ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಕ್ಕೆ ಮಣಿದ ಕರ್ನಾಟಕ ತಂಡ

ಸಿ.ಕೆ. ನಾಯ್ಡು ಕ್ರಿಕೆಟ್‌: 111 ರನ್‌ಗೆ ಆಲೌಟ್‌ ಆದ ಆತಿಥೇಯರು
Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ಮೊದಲ ಇನಿಂಗ್ಸ್‌ ಮುನ್ನಡೆ ಪಡೆದರೂ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ಕರ್ನಾಟಕ ತಂಡ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಕ್ರಿಕೆಟ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸೋತಿತು.

ಇಲ್ಲಿಯ ರಾಜನಗರದಲ್ಲಿರುವ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ಬುಧವಾರ ಮುಗಿದ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ದೀಪಾವಳಿ ಹಬ್ಬಕ್ಕೆ ಗೆಲುವಿನ ಉಡುಗೊರೆ ನೀಡಲು ಸಾಧ್ಯವಾಗಲಿಲ್ಲ. ಆಂಧ್ರ ನೀಡಿದ್ದ 275 ರನ್‌ ಗುರಿಯ ಎದುರು ಪರದಾಡಿ 58.5 ಓವರ್‌ಗಳಲ್ಲಿ 111 ರನ್‌ ಗಳಿಸಿ ಹೋರಾಟ ಮುಗಿಸಿತು. ಕೊನೆಯ ದಿನದಾಟದಲ್ಲಿ ರಾಜ್ಯ ತಂಡ ಪಂದ್ಯ ಡ್ರಾ ಮಾಡಿಕೊಂಡಿದ್ದರೂ ಮೂರು ಪಾಯಿಂಟ್ಸ್‌ ಲಭಿಸುತ್ತಿದ್ದವು.

ಬ್ಯಾಟಿಂಗ್ ವೈಫಲ್ಯ: ನಾಯಕ ಡಿ. ನಿಶ್ಚಲ್‌ (43), ಅಭಿನವ್‌ ಮನೋಹರ (30) ಮತ್ತು ಕೆ.ಎಲ್‌. ಶ್ರೀಜಿತ್‌ (13) ಅವರನ್ನು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್‌ಮನ್‌ಗಳೂ ಎರಡಂಕಿಯ ಮೊತ್ತ ಮುಟ್ಟಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಪ್ರತೀಕ್‌ ಜೈನ್‌ ಮತ್ತು ಶ್ರೀನಿವಾಸ್ ಶರತ್‌ ರನ್‌ ಖಾತೆ ಆರಂಭಿಸುವ ಮೊದಲೇ ಪೆವಿಲಿಯನ್ ಸೇರಿದರು.

ಮೊದಲ ಮೂರು ವಿಕೆಟ್‌ಗಳು ಉರುಳಿದಾಗ ರಾಜ್ಯ ತಂಡ 79 ರನ್ ಗಳಿಸಿತ್ತು. ಆದ್ದರಿಂದ ಪಂದ್ಯ ಡ್ರಾ ಮಾಡಿಕೊಳ್ಳಲು ಹೋರಾಡಿತು. ಕೊನೆಯ 32 ರನ್ ಕಲೆ ಹಾಕುವಷ್ಟರಲ್ಲಿ ಉಳಿದ ಎಲ್ಲಾ ವಿಕೆಟ್‌ಗಳು ಪತನವಾದವು. ಎರಡು ರನ್‌ ಗಳಿಸುವಷ್ಟರಲ್ಲಿ ಅಂತಿಮ ನಾಲ್ಕು ವಿಕೆಟ್‌ಗಳು ಉರುಳಿದವು.

ಇದೇ 26ರಿಂದ ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ಮತ್ತು ರೈಲ್ವೇಸ್‌ ಪೈಪೋಟಿ ನಡೆಸಲಿವೆ. ಆಂಧ್ರ ಈ ಬಾರಿಯ ಟೂರ್ನಿಯಲ್ಲಿ ಪಡೆದ ಮೊದಲ ಜಯ ಇದು. ಮೊದಲ ಪಂದ್ಯದಲ್ಲಿ ಬರೋಡ ಎದುರು ಡ್ರಾ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರು: ಆಂಧ್ರ ಮೊದಲ ಇನಿಂಗ್ಸ್‌ 57.2 ಓವರ್‌ಗಳಲ್ಲಿ 172 ಹಾಗೂ ದ್ವಿತೀಯ ಇನಿಂಗ್ಸ್‌ 101.3 ಓವರ್‌ಗಳಲ್ಲಿ 9 ವಿಕೆಟ್‌ಗೆ 374 ಡಿಕ್ಲೇರ್ಡ್‌.

ಕರ್ನಾಟಕ ಪ್ರಥಮ ಇನಿಂಗ್ಸ್‌ 271 ಹಾಗೂ ಎರಡನೇ ಇನಿಂಗ್ಸ್‌ 58.5 ಓವರ್‌ಗಳಲ್ಲಿ 111 (ಡಿ. ನಿಶ್ಚಲ್‌ 43, ಅಭಿನವ್‌ ಮನೋಹರ 30, ಕೆ.ಎಲ್‌. ಶ್ರೀಜಿತ್‌ 13; ಕೆ.ವಿ. ಶಶಿಕಾಂತ್‌ 11ಕ್ಕೆ1, ನಾರಾಯಣ ರೆಡ್ಡಿ 10ಕ್ಕೆ3, ಭೀಮರಾವ್‌ 42ಕ್ಕೆ3, ಜಿ. ಮನೀಶ್‌ 14ಕ್ಕೆ1, ಎ. ವಿನಯ ಕುಮಾರ್‌ 5ಕ್ಕೆ2). ಫಲಿತಾಂಶ: ಆಂಧ್ರ ತಂಡಕ್ಕೆ 164 ರನ್‌ ಗೆಲುವು ಹಾಗೂ ಆರು ಪಾಯಿಂಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT