ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಸಾಶನಕ್ಕಾಗಿ ಕಲಾವಿದರು ಒಗ್ಗಟ್ಟು ಪ್ರದರ್ಶಿಸಲಿ’

Last Updated 17 ಅಕ್ಟೋಬರ್ 2017, 6:27 IST
ಅಕ್ಷರ ಗಾತ್ರ

ಹೊಸದುರ್ಗ: ‘ಕಲಾವಿದರು ಸರ್ಕಾರದಿಂದ ಮಾಸಾಶನ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರಂತೆ ಶಕ್ತಿ ಪ್ರದರ್ಶಿಸಬೇಕು’ ಎಂದು ಬೆಂಗಳೂರಿನ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಅಧ್ಯಕ್ಷ ಬಿ.ಜಿ.ಜ್ಯೋತಿ ಪ್ರಕಾಶ್‌ ಮಿರ್ಜಿ ಸಲಹೆ ನೀಡಿದರು.

ವಿಸ್ಮಯ ಜಾದೂ ಮತ್ತು ರಹಸ್ಯ ಬಯಲು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ 5ನೇ ವರ್ಷದ ಕನ್ನಡ ನುಡಿ ಜಾನಪದ ಜಾತ್ರೆಯ ರಾಜ್ಯ ಮಟ್ಟದ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಮ್ಮ ಕಲೆಯಲ್ಲಿ ನಿಪುಣತೆ ಸಾಧಿಸಿದಾಗ ಮಾತ್ರ ಕಲಾವಿದರು ಆ ಕಲೆಗೆ ಗೌರವ ಕೊಡಲು ಹಾಗೂ ಉಳಿಸಿ, ಬೆಳೆಸಲು ಸಾಧ್ಯ. ನಗರ ಪ್ರದೇಶದ ಬುದ್ಧಿವಂತ ಕಲಾವಿದರು ಮಾತ್ರ ಮಾಸಾಶನ ಪಡೆಯುತ್ತಿದ್ದಾರೆ. ಗ್ರಾಮೀಣ ಕಲಾವಿದರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಮಾಸಾಶನ ಪಡೆಯಲು ಹಾಗೂ ವೀರಗಾಸೆ ಕಲೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಲು ರಾಜ್ಯ ಮಟ್ಟದ ಪ್ರತಿಭಟನೆ ನಡೆಸಬೇಕು’ ಎಂದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಪ್ರತಿಯೊಬ್ಬನೂ ಕಲೆಯನ್ನು ಪ್ರೀತಿಸಿದಾಗ ಮಾತ್ರ ನಾಡಿನ ಸನಾತನ ಕಲೆ ಹಾಗೂ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಬಿಲ್ಲಪ್ಪ, ‘ಬಡತನ, ಅನಕ್ಷರತೆ, ಮೌಢ್ಯ ಸಮಾಜವನ್ನು ಕಾಡುತ್ತಿದೆ. ಈ ಸಮಸ್ಯೆಗಳ ಪರಿಹಾರ ಆಗದ ಹೊರತು ಸಮ ಸಮಾಜ ನಿರ್ಮಾಣವಾಗದು. ಗುಣಾತ್ಮಕ ಶಿಕ್ಷಣದ ಮೂಲಕ ಸಮಾಜ ಹಾಗೂ ರಾಷ್ಟ್ರವನ್ನು ಬದಲಾಯಿಸಲು ಸಾಧ್ಯ’ ಎಂದು ತಿಳಿಸಿದರು.

ಸಮ್ಮೇಳನ ಉದ್ಘಾಟಿಸಿದ ಶಾಸಕ ಬಿ.ಜಿ.ಗೋವಿಂದಪ್ಪ, ‘ದೃಶ್ಯ ಮಾಧ್ಯಮಗಳ ಹಾವಳಿಯಿಂದ ಕಣ್ಮರೆ ಆಗುತ್ತಿರುವ ಗ್ರಾಮೀಣ ಕಲೆ, ಸಂಸ್ಕೃತಿ ಉಳಿಸಲು ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.

ಭಗೀರಥ ಗುರುಪೀಠದ ಪುರುಷೋತ್ತ ಮಾನಂದಪುರಿ ಸ್ವಾಮೀಜಿ, ಹಳೆಕುಂದೂರು ಗೋವರ್ಧನಗಿರಿ ಜಗದಾಂಬ ಸಂಸ್ಥಾನದ ತಿಮ್ಮಪ್ಪ ಸ್ವಾಮೀಜಿ, ಕುಂಚಿಟಿಗ ಸಂಸ್ಥಾನದ ಶಾಂತವೀರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜಾದೂಗಾರ ವಿ.ಮೋಹನ್‌ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಧನೆ ಮಾಡಿದ ಹಲವು ಸಾಧಕರಿಗೆ ‘ಕನ್ನಡ ಗಾರುಡಿಗ ರತ್ನ’ ಪ್ರಶಸ್ತಿ, ‘ಆದರ್ಶ ದಂಪತಿ’ ಪ್ರಶಸ್ತಿ, ಮರಣೋತ್ತರ ಪ್ರಶಸ್ತಿ, ‘ಕನ್ನಡ ಕುವರ–ಕುವರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮ್ಮೇಳನಕ್ಕೂ ಮೊದಲು ನಡೆದ ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ ಪ್ರದರ್ಶನಗೊಂಡಿತು.

ಸಾಹಿತಿ ಡಾ.ಬಸವರಾಜು ನಲ್ಲಿಸರ್‌, ಶಂಬೈನೂರು ಸ್ವಾಮೀಜಿ, ಜೆಡಿಎಸ್‌ ಮುಖಂಡ ರೇಣುಕಾ ಪ್ರಸಾದ್‌, ರಾಗಿ ಶಿವಮೂರ್ತಿ, ಬಿ.ಕೆ.ನಾರಾಯಣಸ್ವಾಮಿ, ಮಹಿಳಾ ವೀರಗಾಸೆ ಸಂಸ್ಥಾಪಕಿ ಹೇಮಲತಾ, ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಬಿ.ಪಿ.ಓಂಕಾರಪ್ಪ, ಯುವ ಘಟಕದ ಅಧ್ಯಕ್ಷ ನಿಜಲಿಂಗಪ್ಪ, ವಕೀಲ ಎಂ.ಶಿವಲಿಂಗಪ್ಪ, ಎಚ್‌.ಬಿ.ರವಿಕುಮಾರ್‌, ಡಾ.ಎಂ.ಎಚ್‌.ಕೃಷ್ಣಮೂರ್ತಿ, ಚಂದ್ರಶೇಖರ್‌, ಹನು ಮಂತಪ್ಪ, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಧನಂಜಯ, ಬಿ.ಜಿ.ವೆಂಕಟೇಶ್‌, ಮೆ.ನಾ.ಬೊಮ್ಮಲಿಂಗಪ್ಪ, ಸಫಾರಿ ಶಿವಲಿಂಗಪ್ಪ ಹಾಜರಿದ್ದರು.

ವೀರಗಾಸೆ ಸಂಘ ಉದ್ಘಾಟನೆ: ತಾಲ್ಲೂಕು ವೀರಭದ್ರೇಶ್ವರ ವೀರಗಾಸೆ ಹಾಗೂ ಜಾನಪದ ಕಲಾ ಸಂಘ ಹಾಗೂ ಜಮ್ಮಾಪುರ, ಹೆನ್ನೇಕೆರೆ, ಅರಳೀಹಳ್ಳಿ, ಮಳಲಿ, ಆನಿವಾಳ, ಅರಲಹಳ್ಳಿ, ನಾಯಿಗೆರೆ, ಕೈನಡು, ಅಡವಿಸೆಂಗೇನಹಳ್ಳಿ, ಮೆನಸಿನೋಡು ಗೊಲ್ಲರಹಟ್ಟಿ, ಜಿ.ಎನ್‌.ಕೆರೆ, ಶೆಟ್ಟಿಹಳ್ಲಿ, ಕೆಂಕೆರೆ, ಕಂಗುವಳ್ಳಿ, ಬುರುಡೇಕಟ್ಟೆ ಶಾಖೆಯನ್ನು ಉದ್ಘಾಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT