ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರಿಗೆ ಮೈದುಂಬಿದ ಕೊಂಡಜ್ಜಿ ಕೆರೆ

Last Updated 16 ಅಕ್ಟೋಬರ್ 2017, 11:45 IST
ಅಕ್ಷರ ಗಾತ್ರ

ಬೆಂಗಳೂರು: ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಕೊಂಡಜ್ಜಿ ಗ್ರಾಮದ ಕೆರೆ ಈಚೆಗೆ ಬಿದ್ದ ಮಳೆಗೆ ಸೋಮವಾರ ಮೈದುಂಬಿದೆ.

ಕಳೆದ ತಿಂಗಳು ರಾಜ್ಯದಲ್ಲಿ ಮಳೆ ಅಬ್ಬರ ಆರಂಭವಾದ ದಿನಗಳಲ್ಲಿ ಕೆರೆಯಲ್ಲಿ ಒಂದು ಹನಿಯೂ ನೀರು ಇರಲಿಲ್ಲ. ಕೆರೆಯ ಮಣ್ಣನ್ನು ರೈತರು ಜಮೀನಿಗೆ, ಇಟ್ಟಿಗೆ ಬಟ್ಟಿ ತಯಾರಕರು ತುಂಬಿಕೊಂಡಿದ್ದರು.

ಮಳೆ ಬೀಳುವ ಮುನ್ನ ಸೆಪ್ಟೆಂಬರ್‌ನಲ್ಲಿ ಖಾಲಿ ಇದ್ದ ಕೆರೆಯ ನೋಟ. :ಗೂಗಲ್‌ ಮ್ಯಾಪ್‌ನಿಂದ

ಈ ಕೆರೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿದ್ದು, ನಾಲೆಯ ಕೊನೆಭಾಗದ ಕೆರೆ ಇದಾಗಿದೆ. ಭದ್ರಾ ನಾಲೆ ನೀರು ಕೊನೆಭಾಗಕ್ಕೆ ಸರಿಯಾಗಿ ತಲುಪದಿದ್ದುದರಿಂದ ಕೆರೆ ಸಂಪೂರ್ಣವಾಗಿ ಭರ್ತಿಯಾಗಿರಲಿಲ್ಲ.

ಜತೆಗೆ, ಈ ಕೆರೆಯಿಂದ 14ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಿದ್ದು, ನೀರು ಕೊಡಲಾಗುತ್ತಿತ್ತು. ಇದರಿಂದ ನೀರು ಬೇಗ ಖಾಲಿಯೂ ಆಗಿತ್ತು. ಕೊನೆಗೆ ಹನಿ ನೀರೂ ಇಲ್ಲದೆ ಕೆರೆ ಬಣಗುಡುತ್ತಿತ್ತು.

ಕರೆ ಕೋಡಿ ಬೀಳುವ ಹಂತದವರೆಗೆ ತುಂಬಿದೆ.

ಕೋಡಿ ಬೀಳುವ ಹಂತದಲ್ಲಿ...
‘ಹದಿನೈದು ದಿನಗಳಲ್ಲಿ ಕೆರೆಗೆ ಹೊಂದಿಕೊಂಡಂತಿರುವ ಗುಡ್ಡ, ಅರಣ್ಯ ಹಾಗೂ ಮೇಲ್ಭಾಗದ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಗೆ ಕೆರೆಗೆ ಹೆಚ್ಚಿನ ನೀರು ಹರಿದು ಬಂದಿದ್ದು, ಕೆರೆ ಭರ್ತಿಯಾಗಿದೆ. ವಿಶಾಲವಾದ ಕೆರೆ ಮೈದುಂಬಿದೆ. ಕೆರೆ ತುಂಬಿರುವುದು ಸಂತಸ ಮೂಡಿಸಿದೆ. ಮೂರು–ನಾಲ್ಕು ಇಂಚಿನಷ್ಟು ನೀರು ಬಂದರೆ ಕರೆ ಕೋಡಿ ಬೀಳುತ್ತದೆ’ ಎಂದು ಹೇಳಿರುವ ಬುಳ್ಳಾಪುರ ಗ್ರಾಮದ ಜಿ.ಆರ್‌. ವಿಶ್ವನಾಥ್‌, ಕೆರೆಯ ಸುಂದರ ಚಿತ್ರಗಳನ್ನೂ ಕಳುಹಿಸಿಕೊಟ್ಟಿದ್ದಾರೆ.

ಕೆರೆಗೆ ನೀರು ಹರಿಯುವ ಕೊಂಡಜ್ಜಿ–ಸಿಂಗ್ರಿಹಳ್ಳಿ–ರಾಗಿಮಸಲವಾಡ ಸಂಪರ್ಕಿಸುವ ರಸ್ತೆ ಕಿತ್ತು ಹೋಗಿದೆ.

ಕೆರೆಯ ಹಿನ್ನೀರು ಕೊಂಡಜ್ಜಿ–ಸಿಂಗ್ರಿಹಳ್ಳಿ–ರಾಗಿಮಸಲವಾಡ ಸಂಪರ್ಕಿಸುವ ರಸ್ತೆಯ ಆಚೆಗೂ ಹರಡಿಕೊಂಡಿದೆ. ಭಾರಿ ನೀರು ಹರಿದು ಬಂದಾಗ ಕೆಳ ಸೇತುವೆಯ ಮೂಲ ಕೆರೆ ಸೇರಲು ಸಾಧ್ಯವಾಗದೆ, ಮೇಲ್ಭಾಗದಲ್ಲಿ ಹರಿದಿದ್ದು, ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಸಧ್ಯಕ್ಕೆ ಪಂಚಾಯ್ತಿಯಿಂದ ರಸ್ತೆಯ ಇಕ್ಕೆಲಕ್ಕೆ ಜೆಸಿಬಿಯಿಂದ ಮಣ್ಣು ಹಾಕಿಸಲಾಗಿದೆ. ತಕ್ಷಣ ಇದನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಮಾಡಿಸಬೇಕು. ಈ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ಎದುರಾಗುವ ಮೊದಲು ಜಾಗೃತರಾಗಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ವಿಶ್ವನಾಥ್‌ ಸೇರಿದಂತೆ ಕೊಂಡಜ್ಜಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನೀರು ಸಂರಕ್ಷಣೆಗೆ ಕ್ರಮ ಕೈಗೊಳ್ಳಿ
ಕರೆಯಲ್ಲಿ ನೀರಿಲ್ಲದ ಕಾರಣ ಬೇಸಗೆಯಲ್ಲಿ ಸುತ್ತಲಿನ ಗ್ರಾಮಗಳ ಜನರು ಕೊಳವೆ ಬಾವಿಗಳಲ್ಲೂ ನೀರಿಲ್ಲದೆ ಪರದಾಡಿದ್ದೇವೆ. ಈಗ ಕೆರೆ ತುಂಬಿದೆ. ಈ ನೀರನ್ನು ಜತನದಿಂದ ಕಾಪಿಡಬೇಕು. ಮನಬಂದಂತೆ ಹರಿಯ ಬಿಡದೆ, ಸಂರಕ್ಷಿಸಿದರೆ ಅಂತರ್ಜಲ ಹೆಚ್ಚಿ, ಕನಿಷ್ಠ ಕೊಳವೆ ಬಾವಿಗಳಲ್ಲಾದರೂ ನೀರು ಲಭ್ಯವಾಗುತ್ತವೆ. ಈ ಬಗ್ಗೆ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರು.

ಕೆರೆಯ ಸೊಬಗು ನೋಡಲು ಬಂದಿದ್ದ ಚಿಂಟು, ರೋಹಿತ್ ಪೋಸ್‌ ನೀಡಿದ್ದು ಹೀಗೆ...

ಕೊಂಡಜ್ಜಿ ಕೆರೆ ಏತ ನೀರಾವರಿ ಯೋಜನೆ ಯಾವಾಗ?
ಈ ಕೆರೆಯಿಂದ ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ ಯೋಜನೆ ರೂಪಿಸಿರುವುದರಿಂದ ನಿರಂತರ ನೀರಿನ ಅತ್ಯತೆ ಇದೆ. ಆದ್ದರಿಂದ, ತುಂಗಾಭದ್ರಾ ನದಿಯಿಂದ ಕೆರೆಗೆ ನೀರುಣಿಸುವ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲಿ ಅನುಮೋದನೆ ನೀಡಿ, ಕಾರ್ಯರೂಪಕ್ಕೆ ತರಬೇಕು ಎಂಬುದು ಈ ಭಾಗದ ಜನರ ಒತ್ತಾಸೆ. ಈ ಯೋಜನೆ ಮಂಜೂರಾತಿಗೆ ವಿಧಾನ ಪರಿಷತ್ ಸದಸ್ಯರಾದ ಮೋಹನ್‌ ಕುಮಾರ್‌ ಕೊಂಡಜ್ಜಿ ಅವರು ಹಾಗೂ ತಾಲ್ಲೂಕಿನ ಶಾಸಕ ಎಚ್‌.ಎಸ್‌. ಶಿವಶಂಕರ್‌ ಅವರು ಒತ್ತಡ ಹಾಕಿ ಕಾರ್ಯರೂಪಗೊಳಿಸಬೇಕು ಎನ್ನುತ್ತಾರೆ ಸ್ಥಳೀಯರು. 

ಕೆರೆಯ ಅಚ್ಚುಕಟ್ಟು: ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ, ಕುರುಬರಹಳ್ಳಿ (ಕುರುಬರಹಳ್ಳಿ ಗ್ರಾಮದ ಜಮೀನಿಗೆ ಇಂದಿಗೂ ಕೆರೆ ನೀರು ತಲುಪಿಲ್ಲ).

ಬುಳ್ಳಾಪುರ ಗ್ರಾಮದ ಉಪ್ಪು ನೀರಿನ ಬಾವಿ ತುಂಬಿದೆ.

ಬುಳ್ಳಾಪುರದ ಬಾವಿಯಲ್ಲಿ ನೆಲಮಟ್ಟಕ್ಕೆ ಉಕ್ಕಿದ ನೀರು

ಬುಳ್ಳಾಪುರ ಗ್ರಾಮದ ಎರಡು ಬಾವಿಗಳಲ್ಲಿ ನೀರು ನೆಲಮಟ್ಟದ ವರೆಗೆ ಉಕ್ಕಿವೆ. ಊರ ಬಾಗಲಿ ಬಳಿಯ 30 ಅಡಿ ಆಳದ ಬಾವಿಯಲ್ಲಿ ಹಾಗೂ ಊರ ಒಳಗಿನ ಬಯಲು ಭರಮಪ್ಪ ದೇವರ ಕಟ್ಟೆ ಬಳಿಯ 50–60 ಅಡಿ ಆಳದ ಬಾವಿಯಲ್ಲಿ (ಉಪ್ಪು ನೀರಿನ ಬಾವಿ) ನೀರು ತುಂಬಿದ್ದು, ನೆಲಮಟ್ಟದವರೆಗೆ ಬಂದಿವೆ.

ಹನಿ ನೀರಿಲ್ಲದೆ ಬರಿದಾಗಿದ್ದ ಬಾವಿಗಳಲ್ಲಿ ನೀರು ಬಂದಿರುವುದು ಸಂತಸದ ಸಂಗತಿ. ಬಾವಿ ಖಾಲಿ ಇದ್ದಾಗ ಜನರು ಅದಕ್ಕೆ ಕಸ ಎಸೆದಿದ್ದಾರೆ. ಪಂಚಾಯ್ತಿಯಿಂದ ಬಾವಿಗಳನ್ನು ಸ್ವಚ್ಛಗೊಳಿಸುವ ಕೆಲಸ ಆಗಬೇಕು ಎನ್ನುತ್ತಾರೆ ಗ್ರಾಮದ ಯುವಕ ಪವನ್‌ ಕುಮಾರ್‌, ವಿಶ್ವನಾಥ್, ಜಿ.ಆರ್‌. ವಿರೇಶ್‌ ಇತರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT