ದಲೈ ಲಾಮಾ ಜತೆ ಸಭೆ ದೊಡ್ಡ ಅಪರಾಧ: ಚೀನಾ

ಸೋಮವಾರ, ಮೇ 27, 2019
33 °C

ದಲೈ ಲಾಮಾ ಜತೆ ಸಭೆ ದೊಡ್ಡ ಅಪರಾಧ: ಚೀನಾ

Published:
Updated:
ದಲೈ ಲಾಮಾ ಜತೆ ಸಭೆ ದೊಡ್ಡ ಅಪರಾಧ: ಚೀನಾ

ಬೀಜಿಂಗ್‌: ಟಿಬೆಟ್‌ ಧರ್ಮಗುರು ದಲೈ ಲಾಮಾ ಅವರೊಂದಿಗೆ ಜಾಗತಿಕ ನಾಯಕರು ಅಥವಾ ಯಾವುದೇ ದೇಶ ಸಭೆ ಆಯೋಜಿಸಿದರೆ ಅದನ್ನು ’ದೊಡ್ಡ ಅಪರಾಧ’ ಎಂದು ಪರಿಗಣಿಸಲಾಗುವುದು ಎಂದು ಚೀನಾ ಶನಿವಾರ ಎಚ್ಚರಿಕೆ ನೀಡಿದೆ.

ಚೀನಾದಿಂದ ಟಿಬೆಟ್‌ ಪ್ರತ್ಯೇಕಿಸಲು ಯತ್ನಿಸುತ್ತಿರುವ ದಲೈ ಲಾಮಾ ಅವರನ್ನು ‘ಪ್ರತ್ಯೇಕತಾವಾದಿ’ ಎಂದು ಚೀನಾ ಹೇಳಿದೆ.

ಜಾಗತಿಕ ನಾಯಕರು ಲಾಮಾ ಅವರೊಂದಿಗೆ ಸಭೆ ಆಯೋಜಿಸುವುದನ್ನು ವಿರೋಧಿಸುತ್ತಲೇ ಬಂದಿರುವ ಚೀನಾ, ತನ್ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದುವ ಎಲ್ಲ ವಿದೇಶಿ ಸರ್ಕಾರಗಳು ಟಿಬೆಟ್‌ ಅನ್ನು ಚೀನಾದ ಭಾಗವಾಗಿ ಗುರುತಿಸಬೇಕು ಎನ್ನುವುದನ್ನು ಕಡ್ಡಾಯ ಮಾಡಿದೆ.

ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲು ಭಾರತ ಲಾಮಾ ಅವರಿಗೆ ಅವಕಾಶ ನೀಡಿರುವುದಕ್ಕೆ ಚೀನಾ ಈ ಹಿಂದೆ ಪ್ರತಿಭಟನೆ ವ್ಯಕ್ತಪಡಿಸಿತ್ತು.

ಹಿಮಾಲಯದಲ್ಲಿರುವ ಟಿಬೆಟ್‌ ನೆಲದ ಮೇಲೆ ಚೀನಿಯರ ಆಳ್ವಿಕೆಯ ವಿರುದ್ಧ 1959 ನಡೆದ ದಂಗೆ ವಿಫಲಗೊಂಡ ನಂತರ ಲಾಮಾ ಚೀನಾ ತೊರೆದಿದ್ದರು. ಆ ಸಂದರ್ಭದಲ್ಲಿ ಗಡಿಪಾರುಗೊಂಡಿರುವ ಲಾಮಾ ಅವರು ಭಾರತದಲ್ಲಿ ನೆಲೆಸಿದ್ದಾರೆ.

‘ಯಾವುದೇ ದೇಶ ಅಥವಾ ಸಂಘಟನೆ ಲಾಮಾ ಅವರ ಭೇಟಿಯನ್ನು ಒಪ್ಪಿಕೊಳ್ಳುವುದು ಚೀನಾದ ಜನರ ಭಾವನೆಗಳಿಗೆ ಧಕ್ಕೆ ತಂದಂತೆ. ಹಾಗಾಗಿ ಇದು ನಮ್ಮ ದೃಷ್ಟಿಯಲ್ಲಿ ದೊಡ್ಡ ಅಪರಾಧ’ ಎಂದು ಚೀನಾ ಸರ್ಕಾರದ ಯುನೈಟೆಡ್‌ ಫ್ರಂಟ್‌ ವರ್ಕ್‌ ಇಲಾಖೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಂಗ್‌ ಯಿಜಿಯಾಂಗ್‌ ಹೇಳಿದ್ದಾರೆ.

‘82 ವರ್ಷದ ಧರ್ಮ ಗುರುವನ್ನು ಭೇಟಿ ಮಾಡುವುದಕ್ಕೆ ಸಂಬಂಧಿಸಿದಂತೆ ವಿಶ್ವ ನಾಯಕರು ಮತ್ತು ದೇಶಗಳು ಮಾಡುವ ವಾದಗಳನ್ನು ಚೀನಾ ಸ್ವೀಕರಿಸುವುದಿಲ್ಲ. ನಡೆದಾಡುವ ಬುದ್ಧ, ‘14ನೇ ದಲೈ ಲಾಮಾ ಅವರು ಧರ್ಮದ ಹೊದಿಕೆಯಡಿ ಇರುವ ಒಬ್ಬ ರಾಜಕೀಯ ವ್ಯಕ್ತಿ’ ಎಂದು ಅವರು ತಿಳಿಸಿದ್ದಾರೆ.

ಭಾರತದ ಹೆಸರು ಪ್ರಸ್ತಾಪಿಸದೇ ಮಾತನಾಡಿದ ಯಿಜಿಯಾಂಗ್‌ ಅವರು, ತಾಯ್ನಾಡಿಗೆ ದ್ರೋಹ ಬಗೆದು, ಗಡಿಪಾರು ಸರ್ಕಾರ ಎಂದು ಕರೆಯಲಾಗುವ ಸರ್ಕಾರ ರಚಿಸಿ 1959ರಲ್ಲಿ ದೇಶ ತೊರೆದು ಮತ್ತೊಂದು ದೇಶಕ್ಕೆ ಹೋಗಿ ಲಾಮಾ ನೆಲೆಸಿದ್ದಾರೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry