‘ರಾಮಧಾನ್ಯ’ದ ಕಥೆ ಹೇಳಲು ಸಜ್ಜಾದ ನಾಗೇಶ್

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

‘ರಾಮಧಾನ್ಯ’ದ ಕಥೆ ಹೇಳಲು ಸಜ್ಜಾದ ನಾಗೇಶ್

Published:
Updated:
‘ರಾಮಧಾನ್ಯ’ದ ಕಥೆ ಹೇಳಲು ಸಜ್ಜಾದ ನಾಗೇಶ್

ಕನಕದಾಸರ ರಾಮಧಾನ್ಯ ಚರಿತೆಯ ನಾಟಕ ರೂಪ ಸಿನಿಮಾ ಆಗಿದ್ದು, ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿ ನಿಂತಿದೆ. ಸಿನಿಮಾಕ್ಕೆ ‘ರಾಮಧಾನ್ಯ’ ಎಂಬ ಹೆಸರು ಇಡಲಾಗಿದೆ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ ಟಿ.ಎನ್. ನಾಗೇಶ್ ಅವರು ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದಿದ್ದರು. ಅವರ ಜೊತೆ ಸಿನಿಮಾ ತಂಡ ಕೂಡ ಇತ್ತು. ಈ ಸಿನಿಮಾ ನಿರ್ಮಾಣಕ್ಕೆ ಹತ್ತು ಜನ ಹಣ ಹೂಡಿದ್ದಾರೆ.

‘ಸಿನಿಮಾದ ಬಹುಪಾಲು ಭಾಗಗಳು ಸಿದ್ಧವಾಗಿವೆ. ಈ ಸಿನಿಮಾ ಪೌರಾಣಿಕ, ಐತಿಹಾಸಿಕ ಹಾಗೂ ಸಮಕಾಲೀನ ಕಥಾಹಂದರ ಹೊಂದಿದೆ. ಹಾಗಾಗಿ ಈ ಸಿನಿಮಾ ನಿರ್ದೇಶನ ಸವಾಲಿನ ಕೆಲಸ ಆಗಿತ್ತು’ ಎಂದು ಹೇಳಿದರು ನಾಗೇಶ್. ಸಿನಿಮಾದ ಒಂದು ಹಾಡು ಹಾಗೂ ಇತರ ಕೆಲವು ಕೆಲಸಗಳು ಪೂರ್ಣಗೊಳ್ಳುವುದು ಬಾಕಿ ಇದೆಯಂತೆ. ಅವು ಮುಗಿದರೆ ಸಿನಿಮಾ ಸಿದ್ಧವಾದಂತೆಯೇ ಎಂದು ಹೇಳಿದೆ ಚಿತ್ರತಂಡ.

ಕಾಗಿನೆಲೆ, ಶ್ರೀರಂಗಪಟ್ಟಣ ಕಡೆ ಈ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣವನ್ನು 45 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಮೊದಲು ಉದ್ದೇಶಿಸಲಾಗಿತ್ತು. ಒಂದೆರಡು ದಿನ ಹೆಚ್ಚು ಸಮಯ ಬೇಕಾಯಿತು ಎಂದೂ ತಂಡ ಹೇಳಿದೆ.

ಈ ಸಿನಿಮಾಕ್ಕೆ ಸಂಗೀತ ನೀಡಿದವರು ಜಯಸಿಂಹ ಅವರು. ‘ಇದು ಅಚ್ಚ ಕನ್ನಡದ ಸಿನಿಮಾ. ಇಲ್ಲಿನ ಪಾತ್ರಗಳು ಕೂಡ ಕನ್ನಡದ ಸೊಗಡಿನವು. ಸಿನಿಮಾದ ಹಾಡುಗಳಲ್ಲಿ ಇಂಗ್ಲಿಷಿನ ಬಳಕೆ ಇಲ್ಲ’ ಎಂದು ಜಯಸಿಂಹ ಹೇಳಿದರು. ಕನಕ ಹಾಗೂ ಪುರಂದರ ದಾಸರ ಗೀತೆಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದೂ ತಿಳಿಸಿದರು. ಒಂದು ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಅವರು ಬರೆದಿದ್ದಾರಂತೆ.

(ಟಿ.ಎನ್. ನಾಗೇಶ್)

ಈ ಸಿನಿಮಾದಲ್ಲಿ ಯಶಸ್ ಸೂರ್ಯ ಅವರು ಕನಕದಾಸರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನನ್ನ ಜೀವನದ ವಿಶೇಷ ಸಿನಿಮಾ ಇದು. ಒಂದೇ ಸಿನಿಮಾದಲ್ಲಿ ರಾಮ, ದಂಡನಾಯಕ ಹಾಗೂ ಕನಕದಾಸರ ಪಾತ್ರಗಳನ್ನು ನಿಭಾಯಿಸುವುದು ಸಾಮಾನ್ಯದ ಮಾತಲ್ಲ’ ಎಂದರು ಯಶಸ್.

‘ಶ್ರೀರಾಮ ಹಾಗೂ ದಂಡನಾಯಕನ ಪಾತ್ರವನ್ನು ನನ್ನ ವಯಸ್ಸಿನವರು ಮಾಡಿಬಿಡಬಹುದು. ಆದರೆ ಕನಕದಾಸರ ಪಾತ್ರ ನಿಭಾಯಿಸಲು ಹೆಚ್ಚು ಶ್ರಮ ಬೇಕು. ಈ ಸಿನಿಮಾಕ್ಕಾಗಿ ನಾನು 20 ದಿನಗಳ ಸಿದ್ಧತೆ ನಡೆಸಿದ್ದೆ’ ಎಂದೂ ಅವರು ಹೇಳಿಕೊಂಡರು.

ರಾಜ್‌ ಕುಮಾರ್‌ ನಂತರ ಕನ್ನಡದಲ್ಲಿ ಯಾರೂ ಕೂಡ ಕನಕದಾಸರ ಪಾತ್ರ ನಿಭಾಯಿಸಿದ್ದು ತಮಗೆ ಗೊತ್ತಿಲ್ಲ ಎಂದು ಹೇಳಿದರು ಸಿನಿಮಾದ ಸಹ ನಿರ್ದೇಶಕ ವಾದಿರಾಜ್.

ಈ ಸಿನಿಮಾದ ನಾಯಕಿ ನಿಮಿಕಾ ರತ್ನಾಕರ್. ‘ನಾನು ಎಂಜಿನಿಯರ್ ಆಗಿದ್ದೆ. ಹಾಡುತ್ತಿದ್ದೆ, ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಇದ್ದೆ. ನನಗೆ ಈ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದೊಂದು ಅದೃಷ್ಟ’ ಎಂದರು ನಿಮಿಕಾ. ಅವರ ವೃತ್ತಿ ಜೀವನದ ಮೊದಲ ಸಿನಿಮಾ ಇದಂತೆ. ನವೆಂಬರ್ ಕೊನೆಯಲ್ಲಿ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ಅಂದಹಾಗೆ ನಾಗೇಶ್ ಅವರಿಗೆ ಈ ಸಿನಿಮಾ ನಿರ್ದೇಶಿಸಲು ಪ‍್ರೇರಣೆ ನೀಡಿದ್ದು ಅವರ ಪುತ್ರನಂತೆ. ‘ಜಾತಿ ಹಾಗೂ ವರ್ಗಗಳಿಗೆ ಸಂಬಂಧಿಸಿದ ಸಮಸ್ಯೆಗಳು ಶತಮಾನಗಳಿಂದಲೂ ಇವೆ. ಆ ಸಮಸ್ಯೆ ನಿವಾರಣೆಯಾಗಲಿ ಎಂಬ ಉದ್ದೇಶದಿಂದ ನಾನೊಂದು ಪುಟ್ಟ ಪ್ರಯತ್ನವನ್ನು ಈ ಸಿನಿಮಾ ಮೂಲಕ ಮಾಡಿದ್ದೇನೆ’ ಎಂದರು ನಾಗೇಶ್.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry