ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡು ಹಾರಿಸಿ ಹತ್ಯೆ– ಆರೋಪಿಗಳ ಬಂಧನ

Last Updated 22 ಅಕ್ಟೋಬರ್ 2017, 4:04 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಇಡೀ ತಾಲ್ಲೂಕಿನ ಜನರನ್ನೇ ಬೆಚ್ಚಿ ಬೀಳಿಸಿದ್ದ ಶೂಟೌಟ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಖಾನಿಮಠದ ಹತ್ತಿರ ಅಕ್ಟೋಬರ್ 13ರಂದು ನಡೆದ ಶೂಟೌಟ್‌ನಲ್ಲಿ ಕೊಲೆಯಾಗಿದ್ದ ಚಿಕ್ಕಬೆಳವಂಗಲ ಗ್ರಾಮದ ನಿವಾಸಿ ಮುದ್ದುಕೃಷ್ಣ ಅವರ ಅಣ್ಣನ ಮಗನೇ ಕೊಲೆಗಾರನಾಗಿದ್ದು, ಆಸ್ತಿ ವಿಚಾರ ಹಾಗೂ ವೈಷಮ್ಯದಿಂದ ಆರೋಪಿ ರವಿಕುಮಾರ್‌ಗೌಡ ಸ್ವಂತ ಚಿಕ್ಕಪ್ಪನನ್ನೇ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಕೊಲೆ ಆರೋಪಿ ರವಿಕುಮಾರ್‌ಗೌಡ ಹಾಗೂ ಅವರ ಸಹಚರರು ಸೇರಿ ಏಳು ಅರೋಪಿಗಳು ಹಾಗೂ ಕೃತ್ಯವೆಸಗಲು ಬಂದೂಕು ಮಾರಾಟ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ ಸಿಂಗ್, ‘ಅಕ್ಟೋಬರ್ 13ರಂದು ಸಂಜೆ 6.15ಕ್ಕೆ ಚಿಕ್ಕಬೆಳವಂಗಲ ಗ್ರಾಮದ ನಿವಾಸಿ ಮುದ್ದುಕೃಷ್ಣ ಕಾಲೊನಿ ಬಳಿಯ ಹೆದ್ದಾರಿಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ಮುದ್ದುಕೃಷ್ಣನ ಅಣ್ಣನ ಮಗ ರವಿಕುಮಾರಗೌಡ ದೂರು ನೀಡಿದ್ದ’ ಎಂದರು.

‘ಆಸ್ಪತ್ರೆಗೂ ಆತನೇ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ವೈದ್ಯರು ಮುದ್ದುಕೃಷ್ಣನಿಗೆ ಗುಂಡು ತಗುಲಿ ಮೃತಪಟ್ಟಿರುವುದಾಗಿ ತಿಳಿಸಿದಾಗ ಮುದ್ದುಕೃಷ್ಣನ ಪತ್ನಿ ನಂಜಮ್ಮ ಪೊಲೀಸರಿಗೆ ಕೊಲೆಯಾದ ಬಗ್ಗೆ ದೂರು ನೀಡಿದ್ದರು. ಕೊಲೆಯಾದ ಮುದ್ದುಕೃಷ್ಣ ರಿಯಲ್ ಏಸ್ಟೇಟ್ ವ್ಯವಹಾರ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದ’ ಎಂದರು.

‘ಪೊಲೀಸರ ತಂಡ ತನಿಖೆ ಕೈಗೊಂಡು ಆರೋಪಿ ರವಿಕುಮಾರ್‌ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ಚಿಕ್ಕಪ್ಪ, ಪಿತ್ರಾರ್ಜಿತ ಆಸ್ತಿಯಲ್ಲಿ ತಮಗೆ ಮೋಸ ಮಾಡಿ, ಜಮೀನಿಗೆ ಹೋಗಲು ಬಿಡದೆ ಜಗಳ ಮಾಡುತ್ತಿದ್ದ. ಇದಲ್ಲದೇ ಜಮೀನಿಗೆ ಸಂಬಂಧಿಸಿದಂತೆ ಸಿವಿಲ್ ವ್ಯಾಜ್ಯಗಳು ಹಾಗೂ ತನ್ನ ಅಜ್ಜಿಯನ್ನು ನೋಡಲು ಬಿಡದೇ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ಹೀಗಾಗಿ ಚಿಕ್ಕಪ್ಪನನ್ನು ಕೊಲೆ ಮಾಡಬೇಕೆಂದು ತೀರ್ಮಾನಿಸಿದ್ದಾಗಿ ಆರೋಪಿ ಹೇಳಿದ್ದಾನೆ’ ಎಂದರು.

‘ಸ್ನೇಹಿತರಾದ ರಾಮಾಂಜಿನಪ್ಪ, ಜಗದೀಶನೊಂದಿಗೆ ಮುದ್ದುಕೃಷ್ಣನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ರಾಮಾಂಜಿನಪ್ಪ, ಜಗದೀಶನಿಗೆ ಕಾರು, ಬಂದೂಕು ಮತ್ತು ಕಾಟ್ರಿಜ್ ಕೊಟ್ಟು ಜಗದೀಶನಿಗೆ ಕಾರು ಓಡಿಸು ಹಾಗೂ ರಾಮಾಂಜಿನಪ್ಪನಿಗೆ ಬಂದೂಕಿನಿಂದ ಮುದ್ದುಕೃಷ್ಣನಿಗೆ ಗುಂಡು ಹೊಡೆದು ಸಾಯಿಸುವಂತೆ ಹೇಳಿದ್ದಾನೆ.

ಮುದ್ದುಕೃಷ್ಣನ ಚಲನವಲನಗಳ ಬಗ್ಗೆ ಮೊಬೈಲ್‌ನಲ್ಲಿ ತಿಳಿಸುತ್ತಾ ಸಂಜೆ 6.15ರ ವೇಳೆಯಲ್ಲಿ ಹೆದ್ದಾರಿಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಜಗದೀಶನು ರಾಮಾಂಜಿನಪ್ಪನೊಂದಿಗೆ ಬೈಕ್ ಹಿಂಬಾಲಿಸಿಕೊಂಡು ಹೋಗಿ, ರಾಮಾಂಜಿನಪ್ಪ ಮುದ್ದುಕೃಷ್ಣನಿಗೆ ಗುಂಡು ಹೊಡೆದು ಪರಾರಿಯಾಗಿದ್ದಾನೆ’ ಎಂದರು.

‘ನಂತರ ರವಿಕುಮಾರ್‌ ಗೌಡ ಏನೂ ತಿಳಿಯದವನಂತೆ ಸ್ಥಳಕ್ಕೆ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುದ್ದುಕೃಷ್ಣನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ನಂತರ ಪೊಲೀಸ್ ತನಿಖೆಯಿಂದ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ’ ಎಂದರು.

ಶೂಟೌಟ್‌ ಪ್ರಕರಣವನ್ನು ಭೇದಿಸಿ ತ್ವರಿತವಾಗಿ ಪತ್ತೆ ಹಚ್ಚಿದ ತಂಡದ ಡಿಎಸ್‌ಪಿ ವೈ.ನಾಗರಾಜು, ಸರ್ಕಲ್‌ ಇನ್‌ಸ್ಪೆಕ್ಟರ್‌ ಜಿ.ಸಿದ್ದರಾಜು, ಮಾದನಾಯಕನಹಳ್ಳಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಎಂ.ಎನ್.ನಾಗರಾಜು, ಡಿಸಿಐಬಿ ಇನ್‌ಸ್ಪೆಕ್ಟರ್‌ ಹರೀಶ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ರಾಘವೇಂದ್ರ ಇಂಬ್ರಾಪುರ, ಎಂ.ಎಸ್.ರಾಜು, ಮುತ್ತುರಾಜು, ಬಿ.ಕೆ.ಪಾಟೀಲ್ ಮತ್ತು ಸಿಬ್ಬಂದಿಯನ್ನು ಅವರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT