ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಮತ್ತೊಮ್ಮೆ ಉದ್ಘಾಟಿಸಿದರೇ ಪ್ರಧಾನಿ ಮೋದಿ?

ಮಂಗಳವಾರ, ಜೂನ್ 18, 2019
23 °C

ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಮತ್ತೊಮ್ಮೆ ಉದ್ಘಾಟಿಸಿದರೇ ಪ್ರಧಾನಿ ಮೋದಿ?

Published:
Updated:
ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಮತ್ತೊಮ್ಮೆ ಉದ್ಘಾಟಿಸಿದರೇ ಪ್ರಧಾನಿ ಮೋದಿ?

ನವದೆಹಲಿ: ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು (ಎಐಐಎ) ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಉದ್ಘಾಟನೆ ಮಾಡಿದರೇ? ಸಂಸ್ಥೆ ಈಗಾಗಲೇ ಅಸ್ತಿತ್ವದಲ್ಲಿತ್ತೇ ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಎಐಐಎಯನ್ನು ಮಂಗಳವಾರ ಉದ್ಘಾಟಿಸಿದ್ದ ಮೋದಿ ಅವರು, ಪರೋಕ್ಷವಾಗಿ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ತನ್ನ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸದಿದ್ದರೆ ಯಾವುದೇ ದೇಶವೂ ಮುಂದುವರಿಯಲು ಸಾಧ್ಯವಿಲ್ಲ. ಬ್ರಿಟಿಷರ ಕಾಲದಲ್ಲಿ ಆಯುರ್ವೇದವನ್ನು ಕಡೆಗಣಿಸಲಾಗಿತ್ತು. ಸ್ವಾತಂತ್ರ್ಯ ಬಂದ ನಂತರವೂ ಆಯುರ್ವೇದವನ್ನು ಕಡೆಗಣಿಸಲಾಯಿತು. ಆದರೆ ನಾವು ಅದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಸಾರ್ವಜನಿಕ ಆರೋಗ್ಯ ಸೇವೆಯ ಜತೆಗೆ ಆಯುರ್ವೇದವನ್ನು ವಿಲೀನ ಮಾಡುತ್ತೇವೆ’ ಎಂದು ಹೇಳಿದ್ದರು.

ಅಲ್ಲದೆ, ದೇಶದ ಮೊದಲ ಆಯುರ್ವೇದ ಸಂಸ್ಥೆಯನ್ನು ದೇಶಕ್ಕೆ ಸಮರ್ಪಿಸುತ್ತಿರುವುದಾಗಿ ಪ್ರಧಾನಮಂತ್ರಿಯವರ ಕಚೇರಿಯ ಟ್ವಿಟರ್‌ ಖಾತೆಯಲ್ಲಿ ಸಂದೇಶ ಪ್ರಕಟಿಸಲಾಗಿತ್ತು.

ಆದರೆ ದಾಖಲೆಗಳ ಪ್ರಕಾರ, 7 ವರ್ಷಗಳ ಹಿಂದೆಯೇ ಎಐಐಎ ಸ್ಥಾಪನೆಯಾಗಿತ್ತು ಎಂಬುದು ತಿಳಿದುಬಂದಿದೆ.

2010ರ ಅಕ್ಟೋಬರ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂದಿನ ರಾಜ್ಯ ಖಾತೆ ಸಚಿವರಾಗಿದ್ದ ಎಸ್‌. ಗಾಂಧಿಸೆಲ್ವನ್ ಅವರು ಎಐಐಎ ಉದ್ಘಾಟನೆ ಮಾಡಿದ್ದಾಗಿ ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದಲ್ಲಿ ಬಿಡುಗಡೆ ಮಾಡಲಾದ (ಪ್ರೆಸ್‌ ಇನ್‌ಫಾರ್‌ಮೆಷನ್ ಬ್ಯೂರೋ/ಪಿಐಬಿ) ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಗೊಂಡಿದೆ. ಯುಪಿಎ ಸರ್ಕಾರದ ಮಿತ್ರ ಪಕ್ಷವಾಗಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖಂಡರಾದ ಗಾಂಧಿಸೆಲ್ವನ್ 2009ರಿಂದ 2013ರ ವರೆಗೆ ಯುಪಿಎ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2010ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆ

ಈ ಮಧ್ಯೆ, ಎಐಐಎಯನ್ನು ಪ್ರಧಾನಿ ಎರಡನೇ ಬಾರಿ ಉದ್ಘಾಟಿಸಿದರೇ ಎಂದು ಕೇಳಲಾದ ಪ್ರಶ್ನೆಗೆ ಬಿಜೆಪಿ ವಕ್ತಾರ ಬಿಜಯ್ ಸೋನ್‌ಕರ್ ಶಾಸ್ತ್ರಿ ಅವರು, ‘ನಾವು ಮತ್ತೊಮ್ಮೆ ಉದ್ಘಾಟಿಸುವಂತಾಗಬೇಕಾದರೆ ಯುಪಿಎ ಸರ್ಕಾರ ಹೇಗೆ ಕೆಲಸ ಮಾಡಿರಬಹುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು’ ಎಂದು ಉತ್ತರ ನೀಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಇದು ದಾಖಲೆಗಳಲ್ಲಿ ದೊರೆತ ಮಾಹಿತಿಗಳಿಗೆ ಪುಷ್ಟಿ ನೀಡಿದೆ.

ಅಲ್ಲದೆ, ‘ಕಳೆದ ಏಳು ವರ್ಷಗಳಿಂದ ಅನೇಕ ರೋಗಿಗಳು ಎಐಐಎ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನನ್ನ ತಾಯಿಗೆ ಉಚಿತ ಚಿಕಿತ್ಸೆ ಕೊಡಿಸಿದ್ದೇನೆ’ ಎಂದು ಪತ್ರಕರ್ತರೊಬ್ಬರು ಜಾಲತಾಣವೊಂದರಲ್ಲಿ ಉಲ್ಲೇಖಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ...

ಪ್ರತಿ ಜಿಲ್ಲೆಯಲೂ ಆಯುರ್ವೇದ ಆಸ್ಪತ್ರೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry