ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮನ್ನು ಕೆಡಿಸಿದ್ದು ಜಾತಿಯಲ್ಲ; ಭ್ರಷ್ಟಾಚಾರ

Last Updated 21 ಅಕ್ಟೋಬರ್ 2017, 4:57 IST
ಅಕ್ಷರ ಗಾತ್ರ

ಜಮಖಂಡಿ (ಬಾಗಲಕೋಟೆ ಜಿಲ್ಲೆ): ‘ಜಾತಿ ನಮ್ಮನ್ನು ಕೆಡಿಸಿಲ್ಲ. ನಮ್ಮನ್ನು ಕೆಡಿಸಿರುವುದು ಭ್ರಷ್ಟಾಚಾರ’ ಎಂದು ರಂಗ ನಿರ್ದೇಶಕ ಎಸ್‌. ಎನ್‌. ಸೇತುರಾಮ ಅಭಿಪ್ರಾಯಪಟ್ಟರು. ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸತ್ಯಕಾಮರ ಆರಾಧನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ನೋಟುಗಳ ಅಮಾನ್ಯೀಕರಣ ನಿರ್ಧಾರ ಸರಿ. ಆದರೆ, ಅದರಿಂದಾಗಿ ಸಾಮೂಹಿಕವಾಗಿ ಶೇ 90ರಷ್ಟು ಜನ ಭ್ರಷ್ಟರಾದರು. ಅದು ಕಾನೂನಿನ ತಪ್ಪಲ್ಲ. ಒಳ್ಳೆಯ ಕಾನೂನಿಗೆ ನಾವು ಅಯೋಗ್ಯರಾಗಿದ್ದೇವೆ’ ಎಂದರು.

‘ದೇಶದ ಜನಕ್ಕೆ ಜವಾಬ್ದಾರಿ ಇದೆ. ಅವರ ಸಭ್ಯತೆ ಅದ್ಭುತವಾಗಿದೆ. ಆದರೆ ಅದಕ್ಕೆ ಬೇಕಾದ ವಾತಾವರಣ ಇಲ್ಲ’ ಎಂದು ವಿಷಾದಿಸಿದ ಅವರು, ‘ಇನ್ನು ಮುಂದೆ ನಮಗೆ ಬೇಕಾದ ವಾತಾವರಣವನ್ನು ನಾವೇ ಸೃಷ್ಟಿಸಿಕೊಳ್ಳಬೇಕು’ ಎಂದರು.

ಒಳ್ಳೆಯ ಭಾವನೆಗಳು ಹೃದಯದಿಂದ ಹರಿಯಬೇಕಾದರೆ ಹಿರಿಯರ ನೆನಪುಗಳು ಅಗತ್ಯ ಎಂದು ಅಭಿಪ್ರಾಯಪಟ್ಟ ಅವರು, ‘ನಮಗೆ ಹಿರಿಯರ ಆಸ್ತಿ ಮಾತ್ರ ನೆನಪಿರುತ್ತದೆ. ಅವರ ಬಗ್ಗೆ ಪ್ರಜ್ಞೆ ಇರುವುದಿಲ್ಲ. ಆದರೆ ಅಂಥ ಪ್ರಜ್ಞೆ ಇರುವುದರಿಂದಲೇ ಸತ್ಯಕಾಮರ ನೆನಪಿದೆ’ ಎಂದರು.

‘ಸತ್ಯಕಾಮರ ಆಕರ್ಷಣೆ ಲೌಕಕಿವೋ ಅಥವಾ ಅಲೌಕಿಕವೋ ಗೊತ್ತಾಗುವುದಿಲ್ಲ. ಅವರು ಪೌರಾಣಿಕ ಕಥೆಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿರುವ ಸಾಹಿತ್ಯ ‘ಸಂತಾನ’ ಕಥೆಯ ವಸ್ತುಸಾಮ್ಯ ಅನಿರೀಕ್ಷಿತವಾಗಿದೆ’ ಎಂದು ಬೆಂಗಳೂರಿನ ಕೊರ್ಗಿ ಶಂಕರನಾರಾಯಣ ಉಪಾಧ್ಯ ಅಭಿಪ್ರಾಯಪಟ್ಟರು.

ಬೆಂಗಳೂರಿನ ಯಕ್ಷಕಲಾ ಅಕಾಡೆಮಿಯ ಕೃಷ್ಣಮೂರ್ತಿ ತುಂಗ ನಿರ್ದೇಶನದಲ್ಲಿ ಬಾಲಕಿಯರು ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರಸ್ತುತಪಡಿಸಿದರು. ಧಾರವಾಡದ ಎಂ. ವೆಂಕಟೇಶಕುಮಾರ್‌ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲ್ಲೂಕಿನ ಕಲ್ಲಹಳ್ಳಿಯ ಸತ್ಯಕಾಮ ಪ್ರತಿಷ್ಠಾನ ಆಶ್ರಯದಲ್ಲಿ ಸತ್ಯಕಾಮರ ತೋಟದ ಮನೆ ‘ಸುಮ್ಮನೆ’ ಅಂಗಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಐತಿಹಾಸಿಕ ಸ್ಮಾರಕಗಳ ಉಳಿವಿಗಾಗಿ, ಆದಿಲ್‌ಷಾಹಿ ಕಾಲದ ಬಾವಿ, ಕೆರೆ– ಕಟ್ಟೆಗಳ ಪುನರುಜ್ಜೀವನಕ್ಕಾಗಿ ಶ್ರಮಿಸಿದ ಹೃದ್ರೋಗ ತಜ್ಞ, ಜಮಖಂಡಿಯ ಡಾ. ಎಚ್‌.ಜಿ. ದಡ್ಡಿ ಹಾಗೂ ಹಿರಿಯ ಕಲಾವಿದ ಹುನ್ನೂರಿನ ಕೆ.ಆರ್‌.ಮಹಾಲಿಂಗಪ್ಪ ಅವರನ್ನು ಸತ್ಯಕಾಮ ಪ್ರತಿಷ್ಠಾನದ ಪರವಾಗಿ ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ ₹ 10 ಸಾವಿರ ನಗದು ನೀಡಿ ಗೌರವಿಸಲಾಯಿತು. ಪ್ರತಿಷ್ಠಾನದ ಕಾರ್ಯದರ್ಶಿ ಡಾ.ವೀಣಾ ಬನ್ನಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT