ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಕ್ಕಾಗಿ ಅಡ್ಡದಾರಿ ಹಿಡಿದ ಆಲೆಮನೆಗಳು

Last Updated 16 ಅಕ್ಟೋಬರ್ 2017, 9:19 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ಕಬ್ಬಿಣಕ್ಕೆ ಏಷ್ಯಾ ಖಂಡದಲ್ಲೇ ಅತ್ಯುನ್ನತ ಸ್ಥಾನ ಇದ್ದಂತೆ ಉಂಡೆ ಬೆಲ್ಲಕ್ಕೂ ರಾಷ್ಟ್ರದ ಹಲವು ರಾಜ್ಯಗಳಲ್ಲಿ ಬಹು ಬೇಡಿಕೆ ಇದೆ. ಇದರ ಲಾಭ ಪಡೆಯಲು ಹೊರಟಿರುವ ಆಲೆಮನೆ ಮಾಲೀಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಎಂಪಿಎಂ ಸಕ್ಕರೆ ಕಾರ್ಖಾನೆ ಉತ್ಪಾದನೆ ಸ್ಥಗಿತಗೊಳಿಸಿ ಎರಡು ವರ್ಷ ಕಳೆದಿದೆ. ಇದರ ಬೆನ್ನಲ್ಲೇ ರೈತರು ಕಬ್ಬು ಬೆಳೆಯುವುದರಿಂದ ಹಿಂದೆ ಸರಿದು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ. ಇದು ಆಲೆಮನೆ ಮಾಲೀಕರ ನಿದ್ದೆಗೆಡಿಸಿದೆ.

ಈಗ ಇಲ್ಲಿ ತಯಾರಾಗುತ್ತಿರುವುದು ‘ನೀರಾಬೆಲ್ಲ’, ‘ಚೀನಾಬೆಲ್ಲ’ ಹೆಸರಿನ ಉಂಡೆ ಬೆಲ್ಲ. ಸದ್ಯಕ್ಕೆ 18ರಿಂದ 20 ಆಲೆಮನೆಗಳಲ್ಲಿ ನಡೆಯುತ್ತಿರುವ ಬೆಲ್ಲ ಉತ್ಪಾದನೆ ಹಲವು ಅನುಮಾನದ ಹುತ್ತವನ್ನು ಸೃಷ್ಟಿಸಿದೆ.

100ಕ್ಕೂ ಹೆಚ್ಚು ಆಲೆಮನೆ: ಒಂದೂವರೆ ದಶಕದ ಹಿಂದೆ ಸುಮಾರು 100ಕ್ಕೂ ಹೆಚ್ಚು ಆಲೆಮನೆಗಳ ಸದ್ದು ತಾಲ್ಲೂಕಿನಲ್ಲಿ ಕೇಳಿಬರುತ್ತಿತ್ತು. ಅದಕ್ಕೆ ತಕ್ಕಂತೆ ಸುಮಾರು 10ರಿಂದ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬಿನ ಬೆಳೆ ಇಲ್ಲಿ ನೆಲೆ ಕಂಡಿತ್ತು. ಕಾಲಕ್ರಮೇಣ ಎದುರಾದ ಕಬ್ಬಿನ ರೋಗ, ಬೆಲೆ ಕುಸಿತ, ಹಣ ಪಾವತಿಯಲ್ಲಿನ ವಿಳಂಬ ಹಾಗೂ ಹಲವು ಸಮಸ್ಯೆಗಳ ಕಾರಣದಿಂದ ಬೇಸತ್ತ ಅನ್ನದಾತ ಪರ್ಯಾಯ ಬೆಳೆಗಳತ್ತ ಮುಖ ಮಾಡಿದ. ಕಬ್ಬಿನ ಜಮೀನು ತೋಟಗಳಾಗಿ ಪರಿವರ್ತನೆಗೊಂಡವು.

ಎಂಪಿಎಂ ಸಕ್ಕರೆ ಕಾರ್ಖಾನೆ ಮುಚ್ಚಿದ ಸಂದರ್ಭದಲ್ಲಿ ರೈತರ ಪಾಲಿಗೆ ಇಲ್ಲಿನ ಆಲೆಮನೆಗಳು ನೆರವಾಗಬಹುದು ಎಂದು ಕೃಷಿಕರು ಕನಸು ಕಂಡಿದ್ದರು. ಆದರೆ, ಅವರ ಪಾಲಿಗೆ ಅದು ತಣ್ಣೀರು ಎರಚುವಂತೆ ಉತ್ಪಾದನಾ ವಿಧಾನ ಬದಲಿಸಿಕೊಂಡಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಸದ್ಯ ತಾಲ್ಲೂಕಿನಲ್ಲಿ ಸುಮಾರು ಒಂದೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಕಬ್ಬನ್ನು ದಾವಣಗೆರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗುತ್ತಿ್ದರೆ, ಮತ್ತೊಂದಿಷ್ಟು ಆಲೆಮನೆಗಳ ಬಾಗಿಲಿಗೆ ಹೋಗುತ್ತಿದೆ.

ಉಂಡೆ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆ: ಇಲ್ಲಿನ ಉಂಡೆ ಬೆಲ್ಲಕ್ಕೆ ಆಂಧ್ರಪ್ರದೇಶ, ಗುಜರಾಜ್, ಮಹಾರಾಷ್ಟ್ರ ರಾಜ್ಯಗಳಲ್ಲಿ ಎಲ್ಲಿಲ್ಲದ ಬೇಡಿಕೆ ಇತ್ತು. ಇದನ್ನು ಸರಿದೂಗಿಸಲು ಎಗ್ಗಿಲ್ಲದೆ ಉತ್ಪಾದನೆ ನಡೆಸಿದ್ದ ಆಲೆಮನೆಗಳು, ಈಗ ಐದಾರು ವರ್ಷಗಳಿಂದ ಸೀಮಿತ ಉತ್ಪಾದನೆಯತ್ತ ಹೆಜ್ಜೆ ಹಾಕಿದೆ. ಎಪಿಎಂಸಿ ಮೂಲಕ ಮಾರಾಟ ಆರಂಭಿಸಿದ್ದ ಆಲೆಮನೆ ಮಾಲೀಕರು, ಈಗ ನೇರವಾಗಿ ತಮ್ಮ ವಹಿವಾಟು ನಡೆಸುವ ಹಳೆಯ ಪದ್ಧತಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕಬ್ಬಿನ ರಸವೇ ಕಡಿಮೆ: ಕಬ್ಬು ಅರೆದು ಅದನ್ನು ಬಿಸಿ ಮಾಡಿದಾಗ ಹೊರಬರುತ್ತಿದ್ದ ವಿಶೇಷ ಸುವಾಸನೆ ಸೂಸುತ್ತಿದ್ದ ಕಬ್ಬಿನ ರಸ ಈಗ ಆಲೆಮನೆಯಿಂದ ಬಹು ದೂರವಾಗಿದೆ.
ಈಗ ಕೆ.ಆರ್.ಪೇಟೆ, ಮಂಡ್ಯ, ಮದ್ದೂರು ಕಡೆಯಿಂದ ಬರುವ ಹಳೇ ಬೆಲ್ಲವನ್ನು ಕಡಾಯಿಗೆ ಹಾಕಿ ಚೆನ್ನಾಗಿ ಕುದಿಸಿ, ಅದಕ್ಕೆ ಸಕ್ಕರೆ, ನೀರು ಹಾಕಿ ಕುದಿಸಿ ಬಣ್ಣ ಕೊಟ್ಟು ಉಂಡೆ ಕಟ್ಟುವ ಪದ್ಧತಿ ಹೆಚ್ಚಾಗುತ್ತಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಲೆಮನೆಗೆ ಕಬ್ಬು ಬಂದರೂ ಅದು ಲೆಕ್ಕಕ್ಕೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಕುಸಿದಿದೆ. ಪರ್ಯಾಯವಾಗಿ ಹಾಳಾದ ಬೆಲ್ಲ, ಸಕ್ಕರೆ ಇನ್ನಿತರ ರಾಸಾಯನಿಕ ವಸ್ತುಗಳನ್ನೇ ಹೆಚ್ಚಾಗಿ ಬಳಸಿ ಉತ್ಪಾದನೆ ಮಾಡಲಾಗುತ್ತಿದೆ ಎಂಬ ದೂರುಗಳು ಜಿಲ್ಲಾಡಳಿತಕ್ಕೆ ಬಂದಿವೆ.

ದಾಳಿ ವೇಳೆ ಪತ್ತೆ: ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ಈಚೆಗೆ ಆಲೆಮನೆಗಳ ಮೇಲೆ ದಾಳಿ ನಡೆಸಿ ಕೊಳೆತ ಬೆಲ್ಲ, ರಾಸಾಯನಿಕ ವಸ್ತುಗಳು ಹಾಗೂ ಸಕ್ಕರೆ ಚೀಲವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು. ಹೀಗಿದ್ದರೂ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪುನಃ ಕಲಬೆರಕೆ ಬೆಲ್ಲ ತಯಾರಿಸುತ್ತಿದ್ದರೂ ಇತ್ತ ಯಾವುದೇ ಅಧಿಕಾರಿಗಳು ಬಂದಿಲ್ಲ ಎಂದು ಕೃಷಿಕ ಗೋಪಾಲ್‌ ಅಸಮಾಧಾನ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT