ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀಪೂಜೆ ಸಂಭ್ರಮ; ಬೆಳಕಿನ ಚಿತ್ತಾರ

Last Updated 20 ಅಕ್ಟೋಬರ್ 2017, 9:33 IST
ಅಕ್ಷರ ಗಾತ್ರ

ಶಿವಮೊಗ್ಗ: ಬಲಿಪಾಡ್ಯಮಿಗೂ ಮುನ್ನಾ ದಿನವಾದ ಗುರುವಾರ ಜಿಲ್ಲೆಯ ಬಹುತೇಕ ಕಡೆ ಲಕ್ಷ್ಮೀಪೂಜೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಬಹುತೇಕ ಮನೆಗಳಲ್ಲಿ ಮಹಿಳೆಯರು ಇಡೀ ಮನೆ ಶೃಂಗರಿಸಿ, ಮಂಟಪ ನಿರ್ಮಿಸಿ, ಲಕ್ಷ್ಮೀಯ ಬೆಳ್ಳಿಯ ಮುಖವಾಡವನ್ನು ಚಿನ್ನಾಭರಣದಿಂದ ಅಲಂಕರಿಸಿ, ಹೊಸಸೀರೆ ಉಡಿಸಿ ಪೂಜಿಸಿದರು. ನೆರೆಹೊರೆಯ ಮುತ್ತೈದೆಯರನ್ನು ಕರೆದು ಅರಿಷಿನ–ಕುಂಕುಮ ನೀಡಿ, ಸಿಹಿ ಹಂಚಿ ಸಂಭ್ರಮಿಸಿದರು.

ಅಂಗಡಿ– ಮುಂಗಟ್ಟು, ಹೋಟೆಲ್‌ಗಳು ಹಾಗೂ ಬಹುತೇಕ ವಾಣಿಜ್ಯ ಕೇಂದ್ರಗಳವರು ಮಧ್ಯಾಹ್ನವೇ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ, ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿದ್ದರು. ಮಾವಿನ ಸೊಪ್ಪು, ಬಾಳೆ ಕಂದು ಕಟ್ಟಿ ಅಲಂಕರಿಸಿದ್ದರು. ಬಗೆ ಬಗೆಯ ಹೂವುಗಳಿಂದ ಲಕ್ಷ್ಮೀ ದೇವಿಯ ಮೂರ್ತಿ ಅಥವಾ ಚಿತ್ರ ಅಲಂಕರಿಸಿ, ಪೂಜಿಸಿದರು.

ಗ್ರಾಹಕರನ್ನು ಸಂಜೆ ಪೂಜೆಗೆ ಆಹ್ವಾನಿಸಿ, ಹಣ್ಣು, ಸಿಹಿ ನೀಡಿದರು. ಜನರು ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಭೇಟಿ ನೀಡುತ್ತಾ ಹಬ್ಬದ ಮೆರುಗು ಹೆಚ್ಚಿಸಿದರು.
ಕೆಲವು ಅಂಗಡಿಗಳಲ್ಲಿ ಲಕ್ಷ್ಮೀಪೂಜೆ ಮುಗಿಯುತ್ತಿದ್ದಂತೆ ಪಟಾಕಿಗಳ ಸದ್ದು ಕಿವಿಗಪ್ಪಳಿಸುತ್ತಿತ್ತು. ಗಾಂಧಿಬಜಾರ್, ನೆಹರೂ ರಸ್ತೆ, ಬಿ.ಎಚ್. ರಸ್ತೆ, ಸವಳಂಗ ರಸ್ತೆ, ಬಸ್‌ನಿಲ್ದಾಣ, ಎಲ್‌.ಎಲ್‌.ಆರ್ ರಸ್ತೆ, ಕೋಟೆ ರಸ್ತೆ, ಗಾರ್ಡನ್ ಏರಿಯಾ, ವಿನೋಬನಗರ ರಸ್ತೆ, ತೀರ್ಥಹಳ್ಳಿ ರಸ್ತೆಗಳಲ್ಲಿ ಸಾಲು ಸಾಲಾಗಿ ಅಂಗಡಿ–ಮುಂಗಟ್ಟು ಅಲಂಕರಿಸಿದ್ದ ದೃಶ್ಯ
ಕಣ್ಮನ ಸೆಳೆಯುತ್ತಿತ್ತು ಮಕ್ಕಳು ಬಣ್ಣದ ಪಟಾಕಿ ಸಿಡಿಸಿ ಲಕ್ಷ್ಮೀ ಪೂಜೆಗೆ ಮೆರುಗು ತಂದರು.

ಒಂದೇ ಸೂರಿನಡಿ ಮಾರಾಟ: ಇದೇ ಮೊದಲ ಬಾರಿ ವಿನೋಬನಗರದ ಶಿವ ದೇವಾಲಯದ ಹಿಂಭಾಗ ಇರುವ ಪಾಲಿಕೆ ಜಾಗದಲ್ಲಿ ಬಾಳೆ ಕಂದು, ಮಾವಿನ ಸೊಪ್ಪು, ಹೂವು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಹಬ್ಬದ ಸಮಯದಲ್ಲೂ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ರಸ್ತೆ ವಿಭಜಕದ ಮಧ್ಯೆ ಕುಳಿತು ಈ ಸಾಮಗ್ರಿ ಮಾರಾಟ ಮಾಡಲಾಗುತ್ತಿತ್ತು. ಈ ಬಾರಿ ಪ್ರತ್ಯೇಕ ವ್ಯವಸ್ಥೆ ಮಾಡಿದ ಕಾರಣ 100 ಅಡಿ ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗಿತ್ತು.

ಮಲೆನಾಡಿನ ವಿಶೇಷ ಆಚರಣೆ: ಮಲೆನಾಡಿನಲ್ಲಿ ದೀಪವಳಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಮುಂಬಾಗಿಲು ಹಾಗೂ ಅಂಗಳದಲ್ಲಿ ಸಗಣಿಯ ಗುಪ್ಪೆ ಇಟ್ಟು, ತಂಗಡಿಕೆ ಹೂ, ಹರಿಕೆ, ದರ್ಬೆಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ಸಂಜೆ ಮನೆಯ ಮುಂದೆ, ಅಂಗಳದಲ್ಲಿ ದೀಪಾವಳಿ ಹಣತೆ ಸಾಲಾಗಿ ಹಚ್ಚಲಾಗುತ್ತದೆ. ಆಕಾಶ ಬುಟ್ಟಿಯ ಚಿತ್ತಾರ, ದೀಪದ ಬೆಳಕಿನಲ್ಲಿ ಮನೆಯೇ ದೇವ ಲೋಕದಿಂದ ಇಳಿದು ಬಂದಂತೆ ಭಾಸವಾಗುತ್ತದೆ.

ರೈತರು ಗೋವುಗಳನ್ನು ಅಲಂಕರಿಸಿ ಪೂಜಿಸುತ್ತಾರೆ. ಮೈಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಲಾಗುತ್ತದೆ. ತಮಾಷೆಗಾಗಿ ಕಳ್ಳತನ ಮಾಡುವ ಬೂರೆಹಬ್ಬ ಹಾಗೂ ಜನಪದ ಅಂಟಿಗೆ ಪಂಟಿಗೆಯೂ ಮಲೆನಾಡಿನ ವಿಶೇಷ. ಇಂದು ಗೋಪೂಜೆ ಶರಾವತಿ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶುಕ್ರವಾರ ಬೆಳಿಗ್ಗೆ 8ಕ್ಕೆ ಬಲಿಪಾಡ್ಯಮಿ ಪೂಜೆ ಹಾಗೂ ಗುರುಪುರದಲ್ಲಿ ಗೋ ಪೂಜೆ ಹಮ್ಮಿಕೊಳ್ಳಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT