ಸಂಪರ್ಕ ದಟ್ಟಣೆ: ಗ್ರಾಹಕರಿಂದ ಹಿಡಿಶಾಪ

ಭಾನುವಾರ, ಜೂನ್ 16, 2019
22 °C

ಸಂಪರ್ಕ ದಟ್ಟಣೆ: ಗ್ರಾಹಕರಿಂದ ಹಿಡಿಶಾಪ

Published:
Updated:

ಬಾಗಲಕೋಟೆ: ತ್ರಿಜಿ ಸಂಪರ್ಕದ ಟವರ್‌ ನಲ್ಲಿನ ಸಂಚಾರ ದಟ್ಟಣೆ ಯಿಂದಾಗಿ ಮೊಬೈಲ್‌ಫೋನ್‌ ಸೇವೆ ಪದೇ ಪದೇಯಲ್ಲಿ ವ್ಯತ್ಯಯವಾಗುತ್ತಿರುವ ಕಾರಣ ವಿಜಯಪುರ ವೃತ್ತದಲ್ಲಿ ಬಿಎಸ್‌ ಎನ್‌ಎಲ್‌ (ಭಾರತೀಯ ಸಂಚಾರ ನಿಗಮ ನಿಯಮಿತ) ಗ್ರಾಹಕರಿಂದ ಹಿಡಿಶಾಪ ಎದುರಿಸುವಂತಾಗಿದೆ.

ಮಳೆ–ಗಾಳಿಯ ಕಾರಣ ಬ್ರಾಡ್‌ಬ್ಯಾಂಡ್‌ ವ್ಯವಸ್ಥೆ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹಾಗೂ ವ್ಯತ್ಯಯ ಹೊಂದುತ್ತಿರುವುದು ನಿಗಮದ ತಲೆನೋವು ಹೆಚ್ಚಿಸಿದೆ.

‘ತ್ರಿಜಿ ಸಂಪರ್ಕದ ಮೊಬೈಲ್‌ ಫೋನ್‌ನಿಂದ ಸಂದೇಶ ಕಳುಹಿಸಿದರೆ ಅದು ಬೇಗನೆ ರವಾನೆಯಾಗುವುದಿಲ್ಲ. ಮಾತನಾಡುವಾಗಲೇ ದಿಢೀರನೇ ಕರೆ ಕಡಿತಗೊಳ್ಳುತ್ತದೆ.

ಇಲ್ಲವೇ ಒಮ್ಮುಖ ಸಂವಹನಕ್ಕೆ ದಾರಿಯಾಗುತ್ತಿದೆ. ವಾಟ್ಸಪ್, ಫೇಸ್‌ಬುಕ್‌ನಲ್ಲಿನ ಮಾಹಿತಿ ಇಲ್ಲವೇ ವಿಡಿಯೊ ಸಂದೇಶ ಡೌನ್‌ಲೋನ್ ಮಾಡಿಕೊಳ್ಳಬೇಕಾದರೆ ಬಹಳಷ್ಟು ಸಮಯ ಹಿಡಿಯುತ್ತದೆ. ತ್ರಿಜಿ ಸೇವೆಯ ಸಂಪರ್ಕ ಪಡೆದಿದ್ದರೂ ಮೊಬೈಲ್‌ಫೋನ್‌ನಲ್ಲಿ ಮಾತ್ರ 2ಜಿ ಸೇವೆಯ ಸಂಕೇತ ಕಾಣಿಸುತ್ತದೆ. ಸಿಗ್ನಲ್‌ಕೂಡ ಸ್ಥಿರವಾಗಿ ನಿಲ್ಲುವುದಿಲ್ಲ. ನಿಧಾನಗತಿಯ ಸಂಪರ್ಕಪ್ರಕ್ರಿಯೇ ಅದಕ್ಕೆ ಕಾರಣ’ ಎಂದು ಬಿಎಸ್‌ಎನ್‌ಎಲ್‌ ಗ್ರಾಹಕ ಇಲ್ಲಿನ ವಿದ್ಯಾಗಿರಿಯ ನಿವಾಸಿ ಶಿಕ್ಷಕ ಶಶಿಧರ ದೂರುತ್ತಾರೆ.

ದೂರುಗಳು ಹೆಚ್ಚಳ: ‘ಬ್ರಾಡ್‌ ಬ್ಯಾಂಡ್‌ ಸಂಪರ್ಕದಲ್ಲಿನ ವ್ಯತ್ಯಯ ಹಾಗೂ ಮೊಬೈಲ್‌ಫೋನ್‌ ಸಂಪರ್ಕ ನಿಧಾನಗತಿಯಲ್ಲಿರುವ ಬಗ್ಗೆ ಗ್ರಾಹಕರಿಂದ ಬರುತ್ತಿರುವ ದೂರುಗಳ ಸಂಖ್ಯೆಯೂ ಹೆಚ್ಚಾಗಿದೆ. ಅವರಿಗೆ ಉತ್ತರಿಸಲು ಕಷ್ಟವಾಗುತ್ತಿದೆ’ ಎಂದು ನಿಗಮದ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

ಸಂಪರ್ಕ ಸಂಖ್ಯೆ ಹೆಚ್ಚಳ: ‘₹ 429ಕ್ಕೆ 90 ದಿನ ತ್ರಿಜಿ ಸೇವೆ ನೀಡಿ ನಿತ್ಯ 1ಜಿಬಿ ಡಾಟಾ ಬಳಕೆಗೆ ಅವಕಾಶ ಮಾಡಿಕೊಟ್ಟ ನಂತರ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ವಿಜಯಪುರ ವೃತ್ತದಲ್ಲಿ ಎರಡು ವರ್ಷಗಳ ಹಿಂದೆ 1.40 ಲಕ್ಷ ಇದ್ದ ಗ್ರಾಹಕರ ಸಂಖ್ಯೆ ಈಗ 2.10 ಲಕ್ಷಕ್ಕೆ ಏರಿಕೆಯಾಗಿದೆ.

ಬ್ರಾಡ್‌ಬ್ಯಾಂಡ್‌ ಸಂಪರ್ಕ ಬಾಗಲಕೋಟೆ ಜಿಲ್ಲೆಯಲ್ಲಿಯೇ ಎರಡು ಸಾವಿರ ದಾಟಿದೆ. ಸಂಪರ್ಕಗಳ ಪ್ರಮಾಣ ಭಾರೀ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ ಟವರ್ ಸಾಮರ್ಥ್ಯ ಮಾತ್ರ ಅಷ್ಟೇ ಇದೆ. ಹಾಗಾಗಿ ಕೆಲವು ತಾಂತ್ರಿಕ ಸಮಸ್ಯೆಗಳು ತಲೆದೊರಿವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಎಸ್‌ಎನ್‌ಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಬಿಎಸ್‌ಎನ್‌ಎಲ್‌ ಸಾರ್ವಜನಿಕ ಸೇವಾ ಕ್ಷೇತ್ರವಾದ ಕಾರಣ (ಪಿಎಸ್‌ಯು) ಲಾಭದ ಬಗ್ಗೆ ಚಿಂತಿಸಲು ಆಗುವುದಿಲ್ಲ. ಆದರೆ ಈಗ ಖಾಸಗಿ ಕ್ಷೇತ್ರದೊಂದಿಗೆ ಪೈಪೋಟಿ ಹೆಚ್ಚಾಗಿದೆ. ನಿಗಮ ಲಾಭದಲ್ಲಿ ಸಾಗಲಿ ಎಂದು ಹೇಳುವ ಸರ್ಕಾರ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸವಲತ್ತು ಮಾತ್ರ ಕಲ್ಪಿಸುವುದಿಲ್ಲ. ಹೀಗಾಗಿ ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿದೆ’ ಎಂದು ಅವರು ವಾಸ್ತವ ಸ್ಥಿತಿ ಬಿಚ್ಚಿಡುತ್ತಾರೆ.

ಟವರ್ ಸಂಖ್ಯೆ ಹೆಚ್ಚಳಕ್ಕೆ ಪ್ರಸ್ತಾಪ: ‘ವಿಜಯಪುರ ವೃತ್ತದಲ್ಲಿ ನಿಗಮದ 435 ಟವರ್‌ಗಳು ಸದ್ಯ ಕಾರ್ಯಾಚರಿಸುತ್ತಿವೆ. ಅದರಲ್ಲಿ 346 ಟವರ್‌ಗಳು 2ಜಿ ಹಾಗೂ 89 ಟವರ್‌ಗಳು 3ಜಿ ಸೇವೆ ಒದಗಿಸುತ್ತಿವೆ. ಆದರೆ ಈಗ 3ಜಿ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಸಂಪರ್ಕದಟ್ಟಣೆ ಆಗುತ್ತಿದೆ. ಇನ್ನೂ 60 ಟವರ್‌ಗಳನ್ನು ನಗರ ಪ್ರದೇಶಗಳಲ್ಲಿ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮುಂದಿನ ಮಾರ್ಚ್‌ ಅಂತ್ಯಕ್ಕೆ ಟವರ್‌ಗಳ ಅಳವಡಿಕೆ ಆರಂಭವಾಗಲಿದೆ. ಆಗ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಯೂ ಇರುವುದಿಲ್ಲ’ ಎಂದು ವೃತ್ತದ ಮುಖ್ಯ ವ್ಯವಸ್ಥಾಪಕ ಆರ್.ಎಚ್.ಕಾಯಿ ಹೇಳುತ್ತಾರೆ.

100 ಟವರ್ ಮುಚ್ಚಲು ಚಿಂತನೆ?: ‘ವಿಜಯಪುರ ವೃತ್ತದಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ 100 ಟವರ್‌ಗಳು ನಷ್ಟದಲ್ಲಿ ನಡೆಯುತ್ತಿವೆ. ಒಂದು ಟವರ್ ನಿರ್ವಹಣೆಗೆ ಪ್ರತಿ ತಿಂಗಳು ₹ 35 ಸಾವಿರ ಖರ್ಚು ಆಗುತ್ತಿದೆ. ಆದರೆ ಅಲ್ಲಿಂದ ದಿನ ವೊಂದಕ್ಕೆ ಬೆರಳೆಣಿಕೆಯಷ್ಟು ಕರೆಗಳು ಮಾತ್ರ ಹೋಗಿ ನಿತ್ಯ ₹ 500 ರೂಪಾಯಿ ವರಮಾನವೂ ಹುಟ್ಟುತ್ತಿಲ್ಲ. ಅಂತಹ ಟವರ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಇಲ್ಲವೇ ಮುಚ್ಚುವ ಚಿಂತನೆಯೂ ಇದೆ. ಆದರೆ ಆ ತೀರ್ಮಾನ ಮೇಲಿನ ಹಂತದಲ್ಲಿ ಆಗಬೇಕಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry