳ ವಿನ್ಯಾಸವು ಸೊಗಸಾದ ಕಲೆಯಿಂದ ಕೂಡಿದೆ. ಅಲ್ಲದೆ ಹಣತೆಯ ಒಳಹೊರಗೆಲ್ಲ ಸೂಕ್ಷ್ಮವಾಗಿ ಅಂದಗೊಳಿಸಿರುವುದು ವಿಶೇಷ. ಅದರಲ್ಲಿ ಸ್ವಸ್ತಿಕ ಚಿಹ್ನೆ, ಲಕ್ಷ್ಮೀ ಚಿತ್ರ, ಗಣಪತಿ ಚಿತ್ರ ಬಿಡಿಸಲಾಗಿದೆ. ಗಾಳಿಯಲ್ಲೂ ದೀಪ ಬೆಳಗುವುದಕ್ಕೆ ಅನುಕೂಲವಾಗುವಂತೆ ಹಣತೆಗಳನ್ನು ಸಿದ್ಧಪಡಿಸಲಾಗಿದೆ.

ದೀಪಕ್ಕೆ ಇನ್ನೊಂದು ಮಣ್ಣಿನ ಹೊದಿಕೆ ಹಾಕಿಡಬಹುದು. ಈ ಮಣ್ಣಿನ ಹೊದಿಕೆಗಳಲ್ಲೂ ಬೇರೆ ಬೇರೆ ಆಕಾರ, ವಿನ್ಯಾಸಗಳ ಆಯ್ಕೆಗಳಿವೆ. ಒಟ್ಟು 25 ಬಗೆಯ ಹಣತೆಗಳನ್ನು ಮಾರಾಟಕ್ಕೆ ಇಡಲಾಗಿದೆ. ದೀಪಾವಳಿ ಸಮೀಪಿಸುತ್ತಿದ್ದಂತೆ ಹಣತೆಗಳ ಖರೀದಿ ಭರಾಟೆ ಜೋರಾಗಿದೆ.

ನಗರದಲ್ಲಿ ಮೂರು ಮಂದಿ ರಾಜಸ್ಥಾನಿ ವ್ಯಾಪಾರಿಗಳು ಇದೇ ಮೊದಲ ಬಾರಿಗೆ ವೈವಿಧ್ಯಮಯ ಹಣತೆಗಳನ್ನು ಮಾರಾಟಕ್ಕೆ ತಂದಿದ್ದಾರೆ. ಲಿಂಗಸುಗೂರು ರಸ್ತೆ ಮಾರ್ಗದ ಮಹರ್ಷಿ ವಾಲ್ಮೀಕಿ ವೃತ್ತದ ಬಳಿ, ಎಲ್‌ಐಸಿ ಕಚೇರಿ ಎದುರು ಹಾಗೂ ಜಿಲ್ಲಾ ಕ್ರೀಡಾಂಗಣ ಪ್ರವೇಶ ದ್ವಾರದ ಹತ್ತಿರ ಈ ವ್ಯಾಪಾರಿಗಳಿದ್ದಾರೆ. ದೀಪಾವಳಿ ಹಬ್ಬದ ನಿಮಿತ್ತ ನಗರದಲ್ಲಿ ವ್ಯಾಪಾರ ಆರಂಭಿಸಿದ್ದಾರೆ.

‘ಪ್ರತಿ ವರ್ಷ ಬೇಸಿಗೆಯಲ್ಲಿ ಮಣ್ಣಿನ ಗಡಿಗೆಗಳನ್ನು ಮಾತ್ರ ಮಾರಾಟ ಮಾಡುವುದಕ್ಕೆ ಬಂದು ಹೋಗುತ್ತಿದ್ದೆವು. ಈ ವರ್ಷ ಹಣತೆಗಳನ್ನು ಮಾರಾಟಕ್ಕೆ ತಂದಿದ್ದೇವೆ. ಮಳೆ ಬೀಳುತ್ತಿರುವ ಕಾರಣ ನಿರೀಕ್ಷಿಸಿದಷ್ಟು ವ್ಯಾಪಾರವಾಗಿಲ್ಲ. ಆದರೂ ಹಬ್ಬ ಸಮೀಪವಾದಂತೆ ಜನರು ಬರುತ್ತಿದ್ದಾರೆ.

ತುಂಬಾ ದೂರದಿಂದ ಬಂದಿದ್ದೇವೆ. ಈಗ ತಂದಿರುವಷ್ಟು ಸರಕು ಮಾರಾಟವಾದರೆ ಮಾತ್ರ ನಮಗೆ ಲಾಭವಾಗುತ್ತದೆ’ ಎಂದು ಕ್ರೀಡಾಂಗಣ ಪ್ರವೇಶದ್ವಾರದ ಬಳಿ ಹಣತೆ ಮಾರುವ ರಾಜಸ್ಥಾನಿ ವ್ಯಾಪಾರಿ ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜಸ್ತಾನದಲ್ಲಿ ಸಿಗುವ ನಯವಾದ ಕೆಂಪುಮಣ್ಣು ಇಲ್ಲಿ ಸಿಗುವುದಿಲ್ಲ. ಮಣ್ಣಿನಿಂದ ತಯಾರಿಸುವ ಹಣತೆಗಳು ಹಾಗೂ ವೈವಿಧ್ಯಮಯ ಅಲಂಕಾರಿಕ ವಸ್ತುಗಳು ರಾಜಸ್ತಾನದ ಜೋಧಪುರ ಜಿಲ್ಲೆ ಬಿಲ್ಲಾಡಾ ತಾಲ್ಲೂಕಿನಲ್ಲಿ ಸಗಟು ರೂಪದಲ್ಲಿ ಸಿಗುತ್ತವೆ. ಬಿಲ್ಲಾಡಾದಲ್ಲಿ ಬಹಳಷ್ಟು ಕಾರ್ಖಾನೆಗಳಿವೆ. ಪಡಿಯಚ್ಚಿನಲ್ಲಿ ಒತ್ತಿ ಇವುಗಳನ್ನು ತಯಾರಿಸುತ್ತಾರೆ. ಮಣ್ಣಿನ ಗಡಿಗೆಗಳನ್ನು ಅಲ್ಲಿಂದಲೆ ತೆಗೆದುಕೊಂಡು ಬಂದು ಮಾರಾಟ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

ಹೈದರಾಬಾದ್‌ನಲ್ಲಿ ಪ್ರತಿವರ್ಷ ದೀಪಾವಳಿಯಲ್ಲಿ ರಾಜಸ್ಥಾನಿ ಹಣತೆಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಹೈದರಾಬಾದ್‌ಗೆ ಸುಮಾರು 500 ರಾಜಸ್ಥಾನಿ ವ್ಯಾಪಾರಿಗಳು ಬಂದಿದ್ದಾರೆ. ಅಲ್ಲಿಗೆ ಹೋಲಿಸಿದರೆ ರಾಯಚೂರಿನಲ್ಲಿ ಅಷ್ಟು ವ್ಯಾಪಾರವಾಗಿಲ್ಲ’ ಎಂದು ಅವರು ತಿಳಿಸಿದರು.

‘ಸಾದಾ ದೀಪಗಳಿಗಿಂತ ರಾಜಸ್ತಾನಿ ಹಣತೆಗಳು ನೋಡುವುದಕ್ಕೆ ಆಕರ್ಷಕವಾಗಿವೆ. ಅದರಲ್ಲೂ ಬಹಳಷ್ಟು ನಮೂನೆಗಳು ಇರುವುದರಿಂದ ಖರೀದಿಸುವುದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಹಣತೆ ಕೊಳ್ಳಲು ಬಂದಿದ್ದ ಡ್ಯಾಡಿ ಕಾಲೊನಿ ನಿವಾಸಿ ಗೃಹಿಣಿ ನಿಖಿತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT