ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಮೇಶ್‌ ಕುಮಾರ್‌ ಅವರನ್ನು ಸಚಿವ ಸ್ಥಾನದಿಂದ ಕೈಬಿಡಿ’

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‌‘ಕ್ಷೌರಿಕ ವೃತ್ತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು’ ಎಂದು ಸವಿತಾ ಸಮುದಾಯ ಮೀಸಲಾತಿ ಒಕ್ಕೂಟವು ಒತ್ತಾಯಿಸಿದೆ.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಟಿ.ತ್ಯಾಗರಾಜ, ‘ಸಚಿವರು ಬಾಯಿ ಚಪಲಕ್ಕಾಗಿ ಸವಿತಾ ಸಮಾಜದ ಹೆಸರನ್ನೇ ಬಳಕೆ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಕ್ಷೌರಿಕ ವೃತ್ತಿಯ ಬಗ್ಗೆ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ಅವರು ಕೂಡಲೇ ಬಹಿರಂಗ ಕ್ಷಮೆ ಕೋರಬೇಕು. ಇಲ್ಲವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಇದೇ 24 ರಿಂದ ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಇನ್ನೊಬ್ಬರನ್ನು ಟೀಕಿಸುವ ಭರದಲ್ಲಿ ಕ್ಷೌರಿಕರನ್ನು ಜೇಬುಗಳ್ಳರಿಗೆ ಹೋಲಿಸಿ ಹೇಳಿಕೆ ನೀಡಿದ್ದಾರೆ. ನಮ್ಮ ವೃತ್ತಿಯಲ್ಲಿ ಯಾವುದೇ ಮೋಸ, ವಂಚನೆ ಇಲ್ಲ. ಹೇಳಿಕೆಯಿಂದ ನಮಗೆ ನೋವಾಗಿದೆ. ಅವರ ತಲೆಯಲ್ಲಿ ಕೂದಲು ಕಡಿಮೆ ಇವೆ ಎಂದುಕೊಂಡಿದ್ದೆವು. ಆದರೆ, ಬುದ್ಧಿಯೂ ಇಲ್ಲ ಎಂಬುದು ಈಗ ಸಾಬೀತಾಗಿದೆ’ ಎಂದು ವ್ಯಂಗ್ಯವಾಡಿದರು.

‌ರಾಜ್ಯ ಸವಿತಾ ಸಮಾಜ ನೌಕರರ ಸಂಘದ ಅಧ್ಯಕ್ಷ ಕೆ.ವಿ.ರಾಜಣ್ಣ, ‘ಅಹಿಂದ ವರ್ಗದ ಏಳಿಗೆಗಾಗಿ ಶ್ರಮಿ ಸುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಅವರ ಸಂಪುಟಕ್ಕೆ ರಮೇಶ್‌ ಕುಮಾರ್‌ ಕಪ್ಪು ಚುಕ್ಕೆಯಾಗಿದ್ದಾರೆ. ಅವರನ್ನು ಕೂಡಲೇ ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.

ಸವಿತಾ ಸಮಾಜದ ಮಹಿಳಾ ಸಂಘದ ಸೌಭಾಗ್ಯ, ‘ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದೆವು. ನಿಗಮವು ನಿಮಗೆ ಬೇಕಾ ಎಂದು ಹಾಸ್ಯ ಮಾಡುವಂತೆ ಆರೋಗ್ಯ ಸಚಿವರ ಹೇಳಿಕೆ ಇದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಹೇಳಿಕೆಯನ್ನು ಖಂಡಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT