ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆಯಲ್ಲೂ ಖರೀದಿ ಭರಾಟೆ

Last Updated 20 ಅಕ್ಟೋಬರ್ 2017, 7:21 IST
ಅಕ್ಷರ ಗಾತ್ರ

ಕಲಬುರ್ಗಿ: ವಿವಿಧ ಹೂವುಗಳ ಬೆಲೆ ಗಗನಕ್ಕೇರಿದ್ದವು. ಆದರೆ, ಗ್ರಾಹಕರು ಬೆಲೆ ಕೇಳುತ್ತಿದ್ದಂತೆ ಆಶ್ಚರ್ಯ ವ್ಯಕ್ತಪಡಿಸಿದರೂ ಖರೀದಿಸುವುದನ್ನು ಬಿಡುತ್ತಿರಲಿಲ್ಲ!
ದೀಪಾವಳಿ ಅಮಾವಾಸ್ಯೆ ನಿಮಿತ್ತ ನಗರದ ಸೂಪರ್‌ ಮಾರ್ಕೆಟ್‌ ನಲ್ಲಿ ಗುರುವಾರ ತರಹೇವಾರಿ ಹೂವುಗಳ ಮಾರಾಟ ಜೋರಾಗಿತ್ತು. ಹಬ್ಬದ ಅಂಗವಾಗಿ ಅಂಗಡಿ ಪೂಜೆ, ಮನೆ ಪೂಜೆ, ವಾಹನಗಳ ಪೂಜೆ, ಲಕ್ಷ್ಮಿ ಪೂಜೆಗಾಗಿ ಜನರು ಹೂವುಗಳನ್ನು ಖರೀದಿಸಿದರು.

ಸೇವಂತಿ ಮತ್ತು ಕನಕಾಂಬರ ಹೂವು ಕೆ.ಜಿ.ಗೆ ₹400 ಇದ್ದರಿಂದ ಗ್ರಾಹಕರು ಮೊಳದ ಲೆಕ್ಕದಲ್ಲಿ ಕೊಳ್ಳುತ್ತಿದ್ದರು. ಸೇವಂತಿ ₹50, ಕನಕಾಂಬರ ಮತ್ತು ಮಲ್ಲಿಗೆ ಮೊಳಕ್ಕೆ ₹50, ಚೆಂಡು ಹೂವಿನ ಗಿಡ ₹50ಕ್ಕೆ ಎರಡು, ಚೆಂಡು ಹೂವಿನ ಹಾರ ಸಾಮಾನ್ಯವಾಗಿ ₹100 ಬೆಲೆ ಇತ್ತು. ಗ್ರಾಹಕರು ಚೌಕಾಸಿ ಮಾಡುತ್ತ ಕೊನೆಗೆ ಅನಿವಾರ್ಯವಾಗಿ ಹೇಳಿದ ಬೆಲೆಗೆ ಹೂ ಖರೀದಿಸಿದರು.

‘ಯಾವುದೇ ಪೂಜೆಗೂ ಹೂ ಬೇಕು. ಪ್ರತಿ ವರ್ಷ ಕೆ.ಜಿ. ಲೆಕ್ಕದಲ್ಲಿ ಹೂವುಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಈ ವರ್ಷ ಬೆಲೆ ತುಟ್ಟಿ ಇರುವುದರಿಂದ ಒಂದೆರಡು ಮೊಳ ಖರೀದಿಸಿದ್ದೆವೆ’ ಎಂದು ಗಂಗಾನಗರ ನಿವಾಸಿ ಶರಣಬಸಪ್ಪ ತಿಳಿಸಿದರು. ‘ಮಾರುಕಟ್ಟೆಗೆ ಹೂವುಗಳ ಆವಕ ಕಡಿಮೆಯಾಗಿದ್ದರಿಂದ ಬೆಲೆ ಹೆಚ್ಚಳವಾಗಿದೆ. ಗ್ರಾಹಕರಲ್ಲಿ ಖರೀಸುವ ಉತ್ಸಾಹ ಕಡಿಮೆಯಾಗಿಲ್ಲ’ ಎಂದು ಹೂವಿನ ವ್ಯಾಪಾರಿ ಮೊಹ್ಮದ್‌ ತಿಳಿಸಿದರು.

ಪೂಜೆಗೆ ಬೇಕಾಗುವ ಬಾಳೆ ಕಂಬ ₹50ಕ್ಕೆ ಎರಡು, ಕಬ್ಬು ₹50ಕ್ಕೆ ಎರಡು, ನೆಲ್ಲಿಕಾಯಿ ರೆಂಬೆಗಳು ₹40ಕ್ಕೆ ಎರಡರಂತೆ ಮಾರಾಟ ಇತ್ತು. ಬಿಳಿ ಕುಂಬಳಕಾಯಿ ಒಂದಕ್ಕೆ ₹100, ಬೂದುಗುಂಬಳ ₹200 ಬೆಲೆ ಇತ್ತು.

ಹಣ್ಣುಗಳ ಬೆಲೆಯಲ್ಲಿ ಅಷ್ಟೇನು ಏರಿಕೆ ಇರಲಿಲ್ಲ. ಸಣ್ಣ ಗಾತ್ರದ ಸೇಬು ಹಣ್ಣು ₹50ಕ್ಕೆ ಐದು ಕೊಟ್ಟರೆ, ದೊಡ್ಡ ಗಾತ್ರದ ಸೇಬು ₹100ಕ್ಕೆ ಐದರಂತೆ ಬಿಕರಿಯಾಗುತ್ತಿದ್ದವು. ಚಿಕ್ಕು ₹80 ಕೆ.ಜಿ., ಸೀತಾಫಲ ₹50ಕ್ಕೆ ಮೂರು, ಮೂಸಂಬಿ ₹50ಕ್ಕೆ ಐದರಂತೆ ಗ್ರಾಹಕರು ಖರೀದಿಸಿದರು. ಇನ್ನೂ ತರಕಾರಿ ವಹಿವಾಟು ಎಂದಿನಂತೆ ಇತ್ತು.\

ಬಟ್ಟೆ ಖರೀದಿ: ಬಟ್ಟೆ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಅಂಗಡಿಗಳ ಮುಂದೆ ರಿಯಾಯಿತಿ ಬೆಲೆಗಳ ಫಲಕವನ್ನು ತೂಗು ಹಾಕಿರುವುದು ಕಂಡುಬಂತು. ಅಂಗಡಿಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಾಹಕರು ಕುಟುಂಬ ಸಮೇತರಾಗಿ ಬಂದು ಬಟ್ಟೆ ಖರೀದಿಸುವುದು ಸಾಮಾನ್ಯವಾಗಿತ್ತು.

ಸಂಚಾರ ಸಮಸ್ಯೆ: ಮಾರ್ಕೆಟ್‌– ನೆಹರೂ ಗಂಜ್‌ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಸಂಚಾರ ಪೊಲೀಸರು ರಸ್ತೆ ಮಧ್ಯೆ ದಾಟಬೇಡಿ. ನೆಹರೂ ಗಂಜ್‌ ಮಾರ್ಗದ ಪಾದಚಾರಿ ರಸ್ತೆಯ ಮೇಲೆ ತೆರಳುವಂತೆ ಧ್ವನಿವರ್ಧಕದಲ್ಲಿ ಮನವಿ ಮಾಡುತ್ತಿದ್ದರು. ಆದರೆ, ಗ್ರಾಹಕರು ರಸ್ತೆ ದಾಟುವ ಧಾವಂತದಲ್ಲಿ ಇದಕ್ಕೆ ಕಿವಿಗೊಡುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT