ಶುಕ್ರವಾರ, ಸೆಪ್ಟೆಂಬರ್ 20, 2019
28 °C

ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿ ಪ್ರಯತ್ನ: ಸಚಿವ ಕುಲಕರ್ಣಿ

Published:
Updated:
ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿ ಪ್ರಯತ್ನ: ಸಚಿವ ಕುಲಕರ್ಣಿ

ಧಾರವಾಡ: ‘ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು ಮಾಡಲಾಗುವುದು ಎಂಬ ಹೇಳಿಕೆ ನೀಡುವ ಮೂಲಕ ಸಂಸದ ಪ್ರಹ್ಲಾದ ಜೋಶಿ ಹಾಗೂ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಗಣಿ ಸಚಿವ ವಿನಯ ಕುಲಕರ್ಣಿ ಶನಿವಾರ ಇಲ್ಲಿ ಆರೋಪಿಸಿದರು.

‘ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವೈಶಿಷ್ಟ್ಯ. ಜಾತಿ, ಮತ, ಧರ್ಮಗಳ ಹೊರತಾಗಿಯೂ ಸಮಾನತೆಯಿಂದ ಬದುಕುವ ಅವಕಾಶ ಈ ದೇಶದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ರೀತಿಯ ಕೋಮು ಗಲಭೆಗಳಿಗೆ ಅವಕಾಶ ನೀಡಿಲ್ಲ.

ಆದರೆ, ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ನಾಯಕರು ತಾವು ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ರದ್ದು ಮಾಡುವುದಾಗಿ ಹೇಳುತ್ತಿದ್ದಾರೆ. ಇದರ ಹಿಂದೆ ಕೋಮು ಗಲಭೆ ಸೃಷ್ಟಿಸುವ ಹುನ್ನಾರವಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

‘ಪ್ರಹ್ಲಾದ ಜೋಶಿ ಅವರ ರಾಜಕೀಯ ಜೀವನ ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟದಿಂದ ಪ್ರಾರಂಭವಾಗಿದೆ. ಮೊದಲಿಗೆ ಮುಸ್ಲಿಮರ ಮತಗಳಿಂದಲೇ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಅದನ್ನು ಮರೆತಿರುವ ಜೋಶಿ, ಜಾತಿ– ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಇಂಥ ಕಾರ್ಯಗಳಿಂದಲೇ ಬಿಜೆಪಿ ಪಕ್ಷ ಗಟ್ಟಿಗೊಳ್ಳುತ್ತದೆ ಎಂದು ಅವರು ತಿಳಿದಿದ್ದಾರೆ. ಅದು ಅವರ ಭ್ರಮೆ’ ಎಂದರು.

‘ಗೋಹತ್ಯೆ ನಿಷೇಧ ಕುರಿತು ಮಾತನಾಡುವ ಬಿಜೆಪಿ ಮುಖಂಡರು ಮೊದಲು ತಮ್ಮ ಮನೆಯಲ್ಲಿ ಹತ್ತು ಆಕಳುಗಳನ್ನು ಸಾಕಲಿ. ನಂತರ ಆ ಬಗ್ಗೆ ಮಾತನಾಡಲಿ. ಯುವಕರ ಮನಸ್ಸಿನಲ್ಲಿ ಗೋಹತ್ಯೆ, ಕೋಮುವಾದದಂತಹ ಭಾವನಾತ್ಮಕ ವಿಚಾರಗಳನ್ನು ತುಂಬಿ ದಾರಿ ತಪ್ಪಿಸುವ ಪ್ರಯತ್ನವನ್ನು ಬಿಜೆಪಿ ನಿರಂತರವಾಗಿ ಮಾಡುತ್ತ ಬಂದಿದೆ. ಇಂಥ ವಿಷಯಗಳನ್ನು ಮುಂದೆ ಮಾಡಿಕೊಂಡು ಚುನಾವಣೆ ಗೆಲ್ಲುತ್ತೇವೆ ಎಂದು ಬಿಜೆಪಿ ಭಾವಿಸಿದ್ದರೆ ಅದು ತಪ್ಪು. ಮತದಾರರು ಈಗ ಪ್ರಜ್ಞಾವಂತರಾಗಿದ್ದಾರೆ’ ಎಂದರು.

* * 

ಚುನಾವಣೆ ಸಮೀಪಿಸುತ್ತಿದ್ದಂತೆ ನನ್ನ ವಿರುದ್ಧ ಸಾಕಷ್ಟು ಅಶ್ಲೀಲ ಪತ್ರಗಳು ಬರುತ್ತಿವೆ. ಇದೆಲ್ಲದರ ಹಿಂದೆ ಆರ್‌ಎಸ್‌ಎಸ್ ಕೈವಾಡ ಇರುವ ಶಂಕೆಯಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಪೊಲೀಸ ಇಲಾಖೆಗೆ ಮನವಿ ಮಾಡಲಾಗಿದೆ

ವಿನಯ ಕುಲಕರ್ಣಿ

ಗಣಿ ಮತ್ತು ಭೂವಿಜ್ಞಾನ ಸಚಿವ

Post Comments (+)