ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಶರಭಣ್ಣ

Last Updated 21 ಅಕ್ಟೋಬರ್ 2017, 8:56 IST
ಅಕ್ಷರ ಗಾತ್ರ

ಶಕ್ತಿನಗರ: ‘ಪಟ್ಟಣದ ಕೃತಕ ಜೀವನಕ್ಕಿಂತ ಕೃಷಿ ಚಟುವಟಿಕೆಗಳ ಒಡನಾಟದ ನೆಮ್ಮದಿಯ ಗ್ರಾಮೀಣ ಬದುಕೇ ನಮಗಿಷ್ಟ...’ ಇದು ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡ ಶ್ರೀನಿವಾಸಪುರ ಗ್ರಾಮದ ರೈತ ಶರಭಣ್ಣಗೌಡ ಪಾಟೀಲ ಅವರ ಮಾತು.

ರೈತ ಶರಭಣ್ಣಗೌಡ ಪಾಟೀಲ ಪದವೀಧರರಾದರೂ ಸರ್ಕಾರಿ ಉದ್ಯೋಗದ ಬೆನ್ನು ಹತ್ತದೆ ತಂದೆ ನಡೆದ ಕೃಷಿ ಹಾದಿಯಲ್ಲೇ ಹೆಜ್ಜೆ ಹಾಕಲು ನಿರ್ಧರಿಸಿದರು. ತಂದೆ ಕಾಡಪ್ಪಗೌಡ ಪಾಟೀಲ ಅಪ್ಪಟ ರೈತ. ಚಿಕ್ಕ ವಯಸ್ಸಿನಿಂದಲೇ ಕೃಷಿಕ ಜೀವನ ಆರಂಭಿಸಿದ ಶರಭಣ್ಣಗೌಡ ಪಾಟೀಲರು ತಾಯಿಯ ಮಾರ್ಗದರ್ಶನದಲ್ಲಿ ವ್ಯವಸಾಯದಲ್ಲೇ ಬದುಕು ರೂಪಿಸಿಕೊಂಡರು.

ಬಾಳ ಸಂಗಾತಿಯಾಗಿ ಬಂದ ಚನ್ನಮ್ಮಪಾಟೀಲ ದುಡಿಮೆಯಲ್ಲೂ ಜತೆಯಾದರು.ಎತ್ತು– ನೇಗಿಲು ಹಿಡಿದು ಕೈಕೆಸರು ಮಾಡಿಕೊಂಡ ದಂಪತಿ ಬಾಯಿ ಮೊಸರು ಮಾಡಿಕೊಂಡರು. ಕೃಷಿ ಆದಾಯದಿಂದ ಸಂಸಾರ ನಿರ್ವಹಣೆಯೊಂದಿಗೆ ಉಳಿತಾಯವೂ ಆಗಿ 45 ಎಕರೆ ಜಮೀನುನಲ್ಲಿ ನವಣೆ,ಅರಕ,ಸಾಮೆ, ಕೊರಲೆ ಹಸಿರು, ಬರಗ, ಉದುಲು, ಕೊರಲೆ ಬಿಳಿ ಅಂತಹ ಸಿರಿಧಾನ್ಯಗಳು ಬೆಳೆಯುವುದರಿಂದ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ನೀಡಿತು.

ನಿರಂತರ ದುಡಿಮೆಯಿಂದ ಕೃಷಿ ಕ್ಷೇತ್ರ ವಿಸ್ತಾರವಾಯಿತು. ಸಾವಯವ ಕೃಷಿಯ ಜತೆ ಅಗತ್ಯವಿದ್ದಾಗ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿದರು. ಶರಭಣ್ಣಗೌಡ ಪಾಟೀಲರಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರು ಹೆಣ್ಣುಮಕ್ಕಳು.ಹಿರಿಯ ಮಗ ವಿರುಪಾಕ್ಷಿಪಾಟೀಲ ಉದ್ಯೋಗ ನಿಮಿತ್ತ ಬೆಂಗಳೂರುನಲ್ಲಿ ನೆಲೆಸಿದ್ದಾರೆ. ಎರಡನೇ ಮಗ ವೆಂಕಟರೆಡ್ಡಿ ಪಾಟೀಲ. ಮಳೆಯ ನೀರನ್ನು ಬಳಸಿ, ವ್ಯವಸಾಯ ಮಾಡುತ್ತಿದ್ದಾರೆ.

‘ಮಣ್ಣನ್ನು ನಂಬಿ ದುಡಿದಿದ್ದರಿಂದ ನೆಮ್ಮದಿಯ ಜೀವನಕ್ಕೆ ಅಡ್ಡಿಯಿಲ್ಲ. ಸರ್ಕಾರಿ ಉದ್ಯೋಗ, ವ್ಯಾಪಾರಕ್ಕಿಂತ ಬೇಸಾಯದ ಬದುಕು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ನೆಮ್ಮದಿ ನೀಡುತ್ತದೆ’ ಎಂದು ಶರಭಣ್ಣಗೌಡ ಪಾಟೀಲ ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಿ.ಆರ್.ಸಂದೀಪ್ ಮಾತನಾಡಿ,ರಾಯಚೂರು ತಾಲ್ಲೂಕಿನಲ್ಲಿ 400 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ರೈತರು ಬೆಳೆದಿದ್ದಾರೆ. ಸರ್ಕಾರ ಮಟ್ಟದಲ್ಲಿ ಪ್ರತಿ ಹೆಕ್ಟೇರ್‌ಗೆ 2,500 ರೂಪಾಯಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT