ನಿಶ್ಚಿತಾರ್ಥದ ಸಂಭ್ರಮ ಕಸಿದ ದುರಂತ

ಭಾನುವಾರ, ಜೂನ್ 16, 2019
26 °C
ಈಜಿಪುರದಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ * ಬಾಲಕಿಯ ಜೀವ ಉಳಿಸಿದ ಬೀರು

ನಿಶ್ಚಿತಾರ್ಥದ ಸಂಭ್ರಮ ಕಸಿದ ದುರಂತ

Published:
Updated:
ನಿಶ್ಚಿತಾರ್ಥದ ಸಂಭ್ರಮ ಕಸಿದ ದುರಂತ

ಬೆಂಗಳೂರು:‌ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಮನೆಯದು. ಮದುವೆ ನಿಶ್ಚಯವಾಗಿದ್ದ ಹುಡುಗನ ಜೊತೆ ಸೇರಿ ಸಂಭ್ರಮಪಟ್ಟಿದ್ದ ಸಂಬಂಧಿಕರೆಲ್ಲ ರಾತ್ರಿ ನಿದ್ರೆಗೆ ಜಾರಿದ್ದರು. ಬೆಳಗಾಗುವಷ್ಟರಲ್ಲಿ ಅವರು ಹೆಣವಾಗಿದ್ದರು.  ಕುಡಿಯುವ ನೀರು ಒಯ್ಯಲೆಂದು ಆ ಮನೆ ಪಕ್ಕದ ನಲ್ಲಿ ಬಳಿಗೆ ಬಂದಿದ್ದ ನೆರೆ ಮನೆಯ ಇಬ್ಬರೂ ಅವರ ಮಸಣಯಾತ್ರೆಗೆ ಜೊತೆಯಾದರು!

ಇದು ವಿವೇಕನಗರ ಬಳಿಯ ಈಜಿಪುರದಲ್ಲಿ ಸೋಮವಾರ ಅಡುಗೆ ಅನಿಲ ಸ್ಫೋಟದಿಂದ ಕಟ್ಟಡ ಕುಸಿದು ಸತ್ತವರ ದಾರುಣ ಕತೆ ಇದು.

ಎಸ್‌.ಗುಣೇಶ್‌ ಎಂಬುವರಿಗೆ ಸೇರಿದ್ದ ಈ ಎರಡು ಅಂತಸ್ತಿನ ಕಟ್ಟಡದಲ್ಲಿ ಏಳು ಕುಟುಂಬಗಳು ವಾಸವಿದ್ದವು. ಮೃತ ಪವನ್‌ ಕಲ್ಯಾಣ, ರವಿಚಂದ್ರನ್‌, ಕಲಾವತಿ ಹಾಗೂ ಸರವಣ ಕುಟುಂಬಗಳು ಪ್ರತ್ಯೇಕ ಮನೆಯಲ್ಲಿ ಬಾಡಿಗೆಗೆ ವಾಸವಿದ್ದವು. ಉಳಿದ ಮೂರು ಮನೆಗಳಲ್ಲಿ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕುಟುಂಬಗಳು ವಾಸವಿವೆ. ಕಟ್ಟಡದಲ್ಲಿ ನಾಲ್ಕು ಮನೆಗಳಿದ್ದ ಪಾರ್ಶ್ವ ಕುಸಿದಿದೆ. ಈ ದುರ್ಘಟನೆ ಏಳು ಜೀವಗಳನ್ನು ಬಲಿ ಪಡೆದಿದೆ.  

‘ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಆಂಧ್ರಪ್ರದೇಶದ ಪವನ್‌ ಕಲ್ಯಾಣ್‌ ಅವರಿಗೆ ಮದುವೆ ಸಿದ್ಧತೆ ನಡೆದಿತ್ತು. ಇತ್ತೀಚೆಗಷ್ಟೇ ಅವರಿಗೆ ಹೆಣ್ಣು ನೋಡಿದ್ದ ಪೋಷಕರು ನಿಶ್ಚಿತಾರ್ಥದ ಸಲುವಾಗಿ ಸಂಬಂಧಿಕರನ್ನು ಮನೆಗೆ ಆಹ್ವಾನಿಸಿದ್ದರು. ಅದರಂತೆ ಶನಿವಾರ ಹಾಗೂ ಭಾನುವಾರ, ಕೆಲ ಸಂಬಂಧಿಕರು ಮನೆಗೆ ಬಂದು ತಯಾರಿಯಲ್ಲಿ ತೊಡಗಿದ್ದರು. ಅಕ್ಕ–ಪಕ್ಕದವರನ್ನು ನಿಶ್ಚಿತಾರ್ಥಕ್ಕೆ ಕರೆದಿದ್ದರು’ ಎಂದು ಸ್ಥಳೀಯ ನಿವಾಸಿ ರಾಧಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ಮನೆಯವರು ಬೆಳಿಗ್ಗೆ 7 ಗಂಟೆಗೆ ಏಳುತ್ತಿದ್ದರು. ಸೋಮವಾರ 6.45 ಗಂಟೆಯ ಸುಮಾರಿಗೆ ಜೋರಾದ ಶಬ್ದ ಕೇಳಿಸಿತು. ಹೊರಬಂದು ನೋಡಿದಾಗ ಕಟ್ಟಡ ಕುಸಿದುಬಿದ್ದಿತ್ತು. ಅವಶೇಷಗಳಡಿ ಅವರೆಲ್ಲ ಸಿಲುಕಿದ್ದರು’ ಎಂದು ಹೇಳಿದರು.

ನೀರು ತರಲು ಬಂದಿದ್ದರು: ಕಟ್ಟಡದ ಏಳನೇ ಮನೆಯಲ್ಲಿ ರವಿಚಂದ್ರನ್‌ ಅವರು ಪತ್ನಿ, ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಿದ್ದರು. ಮೂರನೇ ಮನೆಯಲ್ಲಿ ಕಲಾವತಿ ಅವರು ಮಗಳು ಮತ್ತು ಮೊಮ್ಮಗನ ಜತೆ ನೆಲೆಸಿದ್ದರು. ಕುಸಿದಿರುವ ಕಟ್ಟಡ ಬಳಿಯೇ ಕಾವೇರಿ ನೀರಿನ ನಲ್ಲಿ ಇದ್ದು, ಜಲಮಂಡಳಿಯವರು ಎರಡು ದಿನಕ್ಕೊಮ್ಮೆ ನೀರು ಬಿಡುತ್ತಾರೆ. ನಿತ್ಯವೂ ಬಾಡಿಗೆದಾರರೆಲ್ಲ ಅಲ್ಲಿಗೆ ಬಂದು ನೀರು ತುಂಬಿಸಿಕೊಂಡು ಹೋಗುತ್ತಿದ್ದರು.

ಸೋಮವಾರ ಬೆಳಿಗ್ಗೆ 6.40 ಗಂಟೆಯ ಸುಮಾರಿಗೆ ರವಿಚಂದ್ರನ್‌ ಹಾಗೂ ಕಲಾವತಿ ಬಿಂದಿಗೆ ಹಿಡಿದು ನಲ್ಲಿ ಬಳಿ ಬಂದಿದ್ದರು. ಈ ವೇಳೆ ಪರಸ್ಪರ ಮಾತನಾಡುತ್ತ ನೀರು ತುಂಬಿಸಿಕೊಳ್ಳುತ್ತಿದ್ದರು. ಈ ವೇಳೆ ಏಕಾಏಕಿ ಕಟ್ಟಡ ಕುಸಿಯಿತು. ಅದರ ಅವಶೇಷಗಳಡಿ ಅವರು ಸಿಲುಕಿ ಮೃತಪಟ್ಟರು. ಅವರ ದೇಹಗಳನ್ನು ಬೆಳಿಗ್ಗೆ 10 ಗಂಟೆಗೆ ರಕ್ಷಣಾ ಸಿಬ್ಬಂದಿ ಹೊರತೆಗೆದರು.

ಕಣ್ಣೆದುರೇ ಕೊನೆಯುಸಿರೆಳೆದ ತಾಯಿ:

‘ನಾನು, ತಾಯಿ ಕಲಾವತಿ, ಮಗ ಕಿರಣ ಜತೆಗೆ ಕಟ್ಟಡದ ಮೊದಲ ಮಹಡಿಯಲ್ಲಿ ವಾಸವಿದ್ದೇನೆ. ಬೆಳಿಗ್ಗೆ ಕಟ್ಟಡದ ಪಕ್ಕದಲ್ಲಿ ನಿಂತು ನೀರು ಹಿಡಿಯುತ್ತಿದ್ದ ತಾಯಿ, ಬಿಂದಿಗೆ ತೆಗೆದುಕೊಂಡು ಹೋಗಲು ನನ್ನನ್ನು ಕೂಗಿ ಕರೆದಿದ್ದರು. ಅವರಿದ್ದ ಸ್ಥಳಕ್ಕೆ ಹೊರಡಬೇಕು ಎನ್ನುವಷ್ಟರಲ್ಲಿ ಜೋರಾದ ಶಬ್ದ ಕೇಳಿಸಿ ಕಟ್ಟಡ ಅಲುಗಾಡಿದ ಅನುಭವವಾಯಿತು. ಗಾಬರಿಗೊಂಡು ಕೊಠಡಿಯಲ್ಲಿ ಮಲಗಿದ್ದ ಮಗನನ್ನು ಎತ್ತಿಕೊಂಡು ಹೊರಗೆ ಬಂದೆ. ಅಷ್ಟರಲ್ಲಿ ಕಟ್ಟಡ ಕುಸಿದುಬಿತ್ತು. ಕಣ್ಣೆದುರೇ ತಾಯಿ ಕೊನೆಯುಸಿರೆಳೆದರು’ ಎಂದು ಕಲಾವತಿ ಅವರ ಪುತ್ರಿ ಕೃಷ್ಣವೇಣಿ ದುಃಖ ತೋಡಿಕೊಂಡರು. ಕೃಷ್ಣವೇಣಿ ಅವರು ಬಿ.ಟಿ.ಎಂ ಬಡಾವಣೆಯ ಐ.ಬಿ.ಎಂ ಕಂಪೆನಿಯ ಉದ್ಯೋಗದಲ್ಲಿದ್ದಾರೆ.

‘35 ವರ್ಷಗಳಷ್ಟು ಹಳೆಯದಾದ ಈ ಕಟ್ಟಡವು ಶಿಥಿಲಗೊಂಡಿತ್ತು.  ದುರಸ್ತಿ ಮಾಡಿಸುವಂತೆ ಮಾಲೀಕ ಗುಣೇಶ್‌ ಅವರಲ್ಲಿ ಹಲವು ಬಾರಿ ಕೇಳಿದ್ದೆವು. ಆದರೂ ದುರಸ್ತಿ ಮಾಡಿಸಿರಲಿಲ್ಲ. ಬಾಡಿಗೆ ಆಸೆಗಾಗಿ ಅವರು ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದರು. ನನ್ನ ತಾಯಿ ಸೇರಿ ಏಳು ಮಂದಿ ಮೃತಪಡಲು ಅವರೇ ಕಾರಣ’ ಎಂದು ದೂರಿದರು.

ಓದಲು ಹೇಳಿ ಹೋದ ಅಪ್ಪ ಬರಲೇ ಇಲ್ಲ:

‘ಬೆಳಿಗ್ಗೆ 4ಕ್ಕೆ ಎದ್ದಿದ್ದ ನಾನು, ಓದುತ್ತ ಕುಳಿತುಕೊಂಡಿದ್ದೆ. ನನ್ನ ಬಳಿ ಬಂದಿದ್ದ ಅಪ್ಪ, ಓದಿಕೊ ನೀರು ತರುತ್ತೇನೆ ಎಂದು ಹೊರ ಹೋದರು. ಕೆಲ ನಿಮಿಷದಲ್ಲೇ ಜೋರಾದ ಶಬ್ದ ಬಂದಿದ್ದರಿಂದ ಹೊರಗೆ ಓಡಿಬಂದೆ. ಅಷ್ಟರಲ್ಲಿ ಅಪ್ಪ ಅವಶೇಷಗಳಡಿ ಸಿಲುಕಿದ್ದರು. ಅವರಿನ್ನು ಮರಳಿ ಬರುವುದಿಲ್ಲ’ ಎಂದು ರವಿಚಂದ್ರನ್‌ ಅವರ ಮಗಳು ಭೂಮಿಕಾ ಕಣ್ಣೀರಿಟ್ಟರು. ಭೂಮಿಕಾ ಹತ್ತನೇ ತರಗತಿ ವಿದ್ಯಾರ್ಥಿನಿ.

ಎಂಟು ಗಂಟೆ ಕಾರ್ಯಾಚರಣೆ: ಸಿಲಿಂಡರ್‌, ಪಟಾಕಿ ಪತ್ತೆ

ಬೆಳಿಗ್ಗೆ 7 ಗಂಟೆಗೆ ಸ್ಥಳಕ್ಕೆ ಬಂದಿದ್ದ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ ಹಾಗೂ ಪೊಲೀಸರು,  ಮಧ್ಯಾಹ್ನ 3 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿದರು.

ಮನೆಯ ಪೀಠೋಪಕರಣಗಳೆಲ್ಲ ಅವಶೇಷಗಳಡಿ ಸಿಲುಕಿದ್ದವು. ಜೆ.ಸಿ.ಬಿ ಯಂತ್ರದ ಮೂಲಕ ಅವಶೇಷಗಳನ್ನು ಅಗೆದು ಶವಗಳನ್ನು ಹೊರತೆಗೆಯಲಾಯಿತು. ಈ ವೇಳೆ ಸಿಲಿಂಡರ್‌ ಸಿಕ್ಕಿದ್ದು, ಅದಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಆದರೆ, ಅದರಲ್ಲಿ ಅನಿಲ ಇರಲಿಲ್ಲ. ಜತೆಗೆ ಐವರು ರಕ್ಷಣಾ ಸಿಬ್ಬಂದಿಗೂ ಸಣ್ಣ–ಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಕಾರ್ಯಾಚರಣೆ ಮುಗಿದ ಬಳಿಕ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಅವರಿಗೆ ರಾಕೆಟ್‌ ಪಟಾಕಿಗಳು, ಮೊಬೈಲ್‌ ಹಾಗೂ ಹಲವು ಎಲೆಕ್ಟ್ರಾನಿಕ್‌ ಉಪಕರಣಗಳು ಸಿಕ್ಕವು.

‘ತಳ ಅಂತಸ್ತಿನ ಮನೆಯಲ್ಲಿ ಸುಟ್ಟ ವಾಸನೆ ಇದೆ. ಅಲ್ಲಿಯ ವಸ್ತುಗಳನ್ನೆಲ್ಲ ಸಂಗ್ರಹಿಸಿದ್ದು, ಅವುಗಳ ಪರೀಕ್ಷೆ ನಡೆಸಿದ ಬಳಿಕವೇ ಸ್ಫೋಟಕ್ಕೆ ಕಾರಣವೇನೆಂದು ತಿಳಿಯಲಿದೆ’ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಗುಣೇಶ್‌ ತಂದೆ ಕಟ್ಟಿಸಿದ್ದ ಕಟ್ಟಡ:

ಕಟ್ಟಡದ ಮಾಲೀಕ ಗುಣೇಶ್‌ ಅವರ ತಂದೆ ಸೋಮೇಶ್‌ ಅವರಿಗೆ ನಾಲ್ವರು ಮಕ್ಕಳು. 1975ರಲ್ಲಿ ಸೋಮೇಶ್‌ ತೀರಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಆಸ್ತಿಯನ್ನು ಪಾಲು ಮಾಡಲಾಗಿತ್ತು. ಎರಡನೇ ಮಗನಾದ ಗುಣೇಶ್‌ ಅವರಿಗೆ ಈ ಕಟ್ಟಡ ದೊರಕಿತ್ತು. ಈ ಕಟ್ಟಡವನ್ನು ಬಾಡಿಗೆಗೆ ಕೊಟ್ಟು,  ಅದರ ಸಮೀಪದ ಮತ್ತೊಂದು ಕಟ್ಟಡದಲ್ಲಿ ವಾಸವಿದ್ದರು.

‘ಗುಣೇಶ್‌ ಅವರದ್ದು ಮೊದಲು ಒಂದೇ ಅಂತಸ್ತಿನ ಕಟ್ಟಡವಿತ್ತು. ಕೆಲ ವರ್ಷಗಳ ಹಿಂದೆ ಅದರ ಮೇಲೆ ಮತ್ತೊಂದು ಕಟ್ಟಡ ನಿರ್ಮಿಸಿದ್ದರು. ಆರು ತಿಂಗಳ ಹಿಂದೆ ಅದರ ಮೇಲೆ ಸಿಮೆಂಟ್‌ ಶೀಟ್‌ ಚಾವಣಿಯ, ಒಂದು ಕೊಠಡಿಯ ಮನೆ ಕಟ್ಟಿದ್ದರು. ಎಲ್ಲ ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಬಾಡಿಗೆದಾರರು ಪದೇ ಪದೇ ಬದಲಾಗುತ್ತಿದ್ದರಿಂದ ಅವರ ವೈಯಕ್ತಿಕ ಮಾಹಿತಿ ನಮಗೆ ಗೊತ್ತಾಗುತ್ತಿರಲಿಲ್ಲ’ ಎಂದು ಸಂಬಂಧಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕುಸಿದು ಬಿದ್ದ ಕಟ್ಟಡದ ಪಕ್ಕವೇ ನಮ್ಮ ಮನೆ ಇದೆ. ಬೆಳಿಗ್ಗೆ ಪತ್ರಿಕೆ ಓದುತ್ತ ಮನೆಯ ಮುಂದೆ ಕುಳಿತಿದ್ದೆ. ಈ ವೇಳೆ ಜೋರಾದ ಶಬ್ದ ಕೇಳಿಸಿತು. ಕಟ್ಟಡದತ್ತ ನೋಡಿದಾಗ ದಟ್ಟ ಹೊಗೆ ಇತ್ತು. ಆ ಹೊಗೆ ಕಡಿಮೆಯಾಗುತ್ತಿದ್ದಂತೆ ಕಟ್ಟಡ ಕುಸಿದುಬಿದ್ದಿದ್ದು ಕಂಡಿತು’ ಎಂದು ಅವಘಡದ ಬಗ್ಗೆ ವಿವರಿಸಿದರು.

ನೆರೆಮನೆಗಳಿಗೂ ಹಾನಿ:

‘ಸ್ಫೋಟದಿಂದಾಗಿ ಕಟ್ಟಡದ ಪಕ್ಕದಲ್ಲಿರುವ ಗುಣೇಶ್‌ ಅವರ ದೊಡ್ಡಪ್ಪ ರಾಜು ಅವರ ಮನೆಯ ಕಿಟಕಿಗಳು ಕಿತ್ತುಹೋಗಿವೆ. ವರಲಕ್ಷ್ಮಿ ಎಂಬುವರ ಮನೆಯ ಗೋಡೆ ಬಿರುಕು ಬಿಟ್ಟಿದೆ.  ಸಮೀಪದ ಹಲವು ಮನೆಗಳ ಅಡುಗೆ ಕೊಠಡಿಯಲ್ಲಿದ್ದ ವಸ್ತುಗಳೆಲ್ಲ ಚಿಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಪಾಟುಗಳೂ ಅಲುಗಾಡಿವೆ. ರಸ್ತೆ ಪಕ್ಕದಲ್ಲಿದ್ದ ನಾಲ್ಕು ವಿದ್ಯುತ್‌ ಕಂಬಗಳು ಬಾಗಿವೆ’ ಎಂದು ಸ್ಥಳೀಯ ನಿವಾಸಿ ರಮಾಕಾಂತ್‌ ತಿಳಿಸಿದರು.

***

ಬಾಲಕಿಯ ಜೀವ ಉಳಿಸಿದ ಬೀರು

ಕುಸಿದಿರುವ ಕಟ್ಟಡದ ಕೆಳ ಮಹಡಿಯಲ್ಲಿ ಸರವಣ, ಅವರ ಪತ್ನಿ ಅಶ್ವಿನಿ, ಮಗಳು ಸಂಜನಾ ಹಾಗೂ ಸಂಬಂಧಿ ಜಾನಕಿ ವಾಸವಿದ್ದರು. ಅವಘಡದಲ್ಲಿ ಸರವಣ, ಅಶ್ವಿನಿ ಮೃತಪಟ್ಟಿದ್ದು, ಉಳಿದ ಇಬ್ಬರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.

‘ತಳ ಮಹಡಿಯ ಅಡುಗೆಮನೆಯಲ್ಲಿ ಅಶ್ವಿನಿ ಹಾಗೂ ಶೌಚಾಲಯದಲ್ಲಿ ಸರವಣ ದೇಹ ಸಿಕ್ಕಿದ್ದು, ಸಂಪೂರ್ಣ ಸುಟ್ಟಿವೆ. ಅವರ ಮನೆಯಲ್ಲೇ ಸಿಲಿಂಡರ್‌ ಅನಿಲ ಸೋರಿಕೆಯಾಗಿರುವ ಅನುಮಾನವಿದೆ. ಬೆಳಿಗ್ಗೆ ಸರವಣ ಶೌಚಕ್ಕೆ ಹೋಗಿರಬಹುದು. ಆವಾಗಲೇ ಅಡುಗೆ ಮನೆಗೆ ಹೋಗಿದ್ದ ಅಶ್ವಿನಿ, ಗ್ಯಾಸ್‌ ಹೊತ್ತಿಸಲು ಮುಂದಾದಾಗ ದಿಢೀರ್‌ ಸ್ಫೋಟ ಸಂಭವಿಸಿರಬಹುದು. ಹೀಗಾಗಿ ಅವರಿಗಷ್ಟೇ ಸುಟ್ಟ ಗಾಯಗಳಾಗಿವೆ. ಉಳಿದವರು ಕಟ್ಟಡದ ಅವಶೇಷಗಳಡಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ’ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದರು.

‘ಮನೆಯ ಬೀರುವಿನ ಪಕ್ಕವೇ ಸಂಜನಾ ಮಲಗಿದ್ದಳು. ಆಕೆಗೂ ಬೆಂಕಿ ತಗಲಿತ್ತು. ಅದೇ ವೇಳೆ ಸ್ಫೋಟದಿಂದ ಬೀರುವಿನ ಬಾಗಿಲು ತೆರೆದು ಬಾಲಕಿಯ ಮೇಲೆ ಬಿದ್ದಿದೆ. ಕುಸಿದುಬಿದ್ದ ಕಟ್ಟಡದ ಅವಶೇಷಗಳು ಬೀರುವಿನ ಮೇಲೆಯೇ ಬಿದ್ದಿವೆ. ಕಾರ್ಯಾಚರಣೆ ವೇಳೆ ಬಾಲಕಿ ಅಳು ಕೇಳಿಸಿತ್ತು. ಬೀರು ಸರಿಸಿ ಅದರಡಿ ಇದ್ದ ಬಾಲಕಿಯನ್ನು ರಕ್ಷಿಸಿದೆವು. ಬೀರುವೇ ಆಕೆಯ ಪ್ರಾಣ ಉಳಿಸಿದೆ’ ಎಂದು ಅವರು ಹೇಳಿದರು.

‘ಐದು ವರ್ಷಗಳಿಂದ ಇದೇ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಸರವಣ, ವಿಲ್ಸನ್‌ ಗಾರ್ಡನ್‌ ಬಳಿಯ ಮೋಟಾರು ಸರ್ವಿಸ್‌ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಅಶ್ವಿನಿ ಎಂಟು ತಿಂಗಳ ಗರ್ಭಿಣಿ. ಆ ದಂಪತಿಯ ಮರಣೋತ್ತರ ಪರೀಕ್ಷೆ ಮಾಡಿ, ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದೇವೆ’ ಎಂದು ವಿವೇಕನಗರ ಠಾಣೆಯ ಪೊಲೀಸರು ತಿಳಿಸಿದರು.

***

ಶಬ್ದ ಕೇಳಿ ಮೂರ್ಛೆ ಹೋಗಿದ್ದ ಗರ್ಭಿಣಿ

ಬೆಳಿಗ್ಗೆ ವಾಯುವಿಹಾರಕ್ಕೆ ಹೊರಟಿದ್ದ ಸ್ಥಳೀಯ ನಿವಾಸಿ ಲಕ್ಷ್ಮಿ ಎಂಬುವರು ಶಬ್ದ ಕೇಳಿ ಒಳರಸ್ತೆಯ ಪಕ್ಕದ ಗೋಡೆಗೆ ಒರಗಿ ಮೂರ್ಛೆ ಹೋಗಿದ್ದರು. ಕಾರ್ಯಾಚರಣೆ  ವೇಳೆಯಲ್ಲಿ ಅವರತ್ತ ಯಾರೊಬ್ಬರೂ ಗಮನ ಹರಿಸಿರಲಿಲ್ಲ.

ಮಧ್ಯಾಹ್ನ ಅವರಾಗಿಯೇ ಸ್ಥಳದಿಂದ ಎದ್ದು ಆಂಬುಲೆನ್ಸ್‌ ಬಳಿ ಬಂದು, ಮೂರ್ಛೆ ಹೋದ ಸಂಗತಿ ತಿಳಿಸಿದರು. ಅವರು ಗರ್ಭಿಣಿಯಾಗಿದ್ದರಿಂದ ಆತಂಕಕ್ಕೆ ಒಳಗಾಗಿದ್ದರು. ಆಂಬುಲೆನ್ಸ್‌ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry