ಪ್ರತಿದಿನ ಆದಾಯ ಜಾಣ್ಮೆಯ ಬೇಸಾಯ

7

ಪ್ರತಿದಿನ ಆದಾಯ ಜಾಣ್ಮೆಯ ಬೇಸಾಯ

Published:
Updated:
ಪ್ರತಿದಿನ ಆದಾಯ ಜಾಣ್ಮೆಯ ಬೇಸಾಯ

ಕಣ್ಣು ಹಾಯಿಸಿದಷ್ಟು ದೂರ ಅಚ್ಚ ಹಸಿರು. ಒಂದೆಡೆ ಬಳ್ಳಿ ತುಂಬ ತೊನೆದಾಡುತ್ತಿರುವ ಅಲಸಂದೆ, ಮಗದೊಂದೆಡೆ ಗಿಡಗಳಲ್ಲಿ ಕಟ್ಟುತ್ತಿರುವ ಕಾಯಿ. ಮತ್ತೊಂದೆಡೆ ಅರಿಶಿಣ ಕಂಪು. ಜಮೀನು ತುಂಬ ಹಸಿರಿನ ತಂಪು...

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆಯ ಅಂತರಸಂತೆಯ ಶಿವು (ಸಿದ್ದಲಿಂಗಸ್ವಾಮಿ) ಅವರ ಜಮೀನಿಗೆ ಕಾಲಿಟ್ಟರೆ ಆಗುವ ಅನುಭವವಿದು.

ವಿದ್ಯಾಭ್ಯಾಸಕ್ಕಾಗಿ ಹಳ್ಳಿ ತೊರೆದು ಪಟ್ಟಣ ಸೇರಿ ಮರಳಿ ಗೂಡಿಗೆ ಎಂಬಂತೆ ಹಳ್ಳಿಯತ್ತ ಮುಖಮಾಡಿ ಕೃಷಿಯಲ್ಲಿ ತೊಡಗಿಸಿಕೊಂಡು ಅದರಲ್ಲೇ ಸಂತಸ ಉಣ್ಣುತ್ತಿರುವ ಶಿವು ಅವರ ಕೃಷಿ ಸಾಹಸಗಾಥೆ ಪ್ರೇರಣೆಯಾಗುವಂಥದ್ದು.

ಬಿ.ಕಾಂ. ಪದವೀಧರರಾದ ಬಳಿಕ ಶಿವು ಅವರು ಸುಮಾರು 12 ವರ್ಷಗಳ ಹಿಂದೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಅದಕ್ಕಿಂತಲೂ ಪೂರ್ವದಲ್ಲಿ ಅವರ ತಂದೆ ಹೊಗೆಸೊಪ್ಪು ಕೃಷಿ ಮಾಡುತ್ತಿದ್ದರು. ಜತೆಗೆ ಹತ್ತಿ ಬೆಳೆಯೂ ಇತ್ತು. ಹೊಗೆಸೊಪ್ಪಿನ ಧಾರಣೆ ಏಕಾಏಕಿ ಕಡಿಮೆಯಾಗಿ ನಷ್ಟ ಅನುಭವಿಸಿದರು. ಆದ್ದರಿಂದ ಮಗನಿಗೂ ಕೃಷಿ ಬಿಟ್ಟು ಬೇರೆ ಉದ್ಯೋಗ ನೋಡಿಕೊಳ್ಳುವಂತೆ ಸಲಹೆ ನೀಡಿದ್ದರು.

ಆದರೆ, ಹೇಗೂ ಮಾರಾಟ ಮಾಡುವ ಜಮೀನು. ಪ್ರಯೋಗ ಮಾಡೇಬಿಡುವ ಎಂಬ ನಿರ್ಧಾರಕ್ಕೆ ಶಿವು ಬಂದುಬಿಟ್ಟರು. ತಂದೆ ಕೊರೆಯಿಸಿದ್ದ ಕೊಳವೆ ಬಾವಿಯಲ್ಲಿ 2 ಇಂಚು ನೀರಿತ್ತು. ಆದರೆ ಇದ್ದ 18 ಎಕರೆಗೆ ಈ ನೀರು ಸಾಕಾಗುತ್ತಿರಲಿಲ್ಲ. ಕೊಳವೆ ಬಾವಿಯನ್ನು ರೀಬೋರ್‌ ಮಾಡಿಸಿದಾಗ ಅರ್ಧ ಇಂಚು ನೀರು ಹೆಚ್ಚಾಯಿತು. ಇದೇ ಖುಷಿಯಲ್ಲಿ ಶುಂಠಿ ಕೃಷಿ ಮಾಡುವ ನಿರ್ಧಾರ ಕೈಗೊಂಡರು. ಅಂತರಸಂತೆ ಭಾಗದಲ್ಲಿ ಆ ದಿನಗಳಲ್ಲಿ ಶುಂಠಿ ಬೆಳೆ ಬೇರೂರಿರಲಿಲ್ಲ. ಕೇರಳಕ್ಕೆ ತೆರಳಿ ಬೀಜ ಖರೀದಿಸಿ ನಾಟಿ ಮಾಡಿದರು. ಒಂದು ಎಕರೆಗೆ 3 ಲಕ್ಷ ರೂಪಾಯಿ ಆದಾಯ ಬಂತು. ಮತ್ತೆ ಕೃಷಿ ವಿಸ್ತರಿಸಿದರು. ಜತೆಗೆ ಏಲಕ್ಕಿ ಬಾಳೆಯನ್ನೂ ಬೆಳೆಸಿದರು. ಬಳಿಕ 5 ಎಕರೆಯಲ್ಲಿ ಕಬ್ಬು, 2 ಎಕರೆಯಲ್ಲಿ ಅರಿಶಿಣ ಬೆಳೆದರು. ಶುಂಠಿಯ ಧಾರಣೆ ಕಡಿಮೆ ಆದಾಗ ಅರಿಶಿಣ ಕೈ ಹಿಡಿಯಿತು.

ಮತ್ತೊಂದು ಕೊಳವೆ ಬಾವಿ ಕೊರೆಯಿಸಿದರು. ವಾರ್ಷಿಕ ಬೆಳೆಗಳನ್ನೇ ಬೆಳೆದರೆ ಆದಾಯ ಗಳಿಸಲು ಕಾಯಬೇಕಾಗುತ್ತದೆ. ಪ್ರತಿ ದಿನ ಆದಾಯ ಬರುವ ಬೆಳೆ ಬೆಳೆದರೆ ಹೇಗೆ ಎಂದು ಆಲೋಚಿಸಿದಾಗ ಹೊಳೆದದ್ದೇ ತರಕಾರಿ ಕೃಷಿ. ವಾರ್ಷಿಕ ಬೆಳೆಯಾಗಿ ಬಾಳೆಯನ್ನೂ ಅದರ ನಿರ್ವಹಣೆಗೆ ಬೇಕಾದ ಬಂಡವಾಳವನ್ನು ಅಲಸಂದೆ, ಬದನೆಕಾಯು, ಟೊಮೆಟೊ ಬೆಳೆದು ಗಳಿಸಿದರು.

ಸದ್ಯ ಶಿವು ಅವರ ಜಮೀನಿನಲ್ಲಿ ಅಲಸಂದೆ, ಹಾಗಲಕಾಯಿ, ಸೋರೆಕಾಯಿ, ಕಲ್ಲಂಗಡಿ ಬೆಳೆ ಇದೆ. ಜತೆಗೆ 5 ಎಕರೆ ಅರಿಶಿಣ, 2 ಎಕರೆ ಹತ್ತಿ, 3 ಸಾವಿರ ನೇಂದ್ರ ಬಾಳೆ ಇದೆ. ಮುಸುಕಿನ ಜೋಳ ಕಟಾವು ಆಗಿದೆ. ಹಾಗಲಕಾಯಿ ಬೆಳೆಸಿದ್ದ ಚಪ್ಪರದಲ್ಲಿ ಸೋರೆಕಾಯಿ ತೊನೆದಾಡುತ್ತಿವೆ. 200 ತೆಂಗಿನ ಗಿಡಗಳಿವೆ. ಹಂತ ಹಂತವಾಗಿ ಇಳುವರಿ ಸಿಗುವಂತೆ ಕೃಷಿ ಮಾಡಿದಾಗ ನಾವು ವೈಫಲ್ಯ ಕಾಣಲು ಸಾಧ್ಯವಿಲ್ಲ ಎನ್ನುವುದು ಅವರ ಅನುಭವದ ಮಾತು.

ತರಕಾರಿಗಳನ್ನು ಮೈಸೂರಿನ ಆರ್‌ಎಂಸಿಯಲ್ಲಿ ಮಾರಾಟ ಮಾಡುತ್ತಾರೆ. ಟೊಮೆಟೊ, ಮೆಣಸಿನಕಾಯಿ, ಮೀಟರ್‌ ಅಲಸಂದೆಯನ್ನು ಕೇರಳದ ವ್ಯಾಪಾರಿಗಳು ಮನೆಗೇ ಬಂದು ಖರೀದಿಸುತ್ತಾರೆ. ಪ್ರತಿ ತಿಂಗಳಲ್ಲೂ ಅವರ ಜಮೀನಿನಲ್ಲಿ ಕನಿಷ್ಠ ಮೂರು ಬೆಳೆ ಇದ್ದೇ ಇರುತ್ತದೆ. ಪ್ರತಿ ದಿನ 6 ಮಹಿಳೆಯರು, ಇಬ್ಬರು ಗಂಡಾಳುಗಳು ಶಿವು ಅವರಿಗೆ ನೆರವಾಗುತ್ತಿದ್ದಾರೆ. ಶಿವು ಅವರ ಸಂಪರ್ಕಕ್ಕೆ–9686371842.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry